ಗುವಾಹಟಿ ಹೋಟೆಲ್​ನಲ್ಲಿ ಲೀಸ್ ವಿಚಾರಕ್ಕೆ ಗಲಾಟೆ; ಐವರು ಗುಂಡೇಟಿಗೆ ಬಲಿ, ಒಬ್ಬನಿಗೆ ಗಾಯ

ಹೋಟೆಲ್ ಬಿಲಾಸ್ ಇನ್
ಹೋಟೆಲ್ ಬಿಲಾಸ್ ಇನ್
Published on: 
  • ಗುವಾಹಟಿಯಲ್ಲಿ ಲೀಸ್ ವಿಚಾರಕ್ಕೆ ಜಗಳ, ಭೀಕರ ಗುಂಡಿನ ದಾಳಿ.

  • ಹೋಟೆಲ್ ಮಾಲೀಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು, ಚಾಲಕ ಸಾವು.

  • ಗುತ್ತಿಗೆದಾರ ಘನಕಾಂತ ಗೋಗಾಯ್ ಎಂಬಾತನನ್ನು ಬಂಧಿಸಿದ ಪೊಲೀಸರು.

ಗುವಾಹಟಿ: ಲೀಸ್‌ ವಿಚಾರಕ್ಕೆ ಶುರುವಾದ ಕೊಲೆಯಲ್ಲಿ ಅಂತ್ಯವಾದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ಬೆಳಕಿಗೆ ಬಂದಿದೆ. ಹೌದು, ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಮತ್ತು ಕ್ಯಾಬ್​ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ

ಗುವಾಹಟಿಯ ಬೋರಾ ಸರ್ವಿಸ್ ಪ್ರದೇಶದಲ್ಲಿರುವ 'ಹೋಟೆಲ್ ಬಿಲಾಸ್ ಇನ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಹೋಟೆಲ್ ಮಾಲಕಿ ಹೆಲೆನಾ ಭರಾಲಿ, ಆಕೆಯ ಸಹೋದರ ಭೂದೇವ್ ಭರಾಲಿ, ಆಕೆಯ ಮಗ ದೇವರ್ಷಿ ಕಶ್ಯಪ್, ಸೊಸೆ ರಿನಿಕಿ ಕಶ್ಯಪ್ ಮತ್ತು ಅವರ ಚಾಲಕ ನಾರಾಯಣ್ ದಾಸ್ ಎಂದು ಗುರುತಿಸಲಾಗಿದೆ. ಆರು ಮಂದಿಗೆ ಗುಂಡೇಟು ಬಿದ್ದಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದಾರೆ. ಒಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.

ಪೊಲೀಸರು ಏನಂದ್ರು?

ಗುವಾಹಟಿ ಪೊಲೀಸ್ ಆಯುಕ್ತ ಡಾ. ಪಾರ್ಥ ಸಾರಥಿ ಮಹಂತ ಅವರ ಪ್ರಕಾರ, ಸೋಮವಾರ (ಅ.26) ರಾತ್ರಿ 9 ಗಂಟೆ ಸುಮಾರಿಗೆ ಈ ಗುಂಡಿನ ದಾಳಿ ನಡೆದಿದೆ. ಒಟ್ಟು ಆರು ಜನರಿಗೆ ಗುಂಡೇಟು ತಗುಲಿದ್ದು, ಅವರಲ್ಲಿ ಐವರು ಸ್ಥಳದಲ್ಲೇ ಅಥವಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಹೋಟೆಲ್ ಮೇಲ್ವಿಚಾರಕ ಸತ್ಯೇಂದ್ರ ಪಾಠಕ್ ಗಂಭೀರವಾಗಿ ಗಾಯಗೊಂಡಿದ್ದು, ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮೃತರಾದವರಲ್ಲಿ ನಾಲ್ವರು ಒಂದೇ ಕುಟುಂಬದವರಾಗಿದ್ದರೆ, ಇನ್ನೊಬ್ಬರು ಮತ್ತು ಗಾಯಗೊಂಡವರು ಅವರ ಗ್ರಾಮದವರಾಗಿದ್ದಾರೆ ಎಂದು ಹೇಳಿದರು.

'ಆರೋಪಿಯು ಸುಮಾರು ಒಂದು ವರ್ಷದ ಹಿಂದೆ ಹೋಟೆಲ್ ಅನ್ನು ಲೀಸ್‌ಗೆ ಪಡೆದಿದ್ದನು. ಹೋಟೆಲ್ ಮಾಲೀಕರಿಗೂ ಲೀಸ್ ಪಡೆದುಕೊಂಡವನಿಗೂ ಆಸ್ತಿ ವಿವಾದವಿತ್ತು. ಇದು ದುರ್ಘಟನೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಯುತ್ತಿದೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ. ಪಾರ್ಥ ಸಾರಥಿ ಮಹಂತ ಮಾಹಿತಿ ನೀಡಿದ್ದಾರೆ.

ಆರೋಪಿ ಅರೆಸ್ಟ್

ಘಟನೆ ನಡೆದ ಕೇವಲ ಒಂದು ಗಂಟೆಯೊಳಗೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಗುತ್ತಿಗೆದಾರ ಪ್ರಮುಖ ಆರೋಪಿ ಘನಕಾಂತ ಗೋಗಾಯ್ ಎಂಬಾತನನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಲಾದ 32-ಬೋರ್ ಲೈಸೆನ್ಸ್‌ ಹೊಂದಿರುವ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ

ಅಸ್ಸಾಂ ಕಾಂಗ್ರೆಸ್ ಆಕ್ರೋಶ

ಅಸ್ಸಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಅಸ್ಸಾಂ ಜನತೆಗೆ ಉತ್ತಮ ಆಡಳಿತ ಸಿಗಬೇಕು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಹೊಣೆಗಾರಿಕೆ ಖಚಿತಪಡಿಸಬೇಕು ಎಂದು ಕಾಂಗ್ರೆಸ್ ನಾಯಕರು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net