ನನ್ನ ಹೇಳಿಕೆಯನ್ನು ತಿರಿಚುದ್ದಾರೆ, ನನಗೆ ಗುಜರಾತಿಗಳ ಮೇಲೆ ಅಪಾರ ಗೌರವವಿದೆ ಎಂದ ಕಾಂಗ್ರೆಸ್ ಅಧ್ಯಕ್ಷ
ನವದೆಹಲಿ: ಕೇರಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುಜರಾತಿಗಳು ಅನಕ್ಷರಸ್ಥರು ಎಂಬ ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿದ್ದಾರೆ.
ಗುಜರಾತಿಗಳ ಮೇಲೆ ನನಗೆ ಗೌರವವಿದೆ
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ, ನನಗೆ ಗುಜರಾತಿಗಳ ಮೇಲೆ ಬಹಳ ಗೌರವವಿದೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅದನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಾನು ಕೇರಳ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೋದಾಗ ಮಾಡಿರುವ ಭಾಷಣದ ಕೆಲ ಹೇಳಿಕೆಗಳನ್ನು ಉದ್ದೇಶ ಪೂರ್ವಕವಾಗಿ ತಿರುಚಲಾಗುತ್ತಿದೆ. ಆದರೂ ನಾನು ಈ ಕುರಿತು ವಿಷಾದ ವ್ಯಕ್ತ ಪಡಿಸುತ್ತೇನೆ. ಗುಜರಾತಿನ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ, ಮುಂದೆಯೂ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಖರ್ಗೆ ಭಾಷಣದಲ್ಲಿ ಹೇಳಿದ್ದೇನು?
ಕೇರಳದ ಇಡುಕ್ಕಿನಲ್ಲಿ ಭಾಷಣ ಮಾಡಿದ್ದ ಖರ್ಗೆ, ಕೇರಳದ ಜನರು ಬುದ್ಧಿವಂತರು ಮತ್ತು ಶಿಕ್ಷಿತರಾಗಿದ್ದಾರೆ, ಇವರನ್ನು ಗುಜರಾತಿಗಳನ್ನು ದಾರಿ ತಪ್ಪಿಸಿದಂತೆ ಇವರನ್ನು ತಪ್ಪಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದು ಹೇಳಿದ್ದರು.
ಕೇರಳದ ಜನರನ್ನು ದಾರಿ ತಪ್ಪಿಸಬೇಡಿ. ಅವರು ತುಂಬಾ ಬುದ್ಧಿವಂತರು, ಅವರು ವಿದ್ಯಾವಂತರು. ಮೋದಿ ಜಿ, ವಿಜಯ್ (ಮುಖ್ಯಮಂತ್ರಿ ಪಿಣರಾಯಿ ವಿಜಯನ್), ನೀವಿಬ್ಬರೂ ಗುಜರಾತ್ ಅಥವಾ ಇತರ ಸ್ಥಳಗಳಲ್ಲಿ ಅನಕ್ಷರಸ್ಥರನ್ನು ಮೋಸಗೊಳಿಸಬಹುದು, ಆದರೆ ಕೇರಳ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದರು.
ಖರ್ಗೆ ಮೇಲೆ ಹರಿಹಾಯ್ದ ಭಾಜಪಾ!
ಮಲ್ಲಿಕಾರ್ಜುನ್ ಖರ್ಗೆ ಅವರ ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕೇಸರಿ ಪಡೆ ಅವರ ಮೇಲೆ ಮುಗಿಬಿದ್ದಿತು. ಗುಜರಾತಿನ ಉಪ ಮುಖ್ಯಮಂತ್ರಿ ಹರ್ಷ ಸಾಂಘವಿ, ಖರ್ಗೆ ಅವರ ಈ ಹೇಳಿಕೆಯು ಲಕ್ಷಾಂತರ ಗುಜರಾತಿಗಳನ್ನು ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರು ಸೇರಿದಂತೆ ರಾಷ್ಟ್ರಕ್ಕೆ ರಾಜ್ಯ ನೀಡಿದ ಕೊಡುಗೆಯನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು, (ಏಜನ್ಸೀಸ್).