Grok ಅಶ್ಲೀಲತೆ ವಿವಾದ: ಭಾರತದ ಎಚ್ಚರಿಕೆ ಬೆನ್ನಲ್ಲೇ ಸಾವಿರಾರು ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಿದ ಎಕ್ಸ್!

Grok
Grok
Published on
ನವದೆಹಲಿ: ಎಲಾನ್ ಮಸ್ಕ್ ಒಡೆತನದ 'ಎಕ್ಸ್' (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣವು ತನ್ನ 'ಗ್ರೋಕ್' (Grok) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಉಪಕರಣದ ಮೂಲಕ ಅಶ್ಲೀಲ ಚಿತ್ರಗಳು ಸೃಷ್ಟಿಯಾಗುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಈ ಕುರಿತು ಭಾರತ ಸರ್ಕಾರದ ಕಠಿಣ ಎಚ್ಚರಿಕೆಯ ನಂತರ, ಎಕ್ಸ್ ಸಂಸ್ಥೆಯು ಸುಮಾರು 600ಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಿದೆ ಮತ್ತು 3,500ಕ್ಕೂ ಹೆಚ್ಚು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಎಕ್ಸ್‌ನ AI ಚಾಟ್‌ಬಾಟ್ 'ಗ್ರೋಕ್' ಅನ್ನು ಬಳಸಿಕೊಂಡು ಬಳಕೆದಾರರು ಮಹಿಳೆಯರ ಮತ್ತು ಮಕ್ಕಳ ಅಶ್ಲೀಲ ಹಾಗೂ ನಗ್ನ ಚಿತ್ರಗಳನ್ನು (Deepfakes) ಸೃಷ್ಟಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ವಿಶೇಷವಾಗಿ ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಚಿತ್ರಗಳು ಸೃಷ್ಟಿಯಾಗುತ್ತಿರುವುದನ್ನು ಗಮನಿಸಿದ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಜನವರಿ 2ರಂದು ಎಕ್ಸ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ಸರ್ಕಾರದ ಕಠಿಣ ನಿಲುವು..!

ಆಕ್ಷೇಪಾರ್ಹ ವಿಷಯಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ಕೈಗೊಂಡ ಕ್ರಮಗಳ ವರದಿ ನೀಡಲು ಸರ್ಕಾರ 72 ಗಂಟೆಗಳ ಕಾಲಾವಕಾಶ ನೀಡಿತ್ತು. ಐಟಿ ಕಾಯ್ದೆಯ ನಿಯಮಗಳನ್ನು ಪಾಲಿಸದಿದ್ದರೆ, ಮಧ್ಯವರ್ತಿ ಸಂಸ್ಥೆಯಾಗಿ ಎಕ್ಸ್‌ಗೆ ಸಿಗುವ ಕಾನೂನಾತ್ಮಕ ರಕ್ಷಣೆಯನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಎಚ್ಚರಿಸಿತ್ತು. ಅಲ್ಲದೆ, ಇನ್ನು ಮುಂದೆ ಇಂತಹ ಅಸಭ್ಯ ಚಿತ್ರಗಳು ಸೃಷ್ಟಿಯಾಗದಂತೆ ತಾಂತ್ರಿಕ ಬದಲಾವಣೆ ತರಲು ಕೇಂದ್ರ ಸರ್ಕಾರ ಸೂಚನೆ ನೀಡಲಾಗಿತ್ತು. 

ಎಕ್ಸ್ ನೀಡಿದ ಸ್ಪಷ್ಟನೆ ಏನು..?

ತನ್ನ ತಪ್ಪನ್ನು ಒಪ್ಪಿಕೊಂಡಿರುವ ಎಕ್ಸ್, ಭಾರತದ ಕಾನೂನುಗಳನ್ನು ಗೌರವಿಸುವುದಾಗಿ ತಿಳಿಸಿದೆ. ಅಲ್ಲದೆ, ಇದೀಗ ಅಶ್ಲೀಲ ಚಿತ್ರಗಳನ್ನು ಹಂಚಿಕೊಂಡ ಮತ್ತು ಗ್ರೋಕ್ ಉಪಕರಣವನ್ನು ದುರುಪಯೋಗಪಡಿಸಿಕೊಂಡ 600ಕ್ಕೂ ಹೆಚ್ಚು ಬಳಕೆದಾರರ ಖಾತೆಗಳನ್ನು ಕಾಯಂ ಆಗಿ ಅಮಾನತುಗೊಳಿಸಲಾಗಿದೆ.ಭವಿಷ್ಯದಲ್ಲಿ ಗ್ರೋಕ್ ಮೂಲಕ ಅಶ್ಲೀಲ ಚಿತ್ರಗಳು ಸೃಷ್ಟಿಯಾಗದಂತೆ ಕಠಿಣ ಫಿಲ್ಟರ್‌ಗಳನ್ನು ಅಳವಡಿಸುವುದಾಗಿ ಸಂಸ್ಥೆ ಹೇಳಿದೆ.
ಆದಾಗ್ಯೂ, ಎಕ್ಸ್ ಸಲ್ಲಿಸಿದ ವರದಿಯು ಇನ್ನು ಕೂಡ ಸಂಪೂರ್ಣವಾಗಿ ತೃಪ್ತಿದಾಯಕವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ತಾಂತ್ರಿಕವಾಗಿ ಇಂತಹ ತಪ್ಪುಗಳು ಮರುಕಳಿಸದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ ಎಂದು  ಮೂಲಗಳು ತಿಳಿಸಿವೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net