ಮತದಾರರ ಡೇಟಾ ಸಂಗ್ರಹಣೆಗೆ ಬ್ರೆಕ್​

Data collection
Data collection
Published on

ದೇಶದಲ್ಲಿ ಚುನಾವಣಾ ಪ್ರಚಾರ ತಂತ್ರಗಾರಿಕೆ ಮತ್ತು ಮತದಾರರ ಮೈಕ್ರೋ ಟಾರ್ಗೆಟಿಂಗ್ ವ್ಯವಸ್ಥೆ ದೊಡ್ಡ ಬದಲಾವಣೆಯ ಹೊಸ್ತಿಲಲ್ಲಿದೆ. ರಾಜಕೀಯ ಪಕ್ಷಗಳು, ಚುನಾವಣಾ ನಿರ್ವಹಣಾ ಏಜೆನ್ಸಿಗಳು ಮತ್ತು ಡೇಟಾ ಬ್ರೋಕರ್​ಗಳಿಗೆ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣೆ (ಡಿಪಿಡಿಪಿ) ಕಾಯ್ದೆಯ ಕಟ್ಟುನಿಟ್ಟಾದ ನಿಯಮಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಅನಿಯಂತ್ರಿತ ದತ್ತಾಂಶ ಸಂಗ್ರಹಣೆಗೆ ಬ್ರೇಕ್ ಬಿದ್ದಿದೆ. ಮತದಾರರ ಸಮ್ಮತಿ ಇಲ್ಲದೆ ಅವರ ಪ್ರೊಫೈಲಿಂಗ್ ಮಾಡುವುದು, ವಾಟ್ಸ್​ಆ್ಯಪ್ ಗ್ರೂಪ್​ಗಳಲ್ಲಿ ಸೇರಿಸುವುದು ಹಾಗೂ ಚಲನವಲನಗಳ ಮೇಲೆ ಡಿಜಿಟಲ್ ಕಣ್ಗಾವಲು ಇಡುವುದು ಮುಂತಾದ ಚಟುವಟಿಕೆಗಳು ಇನ್ನು ಸ್ಥಗಿತಗೊಳ್ಳಲಿವೆ. ಮುಂಬರುವ ಚುನಾವಣೆಗಳ ಮೇಲೆ ಇದು ಬೀರಲಿರುವ ಪರಿಣಾಮಗಳೇನು? ಈ ಕುರಿತ ಸಮಗ್ರ ನೋಟ ಇಲ್ಲಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಕೇವಲ ಭಾಷಣಗಳು, ಬಹಿರಂಗ ಸಭೆಗಳು ಮತ್ತು ಪಾದಯಾತ್ರೆಗಳಿಗೆ ಸೀಮಿತವಾಗಿ ಉಳಿದಿಲ್ಲ. ಕಳೆದ ಒಂದು ದಶಕದಲ್ಲಿ ರಾಜಕೀಯ ಸಂವಹನ ಸಂಪೂರ್ಣವಾಗಿ ಡಿಜಿಟಲ್ ರೂಪಕ್ಕೆ ಬದಲಾಗಿದೆ. ಮತದಾರರ ಜಾತಿ, ಧರ್ಮ, ವಯಸ್ಸು, ಆರ್ಥಿಕ ಸ್ಥಿತಿಗತಿ, ಆನ್​ಲೈನ್ ನಡವಳಿಕೆ, ಅವರು ಬಳಸುವ ಮೊಬೈಲ್ ಅಪ್ಲಿಕೇಶನ್​ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಆಸಕ್ತಿಗಳನ್ನು ವಿಶ್ಲೇಷಿಸಿ, ಅವರಿಗೆ ತಕ್ಕಂತೆ ಸಂದೇಶಗಳನ್ನು ಕಳುಹಿಸುವ ಮೈಕ್ರೋ ಟಾರ್ಗೆಟಿಂಗ್ ತಂತ್ರಗಾರಿಕೆ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದುನಿಂತಿದೆ. ಆದರೆ, ಯಾವುದೇ ನಿರ್ಬಂಧವಿಲ್ಲದೆ ನಡೆಯುತ್ತಿದ್ದ ಈ ರಾಜಕೀಯ ತಂತ್ರಕ್ಕೆ ಈಗ ಕಾನೂನಿನ ಕಡಿವಾಣ ಬಿದ್ದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಕಾಯ್ದೆ, ನಾಗರಿಕರ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲಿದೆ. ಈ ಕಾಯ್ದೆಯು ಖಾಸಗಿ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರವಲ್ಲದೆ, ರಾಜಕೀಯ ಪಕ್ಷಗಳು, ಚುನಾವಣಾ ತಂತ್ರಜ್ಞಾನ ಸಂಸ್ಥೆಗಳು ಮತ್ತು ಡೇಟಾ ವಿಶ್ಲೇಷಕರಿಗೂ ಅನ್ವಯವಾಗುತ್ತದೆ. ಪರಿಣಾಮವಾಗಿ, ಮತದಾರರ ಡೇಟಾ ಸಂಗ್ರಹಣೆ, ಅದರ ಸಂಸ್ಕರಣೆ ಮತ್ತು ಪ್ರಚಾರಕ್ಕೆ ಬಳಸುವ ರೀತಿ ಎಲ್ಲವೂ ಆಮೂಲಾಗ್ರವಾಗಿ ಬದಲಾವಣೆಗೆ ಒಳಪಡಬೇಕಾಗಿದೆ.

