ಜಿಎಸ್​ಟಿ ಬಂಧನಾಧಿಕಾರ ವಾಪಾಸ್​? ಅರೆಸ್ಟ್​ಗೆ ನ್ಯಾಯಾಲಯದ ಅನುಮತಿ ಕಡ್ಡಾಯ

ಅ.7ರಂದು ನಡೆಯಲಿರುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆ ಚರ್ಚೆಗೆ ಬರಲಿದ್ದು, ಇದರನ್ವಯ ಯಾವುದೇ ಬಂಧನ ಪ್ರಕ್ರಿಯೆಗೆ ನ್ಯಾಯಾಲಯದ ಆದೇಶ ಕಡ್ಡಾಯವಾಗುವ ಸಾಧ್ಯತೆ ಇದೆ.
gst
gst
Published on: 
  • ಅರೆಸ್ಟ್​ಗೆ ನ್ಯಾಯಾಲಯದ ಅನುಮತಿ ಕಡ್ಡಾಯ

  • ಕೇಂದ್ರ ಸರ್ಕಾರ ಗಂಭೀರ ಚಿಂತನೆ

  • ಸುಧಾರಣೆಯತ್ತ ಮಹತ್ವದ ಹೆಜ್ಜೆ

  • 7ರ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಸಾಧ್ಯತೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯವಸ್ಥೆಯಲ್ಲಿ ಬೃಹತ್ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ತೆರಿಗೆ ಅಧಿಕಾರಿಗಳಿಗೆ ಇರುವ ‘ನೇರ ಬಂಧನ’ ಅಧಿಕಾರ ಹಿಂಪಡೆಯಲು ಗಂಭೀರ ಚಿಂತನೆ ನಡೆಸಿದೆ.

ಅ.7ರಂದು ನಡೆಯಲಿರುವ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆ ಚರ್ಚೆಗೆ ಬರಲಿದ್ದು, ಇದರನ್ವಯ ಯಾವುದೇ ಬಂಧನ ಪ್ರಕ್ರಿಯೆಗೆ ನ್ಯಾಯಾಲಯದ ಆದೇಶ ಕಡ್ಡಾಯವಾಗುವ ಸಾಧ್ಯತೆ ಇದೆ. ಪ್ರಾಮಾಣಿಕ ಖರೀದಿದಾರರ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ರಕ್ಷಿಸುವುದು, ಸಣ್ಣ ಪ್ರಮಾಣದ ಕಾನೂನು ವ್ಯಾಜ್ಯ ತಗ್ಗಿಸುವುದು ಈ ಪ್ರಸ್ತಾವನೆಯ ಮುಖ್ಯ ಉದ್ದೇಶ. ‘ಜಿಎಸ್​ಟಿ 2.0’ ಸುಧಾರಣೆಗಳ ಭಾಗವಾಗಿರುವ ಈ ಪ್ರಸ್ತಾವನೆಗಳು ನೋಂದಣಿ ಮತ್ತು ರಿಟರ್ನ್ ಸಲ್ಲಿಕೆ ಸರಳೀಕರಿಸಲು, ಸರಕುಗಳ ಸಾಗಣೆ ಸುಲಭಗೊಳಿಸಲು ಹಾಗೂ ತೆರಿಗೆದಾರರು ಮತ್ತು ತೆರಿಗೆ ಇಲಾಖೆ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ರೂಪಿತವಾಗಿವೆ. ಕೇಂದ್ರ ಜಿಎಸ್​ಟಿ ಕಾಯ್ದೆಯ ಸೆಕ್ಷನ್ 69ರಡಿ ಅಧಿಕಾರಿಗಳಿಗೆ ನೀಡಲಾಗಿದ್ದ ಬಂಧನ ಅಧಿಕಾರ ಹಿಂಪಡೆಯುವುದು ಈ ಪ್ರಸ್ತಾವನೆಯ ಪ್ರಮುಖ ಅಂಶ.

