ನವದೆಹಲಿ: ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ಬರೋಬ್ಬರಿ 22 ಸಾವಿರ ಕೋಟಿ ಆದಾಯ ಹೌದು, ಜನಪ್ರಿಯ ವಿಡಿಯೋ ಗೇಮ್ ಸರಣಿಯಾದ ಗ್ರ್ಯಾಂಡ್ ಥೆಫ್ಟ್ ಆಟೋ (GTA)ಯ ಆರನೇ ಆವೃತ್ತಿ GTA 6 ಜಾಗತಿಕ ಮನರಂಜನಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ನವೆಂಬರ್ 19ರಂದು ಬಿಡುಗಡೆಯಾದ ಈ ಗೇಮ್ ಮೊದಲ ದಿನವೇ ಸುಮಾರು 2.36 ಬಿಲಿಯನ್ ಡಾಲರ್ (ಅಂದಾಜು 21,952 ಕೋಟಿ) ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಈ ಮೂಲಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮನರಂಜನಾ ಉತ್ಪನ್ನ ಬಿಡುಗಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸೆನ್ಸರ್ ಟವರ್ ಅಂದಾಜಿನ ಪ್ರಕಾರ, ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ GTA 6 ಸುಮಾರು 2.458 ಕೋಟಿ ಪ್ರತಿಗಳನ್ನು ಮಾರಾಟ ಮಾಡಿದೆ. ಈ ಪೈಕಿ ಶೇ.75ರಷ್ಟು ಮಾರಾಟ ಪ್ಲೇಸ್ಟೇಷನ್ ಮೂಲಕವೇ ನಡೆದಿದೆ ಎಂದು ಡೆಡ್‌ಲೈನ್ ವರದಿ ಮಾಡಿದೆ. ಗೇಮ್ ಬಿಡುಗಡೆಗೂ ಮುನ್ನವೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದ್ದರಿಂದ ಮುಂಗಡ ಬುಕ್ಕಿಂಗ್‌ನಲ್ಲಿಯೂ ದೊಡ್ಡ ಮೊತ್ತದ ವಹಿವಾಟು ನಡೆದಿದೆ.
GTA 6 ಬಿಡುಗಡೆಯಾಗುವ ಮೊದಲೇ ಗೇಮಿಂಗ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. 2026ರ ಅತಿ ಹೆಚ್ಚು ಮಾರಾಟವಾದ ಗೇಮ್ ಎಂಬ ಸ್ಥಾನವನ್ನು ಮುಂಗಡ ಬುಕ್ಕಿಂಗ್‌ನಿಂದಲೇ ಪಡೆದುಕೊಂಡಿದೆ ಎಂದು ಸೆನ್ಸರ್ ಟವರ್‌ನ ವಿಡಿಯೋ ಗೇಮ್ ಒಳನೋಟಗಳ ಹಿರಿಯ ಉಪಾಧ್ಯಕ್ಷ ಕಾರ್ಲ್ ಕೊಂಟಸ್ ತಿಳಿಸಿದ್ದಾರೆ.ಡೆಡ್‌ಲೈನ್ ವರದಿಯಲ್ಲಿ ಉಲ್ಲೇಖಿಸಿರುವ ಅವರ ಹೇಳಿಕೆಯ ಪ್ರಕಾರ, ಬಿಡುಗಡೆ ದಿನದವರೆಗೆ ಮುಂಗಡ ಬುಕ್ಕಿಂಗ್‌ನಿಂದಲೇ 2 ಬಿಲಿಯನ್ ಡಾಲರ್‌ಗೂ ಅಧಿಕ ಆದಾಯ ಬಂದಿದೆ. ಗೇಮ್ ಬಿಡುಗಡೆಯಾದ ಬಳಿಕವೂ ಮಾರಾಟದ ವೇಗ ಮುಂದುವರಿದಿದ್ದು, ಜಾಗತಿಕ ಗೇಮಿಂಗ್ ಉದ್ಯಮದ ಗಮನ ಸೆಳೆದಿದೆ.
