ದೇಶಕ್ಕೆ ಹೊರೆಯಾಯಿತೇ ಈ ಪರಿಯ ಮಮತೆ?

love for the fairy
love for the fairy
Published on
ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ (ಸುಬೇಂದು ಅಧಿಕಾರಿ) ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಟಿಎಂಸಿ ಸೋಲಿನೊಂದಿಗೆ ಪಕ್ಷದ ಉಮೇದುವಾರರಾಗಿ ಸ್ವತಃ ಸೋಲು ಅನುಭವಿಸಿದ ಮಮತಾ ಬ್ಯಾನರ್ಜಿ ವಿಜಯಿ ಬಿಜೆಪಿ ವಿರುದ್ಧ ಮಹಾಘಟಬಂಧನ ಸ್ಥಾಪಿಸಲು ಒಗ್ಗೂಡಬೇಕೆಂದು ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳಿಗೆ ನೀಡಿದ ಕರೆಯನ್ನು ಆ ಪಕ್ಷಗಳು ಪರಿಶೀಲನೆಗೂ ಯೋಗ್ಯವಿಲ್ಲವೆಂಬಂತೆ ತಿರಸ್ಕರಿಸಿವೆ. ಪ್ರಮುಖ ಗಡಿ ರಾಜ್ಯವೊಂದರಲ್ಲಿನ ಈ ಬೆಳವಣಿಗೆ ಆ ರಾಜ್ಯದ್ದಷ್ಟೇ ಅಲ್ಲ, ದೇಶದ ಇತಿಹಾಸದಲ್ಲೂ ಒಂದು ಬಹು ದೊಡ್ಡ ಸಕಾರಾತ್ಮಕ ತಿರುವು. ಇದನ್ನು ವಿಸ್ತಾರವಾಗಿ ವಿಶ್ಲೇಷಿಸುವುದಕ್ಕೆ ಪೀಠಿಕೆಯಾಗಿ ಸದ್ಯದ ಕೆಲವು ಬೆಳವಣಿಗೆಗಳನ್ನು ಗಮನಿಸೋಣ.

ನೊಬೆಲ್ ಬಹುಮಾನ ಪುರಸ್ಕೃತ ಕವಿ ರವೀಂದ್ರನಾಥ್ ಟ್ಯಾಗೋರ್​ರ ಜನ್ಮದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಹಾಗೂ ಹಲವರು ಬಿಜೆಪಿ ಶಾಸಿತ ರಾಜ್ಯಗಳ ಮುಖ್ಯಸ್ಥರ ಜತೆಗೆ ಭಾರಿ ಸಂಖ್ಯೆಯ ಬೆಂಬಲಿಗರ ಸಮ್ಮುಖದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ ಅತ್ತ ಕುರ್ಚಿ ಕಳೆದುಕೊಂಡ ಮಮತಾ ಬ್ಯಾನರ್ಜಿ ಸಾರ್ವಜನಿಕ ಸ್ಥಳವೊಂದರಲ್ಲಿ ಮಹಾಕವಿಯ ದೊಡ್ಡ ಚಿತ್ರಪಟವೊಂದನ್ನು ನಿಲ್ಲಿಸಿ ಬೆರಳೆಣಿಕೆಯ ಬೆಂಬಲಿಗರ ಜತೆ ನಮನ ಸಲ್ಲಿಸಿದರು. ಎರಡೂ ಸ್ಥಳಗಳಲ್ಲಿನ ನೋಟಗಳಲ್ಲಿ ಧ್ರುವಗಳ ಅಂತರವಿತ್ತು. ಅದು ನಿರ್ವಿವಾದವಾಗಿ ಸಾರಿದ್ದು ಪಶ್ಚಿಮ ಬಂಗಾಳದಲ್ಲಿ ಘಟಿಸಿದ್ದು ಕೇವಲ ಒಂದು ರಾಜಕೀಯ ಪಕ್ಷದ ವಿರುದ್ಧ ಇನ್ನೊಂದು ರಾಜಕೀಯ ಪಕ್ಷದ ಚುನಾವಣಾ ವಿಜಯವಲ್ಲ, ಅದು ದೇಶವಿರೋಧಿಗಳ ವಿರುದ್ಧ ದೇಶಪ್ರೇಮಿಗಳ ಮಹಾವಿಜಯ ಎಂದು.
