_1787595358061.webp?w=480&auto=format%2Ccompress&fit=max)
_1787595358061.webp?w=480&auto=format%2Ccompress&fit=max)
ದೇಶದಲ್ಲಿ ಎಚ್1ಎನ್1 ಇನ್ಫ್ಲುಯೆಂಜಾ ವೈರಸ್, ಅಂದರೆ ‘ಹಂದಿ ಜ್ವರ’ (ಸ್ವೆ ೖನ್ ಫ್ಲೂ) ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಕೇರಳದಲ್ಲಿ ಇನ್ಫ್ಲುಯೆಂಜಾದ 7,421 ಪ್ರಕರಣಗಳು ದಾಖಲಾಗಿದ್ದು, 88 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ 4 ಸಾವಿರ ಹಾಗೂ ದೆಹಲಿಯಲ್ಲಿ 1,777 ರೋಗಿಗಳಲ್ಲಿ ಎಚ್1ಎನ್1 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಗುಜರಾತ್ನಲ್ಲೂ ಕೆಲವು ಪ್ರಕರಣಗಳು ವರದಿಯಾಗಿವೆ. ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಆಗಸ್ಟ್ 21ರಂದು ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯನ್ನು ಎದುರಿಸುವ ಸಿದ್ಧತೆಗಳ ಕುರಿತು ರ್ಚಚಿಸಿದ್ದಾರೆ. ಹಂದಿ ಮಾಂಸ ಸೇವಿಸುವುದರಿಂದಾಗಲಿ ಅಥವಾ ಹಂದಿಗಳ ಸಂಪರ್ಕದಿಂದಾಗಲಿ ಈ ವೈರಸ್ ಹರಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಗ್ಯ ಸಂಸ್ಥೆಗಳೇ ಸ್ಪಷ್ಟಪಡಿಸಿವೆ. ಹಾಗಿದ್ದರೂ, ಈ ಸೋಂಕು ಇಷ್ಟು ವೇಗವಾಗಿ ಹರಡುತ್ತಿರುವುದೇಕೆ? ಇದು ಕೋವಿಡ್ನಷ್ಟೇ ಅಪಾಯಕಾರಿಯೇ? ಈ ಎಲ್ಲ ಸಂಗತಿಗಳ ಅವಲೋಕನ ಇಲ್ಲಿದೆ.
ಇನ್ಫ್ಲುಯೆಂಜಾ ವೈರಸ್ ಅನ್ನು ಆಡುಭಾಷೆಯಲ್ಲಿ ‘ಫ್ಲೂ’ ಎಂದು ಕರೆಯಲಾಗುತ್ತದೆ. ಈ ವೈರಸ್ಗಳು ಮುಖ್ಯವಾಗಿ ಎರಡು ವಿಧಗಳಾಗಿವೆ- ಇನ್ಫ್ಲುಯೆಂಜಾ ಎ ಮತ್ತು ಇನ್ಫ್ಲುಯೆಂಜಾ ಬಿ. ಇವುಗಳಲ್ಲಿ ಇನ್ಫ್ಲುಯೆಂಜಾ ಎ ಹೆಚ್ಚು ಅಪಾಯಕಾರಿಯಾಗಿದೆ. ಇನ್ಫ್ಲುಯೆಂಜಾ ಎ ವೈರಸ್ನಲ್ಲಿ ಪೋ›ಟೀನ್ ಪ್ರಕಾರಗಳಿಗೆ ಅನುಗುಣವಾಗಿ ಹಲವು ಉಪಪ್ರಕಾರಗಳಿವೆ. ಉದಾಹರಣೆಗೆ-ಎಚ್1ಎನ್1, ಎಚ್3ಎನ್2 ಮತ್ತು ಎಚ್5ಎನ್1 ಇತ್ಯಾದಿ. ಇವುಗಳಲ್ಲಿ ಅತ್ಯಂತ ಅಪಾಯಕಾರಿ ಎಂದರೆ ಎಚ್1ಎನ್1 ವೈರಸ್. 2009ರಲ್ಲಿ ಇದೇ ವೈರಸ್ನಿಂದಾಗಿ ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗ ಹರಡಿ 19 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡರು. ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಅಂಕಿಅಂಶ. ಆದರೆ ನೈಜ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಾಗಿತ್ತು. 2009ರಲ್ಲಿ ಮನುಷ್ಯರಲ್ಲಿ ಈ ವೈರಸ್ ಅನ್ನು ಮೊದಲ ಬಾರಿಗೆ ಮೆಕ್ಸಿಕೋದಲ್ಲಿ ಪತ್ತೆ ಹಚ್ಚಲಾಯಿತು. ಆದರೆ ಇದು ಆರಂಭದಲ್ಲಿ ಹಂದಿಗಳಲ್ಲಿ ಹರಡುತ್ತಿದ್ದ ಕಾರಣ ಇದಕ್ಕೆ ‘ಸ್ವೈನ್ ಫ್ಲೂ’ (ಹಂದಿ ಜ್ವರ) ಎಂದು ಹೆಸರಿಸಲಾಗಿತ್ತು. ತದನಂತರ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ತಿಳಿದುಬಂದ ಮೇಲೆ, ಇದಕ್ಕೆ ‘ಇನ್ಫ್ಲುಯೆಂಜಾ ಎಚ್1ಎನ್1’ ಎಂದು ಮರುನಾಮಕರಣ ಮಾಡಲಾಯಿತು. ಭಾರತದಲ್ಲಿ ಪ್ರತಿ ವರ್ಷ ಜುಲೈನಿಂದ ಸೆಪ್ಟೆಂಬರ್ ನಡುವೆ ಇನ್ಫ್ಲುಯೆಂಜಾ ಪ್ರಕರಣಗಳು ಕಂಡುಬರುತ್ತವೆ. ಇನ್ಫ್ಲುಯೆಂಜಾದ ಇತರ ಕಡಿಮೆ ಅಪಾಯಕಾರಿ ಪ್ರಕಾರಗಳ ಜೊತೆಗೆ ಎಚ್1ಎನ್1 ಕೂಡ ಹರಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಪ್ರಕಾರ, ನಾವು ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಹೊರಬರುವ ಸಣ್ಣ ತೇವಾಂಶದ ಕಣಗಳ (ಡ್ರಾಪ್ಲೆಟ್ಸ್) ಮೂಲಕ ಎಚ್1ಎನ್1 ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ 1ರಿಂದ 2 ಮೀಟರ್ ವ್ಯಾಪ್ತಿಯಲ್ಲಿರುವ ಇತರ ಜನರಿಗೂ ಸೋಂಕು ತಗುಲಬಹುದು. ಈ ವೈರಸ್ ಬಾಗಿಲಿನ ಹಿಡಿಕೆಗಳು, ಮೊಬೈಲ್ ಫೋನ್ಗಳಂತಹ ಮೇಲ್ಮೈಗಳ ಮೇಲೆ 24 ಗಂಟೆಗಳವರೆಗೆ ಜೀವಂತವಾಗಿರುತ್ತದೆ. ಆದ್ದರಿಂದಲೇ ಕೋವಿಡ್ಗೆ ವಹಿಸುವ ಎಚ್ಚರಿಕೆಯಂತೆಯೇ ಇದರಲ್ಲೂ ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಸಾಮಾನ್ಯ ಶೀತ-ನೆಗಡಿ ರೈನೋವೈರಸ್ನಂತಹ ವೈರಸ್ಗಳಿಂದ ಬರುತ್ತದೆ. ಇದು ಬಹುತೇಕ 3ರಿಂದ 7 ದಿನಗಳಲ್ಲಿ ವಾಸಿಯಾಗುತ್ತದೆ. ಆದರೆ ಇನ್ಫ್ಲುಯೆಂಜಾ, ಅದರಲ್ಲೂ ವಿಶೇಷವಾಗಿ ಎಚ್1ಎನ್1 ಸೋಂಕು ಹಲವು ವಾರಗಳವರೆಗೆ ದೇಹದಲ್ಲಿ ಉಳಿಯುತ್ತದೆ. ಋತುಮಾನದ ಶೀತ-ನೆಗಡಿ, ಕೋವಿಡ್ ಅಥವಾ ಎಚ್1ಎನ್1- ಇವೆಲ್ಲವೂ ಆರಂಭದಲ್ಲಿ ನಮ್ಮ ಉಸಿರಾಟದ ವ್ಯವಸ್ಥೆಗೆ ಸಂಬಂಧಿಸಿದ ಅಂಗಗಳಾದ ಮೂಗು, ಗಂಟಲು ಮತ್ತು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಇವುಗಳ ಲಕ್ಷಣಗಳು ಸಾಮಾನ್ಯವಾಗಿರುತ್ತವೆ. ಕೇಂದ್ರ ಆರೋಗ್ಯ ಸಚಿವಾಲಯವು ಆಗಸ್ಟ್ 22ರಂದು ಎಚ್1ಎನ್1 ಸೋಂಕಿನ ಸಾಮಾನ್ಯ ಲಕ್ಷಣಗಳನ್ನು ತಿಳಿಸಿದೆ