GTA ಸರಣಿಯ ಹಿಂದಿನ ಆವೃತ್ತಿ GTA 5 ಬಿಡುಗಡೆಯಾಗಿ 13 ವರ್ಷಗಳು ಕಳೆದಿವೆ. 2013ರಲ್ಲಿ ಬಿಡುಗಡೆಯಾಗಿದ್ದ ಈ ಗೇಮ್ 1 ಬಿಲಿಯನ್ ಡಾಲರ್ ಆದಾಯ ಗಳಿಸಲು ಮೂರು ದಿನಗಳನ್ನು ತೆಗೆದುಕೊಂಡಿತ್ತು. ಆದರೆ GTA 6 ಕೇವಲ ಒಂದು ದಿನದಲ್ಲೇ ಅದಕ್ಕಿಂತಲೂ ದೊಡ್ಡ ಮಟ್ಟದ ಆದಾಯ ದಾಖಲಿಸಿರುವುದು ವಿಶೇಷ. ಇದೇ ರೀತಿ, ಜಾಗತಿಕವಾಗಿ ಜನಪ್ರಿಯವಾಗಿರುವ ಅವೆಂಜರ್ಸ್ ಎಂಡ್‌ಗೇಮ್ ಸಿನಿಮಾ 1 ಬಿಲಿಯನ್ ಡಾಲರ್ ಗಳಿಸಲು ಐದು ದಿನಗಳನ್ನು ತೆಗೆದುಕೊಂಡಿತ್ತು. ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಸ್ಪೈಡರ್‌ಮ್ಯಾನ್ ಬ್ರ್ಯಾಂಡ್ ನ್ಯೂ ಡೇ ತನ್ನ ಸಂಪೂರ್ಣ ಚಿತ್ರಮಂದಿರ ಪ್ರದರ್ಶನದ ಅವಧಿಯಲ್ಲಿ 2.5 ಬಿಲಿಯನ್ ಡಾಲರ್ ಗಳಿಸಿದೆ ಎಂಬ ಹೋಲಿಕೆಯನ್ನು ನೀಡಲಾಗಿದೆ.
ಇದನ್ನೂ ಓದಿ : ವಿಮಾನ ರದ್ದು ಮಾಡಿ ಸಂಕಷ್ಟಕ್ಕೆ ಸಿಲುಕಿದ ಸ್ಪೈಸ್‌ಜೆಟ್! DGCA ನಿಂದ 7 ದಿನಗಳ ಡೆಡ್‌ಲೈನ್ |SpiceJet
GTA 6 ಗೇಮ್ ಮೂಲತಃ 2025ರ ಕೊನೆಯ ಭಾಗದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಸಮಯ ಬೇಕಾದ ಕಾರಣ ಎರಡು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿತ್ತು. ಆಟಗಾರರು ನಿರೀಕ್ಷಿಸುವ ಗುಣಮಟ್ಟ ಮತ್ತು ಪರಿಪೂರ್ಣತೆಯನ್ನು ಒದಗಿಸಲು ಹೆಚ್ಚುವರಿ ಸಮಯ ಅಗತ್ಯವಿದೆ ಎಂದು ಗೇಮ್ ಅಭಿವೃದ್ಧಿಪಡಿಸಿರುವ ರಾಕ್‌ಸ್ಟಾರ್ ಗೇಮ್ಸ್ ತಿಳಿಸಿತ್ತು. ಈ ಗೇಮ್ ಅಭಿವೃದ್ಧಿಗೆ 1ರಿಂದ 1.5 ಬಿಲಿಯನ್ ಡಾಲರ್‌ವರೆಗೆ ವೆಚ್ಚವಾಗಿದೆ ಎಂದು ವರದಿಗಳು ಅಂದಾಜಿಸಿವೆ. ಇದು ವಿಡಿಯೋ ಗೇಮ್ ಉದ್ಯಮದ ಅತ್ಯಂತ ದುಬಾರಿ ಯೋಜನೆಗಳಲ್ಲೊಂದು ಎಂಬ ಚರ್ಚೆಗೂ ಕಾರಣವಾಗಿದೆ.