ಪಶ್ಚಿಮ ಬಂಗಾಳಕ್ಕೆ ಮೊದಲಿಗೆ ಪೂರ್ವ ಪಾಕಿಸ್ತಾನಿ ನಂತರ ಬಾಂಗ್ಲಾದೇಶಿ ಮುಸ್ಲಿಮರು ಅಕ್ರಮವಾಗಿ ನುಸುಳುವುದು ಇಂದು ನಿನ್ನೆಯ ಬೆಳವಣಿಗೆಯಲ್ಲ. 1946ರ ಅವಿಭಜಿತ ಬಂಗಾಳದ ಪ್ರಾಂತೀಯ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್​ಗೆ ಬಹುಮತ ನೀಡಿ, ಆ ಹಿಂದೂ-ವಿರೋಧಿ, ಭಾರತ-ವಿರೋಧಿ ಪಕ್ಷದ ದೇಶವಿಭಜನಾ ಯೋಜನೆಯನ್ನು ಸಮರ್ಥಿಸಿದ; 1946ರ ಆಗಸ್ಟ್ 16ರಂದು ಮಹಮದ್ ಆಲಿ ಜಿನ್ನಾರ ‘ಡೈರೆಕ್ಟ್ ಆಕ್ಷನ್ ಡೇ’ ಎಂಬ ಕೋಮುವಾದಿ ಕರೆಗೆ ಉತ್ಸಾಹದಿಂದ ಸ್ಪಂದಿಸಿ ‘ದ ಗ್ರೇಟ್ ಕಲ್ಕತ್ತಾ ಕಿಲಿಂಗ್ಸ್’ ಎಂದು ಇತಿಹಾಸದಲ್ಲಿ ಕುಖ್ಯಾತವಾಗಿರುವ ಹಿಂದೂಗಳ ಮಾರಣಹೋಮವನ್ನು ನಡೆಸಿ ದೇಶವಿಭಜನೆಯನ್ನು ಅನಿವಾರ್ಯವಾಗಿಸಿದ ಬಂಗಾಲಿ ಮುಸ್ಲಿಮರು ವರ್ಷ ಕಳೆಯುವಷ್ಟರಲ್ಲಿ ದೇಶ ಒಡೆದು ತಮ್ಮ ಪಾಕಿಸ್ತಾನವನ್ನು ಸೃಷ್ಟಿಸಿಕೊಂಡ ಮೇಲೆ ಅಲ್ಲೇ ತಮ್ಮ ಪಾಡಿಗೆ ತಾವಿರದೆ ಪಶ್ಚಿಮ ಬಂಗಾಳದ ಜತೆಗೆ ಅಸ್ಸಾಂಗೂ ಕಳ್ಳತನದಲ್ಲಿ ನುಸುಳಿ ಬರತೊಡಗಿದ್ದು ಯಾಕೆ? ಹೀಗೆಂದು ಪ್ರಶ್ನಿಸಿ ಆ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟಬೇಕೆಂದು ದನಿಯೆತ್ತಿದವರಲ್ಲಿ ಮಮತಾ ಬ್ಯಾನರ್ಜಿ ಸಹಾ ಒಬ್ಬರು. ಆಗಸ್ಟ್ 2005ರಲ್ಲಿ ಟಿಎಂಸಿ ಸಂಸದೆಯಾಗಿ ಅವರು ಲೋಕಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಬಾಂಗ್ಲಾದೇಶೀಯರ ಅಕ್ರಮ ವಲಸೆಯ ಬಗ್ಗೆ, ಅದರಿಂದಾಗಿ ತಮ್ಮ ರಾಜ್ಯದ ಜನತೆಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಭಾವುಕರಾಗಿ ಮಾತಾಡಿ, ಅಕ್ರಮ ವಲಸೆಯನ್ನು ತಡೆಗಟ್ಟಲು ಕೇಂದ್ರದ ಯುಪಿಎ ಸರ್ಕಾರ ಮತ್ತು ರಾಜ್ಯದ ಕಮ್ಯೂನಿಸ್ಟ್ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ಕೆಲವೇ ವರ್ಷಗಳಲ್ಲಿ ಅವರು ಅದೇ ಯುಪಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾದರು, ಅದಾಗಿ ಕಣ್ಣು ಮುಚ್ಚಿ ತೆರೆಯುವುದರೊಳಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆದರು. ಅಲ್ಲಿಗೆ ಅವರ ಅಕ್ರಮ ವಲಸೆ ವಿರೋಧಿ ಧ್ವನಿ ಬಂದ್ ಆಗಿಹೋಯಿತು.