ಎಚ್1ಎನ್1 ಸೋಂಕು ಒಮ್ಮೆ ಸಂಪೂರ್ಣವಾಗಿ ಗುಣವಾದ ನಂತರ, ದೇಹದಲ್ಲಿ ದೀರ್ಘಕಾಲದವರೆಗೆ ಯಾವುದೇ ಗಂಭೀರ ಪರಿಣಾಮಗಳು ಉಳಿಯುವುದಿಲ್ಲ. ಆದರೆ, ಹಂದಿ ಜ್ವರದ (ಸ್ವೈನ್ ಫ್ಲೂ) ಸಮಯದಲ್ಲಿ ಮಯೋಕಾರ್ಡಿಟಿಸಸ್ (ಹೃದಯದ ಸ್ನಾಯುಗಳಲ್ಲಿ ಊತ) ಅಥವಾ ಹೃದಯಾಘಾತದಂತಹ ಸಮಸ್ಯೆಗಳನ್ನು ಎದುರಿಸಿದ ರೋಗಿಗಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಂತರವೂ ಮುಂದುವರಿಯಬಹುದು. ಇಂಥ ರೋಗಿಗಳು ಗುಣಮುಖರಾದ ಮೇಲೂ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಕೆಲವು ಅಪರೂಪದ ಸಂದರ್ಭಗಳಲ್ಲಿ ಸಂಪೂರ್ಣ ಆರೋಗ್ಯವಂತ ಮತ್ತು ಯುವಜನರಲ್ಲೂ ಎಚ್1ಎನ್1 ಸೋಂಕಿನ ಸಮಯದಲ್ಲಿ ಮಯೋಕಾರ್ಡಿಟಿಸ್ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ): ಪ್ರಕಾರ, ಈಗಾಗಲೇ ಅಸ್ತಮಾ, ಮಧುಮೇಹ, ಮೂತ್ರಪಿಂಡ (ಕಿಡ್ನಿ) ಅಥವಾ ಯಕೃತ್ (ಲಿವರ್) ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ, ಹಂದಿ ಜ್ವರ ಬಂದ ನಂತರ ಈ ಹಳೆಯ ಕಾಯಿಲೆಗಳು ಸ್ವಲ್ಪ ಸಮಯದವರೆಗೆ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.
ಆರೋಗ್ಯವಂತ ವ್ಯಕ್ತಿಗಳಲ್ಲಿ ಋತುಮಾನದ ಫ್ಲೂ ಸೋಂಕು ಒಂದು ವಾರದಲ್ಲಿ ತಾನಾಗಿಯೇ ವಾಸಿಯಾಗುತ್ತದೆ. ಈ ಸಮಯದಲ್ಲಿ ಜ್ವರ ಮತ್ತು ಕೆಮ್ಮು ನಿವಾರಣೆಗೆ ಅಗತ್ಯವಿರುವ ಔಷಧಗಳನ್ನು ತೆಗೆದುಕೊಳ್ಳಬಹುದು. ಇದರ ಹೊರತಾಗಿ, ಋತುಮಾನದ ಫ್ಲೂಗೆ ಲಸಿಕೆಗಳು ಸಹ ಲಭ್ಯವಿವೆ. ಎಚ್1ಎನ್1, ಎಚ್3ಎನ್2 ಮತ್ತು ಇನ್ಫ್ಲುಯೆಂಜಾ ಬಿ ಸೋಂಕುಗಳನ್ನು ಒಳಗೊಳ್ಳುವ ಟ್ರೖೆವಲೆಂಟ್ ಲಸಿಕೆಗಳು ಕೂಡ ಲಭ್ಯ ಇವೆ. ಈ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತವೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಣ್ಣ ಮಕ್ಕಳಿಗೆ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು.