ಕಾಯ್ದೆಯಲ್ಲಿ ಏನಿದೆ..?

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ ನಾಗರಿಕರ ಹಕ್ಕುಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾದ ಕಾನೂನು. ಕಳೆದ ವರ್ಷವೇ ಇದನ್ನು ಕೇಂದ್ರ ಸರ್ಕಾರ ಅಧಿಸೂಚಿಸಿದ್ದು, ಹಂತಹಂತವಾಗಿ ಜಾರಿಗೊಳಿಸುತ್ತಿದೆ. 2027ರ ಮೇ 14ರ ವೇಳೆಗೆ ಈ ಕಾಯ್ದೆ ಸಂಪೂರ್ಣವಾಗಿ ಜಾರಿಯಾಗಲಿದೆ. ಇದರಲ್ಲಿರುವ ಪ್ರಮುಖ ಪರಿಕಲ್ಪನೆಗಳು ರಾಜಕೀಯ ಪಕ್ಷಗಳ ಕಾರ್ಯವೈಖರಿಗೆ ನೇರ ಸವಾಲು ಒಡ್ಡುತ್ತವೆ. ಯಾರ ಡೇಟಾ ಸಂಗ್ರಹಿಸಲಾಗುತ್ತದೆಯೋ ಆ ವ್ಯಕ್ತಿಯ ಹಕ್ಕುಗಳೇ ಈ ಕಾಯ್ದೆಯಲ್ಲಿ ಸರ್ವೋಚ್ಚ. ಡೇಟಾ ಸಂಗ್ರಹಿಸುವ ಮತ್ತು ಬಳಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಮೀಕ್ಷಾ ಏಜೆನ್ಸಿಗಳೇ ಡೇಟಾದ ಸುರತೆಗೆ ಸಂಪೂರ್ಣ ಜವಾಬ್ದಾರಿ. ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಮೊದಲು ಅವರ ಸ್ಪಷ್ಟ, ಮುಕ್ತ ಮತ್ತು ಷರತ್ತುರಹಿತ ಒಪ್ಪಿಗೆ ಪಡೆಯುವುದು ಕಡ್ಡಾಯ. ಯಾವ ಉದ್ದೇಶಕ್ಕಾಗಿ ಡೇಟಾ ಪಡೆಯಲಾಗಿದೆಯೋ, ಅದೇ ಉದ್ದೇಶಕ್ಕೆ ಅದನ್ನು ಬಳಸಬೇಕು. ಒಂದು ವೇಳೆ ಸರ್ಕಾರಿ ಯೋಜನೆಗಳ ಸರ್ವೇಗಾಗಿ ಪಡೆದ ಮಾಹಿತಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿದರೆ ಅದು ಕಾನೂನುಬಾಹಿರ. ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ಸಂಗ್ರಹಿಸುವಂತಿಲ್ಲ. ಕೇವಲ ಹೆಸರಿನ ಅಗತ್ಯವಿದ್ದರೆ, ಅವರ ಸಂಪೂರ್ಣ ಕುಟುಂಬದ ಅಥವಾ ಆರ್ಥಿಕ ವಿವರಗಳನ್ನು ಸಂಗ್ರಹಿಸಲು ಅವಕಾಶವಿಲ್ಲ. ಒಬ್ಬ ಮತದಾರ ತನ್ನ ಮಾಹಿತಿಯನ್ನು ವ್ಯವಸ್ಥೆಯಿಂದ ಸಂಪೂರ್ಣವಾಗಿ ತೆಗೆದುಹಾಕುವಂತೆ ಕೋರಿದರೆ, ಸಂಸ್ಥೆಗಳು ಅದನ್ನು ತಕ್ಷಣವೇ ಜಾರಿಗೆ ತರಬೇಕು.