ಕೇಂದ್ರದ ಉದ್ದೇಶವೇನು?: ವ್ಯಾಪಾರಿಗಳಿಗೆ ತೆರಿಗೆ ಅಧಿಕಾರಿಗಳಿಂದ ಆಗುತ್ತಿದ್ದ ಕಿರುಕುಳ ತಪ್ಪಿಸುವುದು ಮತ್ತು ವ್ಯಾಪಾರ ಸ್ನೇಹಿ ವಾತಾವರಣ ನಿರ್ವಿುಸುವುದು ಸರ್ಕಾರದ ಗುರಿಯಾಗಿದೆ. ಆರ್ಥಿಕ ನಿಯಮ ಉಲ್ಲಂಘನೆಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರಗಿಡುವ ‘ಜನ್ ವಿಶ್ವಾಸ್ ಕಾ್ದಯೆ026’ರಡಿ ಈ ಸುಧಾರಣೆ ತರಲಾಗುತ್ತಿದೆ. ಕಡ್ಡಾಯವಾಗಿ ಜೈಲು ಶಿಕ್ಷೆ ವಿಧಿಸಬೇಕೆಂಬ ನಿಯಮ ಸಡಿಲಿಸಿ, ದಂಡ ವಿಧಿಸುವ ಆಯ್ಕೆ ಮುನ್ನೆಲೆಗೆ ತರಲಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ 2017ರಲ್ಲಿ ಜಾರಿಯಾದಾಗ ನಕಲಿ ಬಿಲ್ ಪತ್ತೆ ಹಚ್ಚುವುದು ಕಷ್ಟವಾಗಿದ್ದರಿಂದ ಬಂಧನದ ನಿಯಮ ರೂಪಿಸಲಾಗಿತ್ತು.

ಏಕರೂಪದ ಜಿಎಸ್​ಟಿ?

ಒಂಬತ್ತು ಅಪರಾಧಗಳ ಸಂಪೂರ್ಣ ಕೈಬಿಡುವಿಕೆ, 24 ಅಪರಾಧಗಳ ಶಿಕ್ಷಾ ನಿಯಮ ಸರಳೀಕರಣ, ಬಂಧನದ ಬದಲಿಗೆ ತೆರಿಗೆ, ಬಡ್ಡಿ ಮತ್ತು ದಂಡ ಸಂಗ್ರಹಕ್ಕೆ ಹೆಚ್ಚಿನ ಒತ್ತು ಮಾತ್ರವಲ್ಲದೆ ಇಕಾಮರ್ಸ್ ಮೂಲಕ ಆರ್ಡರ್ ಮಾಡಿದ ಸರಕುಗಳ ವಿತರಣೆಗೆ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ ಶೇ.5 ಏಕರೂಪದ ಜಿಎಸ್​ಟಿ ವಿಧಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ.

ನಿರ್ಲಕ್ಷ್ಯ ಸಾಕು ಜಿಎಸ್ಟಿ ಸೋರಿಕೆ ತಡೆಗಟ್ಟಿ

ದೇಶದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಜಿಎಸ್​ಟಿ ವ್ಯವಸ್ಥೆ ಕೇವಲ ಒಂದು ತೆರಿಗೆ ಪದ್ಧತಿಯಲ್ಲ, ಬದಲಿಗೆ ದೇಶದ ಆರ್ಥಿಕ ಸ್ವಾವಲಂಬನೆಯ ದಿಕ್ಸೂಚಿ. ಆದರೆ, ಅತ್ಯುತ್ತಮವಾಗಿ ರೂಪಿಸಲಾದ ಈ ವ್ಯವಸ್ಥೆಯಲ್ಲಿ ಇಂದು ಶೇ. 60ಕ್ಕಿಂತ ಹೆಚ್ಚು ಸೋರಿಕೆ ಆಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹಿರಿಯ ಉದ್ಯಮಿ, ವಿಆರ್​ಎಲ್ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ. ತೆರಿಗೆ ವಂಚನೆ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ವಾತಾವರಣದಿಂದ ಸರ್ಕಾರಕ್ಕೆ ಬರ ಬೇಕಾದ ರಾಜಸ್ವ ಖೋತಾವಾಗುತ್ತಿದೆ. ಜಿಎಸ್​ಟಿ ಸಮರ್ಪಕವಾಗಿ ಮತ್ತು ಪ್ರಾಮಾಣಿಕವಾಗಿ ಸಂಗ್ರಹಗೊಂಡರೆ, ಭಾರತದ ಅಭಿವೃದ್ಧಿಗೆ ಹಣಕಾಸಿನ ಕೊರತೆಯೆಂಬ ಮಾತೇ ಇರುತ್ತಿರಲಿಲ್ಲ. ಆದರೆ, ವ್ಯವಸ್ಥೆಯ ಮೂಲ ಉದ್ದೇಶವೇ ಹಳಿತಪ್ಪುತ್ತಿರುವುದು ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಹಿನ್ನಡೆ ಎಂದು ಪ್ರತಿಪಾದಿಸಿದ್ದಾರೆ.