2011ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವಾಗ ಮಮತಾ ಬ್ಯಾನರ್ಜಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಐದು ವರ್ಷಗಳ ನಂತರ ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರು ಈಶ್ವರ ಮತ್ತು ಅಲ್ಲಾನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು! ಮಮತಾ ಬ್ಯಾನರ್ಜಿ ಬದಲಾಗಿಹೋದರು.
2013ರ ಹೊತ್ತಿಗೇ ಅವರು ಅಕ್ರಮ ವಲಸಿಗರನ್ನು ತಮ್ಮ ಮುಂದಿನ ಚುನಾವಣೆಗಾಗಿ ವೋಟ್ ಬ್ಯಾಂಕ್ ಆಗಿಸಿಕೊಳ್ಳುವ ಕಾರ್ಯಯೋಜನೆಗಳನ್ನು ಸದ್ದಿಲ್ಲದೇ ಅನುಷ್ಠಾನಗೊಳಿಸಿದ್ದರು. ಅಕ್ರಮ ವಲಸಿಗರಿಗೆ ಅಗತ್ಯ ಗುರುತಿನ ಚೀಟಿಗಳು, ಪಡಿತರ ಮತ್ತು ನೆಲೆ ಒದಗಿಸುವ ಕೆಲಸಗಳನ್ನು ಅವರ ಸರ್ಕಾರ ವ್ಯವಸ್ಥಿತವಾಗಿ ಮಾಡತೊಡಗಿತು. ಜತೆಗೆ ಸ್ಥಳೀಯ ಹಾಗೂ ವಲಸಿಗ ಮುಸ್ಲಿಮರಿಗೆ ಪಕ್ಷದಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಅಧಿಕಾರ ಸ್ಥಾನಗಳು ಮೀಸಲೇ ಆಗಿಹೋದವು. ಬಾಂಗ್ಲಾದೇಶೀಯರಿರಲಿ ಅಕ್ರಮ ಪಾಕಿಸ್ತಾನಿ ವಲಸಿಗರೂ ಮಮತಾ ಬ್ಯಾನರ್ಜಿಯವರಿಗೆ ಪ್ರಿಯರಾಗುವ ದೇಶವಿರೋಧಿ ಕೃತ್ಯವೂ ಅವರಿಂದ ನಡೆದುಹೋಯಿತು. ಎಬಾದ್ ಹಸನ್ ಇಮ್ರಾನ್ ಟಿಎಂಸಿ ಸಂಸದರಾಗಿ ರಾಜ್ಯಸಭೆಗೆ ಹೋದದ್ದನ್ನೂ ದೇಶ ಕಂಡಿತು.