ಡೇಟಾ ಬ್ರೋಕರ್​ಗಳಿಗೆ ಕಡಿವಾಣ

ಚುನಾವಣೆ ಸಂದರ್ಭದಲ್ಲಿ ಡೇಟಾ ಬ್ರೋಕರ್​ಗಳ ಪಾತ್ರ ದೊಡ್ಡದಾಗಿರುತ್ತಿತ್ತು. ಟೆಲಿಕಾಂ ಆಪರೇಟರ್​ಗಳಿಂದ ಸೋರಿಕೆಯಾದ ಡೇಟಾ, ಶಾಪಿಂಗ್ ಮಾಲ್​ಗಳ ಲಾಯಲ್ಟಿ ಪ್ರೋಗ್ರಾಂಗಳು, ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳ ಡೇಟಾಬೇಸ್​ಗಳು ಹಾಗೂ ಥರ್ಡ್ ಪಾರ್ಟಿ ಅಪ್ಲಿಕೇಶನ್​ಗಳಿಂದ ಮತದಾರರ ಫೋನ್ ಸಂಖ್ಯೆ, ಇಮೇಲ್ ಮತ್ತು ವಿಳಾಸಗಳನ್ನು ಖರೀದಿಸಿ ದೊಡ್ಡ ಮಟ್ಟದ ವಿಶ್ಲೇಷಣೆ ನಡೆಸಲಾಗುತ್ತಿತ್ತು. ಈಗ ಡಿಪಿಡಿಪಿ ಕಾಯ್ದೆ ಇಂತಹ ಡೇಟಾ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡಿದೆ. ಮತದಾರರ ಸ್ಪಷ್ಟ ಅನುಮತಿಯಿಲ್ಲದೆ, ಮೂರನೇ ವ್ಯಕ್ತಿಗಳಿಂದ ಪಡೆದ ಯಾವುದೇ ಡೇಟಾವನ್ನು ಪಕ್ಷಗಳು ತಮ್ಮ ಸರ್ವರ್​ಗಳಲ್ಲಿ ಇಟ್ಟುಕೊಳ್ಳುವಂತಿಲ್ಲ. ಪಕ್ಷಗಳು ಬಳಸುವ ಡೇಟಾ ಎಲ್ಲಿಂದ ಬಂತು ಮತ್ತು ಅದಕ್ಕೆ ಮತದಾರನ ಅಧಿಕೃತ ಒಪ್ಪಿಗೆ ಇದೆಯೇ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಪಕ್ಷಗಳ ಮೇಲಿರುತ್ತದೆ. ಡೇಟಾ ಉಲ್ಲಂಘನೆ, ಅನುಮತಿಯಿಲ್ಲದೆ ಪ್ರೊಫೈಲಿಂಗ್ ಅಥವಾ ಡೇಟಾ ಸೋರಿಕೆಯಾದ ಸಂದರ್ಭದಲ್ಲಿ ನೂರಾರು ಕೋಟಿ ರೂ.ವರೆಗಿನ ಭಾರಿ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಇದು ಚುನಾವಣಾ ನಿರ್ವಹಣಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.

