ಹೆಂಡತಿ ಬೆಳ್ಳುಳ್ಳಿ - ಈರುಳ್ಳಿ ಸೇವಿಸದ ಹಿನ್ನಲೆ ವಿಚ್ಛೇದನ ಕೋರಿದ ಪತಿ; ಅಸ್ತು ಎಂದ ಗುಜರಾತ್ ಹೈಕೋರ್ಟ್ | Divorce

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ವಿಚ್ಛೇದನದ ಸುದ್ದಿಗಳೇ ಕೇಳಿ ಬರುತ್ತಿವೆ
  • ಚಿತ್ರ - ವಿಚಿತ್ರ ಕಾರಣಗಳಿಗೆ ವಿಚ್ಛೇದನ ನೀಡುವ ಟ್ರೆಂಡ್ ಪ್ರಾರಂಭವಾಗಿದೆ
  • ಪತ್ನಿ ಈರುಳ್ಳಿ- ಬೆಳ್ಳುಳ್ಳಿ ಸೇವಿಸದ ಹಿನ್ನಲೆ ವಿಚ್ಛೇದನ ಕೋರಿದ ಪತಿ
ಗುಜರಾತ್ : ಇತ್ತೀಚಿನ ದಿನಗಳಲ್ಲಿ ಮದುವೆಗಿಂತ ವಿಚ್ಛೇದನ(Divorce) ದ ಸುದ್ದಿಗಳೇ ಎಲ್ಲಾ ಕಡೆ ಕೇಳಿ ಬರುತ್ತಿವೆ. ಮೊದಲೆಲ್ಲಾ ಕೇವಲ ಖ್ಯಾತನಾಮರ ವಿಚ್ಛೇದನಗಳು ಸುದ್ದಿಯಾಗುತ್ತಿದ್ದವು, ಆದರೀಗ ಮದುವೆಯಾಗುವುದೇ ವಿಚ್ಛೇದನ ನೀಡಲಿಕ್ಕೆ ಎಂಬಂತಾಗಿದೆ. ಚಿತ್ರ - ವಿಚಿತ್ರ ಕಾರಣಗಳಿಗೆ ವಿಚ್ಛೇದನ ನೀಡುವ ಟ್ರೆಂಡ್ ಪ್ರಾರಂಭವಾಗಿದ್ದು, ಇಂತಹದೊಂದು ಪ್ರಕರಣ ಈಗ ಗುಜರಾತ್ ಹೈಕೋರ್ಟ್​ನಲ್ಲಿ ಇತ್ಯರ್ಥವಾಗಿದೆ.
ಈರುಳ್ಳಿ- ಬೆಳ್ಳುಳ್ಳಿ ಸೇವಿಸದ ಹೆಂಡತಿಯ ಧಾರ್ಮಿಕ ಆಚರಣೆಗಳಿಂದಾಗಿ ಸಂಸಾರದಲ್ಲಿ ಒಡಕು ಮೂಡಿದ ಹಿನ್ನೆಲೆಯಲ್ಲಿ ದಂಪತಿಗೆ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.
ವಿಚ್ಛೇದನ ಆದೇಶವನ್ನು ಇಬ್ಬರೂ ವಿರೋಧಿಸಲಿಲ್ಲವಾದರೂ ಜೀವನಾಂಶ ಕುರಿತಾದ ತಕರಾರಿನಿಂದಾಗಿ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸ್ವಾಮಿ ನಾರಾಯಣರ ಭಕ್ತೆಯಾಗಿದ್ದ ಪತ್ನಿ ಈರುಳ್ಳಿ ಬೆಳ್ಳುಳ್ಳಿ ಸೇವಿಸದ ಕಾರಣಕ್ಕೆ ಪ್ರತ್ಯೇಕ ಅಡುಗೆ ಮಾಡುವ ವಿಚಾರದಲ್ಲಿ ಸಂಸಾರದಲ್ಲಿ ಮನಸ್ತಾಪಗಳು ಉಂಟಾಗಿತ್ತು. ತನ್ನ ತಾಯಿ ಹೆಂಡತಿಗೆ ಪ್ರತ್ಯೇಕವಾಗಿ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಹಾಗೂ ಮನೆಯ ಉಳಿದ ಸದಸ್ಯರಿಗೆ ಈರುಳ್ಳಿ ಬೆಳ್ಳುಳ್ಳಿ ಇರುವ ಆಹಾರ ಸಿದ್ಧಪಡಿಸಬೇಕು ಎಂದು ಪತಿ ಹೈಕೋರ್ಟ್‌ಗೆ ತಿಳಿಸಿದರು. ವಿವಾಹಕ್ಕೂ ಮೊದಲೇ ತನ್ನ ಆಹಾರ ಪದ್ದತಿ ಬಗ್ಗೆ ಪತಿಗೆ ತಿಳಿದಿತ್ತು ಎಂದು ಹೆಂಡತಿ ವಾದಿಸಿದರು.  
ಕೌಟುಂಬಿಕ ನ್ಯಾಯಾಲಯ ಆದೇಶಿಸಿದ ಜೀವನಾಂಶ ಮೊತ್ತದಲ್ಲಿ ಹೆಚ್ಚಳ ಮಾಡಬೇಕು. ಪತಿ ಪ್ರತಿ ತಿಂಗಳು ಜೀವನಾಂಶ ಪಾವತಿಸಬೇಕು ಎಂದು ಹೆಂಡತಿ ಬೇಡಿಕೆ ಇಟ್ಟರೆ, ಒಂದೇ ಬಾರಿಗೆ ಅಷ್ಟು ಜೀವನಾಂಶ ಪಾವತಿಸುವುದಾಗಿ ಪತಿ ಹೇಳಿದ್ದರು. ಪತಿಯ ಆದಾಯ, ಕುಟುಂಬ ಜವಾಬ್ದಾರಿ, ಹೆಂಡತಿಯ ಈ ಹಿಂದಿನ ಔದ್ಯೋಗಿಕ ಸ್ಥಿತಿ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿದ ನಂತರ, ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ₹10,000 ಜೀವನಾಂಶ ಮೊತ್ತವನ್ನು ಬದಲಾಯಿಸಲು ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿತು. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ ಜೀವನಾಂಶ ಮೊತ್ತ ಹಾಗೆಯೇ ಮುಂದುವರೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net