ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಲಷ್ಕರ್-ಎ-ತೈಬಾ ಕಮಾಂಡರ್ ಯಾಸಿರ್​ನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು | Yasir

ಲಷ್ಕರ್-ಎ-ತೈಬಾ ಕಮಾಂಡರ್ ಯಾಸಿರ್
ಲಷ್ಕರ್-ಎ-ತೈಬಾ ಕಮಾಂಡರ್ ಯಾಸಿರ್
Published on: 
ಶ್ರೀನಗರ: ಜಮ್ಮು-ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಯೂಸ್ಮಾರ್ಗ್‌ನ ಮೇಲ್ಭಾಗದಲ್ಲಿ ಶನಿವಾರ(ಸೆ. 05) ಜಂಟಿ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೈಬಾ ಕಮಾಂಡರ್ ಯಾಸಿರ್​ನನ್ನು(Yasir) ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ವರದಿಯಾಗಿದೆ.
ಭಯೋತ್ಪಾದಕರು ಇರುವಿಕೆಯ ಖಚಿತ ಮಾಹಿತಿ ಮೇರೆಗೆ ವಿಶೇಷ ಪಡೆಗಳು ಮತ್ತು 53 ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಭಯೋತ್ಪಾದಕರೊಂದಿಗೆ ಕೆಲಕಾಲ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಯಾಸಿರ್ ಲಷ್ಕರ್-ಎ-ತೈಬಾದ ಸುಲೈಮಾನ್ ಮೂಸಾ ಗುಂಪಿನ ಭಾಗವಾಗಿದ್ದನು. ಆದರೆ ಸುಮಾರು ಒಂದು ವರ್ಷದ ಹಿಂದೆ ಆ ಗುಂಪಿನಿಂದ ಬೇರ್ಪಟ್ಟು, ತಾನೇ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದನು. ಭದ್ರತಾ ಸಂಸ್ಥೆಗಳು ಅವನ ಚಲನವಲನಗಳ ಮೇಲೆ ನಿಗಾ ಇರಿಸಿದ್ದವು ಎನ್ನಲಾಗಿದೆ.


ಸುಲೈಮಾನ್ ಮೂಸಾ ಗುಂಪಿನಿಂದ ಬೇರ್ಪಟ್ಟ ಬಳಿಕ ಯಾಸಿರ್ ಯೂಸ್​ಮಾರ್ಗ್​ ಪ್ರದೇಶದಲ್ಲಿ ಲಷ್ಕರ್‌ನ ಪ್ರಮುಖ ಕಾರ್ಯಕರ್ತನಾಗಿ ಹೊರಹೊಮ್ಮಿದ್ದನೆಂದು ಮೂಲಗಳು ತಿಳಿಸಿವೆ. ಮತ್ತು ಗುಡ್ಡದಲ್ಲಿ ಅವನ ಇರುವಿಕೆ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿ, ಅಂತಿಮವಾಗಿ ಹೊಡೆದುರುಳಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ತೀವ್ರಗೊಂಡ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಮುಂದುವರಿಸಿರುವ ನಡುವೆಯೇ ಯೂಸ್‌ಮಾರ್ಗ್‌ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಯಾಸಿರ್‌ನ ಹತ್ಯೆಯ ನಂತರ, ತನಿಖಾ ಸಂಸ್ಥೆಗಳು ಈಗ ಅವನ ಜಾಲ, ಲಷ್ಕರ್-ಎ-ತೈಬಾದ ಇತರ ಕಾರ್ಯಕರ್ತರೊಂದಿಗಿನ ಅವನ ಸಂಪರ್ಕಗಳು ಮತ್ತು ಈ ಪ್ರದೇಶದಲ್ಲಿ ಅವನ ಚಟುವಟಿಕೆಗಳ ವ್ಯಾಪ್ತಿಯ ಬಗ್ಗೆ ತನಿಖೆ ನಡೆಸುತ್ತಿವೆ.

ಸುಲೈಮಾನ್ ಮೂಸಾ ಯಾರು?

ಹಾಶಿಮ್ ಮೂಸಾ ಎಂದೂ ಕರೆಯಲ್ಪಡುವ ಸುಲೈಮಾನ್ ಮೂಸಾ, 2025ರಲ್ಲಿ ಪಹಲ್ಘಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ. ದಾಳಿಯ ಕೆಲವು ತಿಂಗಳ ನಂತರ, ಶ್ರೀನಗರದ ಡಚಿಗಮ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂಸಾ ಹತ್ಯೆಯಾಗಿದ್ದಾನೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net