ಗೌರವ್ ಗೊಗೋಯ್ 'ರಾವಲ್ಪಿಂಡಿ' ರಹಸ್ಯ: ಎಸ್ಐಟಿ ವರದಿಗೆ ಹೊಸ ತಿರುವು ನೀಡಿದ ಸಿಎಂ ಹಿಮಂತ ಶರ್ಮಾ! | Gogoi Pak link
Gogoi Pak link
Published on:
Copied
Follow Us
ದಿಸ್ಪೂರ್: ಲೋಕಸಭೆಯ ಕಾಂಗ್ರೆಸ್ನ ಉಪನಾಯಕ ಗೌರವ್ ಗೊಗೊಯ್ ವಿರುದ್ಧದ ಪಾಕಿಸ್ತಾನ ಸಂಪರ್ಕಗಳ (Gogoi Pak link) ಕುರಿತಾದ ಎಸ್ಐಟಿ ವರದಿಯನ್ನು ಅವರ ರಾವಲ್ಪಿಂಡಿ ಪ್ರವಾಸದ ವಿವರಗಳನ್ನು ಸೇರಿಸಿದ ಬಳಿಕ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ (ಫೆ.11) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಶರ್ಮಾ, ವಿಶೇಷ ತನಿಖಾ ತಂಡದ (ಎಸ್ಐಟಿ) ವರದಿಯನ್ನು ತಿದ್ದುಪಡಿ ಮಾಡಿ ಪತ್ರಿಕಾಗೋಷ್ಠಿಯಲ್ಲಿನ ಗೊಗೊಯ್ ಅವರ ಹೇಳಿಕೆಗಳನ್ನು ಸೇರಿಸಲಾಗುವುದು ಎಂದರು.
ಗೊಗೊಯ್ ಪತ್ನಿ ಪಾಕಿಸ್ತಾನದಿಂದ ನೇರವಾಗಿ ಸಂಬಳ ಪಡೆದಿದ್ದಾರೆ ಮತ್ತು ಅಲ್ಲಿನ ಸೇನಾ ಪ್ರಧಾನ ಕಚೇರಿಯನ್ನು ಹೊಂದಿರುವ ರಾವಲ್ಪಿಂಡಿ ಜಿಲ್ಲೆಗೆ ಭೇಟಿ ನೀಡಿದ್ದರು ಎಂಬ ಎರಡು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಅದನ್ನು ವೀಸಾದಲ್ಲಿ ಉಲ್ಲೇಖಿಸಿಲ್ಲ ಎಂದು ಶರ್ಮಾ ತಿಳಿಸಿದರು.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ಅವರ ಪತ್ನಿಯ ಪಾಕಿಸ್ತಾನದೊಂದಿಗೆ ಸಂಪರ್ಕದ ಪ್ರಕರಣವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ತಿಳಿಸಿದ್ದರು.
ಈ ಗಂಭೀರ ಪ್ರಕರಣ ಮೂರು ವ್ಯಕ್ತಿಗಳ ಸುತ್ತ ಸುತ್ತುತ್ತದೆ ಎಂದಿರುವ ಶರ್ಮಾ, ಹಾಲಿ ಸಂಸತ್ ಸದಸ್ಯರು, ಬ್ರಿಟಿಷ್ ಪ್ರಜೆಯಾಗಿರುವ ಅವರ ಪತ್ನಿ ಮತ್ತು ಅಲಿ ತೌಕೀರ್ ಶೇಖ್ ಎಂದು ಗುರುತಿಸಲಾದ ಪಾಕಿಸ್ತಾನಿ ಪ್ರಜೆ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬ್ರಿಟಿಷ್ ಪ್ರಜೆ ಮತ್ತು ಸಂಸದರ ಜೊತೆಗೂಡಿ ಶೇಖ್ ನಡೆಸಿದ ರಾಷ್ಟ್ರ ವಿರೋಧಿ ಪಿತೂರಿಯ ತನಿಖೆಗಾಗಿ ಅಸ್ಸಾಂ ಸರ್ಕಾರವು ಎಸ್ಐಟಿಯನ್ನು ರಚಿಸಿತ್ತು. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಅದನ್ನು ಗೃಹ ಸಚಿವಾಲಯಕ್ಕೆ ಹಸ್ತಾಂತರಿಸುವ ನಿರ್ಧರಕ್ಕೆ ಬರಲಾಗಿದೆ ಎಂದು ಅಸ್ಸಾಂ ಸಿಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಐಎಸ್ಐ ಜೊತೆ ಗೊಗೊಯ್ ಪತ್ನಿಯ ಸಂಪರ್ಕದ ಆರೋಪದ ಮೇಲೆ ಸಂಸದ ಗೊಗೊಯ್ ವಿರುದ್ಧ ತನಿಖೆ ನಡೆಯುತ್ತಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕಾಂಗ್ರೆಸ್ ಸಂಸದರ ಬ್ರಿಟಿಷ್ ಪತ್ನಿ ಎಲಿಜಬೆತ್ ಕೋಲ್ಬರ್ನ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾದ ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಹಸ್ತಕ್ಷೇಪದ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿತ್ತು.
ಗೊಗೊಯ್ ತಿರುಗೇಟು..
ಸಿಎಂ ಹಿಮಂತ್ ಬಿಸ್ವಾ ಶರ್ಮಾ ಆರೋಪಗಳಿಗೆ ತಿರುಗೇಟು ನೀಡಿರುವ ಸಂಸದ ಗೊಗೊಯ್, ಅವರ ಹೇಳಿಕೆಗಳು ಹಾಸ್ಯಾಸ್ಪದ, ಆಧಾರರಹಿತ, ಹುಚ್ಚುತನ ಮತ್ತು ಅಸಂಬದ್ಧವಾಗಿವೆ. ಅವರು ಸತ್ಯ ಮಾತನಾಡದೆ ಐಟಿ ಸೆಲ್ ಟ್ರೋಲ್ನಂತೆ ವರ್ತಿಸುತ್ತಿದ್ದಾರೆ ಎಂದು ಗೊಗೊಯ್ ತಿಳಿಸಿದ್ದಾರೆ(ಏಜೆನ್ಸೀಸ್).