ವಾಟ್ಸ್​ಆ್ಯಪ್​, ಡಿಜಿಟಲ್​ ಕಣ್ಗಾವಲಿಗೆ ನಿರ್ಬಂಧ

ರಾಜಕೀಯ ಪ್ರಚಾರದಲ್ಲಿ ವಾಟ್ಸ್​ಆ್ಯಪ್​ನಂತಹ ಮೆಸೇಜಿಂಗ್ ಆ್ಯಪ್​ಗಳೇ ಅತ್ಯಂತ ಪ್ರಮುಖ ಸಂವಹನ ಸಾಧನಗಳು. ಮತಗಟ್ಟೆ ಮಟ್ಟದಲ್ಲಿ ಸಾವಿರಾರು ವಾಟ್ಸ್​ಆ್ಯಪ್ ಗ್ರೂಪ್​ಗಳನ್ನು ರಚಿಸಿ, ಮತದಾರರ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳಿಗೆ ತಕ್ಕಂತೆ ಸಂದೇಶ, ವಿಡಿಯೋ ಹಾಗೂ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಡಿಪಿಡಿಪಿ ಕಾಯ್ದೆಯಿಂದ ಇದಕ್ಕೆ ಬ್ರೇಕ್ ಬೀಳಲಿದೆ. ಮತದಾರರ ಅನುಮತಿಯಿಲ್ಲದೆ ಅವರ ಫೋನ್ ನಂಬರ್​ಅನ್ನು ರಾಜಕೀಯ ವಾಟ್ಸ್​ಆ್ಯಪ್ ಗ್ರೂಪ್​ಗಳಿಗೆ ಅಥವಾ ಬ್ರಾಡ್​ಕಾಸ್ಟ್ ಲಿಸ್ಟ್​ಗಳಿಗೆ ಸೇರಿಸುವಂತಿಲ್ಲ. ಯಾವುದೇ ಡಿಜಿಟಲ್ ಸಂದೇಶ ಅಥವಾ ಪ್ರಚಾರ ಕರೆ ಬಂದಾಗ, ಮತದಾರನಿಗೆ ಆ ಸೇವೆಯಿಂದ ಹೊರಬರಲು (ಅನ್​ಸಬ್​ಸ್ಕ್ರೈಬ್ ಅಥವಾ ಆಪ್ಟ್​ಔಟ್) ಸುಲಭವಾದ ಮಾರ್ಗ ಒದಗಿಸಬೇಕು. ಮತದಾರ ಒಮ್ಮೆ ನಿರಾಕರಿಸಿದರೆ, ಅವರಿಗೆ ಮತ್ತೆ ಯಾವುದೇ ಪ್ರಚಾರ ಸಂದೇಶ ಕಳುಹಿಸುವಂತಿಲ್ಲ. ಮತದಾರರ ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ಕದ್ದು ಗಮನಿಸಿ ಅವರ ರಾಜಕೀಯ ಒಲವುಗಳನ್ನು ಪತ್ತೆಹಚ್ಚುವ ಶ್ಯಾಡೋ ಪ್ರೊಫೈಲಿಂಗ್ ತಂತ್ರಗಾರಿಕೆಯನ್ನೂ ಬಳಸುವಂತಿಲ್ಲ.

