ಗುಜರಾತ್‌ನಲ್ಲಿ ಕೇಸರಿ ಸುನಾಮಿ... 15ಕ್ಕೆ 15 ಪುರಸಭೆಗಳಲ್ಲಿ ಅರಳಿದ ಕಮಲ; ಕಾಂಗ್ರೆಸ್, ಆಪ್​ ಧೂಳೀಪಟ | Gujarat Local Body Election

Gujarat Local Body Election | ಪ್ರಧಾನಿ ನರೇಂದ್ರ ಮೋದಿ
Gujarat Local Body Election | ಪ್ರಧಾನಿ ನರೇಂದ್ರ ಮೋದಿ
Published on
ಗಾಂಧಿನಗರ: ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ (Gujarat Local Body Election) ಪ್ರಕಟವಾಗಿದ್ದು, ರಾಜ್ಯಾದ್ಯಂತ ಕೇಸರಿ ಅಲೆ ಬೀಸಿದೆ. ಮಂಗಳವಾರ ಹೊರಬಿದ್ದ ಫಲಿತಾಂಶದ ಪ್ರಕಾರ, ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿಯನ್ನು ಸಂಪೂರ್ಣವಾಗಿ ಸೋಲಿಸಿ ಎಲ್ಲಾ 15 ಪುರಸಭೆಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಏಪ್ರಿಲ್ 26 ರಂದು ನಡೆದ ಈ ಚುನಾವಣೆ 15 ಪುರಸಭೆ ನಿಗಮಗಳು, 84 ಪುರಸಭೆಗಳು, 34 ಜಿಲ್ಲಾ ಪಂಚಾಯತ್‌ಗಳು ಮತ್ತು 260 ತಾಲೂಕು ಪಂಚಾಯತ್‌ಗಳನ್ನು ಒಳಗೊಂಡಿದೆ.

ಬಿಜೆಪಿ ಮೇಲುಗೈ..

ಒಟ್ಟು 15 ಪುರಸಭೆಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರದಂತಹ ದೀರ್ಘಕಾಲದ ನಾಗರಿಕ ಸಂಸ್ಥೆಗಳ ಜೊತೆಗೆ, 2025ರ ಜನವರಿಯಲ್ಲಿ ಗುಜರಾತ್ ಕ್ಯಾಬಿನೆಟ್ ಅನುಮೋದಿಸಿದ 9 ಹೊಸ ಮುನ್ಸಿಪಲ್ ಕಾರ್ಪೊರೇಶನ್‌ಗಳೂ ಸೇರಿವೆ. ಈ ಹೊಸ ಸಂಸ್ಥೆಗಳಾದ ಆನಂದ್ ಕರಮ್ಸಾದ್, ಗಾಂಧಿಧಾಮ್, ಮೆಹ್ಸಾನಾ, ಮೊರ್ಬಿ, ನಾಡಿಯಾಡ್, ನವಸಾರಿ, ಪೋರ್ಬಂದರ್ ಛಾಯಾ, ಸುರೇಂದ್ರನಗರ ವಾಧ್ವಾನ್ ಮತ್ತು ವಾಪಿಗಳಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಈ ಎಲ್ಲಾ ಕಡೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ.
192 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ನಾಗರಿಕ ಸಂಸ್ಥೆಯಾದ ಅಹಮದಾಬಾದ್‌ನಲ್ಲಿ ಬಿಜೆಪಿ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗಳಿಸಿದೆ. ಸೂರತ್‌ನಲ್ಲಿ 120 ಸ್ಥಾನಗಳ ಪೈಕಿ ಬಿಜೆಪಿ 71 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್‌ಗೆ ಕೇವಲ 1 ಸ್ಥಾನ ದೊರೆತಿದೆ. ರಾಜ್‌ಕೋಟ್‌ನಲ್ಲಿ 72 ಸ್ಥಾನಗಳ ಪೈಕಿ 40 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ವಡೋದರಾದಲ್ಲಿ 76 ಸ್ಥಾನಗಳ ಪೈಕಿ 32 ಸ್ಥಾನಗಳಲ್ಲಿ ಬಿಜೆಪಿ ಹಾಗೂ 5 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಭಾವನಗರದಲ್ಲಿ ಬಿಜೆಪಿ 22 ಮತ್ತು ಕಾಂಗ್ರೆಸ್ 3 ಸ್ಥಾನಗಳನ್ನು ಗೆದ್ದುಕೊಂಡಿವೆ.

ಹೊಸ ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲೂ ಕೇಸರಿಯದ್ದೇ ಕಲರವ

ಹೊಸದಾಗಿ ರಚನೆಯಾದ ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ಬಿಜೆಪಿಯ ಅದ್ಭುತ ಪ್ರದರ್ಶನ ನೀಡಿದ್ದು, ಮೊರ್ಬಿಯ ಬಿಜೆಪಿ ಎಲ್ಲಾ 52 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷಗಳಿಗೆ ಮಣ್ಣುಮುಕ್ಕಿಸಿದೆ. ನಾಡಿಯಾಡ್‌ನಲ್ಲಿ 52 ಸ್ಥಾನಗಳಲ್ಲಿ 51 ಸ್ಥಾನಗಳನ್ನು ಬಿಜೆಪಿ ಗೆದ್ದರೆ, ನವಸಾರಿಯಲ್ಲಿ 50, ಸುರೇಂದ್ರನಗರ ವಾಧ್ವಾನ್‌ನಲ್ಲಿ ಬಿಜೆಪಿ 48 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಮೆಹ್ಸಾನಾ ಮತ್ತು ಜಾಮ್‌ನಗರದಂತಹ ನಗರಗಳಲ್ಲಿಯೂ ಬಿಜೆಪಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಎಎಪಿ ಖಾತೆಯನ್ನೇ ತೆರೆದಿಲ್ಲ. ಆನಂದ್ ಕರಮ್ಸಾದ್, ಪೋರಬಂದರ್ ಛಾಯಾ, ಗಾಂಧಿಧಾಮ ಮತ್ತು ವಾಪಿಗಳಲ್ಲಿಯೂ ಬಿಜೆಪಿ ನಿರಾಯಾಸವಾಗಿ ಬಹುಮತದತ್ತ ಸಾಗುತ್ತಿದೆ. ಒಟ್ಟಾರೆಯಾಗಿ, ಈ ಚುನಾವಣಾ ಫಲಿತಾಂಶವು ಗುಜರಾತ್‌ನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿರುವುದನ್ನು ಸಾಬೀತುಪಡಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net