ಗುಲಾಬಿ ಬಣ್ಣದ ಆನೆ ಮೇಲೆ ಅರೆಬೆತ್ತಲೆ ಫೋಟೋಶೂಟ್: ತನಿಖೆಗೆ ಆದೇಶಿಸಿದ ಅರಣ್ಯ ಇಲಾಖೆ! ಅಸಲಿಗೆ ಕಾರಣವೇನು? | Pink Elephant

 Pink Elephant
Pink Elephant
Published on
ಜೈಪುರ: ರಾಜಸ್ಥಾನದ ಸಾಂಸ್ಕೃತಿಕ ನಗರಿ ಜೈಪುರದಲ್ಲಿ ರಷ್ಯಾದ ಫೋಟೋಗ್ರಾಫರ್ ಒಬ್ಬರು ನಡೆಸಿದ ಫೋಟೋಶೂಟ್(Pink Elephant) ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಕಲೆಯ ಹೆಸರಿನಲ್ಲಿ ಜೀವಂತ ಆನೆಗೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿದು, ಅದರ ಮೇಲೆ ಅರೆಬೆತ್ತಲೆ ಮಾಡೆಲ್ ಅನ್ನು ಕೂರಿಸಿ ಫೋಟೋ ತೆಗೆದಿರುವುದು ಪ್ರಾಣಿ ಪ್ರೇಮಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಷ್ಯಾದ ಖ್ಯಾತ ಕಲಾತ್ಮಕ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ ಅವರು ಇತ್ತೀಚೆಗೆ ಜೈಪುರದ ಗಣೇಶ ದೇವಸ್ಥಾನದ ಬಳಿ ಈ ಫೋಟೋಶೂಟ್ ಆಯೋಜಿಸಿದ್ದರು. ರಾಜಸ್ಥಾನದ ಸಂಕೇತವಾಗಿರುವ ಆನೆಯನ್ನು ತನ್ನ ಕಲೆಗೆ ಬಳಸಿಕೊಳ್ಳುವ ಉದ್ದೇಶದಿಂದ ಆನೆಗೆ ಮೈತುಂಬಾ ಗುಲಾಬಿ ಬಣ್ಣ ಬಳಿಯಲಾಗಿತ್ತು. ಆನೆಯ ಮೇಲೆ ಕುಳಿತಿದ್ದ ಮಾಡೆಲ್ ಕೂಡ ಅದೇ ಬಣ್ಣದ ವಿನ್ಯಾಸದಲ್ಲಿದ್ದರು.

ಕಲಾವಿದೆಯ ಸಮರ್ಥನೆ!

ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜೂಲಿಯಾ, "ನಾವು ಆನೆಗೆ ಯಾವುದೇ ಹಾನಿ ಮಾಡಿಲ್ಲ. ಸ್ಥಳೀಯವಾಗಿ ಹಬ್ಬಗಳಲ್ಲಿ ಬಳಸುವ ನೈಸರ್ಗಿಕ (Organic) ಬಣ್ಣಗಳನ್ನೇ ಬಳಸಿದ್ದೇವೆ. ರಾಜಸ್ಥಾನದ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯಲ್ಲಿ ಆನೆಗೆ ವಿಶೇಷ ಸ್ಥಾನವಿದೆ, ಹಾಗಾಗಿ ಅದನ್ನು ನನ್ನ ಕೃತಿಯಲ್ಲಿ ಅಳವಡಿಸಿಕೊಂಡಿದ್ದೇನೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ನೆಟ್ಟಿಗರ ಆಕ್ರೋಶ
ಆದರೆ, ಈ ಸಮರ್ಥನೆಯನ್ನು ಸಾರ್ವಜನಿಕರು ಒಪ್ಪುತ್ತಿಲ್ಲ. "ಆನೆಗಳ ಚರ್ಮವು ಅತ್ಯಂತ ಸೂಕ್ಷ್ಮವಾಗಿರುತ್ತದೆ, ಗಂಟೆಗಟ್ಟಲೆ ಅವುಗಳ ಮೈಗೆ ಬಣ್ಣ ಹಚ್ಚುವುದು ಪ್ರಾಣಿ ಹಿಂಸೆಯಾಗುತ್ತದೆ. ಇಂತಹ ದೃಶ್ಯಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆ (AI) ಬಳಸಬಹುದಿತ್ತು, ಮೂಕ ಪ್ರಾಣಿಗಳನ್ನು ಈ ರೀತಿ ಬಳಸಿಕೊಳ್ಳುವುದು ತಪ್ಪು" ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಗಣೇಶನ ದೇವಸ್ಥಾನದ ಆವರಣದಲ್ಲಿ ಇಂತಹ ಶೂಟಿಂಗ್ ನಡೆಸಿರುವುದು ಸಾಂಸ್ಕೃತಿಕವಾಗಿಯೂ ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತನಿಖೆಗೆ ಅರಣ್ಯ ಇಲಾಖೆ ಆದೇಶ

ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜಸ್ಥಾನ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಯಾವುದೇ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಮತ್ತು ಅನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net