5 ಕೋಟಿ ರೂ. ಕೊಡು ಇಲ್ಲ ಚಿನ್ನ ಧರಿಸೋದನ್ನು ನಿಲ್ಲಿಸು... ಫೋನ್​ ಕರೆಗೆ ಹೆದರಿದ ಗೋಲ್ಡ್‌ಮ್ಯಾನ್! Gold Man

ಗೋಲ್ಡ್​ ಮ್ಯಾನ್ ಕನ್ಹಯ್ಯಾಲಾಲ್ ಖಾಟಿಕ್​
ಗೋಲ್ಡ್​ ಮ್ಯಾನ್ ಕನ್ಹಯ್ಯಾಲಾಲ್ ಖಾಟಿಕ್​
Published on

ಪ್ರಮುಖ ಮುಖ್ಯಾಂಶಗಳು

  • ಐದು ಕೋಟಿ ರೂಪಾಯಿ ಕೊಡು ಇಲ್ಲಾ ಅಂದರೆ ಚಿನ್ನಾಭರಣ ಧರಿಸಿ ಓಡಾಡುವುದನ್ನು ನಿಲ್ಲಿಸು
  • ರಾಜಸ್ಥಾನದ ಚಿತ್ತೋರ್​ಗಢದ ಖ್ಯಾತ ಉದ್ಯಮಿ ಕನ್ಹಯ್ಯಾಲಾಲ್ ಖಾಟಿಕ್​ಗೆ ಬೆದರಿಕೆ
  • ಕುಖ್ಯಾತ ದರೋಡೆಕೋರ ರೋಹಿತ್​ ಗೋದಾರ ಗ್ಯಾಂಗ್​ ಹೆಸರಲ್ಲಿ ಖಾಟಿಕ್​ಗೆ ಕರೆ
  • ಚಿತ್ತೋರ್‌ಗಢದ 'ಬಪ್ಪಿ ಲಹಿರಿ' ಎಂದೇ ಜನಪ್ರಿಯರಾಗಿರುವ ಕನ್ಹಯ್ಯಾಲಾಲ್ ಖಾಟಿಕ್​
ಜೈಪುರ: ಐದು ಕೋಟಿ ರೂಪಾಯಿ ಕೊಡು ಇಲ್ಲಾ ಅಂದರೆ ಚಿನ್ನಾಭರಣ ಧರಿಸಿ ಓಡಾಡುವುದನ್ನು ನಿಲ್ಲಿಸು... ಹೀಗಂತ ರಾಜಸ್ಥಾನದ ಚಿತ್ತೋರ್​ಗಢದ ಖ್ಯಾತ ಉದ್ಯಮಿ ಕನ್ಹಯ್ಯಾಲಾಲ್ ಖಾಟಿಕ್​ ( Gold Man ) ಎಂಬುವರಿಗೆ ಕೆಲ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.
ಕುಖ್ಯಾತ ದರೋಡೆಕೋರ ರೋಹಿತ್​ ಗೋದಾರ ಗ್ಯಾಂಗ್​ನವರು ಎಂದು ಹೇಳಿಕೊಂಡು ದುಷ್ಕರ್ಮಿಗಳು ಕರೆ ಮಾಡಿ ಕನ್ಹಯ್ಯಾಲಾಲ್​​ಗೆ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ. ಹಣ್ಣಿನ ವ್ಯಾಪಾರ ನಡೆಸುತ್ತಿರುವ ಖಾಟಿಕ್ ಅವರಿಗೆ ಚಿನ್ನದ ಮೇಲೆ ವಿಶೇಷ ಒಲವು ಇದೆ. ಹೀಗಾಗಿ ಅವರು ಚಿತ್ತೋರ್‌ಗಢದ 'ಬಪ್ಪಿ ಲಹಿರಿ' ಎಂದೇ ಜನಪ್ರಿಯರಾಗಿದ್ದಾರೆ.
ಪೊಲೀಸರ ಪ್ರಕಾರ, ಖಾಟಿಕ್​ಗೆ ಎರಡು ದಿನಗಳ ಹಿಂದಷ್ಟೇ ಮೊದಲ ಬಾರಿಗೆ ಒಂದು ಮಿಸ್ಡ್ ಕಾಲ್ ಬಂದಿತು. ಇದಾದ ನಂತರ ಅದೇ ಸಂಖ್ಯೆಯಿಂದ ವಾಟ್ಸ್​ಆ್ಯಪ್​ ಕರೆ ಬಂದಿದೆ. ಕರೆ ಮಾಡಿದವರು ಬರೋಬ್ಬರಿ 5 ಕೋಟಿ ರೂ. ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ. ಇಲ್ಲವಾದಲ್ಲಿ ಚಿನ್ನಾಭರಣ ಧರಿಸಿ ಓಡಾಡುವುದನ್ನು ನಿಲ್ಲಿಸು ಎಂದು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ದುಷ್ಕರ್ಮಿಗಳು ಮಾತನಾಡಿರುವುದನ್ನು ಖಾಟಿಕ್​ ಅವರು ರೆಕಾರ್ಡ್​ ಕೂಡ ಮಾಡಿಕೊಂಡಿದ್ದಾರೆ.
ಕೇಳಿದ ಹಣ ಕೊಡಲಿಲ್ಲ ಅಂದರೆ, ನೀನು ಚಿನ್ನ ಧರಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಅಂತಾನೂ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಆದಷ್ಟು ಬೇಗ ಈ ವಿಚಾರವನ್ನು ಇತ್ಯರ್ಥಪಡಿಸುವಂತೆಯೂ ಒತ್ತಡ ಹಾಕಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಖಾಟಿಕ್​ ಅವರು ತಕ್ಷಣ ಕೊಟ್ವಾಲಿ ನಗರ ಪೊಲೀಸ್​ ಠಾಣೆಗೆ ತೆರೆಳಿ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ.
50 ವರ್ಷ ವಯಸ್ಸಿನ ಖಾಟಿಕ್​ ಅವರು ಹಣ್ಣಿನ ವ್ಯಾಪಾರಕ್ಕೆ ಇಳಿಯುವ ಮೊದಲು ಕೈಗಾಡಿಯಲ್ಲಿ ತರಕಾರಿಗಳನ್ನು ಮಾರುತ್ತಿದ್ದರು. ಸೇಬುಗಳ ವ್ಯಾಪಾರ ಆರಂಭಿಸಿದ ನಂತರ ಖಾಟಿಕ್​ ಅವರ ಅದೃಷ್ಟವೇ ಬದಲಾಯಿತು. ಸಾಕಷ್ಟು ಹಣ ಹರಿದುಬರಲು ಆರಂಭವಾಯಿತು. ಅಲ್ಲದೆ, ನಂತರದ ವರ್ಷಗಳಲ್ಲಿ ಚಿನ್ನದ ಮೇಲಿನ ಮೋಹ ಬೆಳೆಸಿಕೊಂಡರು. ಖಾಟಿಕ್​ ಅವರು ಸುಮಾರು 3.5 ಕೆಜಿ ಚಿನ್ನವನ್ನು ಧರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇದರಿಂದಾಗಿ ಚಿತ್ತೋರ್‌ಗಢದಲ್ಲಿ ಅವರಿಗೆ 'ಗೋಲ್ಡ್‌ಮ್ಯಾನ್' ಎಂಬ ಅಡ್ಡಹೆಸರು ಬಂದಿದೆ.

