ಕರೂರ್ ಕಾಲ್ತುಳಿತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ: ವಿಜಯ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್ | Madras High Court

ಸಿಎಂ ವಿಜಯ್
ಸಿಎಂ ವಿಜಯ್
Published on
ಚೆನ್ನೈ: ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ನಿರ್ಧಾರಕ್ಕೆ ಹಿನ್ನೆಡೆಯಾಗಿದ್ದು, ಮದ್ರಾಸ್ ಹೈಕೋರ್ಟ್(Madras High Court) ಸೋಮವಾರ(ಜು. 27) ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ.
ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಇದು ಸಂವಿಧಾನದ ವಿಧಿ 14(ಸಮಾನತೆಯ ಹಕ್ಕು) ಮತ್ತು ವಿಧಿ 16(ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶ) ವಿಧಿಯನ್ನು ಉಲ್ಲಂಘಿಸುತ್ತದೆ. ಮತ್ತು ಇತರರಿಗೆ ಅಂತಹ ಉದ್ಯೋಗವನ್ನು ನೀಡುವ ದಾರಿಯನ್ನು ತೆರೆಯುತ್ತದೆ ಎಂದು ಹೇಳಿದೆ.
ಕರೂರ್​​ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ 27ರಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ನಟ ವಿಜಯ್ ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನ ಮೃತಪಟ್ಟಿದ್ದರು. ಮತ್ತು ನೂರಾರು ಮಂದಿ ಗಾಯಗೊಂಡಿದ್ದರು.
ಬಳಿಕ 2025 ಅಕ್ಟೋಬರ್​ನಲ್ಲಿ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು ಹೇಳಿ ಸುಪ್ರೀಂ ಕೋರ್ಟ್ ತನಿಖೆಯನ್ನು ರಾಜ್ಯ ಮಟ್ಟದ ವಿಶೇಷ ತನಿಖಾ ತಂಡದಿಂದ ಸಿಬಿಐ ತನಿಖೆಗೆ ವರ್ಗಾಯಿಸಿತು. ಜನಸಂದಣಿ ನಿರ್ವಹಣಾ ವ್ಯವಸ್ಥೆ, ವಿಜಯ್ ಆಗಮನದ ಸಮಯ, ಪಕ್ಷದ ಪದಾಧಿಕಾರಿಗಳು ಸೇರಿ ಎಲ್ಲಾ ಕೋನದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ.
ಇನ್ನೂ 2026ರ ಚುನಾವಣೆಯಲ್ಲಿ ವಿಜಯ್ ಸಿಎಂ ಆದ ಬಳಿಕ ಇದೇ ತಿಂಗಳು ಜುಲೈ 10ರಂದು ಕರೂರ್​ಗೆ ಮೊದಲ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿದ್ದ ಅವರು, ಅನುಕಂಪದ ಆಧಾರದ ಮೇಲೆ ಮೃತಪಟ್ಟವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿ, ನೇಮಕಾತಿ ಪತ್ರಗಳನ್ನು ವಿತರಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net