ಮಮತಾ ಬ್ಯಾನರ್ಜಿಯವರ ವಿದೇಶಿ ಮುಸ್ಲಿಂ ಪ್ರೀತಿ ಅದೆಷ್ಟು ವೇಗವಾಗಿ ರಾಜ್ಯದ ಧಾರ್ವಿುಕ ಚಿತ್ರವನ್ನು ಬದಲಾಯಿಸಿದೆಯೆಂದರೆ ಮಧ್ಯ ಬಂಗಾಳದ ಮುರ್ಷಿದಾಬಾದ್, ಮಾಲ್ದಾ ಉತ್ತರ ದಿನಾಜ್​ಪುರ್ ಜಿಲ್ಲೆಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಅದು ಭಾರತದಲ್ಲಿ ತಪ್ಪೇನೂ ಆಗಲಾರದು. ಆದರೆ ಕಳವಳಕಾರಿ ಸಂಗತಿಯೆಂದರೆ ಆ ಜಿಲ್ಲೆಗಳ ಮುಸ್ಲಿಮರು ಮುಂದಿನ ವರ್ಷದ ಜನಗಣತಿಯಲ್ಲಿ ತಮ್ಮ ಮಾತೃಭಾಷೆ ಉರ್ದು ಎಂದು ದಾಖಲಿಸುವ ಪ್ರೇರಣೆಗೆ ಅಥವಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ! ಅವರಲ್ಲಿ ಈ ಬಗೆಯ ಭಾವನೆಯನ್ನು ತುಂಬುತ್ತಿರುವವರು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಅಲ್ಲಿನ ಜಮಾತ್-ಇ-ಇಸ್ಲಾಮ್ ಕಾರ್ಯಕರ್ತರು ಎಂದು ಹೇಳಲಾಗುತ್ತದೆ. ಇದೊಂದು ಗಂಭೀರ ಕಥೆ.
ಪೂರ್ವ ಪಾಕಿಸ್ತಾನೀಯರು ಅಂದರೆ ಪೂರ್ವ ಬಂಗಾಳಿಗಳು ಪಶ್ಚಿಮ ಪಾಕಿಸ್ತಾನದಿಂದ ಬೇರಾಗುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅವರ ಬಂಗಾಲಿ ಭಾಷಾಪ್ರೇಮ. ತಮ್ಮ ಬಂಗಾಳಿ ಅಸ್ಮಿತೆ ಪಾಕಿಸ್ತಾನಿ ಪಂಜಾಬಿಗಳಿಂದ ದಮನಕ್ಕೊಳಗಾಗಬಾರದೆಂದೇ ಅವರು ಸ್ವಾತಂತ್ರ್ಯ ಹೋರಾಟಕ್ಕಿಳಿದರು. 1971ರ ಆ ರಕ್ತಸಿಕ್ತ ಹೋರಾಟದಲ್ಲಿ ಬಂಗಾಲಿಗಳಿಗೆ ವಿರುದ್ಧವಾಗಿ ನಿಂತು ಹತ್ಯಾಕಾರಿ ಪಾಕಿಸ್ತಾನಿ ಸೇನೆಗೆ ಸಹಕರಿಸಿದವರು ಸ್ಥಳೀಯ ಜಮಾತ್-ಇ-ಇಸ್ಲಾಮಿ ಕಾರ್ಯಕರ್ತರು. ಹೀಗಾಗಿ ಸ್ವತಂತ್ರ ಬಾಂಗ್ಲಾದೇಶ ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತು. ಷೇಖ್ ಹಸೀನಾ ಆಡಳಿತಾವಧಿಯಲ್ಲಿ ಬಹಿಷ್ಕಾರಕ್ಕೊಳಗಾದ ಜಮಾತ್​ನ ಸದಸ್ಯರು ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ನುಸುಳಿ ಸುರಕ್ಷಿತವಾಗಿ ನೆಲೆಯೂರಲು ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಪಕ್ಷ ಸಹಕರಿಸಿದೆಯೆಂದು ಹೇಳಲಾಗುತ್ತದೆ. ಪರಿಣಾಮವಾಗಿ ಆ ಜನ ಸ್ಥಳೀಯ ಮುಸ್ಲಿಮರನ್ನು ಬಂಗಾಲಿ ಭಾಷೆಯ ವಿರುದ್ಧವಾಗಿ, ಉರ್ದು ಭಾಷೆಯ ಪರವಾಗಿ ತಿರುಗಿಸಲು ವ್ಯವಸ್ಥಿತವಾಗಿಯೇ ಸಂಚು ಹೂಡುತ್ತಿದ್ದಾರೆ. ಪೂರ್ವ ಬಂಗಾಳದಲ್ಲಿ ವಿಫಲಗೊಂಡ ಉರ್ದು ಪಶ್ಚಿಮ ಬಂಗಾಳದಲ್ಲಿ ನೆಲೆಯೂರುವ ವಿರೋಧಾಭಾಸವನ್ನು ನಾವೀಗ ಕಾಣುವಂತಾಗಿದೆ.
