ಇರಾನ್​-ಇಸ್ರೇಲ್​ ಸಂಘರ್ಷ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಹೆಚ್ಚಳ? ಸಾಮಾನ್ಯ ಜನರಿಗೆ ತಟ್ಟಲಿದೆ ಏರಿಕೆ ಬಿಸಿ! | Iran-Israel Conflict

ಇಸ್ರೇಲ್​-ಇರಾನ್​ ನಡುವೆ ಸಂಘರ್ಷ
ಇಸ್ರೇಲ್​-ಇರಾನ್​ ನಡುವೆ ಸಂಘರ್ಷ
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್​​ ಮೇಲೆ ಇಸ್ರೇಲ್​-ಯುಎಸ್​ ಜಂಟಿಯಾಗಿ​ ಕ್ಷಿಪಣಿ ದಾಳಿ
  • ಯುದ್ಧ ವಾತಾವರಣ ಹಿನ್ನೆಲೆ ಚಿನ್ನ-ಬೆಳ್ಳಿ ಬೆಲೆ ದಿಢೀರ್ ಏರಿಕೆ
  • ಚಿನ್ನವಷ್ಟೇ ಅಲ್ಲ ಕಚ್ಚಾ ತೈಲ ಬೆಲೆ ಕೂಡ ಏರಿಕೆ
Iran-Israel Conflict: ಈ ಹಿಂದೆಯೂ ಹಲವಾರು ಬಾರಿ ದೊಡ್ಡ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಇರಾನ್ ಮತ್ತು ಇಸ್ರೇಲ್​, ಇದೀಗ ಮತ್ತೊಮ್ಮೆ ಯುದ್ಧ ವಾತಾವರಣಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇರಾನ್-ಇಸ್ರೇಲ್ ನಡುವಿನ ಕ್ಷಿಪಣಿ ದಾಳಿಯು ಸದ್ಯ ಜಾಗತಿಕ ಆರ್ಥಿಕತೆಯ ಮೇಲೂ ಪ್ರಮುಖ ಪರಿಣಾಮ ಬೀರಲಾರಂಭಿಸಿದೆ. 

ಯುದ್ಧದ ಕಾರ್ಮೋಡ 

ಪ್ರಸ್ತುತ, ಈ ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸುತ್ತಿರುವುದರಿಂದ, ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸಲಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಿಢೀರ್​ ಆಕಾಶದತ್ತ ಮುಖ ಮಾಡಿವೆ. ವರದಿಗಳ ಪ್ರಕಾರ, ಭಾರತೀಯ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ. ಎರಡೂ ದೇಶಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ತಮ್ಮ ಹೂಡಿಕೆಯನ್ನು ಹಿಂಪಡೆದು ಗೋಲ್ಡ್​ಗೆ ಹಾಕಲು ಮುಂದಾಗಿದ್ದಾರೆ. 
ಅನಿಶ್ಚಿತ ಕಾಲದಲ್ಲಿ ಚಿನ್ನವನ್ನು ಯಾವಾಗಲೂ ಸೇಫೆಸ್ಟ್​ ಎಂದು ಪರಿಗಣಿಸಲಾಗುತ್ತದೆ ಎಂದು ಮಾರುಕಟ್ಟೆ ಮೂಲಗಳು ಅಭಿಪ್ರಾಯಪಟ್ಟಿವೆ. ಹೀಗಿರುವಾಗ, ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗೆ ಬದಲಾಗಲಿವೆ? ಯಾವ ರೀತಿ ಸಾಮಾನ್ಯ ಜನರಿಗೆ ತಲೆಬಿಸಿ ತಂದಿಡಲಿದೆ ಎಂಬುದನ್ನು ಇಲ್ಲಿ ತಿಳಿಯೋಣ. 

ಶೀಘ್ರವೇ 2 ಲಕ್ಷ ರೂ. ಚಿನ್ನ?

10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತ 1,61,720 ರೂ. ಇದೆ. ಈ ಉದ್ವಿಗ್ನತೆ ಹೀಗೆ ಮುಂದುವರಿದರೆ, ಚಿನ್ನದ ಬೆಲೆ ಅತೀ ಶೀಘ್ರದಲ್ಲೇ 2 ಲಕ್ಷ ರೂ. ತಲುಪಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಅದೇ ಸಮಯದಲ್ಲಿ, ಚಿನ್ನದ ಜೊತೆಗೆ, ಬೆಳ್ಳಿಯೂ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಬಹುದು ಎಂದಿದ್ದಾರೆ. ಕೈಗಾರಿಕಾ ಬೇಡಿಕೆ ಮತ್ತು ಪೂರೈಕೆ ಸರಪಳಿಯಲ್ಲಿನ ಅಡಚಣೆಗಳಿಂದಾಗಿ ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಪ್ರಸ್ತುತ, ಒಂದು ಕೆಜಿ ಬೆಳ್ಳಿಯ ಬೆಲೆ 2,85,000 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ಶುಕ್ರವಾರ (ಫೆ.27) ಒಂದೇ ದಿನ ಕೆಜಿ ಬೆಳ್ಳಿ ದರದಲ್ಲಿ 16,000 ರೂ. ವರೆಗಿನ ಹೆಚ್ಚಳವು ಮಾರುಕಟ್ಟೆ ವಿಶ್ಲೇಷಕರನ್ನೇ ಅಚ್ಚರಿಗೊಳಿಸಿತು.

ಸಾಮಾನ್ಯ ಜನರಿಗೆ ತಟ್ಟಲಿದೆ ಬಿಸಿ

ಈ ಬೆಲೆ ಏರಿಕೆ ಹೂಡಿಕೆದಾರರಿಗೆ ಮಾತ್ರವಲ್ಲದೆ, ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿದೆ. ಇನ್ನೇನು ಡಿಸೆಂಬರ್ ಮುಗಿದು ಹೊಸ ವರ್ಷ ಬಂದಿದೆ. ಮದುವೆಯ ಸೀಸನ್ ಕೂಡ ಶುರುವಾಗಿದೆ. ಚಿನ್ನದ ಖರೀದಿಗೆ ಇದೇ ಸೂಕ್ತ ಸಮಯ ಎನ್ನುತ್ತಿದ್ದ ಆಭರಣ ಪ್ರಿಯರಿಗೆ ಈಗ ಇಸ್ರೇಲ್​-ಇರಾನ್ ಸಂಘರ್ಷ ದೊಡ್ಡ ತಲೆನೋವು ತಂದೊಡ್ಡಿದೆ. ಈ ಯುದ್ಧದ ವಾತಾವರಣದಿಂದಾಗಿ ಕೇವಲ ಚಿನ್ನ-ಬೆಳ್ಳಿ ಬೆಲೆಗಳು ಮಾತ್ರವಲ್ಲ, ಕಚ್ಚಾ ತೈಲ ಬೆಲೆಗಳು ಕೂಡ ಹಿಂದಿಗಿಂತ ದುಬಾರಿ ಆಗಲಿವೆ. ಇದರೊಟ್ಟಿಗೆ, ಅಗತ್ಯ ವಸ್ತುಗಳ ಬೆಲೆಗಳು ಸಹ ಹೆಚ್ಚಾಗುತ್ತವೆ ಎಂದು ವರದಿಗಳು ಸೂಚಿಸಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net