ಯಾರು ಈ ರೋಹಿತ್ ಗೋದಾರ?

ರಾಜಸ್ಥಾನದ ಬಿಕಾನೇರ್‌ನ ಲುನಕರನ್ ಮೂಲದ ರೋಹಿತ್​ ಗೋದಾರ ಪ್ರಸ್ತುತ ಕೆನಡಾದಲ್ಲಿದ್ದಾನೆಂದು ನಂಬಲಾಗಿದೆ. ಈತನ ವಿರುದ್ಧ ಭಾರತದ ವಿವಿಧ ಪೊಲೀಸ್ ಠಾಣೆಗಳಲ್ಲಿ 32 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಪ್ರಕಾರ, ಈತ ರಾಜಸ್ಥಾನದಲ್ಲಿ ಉದ್ಯಮಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ. ಪಂಜಾಬಿನ ಪ್ರಸಿದ್ಧ ರ‍್ಯಾಪರ್ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಗೋದಾರ ಕೂಡ ಒಬ್ಬನು. 2022, ಜೂನ್​ 13ರಂದು ಗೋದಾರ, 'ಪವನ್ ಕುಮಾರ್' ಎಂಬ ಹೆಸರಿನಲ್ಲಿ ನವದೆಹಲಿಗೆ ನಕಲಿ ಪಾಸ್‌ಪೋರ್ಟ್‌ನಲ್ಲಿ ಪಲಾಯನ ಮಾಡಿದ್ದಾನೆ. ಆತನ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಸುತ್ತೋಲೆ ಹೊರಡಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net