ಈ ಬೆಳವಣಿಗೆ ಆಗಸ್ಟ್ 2024ರಲ್ಲಿ ಷೇಖ್ ಹಸೀನಾ ಸರ್ಕಾರ ಕುಸಿದು ಮಹಮದ್ ಯೂನುಸ್​ರ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತೀವ್ರಗೊಂಡಂತೆ ಕಾಣುತ್ತದೆ. ಬಾಂಗ್ಲಾದೇಶದ ಸ್ವಾತಂತ್ರ್ಯವನ್ನೇ ವಿರೋಧಿಸಿದ್ದ ಜಮಾತ್-ಇ-ಇಸ್ಲಾಮಿ ಆಗಸ್ಟ್ 2024-ಫೆಬ್ರವರಿ 2026ರ ಅವಧಿಯಲ್ಲಿ ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಲು ಸಂಚು ಆರಂಭಿಸಿತ್ತೆಂಬ ವರದಿಗಳು ಬರುತ್ತಿವೆ. ಇನ್ನೂ ಹೆಚ್ಚಿನ ಆಘಾತಕಾರಿ ವಿಷಯವೆಂದರೆ ಆ ಮೂಲಭೂತವಾದಿ ಸಂಘಟನೆಯ ಸಂಚಿಗೆ ಮಮತಾ ಬ್ಯಾನರ್ಜಿ ಸಹಾ ಪೂರಕವಾಗಿ ನಡೆದುಕೊಳ್ಳಹೊರಟಿದ್ದರು ಎಂಬ ಮಾತು.
ದೀಪಕ್ ವೋಹ್ರಾ ಭಾರತದ ಪಾಂಡಿತ್ಯಪೂರ್ಣ, ನೇರನುಡಿಯ, ನಿರ್ಭಯಿ ಹಾಗೂ ಗಣ್ಯ ರಾಜತಂತ್ರಜ್ಞರಲ್ಲೊಬ್ಬರು. ನಾಲ್ಕೂವರೆ ದಶಕಗಳ ಹಿಂದೆ 1981-82ರಲ್ಲಿ ವಿದೇಶಾಂಗ ಇಲಾಖೆಯಲ್ಲಿನ ತಮ್ಮ ಜವಾಬ್ದಾರಿಗಳ ನಡುವೆ ಯುವ ದೀಪಕ್ ವೋಹ್ರಾ ದೆಹಲಿ ದೂರದರ್ಶನದಲ್ಲಿ ಪ್ರತಿ ಬುಧವಾರ ಸಂಜೆ ತಮ್ಮ ಕಂಚಿನ ಕಂಠದಲ್ಲಿ ಕ್ವಿಜ್ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಡುತ್ತಿದ್ದುದು ನನಗಿನ್ನೂ ನೆನಪಿದೆ. ನಂತರ ಅವರು ವಿದೇಶಗಳಲ್ಲಿನ ಭಾರತೀಯ ದೂತಾವಾಸಗಳಿಗೆ ಹೊರಟುಹೋದರು, ಹಲವು ವಿದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ಈಗ ನಿವೃತ್ತಿಯ ನಂತರ ಒಂದಕ್ಕಿಂತ ಹೆಚ್ಚು ವಿದೇಶಗಳಿಗೆ ವಿದೇಶನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದೀರ್ಘ ಅವಧಿಯಲ್ಲಿ ಅವರು ಜಗತ್ತಿನಾದ್ಯಂತ ಹಲವರು ವಿದೇಶಿ ಗಣ್ಯ ರಾಜತಂತ್ರಜ್ಞರೊಂದಿಗೆ ಸ್ನೇಹ ಸಂಪಾದಿಸಿದ್ದಾರೆ. ಅವರಲ್ಲಿ ಹಿರಿಯ ಬಾಂಗ್ಲಾದೇಶಿ ರಾಜತಂತ್ರಜ್ಞರೂ ಇದ್ದಾರೆ. ಅಂತಹ ಕೆಲವರಿಂದ ವೋಹ್ರಾ ಅವರು ಅರಿತ ಮಾಹಿತಿ ಸ್ಪೋಟಕ.