GTA 6ನ ಕಥೆ ಅಮೆರಿಕದ ಫ್ಲೋರಿಡಾ ರಾಜ್ಯವನ್ನು ಹೋಲುವ ಕಾಲ್ಪನಿಕ ಪ್ರದೇಶವಾದ ಲಿಯೋನಿಡಾದಲ್ಲಿ ನಡೆಯುತ್ತದೆ. ಲೂಸಿಯಾ ಕ್ಯಾಮಿನೋಸ್ ಮತ್ತು ಜೇಸನ್ ಡುವಾಲ್ ಎಂಬ ಇಬ್ಬರು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಅಪರಾಧ ಜಗತ್ತಿನಲ್ಲಿ ತೊಡಗಿರುವ ಈ ಜೋಡಿಯ ಸಾಹಸ, ಪ್ರೀತಿ ಮತ್ತು ಸಂಬಂಧದ ಸುತ್ತ ಆಟದ ಕಥಾಹಂದರ ರೂಪುಗೊಂಡಿದೆ. ಅಮೆರಿಕದ ಕುಖ್ಯಾತ ಅಪರಾಧ ಜೋಡಿ ಬೋನಿ ಪಾರ್ಕರ್ ಮತ್ತು ಕ್ಲೈಡ್ ಬ್ಯಾರೋ ಅವರ ಬದುಕಿನ ಘಟನೆಗಳನ್ನು ನೆನಪಿಸುವ ರೀತಿಯಲ್ಲಿ ಈ ಪಾತ್ರಗಳನ್ನು ರೂಪಿಸಲಾಗಿದೆ ಎಂಬ ಹೋಲಿಕೆಗಳೂ ವ್ಯಕ್ತವಾಗಿವೆ.
GTA 6ನ ಜನಪ್ರಿಯತೆ ಎಷ್ಟರಮಟ್ಟಿಗೆ ಇದೆ ಎಂದರೆ, ಆಟಗಾರರು ಇತರ ಏಕವ್ಯಕ್ತಿ ವಿಡಿಯೋ ಗೇಮ್‌ಗಳಲ್ಲಿ ಕಳೆಯುವ ಸಮಯ ಶೇ.10ರಷ್ಟು ಕಡಿಮೆಯಾಗಬಹುದು ಎಂದು ಸೆನ್ಸರ್ ಟವರ್ ಅಂದಾಜಿಸಿದೆ. ಗೇಮಿಂಗ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ನಿಕೋ ಪಾರ್ಟನರ್ಸ್ ಪ್ರಕಾರ, 2026ರ ಅಂತ್ಯದ ವೇಳೆಗೆ GTA 6 ಜಾಗತಿಕವಾಗಿ 3 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಆದಾಯ ಗಳಿಸುವ ನಿರೀಕ್ಷೆಯಿದೆ.
ಬಿಡುಗಡೆಯಾದ ಆರಂಭದಲ್ಲೇ ವಿಮರ್ಶಕರು ಮತ್ತು ಆಟಗಾರರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಗೇಮ್‌ನ ಕಥೆ, ದೃಶ್ಯ ವೈಭವ ಹಾಗೂ ಆಟದ ಅನುಭವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಾಕ್‌ಸ್ಟಾರ್‌ನ ಮತ್ತೊಂದು ಜನಪ್ರಿಯ ಗೇಮ್ ರೆಡ್ ಡೆಡ್ ರಿಡೆಂಪ್ಷನ್ 2ನಲ್ಲಿರುವ ಹಲವು ವಿಶೇಷತೆಗಳನ್ನು GTA 6ನಲ್ಲಿ ಇನ್ನಷ್ಟು ಸುಧಾರಿತ ರೀತಿಯಲ್ಲಿ ಅಳವಡಿಸಲಾಗಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.ಮೊದಲ ದಿನದ ಗಳಿಕೆಯೇ ಗೇಮಿಂಗ್ ಉದ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ GTA 6 ಇನ್ನೆಷ್ಟು ದಾಖಲೆಗಳನ್ನು ನಿರ್ಮಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.