ಪಕ್ಷಗಳಿಗೆ ಹೊಸ ಸವಾಲುಗಳು

ರಾಜಕೀಯ ಪಕ್ಷಗಳ ಸಾಂಪ್ರದಾಯಿಕ ಮತ್ತು ಡಿಜಿಟಲ್ ಕಾರ್ಯಾಚರಣೆಗಳೆರಡರ ಮೇಲೂ ಈ ಕಾಯ್ದೆ ವ್ಯಾಪಕ ಪರಿಣಾಮ ಬೀರುತ್ತಿದೆ.
ಐಟಿ ಸೆಲ್​ಗಳ ಪುನಾರಚನೆ: ರಾಜಕೀಯ ಪಕ್ಷಗಳ ಐಟಿ ಘಟಕಗಳು ಮತ್ತು ವಾರ್ ರೂಮ್​ಗಳು ತಮ್ಮ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗಿದೆ. ಸಂಗ್ರಹಿಸಿದ ಪ್ರತಿಯೊಂದು ಡೇಟಾ ಪಾಯಿಂಟ್​ಗೆ ಒಪ್ಪಿಗೆಯ ದಾಖಲೆ ಕಾಯ್ದಿಡುವುದು ಅನಿವಾರ್ಯವಾಗಿದೆ.
ಪ್ರಚಾರದ ವೆಚ್ಚ ಹೆಚ್ಚಳ: ಡೇಟಾವನ್ನು ಕಾನೂನುಬದ್ಧವಾಗಿ ಸಂಗ್ರಹಿಸಲು, ಎನ್​ಕ್ರಿಪ್ಟ್ ಮಾಡಿದ ಸರ್ವರ್​ಗಳನ್ನು ನಿರ್ವಹಿಸಲು ಮತ್ತು ಡೇಟಾ ಸಂರಕ್ಷಣಾ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಪಕ್ಷಗಳು ಭಾರಿ ಮೊತ್ತ ವಿನಿಯೋಗಿಸಬೇಕಾಗುತ್ತದೆ.
ಮೈಕ್ರೋಟಾರ್ಗೆಟಿಂಗ್ ಸಮಸ್ಯೆ: ಮತದಾರರ ವೈಯಕ್ತಿಕ ವಿವರಗಳು ಸುಲಭವಾಗಿ ಸಿಗದ ಕಾರಣ, ಹಿಂದಿನಂತೆ ಅತಿ ಸೂಕ್ಷ್ಮ ಮಟ್ಟದಲ್ಲಿ (ಪ್ರತಿ ಮನೆ ಅಥವಾ ವ್ಯಕ್ತಿಯ ಆಧಾರದಲ್ಲಿ) ಪ್ರಚಾರತಂತ್ರ ರೂಪಿಸುವುದು ಕಷ್ಟವಾಗಲಿದೆ.