ಪಶ್ಚಿಮ ಬಂಗಾಳವೂ ಸೇರಿದಂತೆ ಪೂರ್ವ ಭಾರತದ ಹಲವು ಪ್ರದೇಶಗಳನ್ನು ಬಾಂಗ್ಲಾದೇಶದೊಂದಿಗೆ ಸೇರಿಸಿ ‘ಗ್ರೇಟರ್ ಬಾಂಗ್ಲಾದೇಶ್’ ಎಂಬ ನಕ್ಷೆಯಲ್ಲಿ ಮಹಮದ್ ಯೂನುಸ್ ಸರ್ಕಾರದಲ್ಲಿದ್ದ ಕೆಲವರು ಪ್ರಚಾರ ಮಾಡುತ್ತಿದ್ದುದು ನಿಮಗೆ ನೆನಪಿರಬಹುದು. ಆ ಕುರಿತ ಮಾತುಗಳನ್ನು ಖುದ್ದು ಯೂನುಸ್ ಸಹಾ ಆಡಿದ್ದುಂಟು. ರಾಜತಂತ್ರಜ್ಞ ವೋಹ್ರಾ ಅವರು ತಮ್ಮ ಬಾಂಗ್ಲಾದೇಶಿ ಮಿತ್ರರ ಮಾತುಗಳ ಆಧಾರದ ಮೇಲೆ ಹೇಳುವ ಪ್ರಕಾರ ಪಶ್ಚಿಮ ಬಂಗಾಳವನ್ನು ಭಾರತದಿಂದ ಪ್ರತ್ಯೇಕಿಸಿ ಬಾಂಗ್ಲಾದೇಶದೊಂದಿಗೆ ಸೇರಿಸಿ ಗ್ರೇಟರ್ ಬಾಂಗ್ಲಾದೇಶ್ ನಿರ್ವಿುಸುವ ಯೂನುಸ್ ಪ್ರಯತ್ನಕ್ಕೆ ಮಮತಾ ಬ್ಯಾನರ್ಜಿಯವರಿಂದ ಸಹಕಾರದ ಮಾತುಗಳು ಹೋಗಿದ್ದವಂತೆ. ಆ ವಿಶಾಲ ಬಂಗಾಳಿ ರಾಷ್ಟ್ರದಲ್ಲಿ ತಾವು ಪ್ರಧಾನಮಂತ್ರಿಯಾಗಿಯೂ, ಮಹಮದ್ ಯೂನುಸ್ ಅಧ್ಯಕ್ಷರಾಗಿಯೂ ಇರುವ ವ್ಯವಸ್ಥೆಯಾಗಬೇಕು ಎನ್ನುವುದು ಮಮತಾ ಬ್ಯಾನರ್ಜಿಯವರ ಸಲಹೆಯಾಗಿತ್ತಂತೆ!