ಜಗತ್ತಿನ ಹಲವು ದೇಶಗಳಲ್ಲಿ 2009ರಲ್ಲಿ ಹಂದಿ ಜ್ವರ (ಸ್ವೈನ್ ಫ್ಲೂ) ಹರಡಿದಾಗ, ಭಾರತದಲ್ಲೂ 20 ಸಾವಿರ ಪ್ರಕರಣಗಳು ದಾಖಲಾಗಿದ್ದವು ಮತ್ತು 1,700ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು. ಅಂದರೆ ಸಾವಿನ ಪ್ರಮಾಣ (ಮರಣ ದರ) 8.5% ಇತ್ತು. ಆದರೆ ಆ ನಂತರ ಜಗತ್ತಿನಾದ್ಯಂತ ಇನ್ಫ್ಲುಯೆಂಜಾ ಲಸಿಕೆಗಳನ್ನು ನೀಡಲಾಯಿತು. ಮಕ್ಕಳಿಗೂ ಇದರ ಲಸಿಕೆಗಳನ್ನು ಹಾಕಲಾಗುತ್ತದೆ. ಲಸಿಕೆ ಹಾಗೂ ಇತರ ಕ್ರಮಗಳ ಪರಿಣಾಮ, ಎಚ್1ಎನ್1 ಈಗ ಋತುಮಾನದ ಜ್ವರ (ಸೀಸನಲ್ ಫ್ಲೂ) ಆಗಿ ಬದಲಾಗಿದೆ. ಇದರಿಂದಾಗುವ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆಯಿದೆ. ಲಸಿಕೆಯ ಕಾರಣದಿಂದಾಗಿ ಜನರಲ್ಲಿ ಇದರ ವಿರುದ್ಧ ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ಬೆಳೆದಿದೆ. ಒಮ್ಮೆ ಸೋಂಕು ತಗುಲಿದಾಗ ಅಥವಾ ಲಸಿಕೆ ಪಡೆದ ನಂತರ ದೇಹದಲ್ಲಿ ನಿರ್ದಿಷ್ಟ ಮಟ್ಟದ ರೋಗನಿರೋಧಕ ಶಕ್ತಿ ಉಳಿಯುತ್ತದೆ. ಹಾಗಾಗಿ ಈಗ ಇದು ಮೊದಲಿನಷ್ಟು ಅಪಾಯಕಾರಿಯಾಗಿ ಉಳಿದಿಲ್ಲ. ಆದಾಗ್ಯೂ, ಮೊದಲೇ ಅಸ್ವಸ್ಥರಾಗಿರುವವರು, ವೃದ್ಧರು ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಇದರಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ಆರೋಗ್ಯ ತಜ್ಞರ ಪ್ರಕಾರ, ಎಚ್1ಎನ್1 ಸೋಂಕು ಶ್ವಾಸಕೋಶ, ಮೂಗು ಮತ್ತು ಗಂಟಲಿನ ಹೊರತಾಗಿ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು (ಸ್ವಲ್ಪ ಮಟ್ಟದ ಊತ/ಇನ್ಫ್ಲಮೇಷನ್) ಹೆಚ್ಚಿಸುತ್ತದೆ. ಹೃದಯ ಬಡಿತದ ವೇಗವೂ ಹೆಚ್ಚುತ್ತದೆ. ಈಗಾಗಲೇ ಹೃದ್ರೋಗ ಸಮಸ್ಯೆ, ಅಸ್ತಮಾ, ಮಧುಮೇಹ ಅಥವಾ ಎಚ್ಐವಿ ಇರುವವರಿಗೆ ಹೃದಯಾಘಾತದ ಅಪಾಯ ಉಂಟಾಗಬಹುದು. ವೃದ್ಧರು ಮತ್ತು ಮಕ್ಕಳಲ್ಲಿ ಜ್ವರ, ನಿರ್ಜಲೀಕರಣ, ಆಮ್ಲಜನಕದ ಕೊರತೆ ಉಂಟಾಗಬಹುದು, ಇದು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು.
