

ಕಾಸ್ಮೆಟಿಕ್ಸ್ ಮತ್ತು ಟೂತ್ ಪೇಸ್ಟ್, ಶಾಂಪು, ಸೋಪಿನ ಮೇಲೆ ಸಸ್ಯಹಾರಿ-ಮಾಂಸಹಾರಿ ಲೇಬಲ್ ಕಡ್ಡಾಯ.
ಕೇಂದ್ರ ಸರ್ಕಾರವು ಲೀಗಲ್ ಮೆಟ್ರಾಲಜಿ ನಿಯಮಗಳು 2011ಕ್ಕೆ ತಿದ್ದುಪಡಿ ಜಾರಿ.
ಕೇಂದ್ರ ಸರ್ಕಾರದ ಹೊಸ ನಿಯಮ ಸೋಮವಾರದಿಂದ ಹೊಸ ನಿಯಮ ಜಾರಿ.
ನವ ದೆಹಲಿ: ಟೂತ್ ಪೇಸ್ಟ್, ಕಾಸ್ಮೆಟಿಕ್ಸ್, ಶಾಂಪು ಸೇರಿದಂತೆ ನೀವು ನಿತ್ಯ ಬಳಕೆ ಮಾಡುವ ವಸ್ತುಗಳು ಯಾವುದರಿಂದ ಮಾಡಿರುತ್ತಾರೆ. ಅಯ್ಯೋ ಯಾವ ಪ್ರಾಣಿಯ ಕೊಬ್ಬಿನಿಂದ ತಯಾರಿ ಮಾಡಿರುತ್ತಾರೋ, ನನಗೆ ಸಂಪೂರ್ಣ ಗಿಡಮೂಲಿಕೆಯಿಂದ ತಯಾರಾದ ಪ್ರಾಡಕ್ಟ್ ಬೇಕಿತ್ತು ಎಂದು ಕೊರಗುವ ಚಿಂತೆ ಇರೋದಿಲ್ಲ. ಯಾಕಂದ್ರೆ ಕೇಂದ್ರ ಸರ್ಕಾರ ಹೊಸ ಲೇಬಲಿಂಗ್ ರೂಲ್ಸ್ ಅನ್ನು ಸೋಮವಾರದಿಂದ ಜಾರಿಗೆ ತಂದಿದೆ.
ಹೌದು, ಟೂತ್‌ಪೇಸ್ಟ್, ಶಾಂಪೂ, ಸೋಪು ಸೇರಿದಂತೆ ಸೌಂದರ್ಯವರ್ಧಕ ವಸ್ತುಗಳು ಸಸ್ಯಾಹಾರಿ ಅಥವಾ ಮಾಂಸಾಹಾರಿ ಮೂಲದ್ದೇ ಎಂದು ಪ್ಯಾಕ್ ಮೇಲೆಯೇ ತಿಳಿಯಲಿದೆ. ಆಹಾರ ಪದಾರ್ಥ ಮಾದರಿಯಲ್ಲಿಯೇ ಸಸ್ಯಹಾರಿಗಳು ಮತ್ತು ಮಾಂಸಹಾರಿಗಳು ತಮ್ಮ ಪ್ರಾಡಕ್ಟ್ಗಳನ್ನು ಕೊಂಡುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರವು ಲೀಗಲ್ ಮೆಟ್ರಾಲಜಿ ನಿಯಮಗಳು, 2011 ಕ್ಕೆ ತಿದ್ದುಪಡಿ ತಂದಿದ್ದು, ಈ ಹೊಸ ಸಸ್ಯಹಾರಿ ಮತ್ತು ಮಾಂಸಹಾರಿ ಲೇಬಲಿಂಗ್ ನಿಯಮವನ್ನು ಕಡ್ಡಾಯವಾಗಿ ಜಾರಿ ಮಾಡಿದೆ. ಈ ಹೊಸ ತಿದ್ದುಪಡಿ ನಿಯಮವು ಸೋಮವಾರದಿಂದ ಜಾರಿಗೆ ಬಂದಿದೆ.ಯಾವ ಬಣ್ಣದ ಚುಕ್ಕೆ ಏನನ್ನು ಹೇಳುತ್ತದೆ?
ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ, ಸಸ್ಯಹಾರಿ ಮೂಲದ ಉತ್ಪನ್ನವು ಹಸಿರು ಬಣ್ಣದ ಚುಕ್ಕೆಯನ್ನು ಹೊಂದಿರುತ್ತದೆ.
ಇನ್ನೂ ಮಾಂಸಹಾರಿ ಮೂಲದ ಸಾಮಗ್ರಿಗಳ ಮೇಲೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಇದಕ್ಕೆ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂದರ್ಥ.
ಗ್ರಾಹಕರು ಖರೀದಿಸುವಾಗ ಉತ್ಪನ್ನದ ಸ್ವಭಾವವನ್ನು ಸುಲಭವಾಗಿ ಗುರುತಿಸುವಂತೆ ಮಾಡಲು, ಈ ಚಿಹ್ನೆಯು ಪ್ಯಾಕೇಜ್‌ನ ಮುಖ್ಯ ಪ್ರದರ್ಶನ ಫಲಕದ ಮೇಲ್ಭಾಗದಲ್ಲಿ ಗೋಚರಿಸುವಂತೆ ಮುದ್ರಿಸಬೇಕು. ಈ ಅಧಿಸೂಚನೆಯು ನಿರ್ದಿಷ್ಟವಾಗಿ ಸೋಪ್, ಶಾಂಪೂ, ಟೂತ್‌ಪೇಸ್ಟ್, ಇತರೆ ಸೌಂದರ್ಯವರ್ಧಕಗಳನ್ನು ಒಳಗೊಳ್ಳುತ್ತದೆ.
ಸಾಮಾನ್ಯವಾಗಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದಾಗ ವೆಜ್ ಆಹಾರವನ್ನು ಆಯ್ಕೆ ಮಾಡಿದರೂ ಸಹ ಕೆಲವು ಬಾರಿ ನಾನ್ವೆಜ್ ಡೆಲಿವರಿ ಆದ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಇನ್ಮುಂದೆ ಆ ಸಮಸ್ಯೆ ಇರೋದಿಲ್ಲ. ನೀವು ಸಸ್ಯಹಾರಿಗಳಾಗಿದ್ದರೆ ಅಥವಾ ನೀವು ಬಳಕೆ ಮಾಡುವ ಪ್ರಾಡಕ್ಟ್ ಸಂಪೂರ್ಣ ಗಿಡಮೂಲಿಕೆ ಅಥವಾ ಸಸ್ಯಗಳ ಮೂಲದಿಂದ ತಯಾರಾಗಿರುವುದೇ ಬೇಕು ಎಂದಿದ್ದರೆ ಅದನ್ನೇ ನೀವು ಪ್ರತ್ಯೇಕವಾಗಿ ಕೊಂಡುಕೊಳ್ಳಬಹುದಾಗಿದೆ. ಅಕಸ್ಮಾತ್ ಬೂದು ಅಥವಾ ಕೆಂಪು ಚುಕ್ಕೆಯ ಪ್ರಾಡಕ್ಟ್ ನಿಮ್ಮ ಮನೆ ತಲುಪಿದರೆ ನೀವು ನೇರವಾಗಿ ರಿಟರ್ನ್ ಮಾಡಬಹುದು.ಇನ್ನೂ ಮಾಲ್ ಹಾಗೂ ಅಂಗಡಿಗಳಲ್ಲಿ ನಿಮಗೆ ಬೇಕಾದ ಸಾಮಾಗ್ರಿಯನ್ನು ನಿಶ್ಚಿಂತೆಯಿಂದ ಆಯ್ದುಕೊಳ್ಳುವ ಸೌಲಭ್ಯ ಇನ್ನು ನಿಮಗೆ ಸಿಗಲಿದೆ, (ಏಜೆನ್ಸೀಸ್).