ಇದು ನಿಜವೇ ಆಗಿದ್ದಲ್ಲಿ ತೃಣಮೂಲ ಕಾಂಗ್ರೆಸ್​ನ ಈ ನೇತಾರೆ ದೇಶವನ್ನು ಒಡೆಯುವ ಯೋಜನೆಯನ್ನು ಹೊಂದಿದ್ದರು! ಈಗ ಅವರು ಚುನಾವಣೆಯಲ್ಲಿ ಬಹುಮತ ಕಳೆದುಕೊಂಡು ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿರುವುದರಿಂದಾಗಿ ದೇಶ ಸದ್ಯಕ್ಕೆ ವಿಭಜನಕಾರಿ ಶಕ್ತಿಗಳ ಕೈಯಲ್ಲಿಲ್ಲ. ಆದರೆ ಇದೇ ನೆಮ್ಮದಿಯ ಸ್ಥಿತಿ ಎಂದೆಂದೂ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಚುನಾವಣೆಗಳ ಮೂಲಕವಷ್ಟೇ ಸರ್ಕಾರಗಳು ಬದಲಾಗುವ ವ್ಯವಸ್ಥೆಯಿರುವ ಈ ದೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಜನತೆ ಯಾರತ್ತ ಒಲವು ತೋರುತ್ತಾರೆಂದು ಊಹಿಸಲಾಗದು. ಹೀಗಾಗಿ ಮಮತಾ ಬ್ಯಾನರ್ಜಿಯವರಂತಹ ವ್ಯಕ್ತಿಗಳು ಜನತೆಯಿಂದ ಸದಾ ತಿರಸ್ಕೃತವಾಗಿಯೇ ಇರಬೇಕಾದುದು ಅಗತ್ಯ. ಅದು ಸಾಧ್ಯವಾಗುವುದು ಪ್ರಸಕ್ತ ಸುವೇಂದು ಅಧಿಕಾರಿ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಹೇಗೆ ಆಡಳಿತ ನಡೆಸುತ್ತದೆ, ಯಾವ ಯಾವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತದೆ ಎನ್ನುವುದರಿಂದ.
ಹೊಸ ಸರ್ಕಾರ ತನ್ನ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಅರಿತಿದೆ ಎನ್ನುವುದು ಅದು ಮೊದಲ ಎರಡು ದಿನಗಳಲ್ಲೇ ಕೈಗೊಂಡಿರುವ ನಿರ್ಧಾರಗಳು ಮತ್ತು ಕ್ರಮಗಳಿಂದ ವೇದ್ಯವಾಗುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ತಮ್ಮ ಯೋಜನೆಗಳಿಗನುಗುಣವಾಗಿ ಮಾರ್ಪಡಿಸಿಕೊಂಡಿದ್ದ ಆಡಳಿತ ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರುವಂತಹ, ಅಂದರೆ ‘ಸರ್ಕಾರ ಅವರದು, ಆದರೆ ಸಿಸ್ಟಂ ಈಗಲೂ ನಮ್ಮದೇ’ ಎಂದು ಟಿಎಂಸಿ ಹೇಳಿಕೊಳ್ಳಲಾಗದಂತಹ ವಾತಾವರಣವನ್ನು ಆಡಳಿತ ವ್ಯವಸ್ಥೆಯಲ್ಲಿ ಸೃಷ್ಟಿಸಲು ಸುವೇಂದು ಅಧಿಕಾರಿ ಸರ್ಕಾರ ಸ್ಪಷ್ಟ ಹೆಜ್ಜೆಗಳನ್ನೇ ಇಟ್ಟಿರುವಂತೆ ಕಾಣುತ್ತಿದೆ. ಈ ಹಾದಿ ಸುಲಭದ್ದೇನಲ್ಲ. ಇದೆಲ್ಲದರ ವಿಶ್ಲೇಷಣೆ ಮುಂದಿನವಾರ ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net