ಎಚ್1ಎನ್1ನ ಕೆಲವು ಅಪರೂಪದ ಪ್ರಕರಣಗಳಲ್ಲಿ ಮಯೋಕಾರ್ಡಿಟಿಸ್, ಅಂದರೆ ಹೃದಯದ ಸ್ನಾಯುಗಳಲ್ಲಿ ಊತ/ಉರಿಯೂತ ಕಾಣಿಸಿಕೊಳ್ಳಬಹುದು. ಆದ್ದರಿಂದ ವೈದ್ಯರು ಎಚ್1ಎನ್1 ರೋಗಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಗಮನ ಹರಿಸುತ್ತಾರೆ. ಎದೆ ನೋವು, ಉಸಿರಾಟದ ತೊಂದರೆ, ಕಾಲುಗಳಲ್ಲಿ ಊತ ಮತ್ತು ವೇಗವಾದ ಹೃದಯ ಬಡಿತ ಕಂಡುಬಂದರೆ, ಅದನ್ನು ಕೇವಲ ಸಾಮಾನ್ಯ ಫ್ಲೂ ಎಂದು ಭಾವಿಸಿ ನಿರ್ಲಕ್ಷಿಸಬಾರದು.
ಕೋವಿಡ್ಗೆ ಹೋಲಿಸಿದರೆ ಎಚ್1ಎನ್1 ಸೋಂಕು ಕಡಿಮೆ ಅಪಾಯಕಾರಿಯಾಗಿದೆ. ಯಾವುದೇ ಸಾಂಕ್ರಾಮಿಕ ರೋಗದ ಆರ್-ನಾಟ್ ಅಂಶವು ಆ ರೋಗವು ಎಷ್ಟು ವೇಗವಾಗಿ ಹರಡುತ್ತದೆ ಎಂಬುದನ್ನು ಸೂಚಿಸುತ್ತದೆ. ಇನ್ಫ್ಲುಯೆಂಜಾದ ಒಬ್ಬ ಸೋಂಕಿತ ವ್ಯಕ್ತಿಯು ಗರಿಷ್ಠ 1.7 ಜನರಿಗೆ ಸೋಂಕು ಹರಡಬಹುದು. ಆದರೆ ಕೋವಿಡ್ನ ಒಬ್ಬ ಸೋಂಕಿತ ವ್ಯಕ್ತಿಯು 2.5 ಜನರಿಗೆ ಸೋಂಕು ಹರಡಿಸುತ್ತಿದ್ದ. ಕೆಲವು ಪ್ರದೇಶಗಳಲ್ಲಿ ಇದು 10ರವರೆಗೂ ತಲುಪಿತ್ತು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎಚ್1ಎನ್1ನಲ್ಲಿ ಮರಣ ಪ್ರಮಾಣವು (Mಟ್ಟಠಿಚ್ಝಜಿಠಿಢ ್ಕಠಿಛಿ) 0.01%ರಿಂದ 0.1% ಆಗಿದೆ, ಅಂದರೆ ಪ್ರತಿ 10 ಸಾವಿರ ಜನರಲ್ಲಿ 1ರಿಂದ 10 ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಕೋವಿಡ್ನಲ್ಲಿ ಮರಣ ಪ್ರಮಾಣವು 1%ರಿಂದ 3% ಆಗಿದೆ, ಅಂದರೆ 10 ಸಾವಿರ ಜನರಲ್ಲಿ 100ರಿಂದ 300 ಅಥವಾ ಅದಕ್ಕಿಂತ ಹೆಚ್ಚು ಸಾವುಗಳು ಸಂಭವಿಸಬಹುದು. ಕೋವಿಡ್ನಲ್ಲಿ ಶ್ವಾಸಕೋಶದ ವೈಫಲ್ಯದ ಕಾರಣದಿಂದಾಗಿ ವೆಂಟಿಲೇಟರ್ ಅವಲಂಬನೆ ಹೆಚ್ಚುತ್ತದೆ. ಎಚ್1ಎನ್1ಗೆ ಹೋಲಿಸಿದರೆ ಆಸ್ಪತ್ರೆ ಮತ್ತು ಐಸಿಯು ಅಗತ್ಯವು ಕೋವಿಡ್ನಲ್ಲಿ 3 ಪಟ್ಟು ಹೆಚ್ಚಿರುತ್ತದೆ.