ಈ ತೆರಿಗೆ ಸೋರಿಕೆಗೆ ಪ್ರಮುಖ ಕಾರಣ ವ್ಯವಸ್ಥೆಯಲ್ಲಿರುವ ತಾಂತ್ರಿಕ ಲೋಪ ಮತ್ತು ಅಧಿಕಾರಿ ವರ್ಗದ ಇಚ್ಛಾಶಕ್ತಿಯ ಕೊರತೆ. ತೆರಿಗೆ ವಂಚನೆಯ ಜಾಲಗಳು ರಾಜಾರೋಷವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಜಾಗೃತವಾಗಿರಬೇಕಾದ ಇಲಾಖೆ ಮೌನ ವಹಿಸಿದೆ. ಈ ವಾಸ್ತವವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಅರಿತು ಅಧಿಕಾರಿ ವರ್ಗವನ್ನು ಕೂಡಲೇ ಬಿಗಿ ಮಾಡಬೇಕಾದ ತುರ್ತು ಅಗತ್ಯವಿದೆ. ಕೇವಲ ಕಾಗದದ ಮೇಲಿನ ನಿಯಮಗಳಲ್ಲದೆ, ಕಠಿಣ ಪರಿಶೀಲನೆ ಮತ್ತು ದಿಢೀರ್ ದಾಳಿಗಳ ಮೂಲಕ ಸೋರಿಕೆ ರಂಧ್ರಗಳನ್ನು ಮುಚ್ಚಬೇಕು. ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಲೋಪದೋಷಗಳನ್ನು ಗುರುತಿಸಿ ಕಿತ್ತುಹಾಕದ ಹೊರತು ಪ್ರಾಮಾಣಿಕ ತೆರಿಗೆದಾರರಿಗೆ ನ್ಯಾಯ ಸಿಗುವುದಿಲ್ಲ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ಗಂಭೀರ ಸವಾಲನ್ನು ಎದುರಿಸಿ ವ್ಯವಸ್ಥೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಫಲವಾಗಿಲ್ಲ. ಆಡಳಿತಾರೂಢರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೆಲವೊಮ್ಮೆ ಮೌನ ಕೂಡ ತೆರಿಗೆ ವಂಚಕರಿಗೆ ಕುಮ್ಮಕ್ಕು ನೀಡಿದಂತಿದೆ ಎಂದು ಖಾರವಾಗಿ ಅಭಿಪ್ರಾಯ ವ್ಯಕ್ತಮಾಡಿದ್ದಾರೆ.

ಏನಾಗಬೇಕು?

  • ತುರ್ತಾಗಿ ಜಿಎಸ್ಟಿ ವ್ಯವಸ್ಥೆ ಸ್ಟ್ರೀಮ್​ಲೈನ್​ ಆಗಬೇಕು

  • ಸೋರಿಕೆಗೆ ಕಾರಣವಾಗುವ ಬಿಲ ಮುಚ್ಚಬೇಕು

  • ಅಧಿಕಾರಿ ವೃಂದ ಇನ್ನಷ್ಟು ಬಿಗಿಯಾಗಬೇಕು

  • ಈಗಿನ ಸಂಗ್ರಹವೇ ಶ್ರೇಷ್ಠ ಎಂದು ಬೀಗಬಾರದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net