

ನವದೆಹಲಿ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿಯಿಂದಾಗಿ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಿ ಮತ್ತು ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ.
ಬೆಳ್ಳಿ ಬೆಲೆ ಪ್ರತಿ ಕೆಜಿಗೆ 7,400 ರೂ. ಇಳಿಕೆಯಾಗಿದ್ದರೆ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,300 ರೂ. ಕುಸಿತ ಕಂಡಿದೆ. ಅಖಿಲ ಭಾರತ ಸರಾಫ್ ಸಂಘದ ಮಾಹಿತಿ ಪ್ರಕಾರ, ಬೆಳ್ಳಿಯ ಬೆಲೆ ಶೇ. 3ರಷ್ಟು ಕುಸಿದು ಪ್ರತಿ ಕೆಜಿಗೆ 2,70,500 ರೂ.ಗೆ ತಲುಪಿದೆ.
ಬುಧವಾರ ಇದು 2,77,900 ರೂ.ಗಳಲ್ಲಿ ಅಂತ್ಯಗೊಂಡಿತ್ತು. ಇನ್ನು ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಸುಮಾರು ಶೇ. 1ರಷ್ಟು ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 1,62,900 ರೂ.ಗೆ ತಲುಪಿದೆ. ಬುಧವಾರ ಚಿನ್ನದ ಬೆಲೆ 1,64,200 ರೂ. ಇತ್ತು.
ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ತೀವ್ರ ಏರಿಳಿತಕ್ಕೆ ಸಾಕ್ಷಿಯಾದವು. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳ ಷೇರುಗಳ ಕುಸಿತದಿಂದಾಗಿ ಮಾರುಕಟ್ಟೆ ಯಾವುದೇ ದೊಡ್ಡ ಬದಲಾವಣೆಯಿಲ್ಲದೆ ಸ್ಥಿರವಾಗಿ ಅಂತ್ಯಗೊಂಡಿತು.
ದಿನದ ವಹಿವಾಟಿನಲ್ಲಿ ಗರಿಷ್ಠ 82,579 ಮತ್ತು ಕನಿಷ್ಠ 81,970ರ ಮಟ್ಟವನ್ನು ತಲುಪಿದ್ದ ಸೆನ್ಸೆಕ್ಸ್ ಕೊನೆಯಲ್ಲಿ 27.46 ಅಂಕ ಕುಸಿದು 82,248.61ಕ್ಕೆ ಸ್ಥಿರವಾಯಿತು. ನಿಫ್ಟಿ ಕೇವಲ 14.05 ಅಂಕ ಏರಿಕೆ ಕಂಡು 25,496.55ಕ್ಕೆ ತಲುಪಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ದೇಶೀಯ ಹೂಡಿಕೆದಾರರು ಬುಧವಾರ ದೊಡ್ಡ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಶೇ. 0.95ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 70.18 ಡಾಲರ್ಗೆ ತಲುಪಿದೆ.