ಉಪವಾಸ ಸತ್ಯಾಗ್ರಹ ಅಂತ್ಯ: ಮೊದಲ ವಿಡಿಯೋ ಸಂದೇಶದಲ್ಲಿ ತಮ್ಮ ನಿರ್ಧಾರದ ಅಸಲಿ ಕಾರಣ ಬಿಚ್ಚಿಟ್ಟ ವಾಂಗ್ಚುಕ್​! Sonam Wangchuk

ಉಪವಾಸ ಸತ್ಯಾಗ್ರಹ ಅಂತ್ಯ: ಮೊದಲ ವಿಡಿಯೋ ಸಂದೇಶದಲ್ಲಿ ತಮ್ಮ ನಿರ್ಧಾರದ ಅಸಲಿ ಕಾರಣ ಬಿಚ್ಚಿಟ್ಟ ವಾಂಗ್ಚುಕ್​! Sonam Wangchuk
ಉಪವಾಸ ಸತ್ಯಾಗ್ರಹ ಅಂತ್ಯ: ಮೊದಲ ವಿಡಿಯೋ ಸಂದೇಶದಲ್ಲಿ ತಮ್ಮ ನಿರ್ಧಾರದ ಅಸಲಿ ಕಾರಣ ಬಿಚ್ಚಿಟ್ಟ ವಾಂಗ್ಚುಕ್​! Sonam Wangchuk
Published on