ಹೊಸ ದಾರಿ ಅನಿವಾರ್ಯ

ಡೇಟಾ ಬಳಕೆಯನ್ನು ಈ ಕಾಯ್ದೆ ಸಂಪೂರ್ಣವಾಗಿ ನಿಷೇಧಿಸುವುದಿಲ್ಲ; ಬದಲಿಗೆ ಅದನ್ನು ನಿಯಂತ್ರಣ ಮತ್ತು ಪಾರದರ್ಶಕತೆಯ ಚೌಕಟ್ಟಿಗೆ ತರುತ್ತದೆ. ಇದರಿಂದಾಗಿ ರಾಜಕೀಯ ಪಕ್ಷಗಳು ಹೊಸ ಮತ್ತು ಕಾನೂನುಬದ್ಧ ಮಾರ್ಗಗಳನ್ನು ಹುಡುಕಿ ಅಳವಡಿಸಿಕೊಳ್ಳಬೇಕಾಗಿದೆ. ತಮ್ಮ ಸಿದ್ಧಾಂತ ಅಥವಾ ಯೋಜನೆಗಳ ಬಗ್ಗೆ ಆಸಕ್ತಿಯಿರುವ ನಾಗರಿಕರನ್ನು ನೇರವಾಗಿ ಸಂಪರ್ಕಿಸಿ, ಅಧಿಕೃತ ವೆಬ್​ಸೈಟ್​ಗಳು ಅಥವಾ ಆ್ಯಪ್​ಗಳ ಮೂಲಕ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗುತ್ತದೆ. ಸುಮ್ಮಸುಮ್ಮನೆ ಮೆಸೇಜ್​ಗಳನ್ನು ಕಳುಹಿಸುವ ಬದಲು, ಉತ್ತಮ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿ ಮತದಾರರೇ ಸ್ವತಃ ಸಂವಹನ ವೇದಿಕೆಗಳಿಗೆ ಸೇರ್ಪಡೆಯಾಗುವಂತೆ ಮಾಡಬೇಕಾಗುತ್ತದೆ. ಡಿಜಿಟಲ್ ಶಾರ್ಟ್​ಕಟ್​ಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಮನೆಮನೆ ಪ್ರಚಾರ, ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕರ್ತರ ಮೂಲಕ ನೇರ ಸಂಪರ್ಕ ಸಾಧಿಸುವ ಸಾಂಪ್ರದಾಯಿಕ ಪದ್ಧತಿಗೆ ಮತ್ತೆ ಹೆಚ್ಚಿನ ಮನ್ನಣೆ ಸಿಗಲಿದೆ.

ಮಹತ್ವದ ಪಲ್ಲಟಕ್ಕೆ ನಾಂದಿ

ತಂತ್ರಗಾರಿಕೆಯ ಅತಿಯಾದ ಬಳಕೆಯಿಂದ ಮತದಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತಿರುವ ಸಂದರ್ಭದಲ್ಲಿ, ಈ ಕಾನೂನು ನಾಗರಿಕರಿಗೆ ತಮ್ಮ ಡೇಟಾದ ಮೇಲಿನ ಹಕ್ಕನ್ನು ಮರಳಿ ನೀಡಿದೆ. ರಾಜಕೀಯ ಪಕ್ಷಗಳು ಮತ್ತು ಚುನಾವಣಾ ನಿರ್ವಹಣಾ ಸಂಸ್ಥೆಗಳು ಇನ್ನು ಮುಂದೆ ಡೇಟಾವನ್ನು ಉಚಿತ ಸಂಪನ್ಮೂಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಮತದಾರರ ಗೌಪ್ಯತೆಯನ್ನು ಗೌರವಿಸಿ, ಪಾರದರ್ಶಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಸಂವಹನ ನಡೆಸುವುದು ಅನಿವಾರ್ಯ. ರಾಜಕೀಯ ರಂಗದಲ್ಲಿ ಮಹತ್ವದ ಪಲ್ಲಟಕ್ಕೆ ಈ ಕಾಯ್ದೆ ನಾಂದಿ ಹಾಡಿದೆ. ಇದು ಡಿಜಿಟಲ್ ಯುಗದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಆರೋಗ್ಯಕರ ಮತ್ತು ಸ್ವಾಗತಾರ್ಹ ಬೆಳವಣಿಗೆ.

ಸಪ್ತರಾಜ್ಯ ಚುನಾವಣೆ ಸನ್ನಿಹಿತ

ಮುಂದಿನ ವರ್ಷ ಏಳು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವರ್ಷದ ಆರಂಭದಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ. ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್​ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಏಳು ರಾಜ್ಯಗಳ ಪೈಕಿ ಉತ್ತರ ಪ್ರದೇಶ ಅತ್ಯಂತ ದೊಡ್ಡ ಚುನಾವಣಾ ಕಣವಾಗಿದ್ದು, 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಣಾ ಆಯೋಗ ಆಯಾ ರಾಜ್ಯಗಳ ವಿಧಾನಸಭಾ ಅವಧಿ ಮುಕ್ತಾಯ ಮತ್ತು ಇತರ ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net