ಪ್ರಮುಖ ಮುಖ್ಯಾಂಶಗಳು

  • ಸಂಸತ್ತಿನಲ್ಲಿ ನೀಟ್ ಅಕ್ರಮಗಳ ಜವಾಬ್ದಾರಿ ಚರ್ಚೆಗೆ ಕೇಂದ್ರದ ಆಶ್ವಾಸನೆ
  • ಸಂಸದರು ಹಾಗೂ ಸಚಿವರ ಭರವಸೆ ಬೆನ್ನಲ್ಲೇ ಸತ್ಯಾಗ್ರಹ ಅಂತ್ಯಗೊಳಿಸಿದ ವಾಂಗ್ಚುಕ್​
  • ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲ್ಲ ಎಂದ ಸರ್ಕಾರ
  • ಪ್ರಶ್ನೆಪತ್ರಿಕೆ ಸೋರಿಕೆ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಕೇಂದ್ರದ ನಿರ್ಧಾರ
ನವದೆಹಲಿ: ಕಳೆದ 26 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಪರಿಸರವಾದಿ ಹಾಗೂ ಹೋರಾಟಗಾರ ಸೋನಮ್​ ವಾಂಗ್ಚುಕ್​​ ( Sonam Wangchuk ) ತೆರೆಎಳೆದಿದ್ದಾರೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿರುವುದರಿಂದ ತನ್ನ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದೇನೆ ಎಂದು ವಾಗ್ಚುಕ್​ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಮೊದಲ ವಿಡಿಯೋ ಸಂದೇಶದಲ್ಲಿ ಸೋನಮ್ ವಾಂಗ್ಚುಕ್​ ಅವರು ಸರ್ಕಾರದ ಆಶ್ವಾಸನೆಗಳು ಹಾಗೂ ಪ್ರತಿಭಟನೆ ಹಿಂಪಡೆದ ಹಿನ್ನೆಲೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ಪಾಸಿಟಿವ್​ ಆಗಿ ಸ್ಪಂದಿಸಿದೆ ಎಂದರು. 
ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಲಿಖಿತ ಆಶ್ವಾಸನೆ ಪಡೆಯಲು ಪಟ್ಟು ಹಿಡಿದಿದ್ದರಿಂದ ಸತತ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ಮತ್ತು ಸಂಧಾನಗಳು ನಡೆದುವು. ಹೀಗಾಗಿ, ತಮ್ಮ ಉಪವಾಸ ಸತ್ಯಾಗ್ರಹವನ್ನು ಹೆಚ್ಚುವರಿ ಎರಡು ದಿನಗಳ ಕಾಲ ಮುಂದುವರಿಸಬೇಕಾಯಿತು ಹಾಗೂ ಅಂತಿಮವಾಗಿ ಸರ್ಕಾರವು ಜುಲೈ 20, 2026 ರಂದು ನಡೆದ ಸಂಸತ್ ಮೆರವಣಿಗೆ ಸೇರಿದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯಾರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಿದೆ ಎಂದು ವಾಂಗ್ಚುಕ್​ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ, ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸದರು ತಮ್ಮನ್ನು ಭೇಟಿಯಾಗಿ ಹಾಗೂ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ವಿನಂತಿಸಿಕೊಂಡಿದ್ದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ತರಬೇಕಾದ ಸುಧಾರಣೆಗಳ ಕುರಿತು ಸಂಸತ್ತಿನಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದು ಆ ಸಂಸದರು ಭರವಸೆ ನೀಡಿದ ಹಿನ್ನೆಲೆಯಲ್ಲಿಯೂ ಸಹ ತಾವು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾಗಿ ವಾಂಗ್ಚುಕ್ ಹೇಳಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ ವಾಂಗ್ಚುಕ್​​
ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಹಾಗೂ ಲಡಾಖ್‌ನ 'ಅಪೆಕ್ಸ್ ಬಾಡಿ'ಯ ಹಿರಿಯ ನಾಯಕರ ಸಮ್ಮುಖದಲ್ಲಿ ತಾವು 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿರುವುದಾಗಿ ಸೋನಮ್ ವಾಂಗ್ಚುಕ್ ತಡರಾತ್ರಿ ಟ್ವೀಟ್​ ಮಾಡುವ ಮೂಲಕ ಅಧಿಕೃತವಾಗಿ ಸತ್ಯಾಗ್ರಹ ಕೊನೆಗೊಳಿಸುತ್ತಿರುವುದಾಗಿ ತಿಳಿಸಿದರು.
ಪ್ರಧಾನಿ ಮನವಿ
ಇನ್ನೂ ವೈದ್ಯರ ಸಲಹೆಗಳನ್ನು ಸರಿಯಾಗಿ ಪಾಲಿಸಿ, ಶೀಘ್ರದಲ್ಲೇ ಸಹಜ ಆರೋಗ್ಯ ಸ್ಥಿತಿಗೆ ಹಾಗೂ ತೂಕವನ್ನು ಮರಳಿ ಪಡೆಯಲು ಸೋನಮ್ ವಾಂಗ್ಚುಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅಲ್ಲದೆ, ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಿಜೆಪಿ ಹೇಳಿದ್ದೇನು?
ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಕ್ಕೆ 'ಕಾಕ್ರೋಚ್ ಜನತಾ ಪಾರ್ಟಿ'ಯ ಸಂಸ್ಥಾಪಕ ಅಭೀಜಿತ್ ದೀಪ್ಕೆ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಧೈರ್ಯ ಮತ್ತು ತ್ಯಾಗಕ್ಕೆ ಧನ್ಯವಾದಗಳು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀವು ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸಿದ್ದೀರಿ. ಈ ದೇಶಕ್ಕೆ ನಿಮ್ಮ ಜೀವ ಅತ್ಯಂತ ಅಮೂಲ್ಯವಾದದ್ದು ಎಂದು ಹೇಳಿದ್ದಾರೆ. ಆದರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಸಿಜೆಪಿ ತನ್ನ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಈ ಎಲ್ಲ ಬೆಳವಣಿಗೆಗಳ ನಡುವೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಶಿಕ್ಷಣ ಕಾರ್ಯದರ್ಶಿಯವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 'ಫಾಸ್ಟ್ ಟ್ರ್ಯಾಕ್' ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟ ಭರವಸೆ ನೀಡಿದ್ದಾರೆ.
ಅಂದಹಾಗೆ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಗಾರಿಕೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಅವರು ಜೂನ್ 28 ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನಾಕಾರರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಕಳೆದ ಶನಿವಾರ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಉಪವಾಸ ಹಿಂಪಡೆಯಲು ನಿರಾಕರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಂತರ, ಕೋರ್ಟ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿತು. ಈ 26 ದಿನಗಳ ನಿರಂತರ ಉಪವಾಸದಿಂದಾಗಿ ಅವರು ಸುಮಾರು 11 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾರೆ.
ವಾಂಗ್ಚುಕ್ ಅವರು ತಮ್ಮ ವಿವಿಧ ಬೇಡಿಕೆಗಳಿಗಾಗಿ ಹಲವು ಬಾರಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. 2024 ರಲ್ಲಿ ಲಡಾಖ್‌ನ ಸಂಪನ್ಮೂಲಗಳ ರಕ್ಷಣೆಗೆ ಶಾಸನಬದ್ಧ ಹಕ್ಕುಗಳನ್ನು ಆಗ್ರಹಿಸಿ, ಮೈನಸ್ ಡಿಗ್ರಿ ಚಳಿಯಲ್ಲೂ 11,500 ಅಡಿ ಎತ್ತರದಲ್ಲಿ ಕೇವಲ ನೀರು ಮತ್ತು ಉಪ್ಪು ಸೇವಿಸಿ 21 ದಿನಗಳ ಕಾಲ ಬಟಾಬಯಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು 6ನೇ ಪರಿಚ್ಛೇದದ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ, ಕಳೆದ ವರ್ಷ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಸುಮಾರು ಆರು ತಿಂಗಳು ಬಂಧನದಲ್ಲಿಡಲಾಗಿತ್ತು. ಅಂದಹಾಗೆ, ವಾಂಗ್ಚುಕ್ ಅವರ ಶಿಕ್ಷಣ ತತ್ವ ಮತ್ತು ಜೀವನಶೈಲಿಯೇ ಪ್ರಸಿದ್ಧ '3 ಈಡಿಯಟ್ಸ್' ಸಿನಿಮಾದ 'ಫುನ್ಸುಖ್ ವಾಂಗ್ಡು' ಪಾತ್ರಕ್ಕೆ ಮುಖ್ಯ ಪ್ರೇರಣೆಯಾಗಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net