ದೇವರ AI ವಿಡಿಯೋ ವಿವಾದ; ರಿಂಕು ಸಿಂಗ್​ ವರ್ತನೆ ಜಿಹಾದಿ ಪ್ರೇರಿತ ಎಂದು ಕರ್ಣಿ ಸೇನೆ ಕಿಡಿ | Rinku Singh

ದೇವರ AI ವಿಡಿಯೋ ವಿವಾದ; ರಿಂಕು ಸಿಂಗ್​ ವರ್ತನೆ ಜಿಹಾದಿ ಪ್ರೇರಿತ ಎಂದು ಕರ್ಣಿ ಸೇನೆ ಕಿಡಿ
ದೇವರ AI ವಿಡಿಯೋ ವಿವಾದ; ರಿಂಕು ಸಿಂಗ್​ ವರ್ತನೆ ಜಿಹಾದಿ ಪ್ರೇರಿತ ಎಂದು ಕರ್ಣಿ ಸೇನೆ ಕಿಡಿ
Published on
ಲಖನೌ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ರಿಂಕು ಸಿಂಗ್ (Rinku Singh) ಅವರ ಒಂದು ಫೇಸ್‌ಬುಕ್ ಪೋಸ್ಟ್ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಲಾದ ದೇವರ ವಿಡಿಯೋವೊಂದನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ, ರಿಂಕು ಸಿಂಗ್ ವಿರುದ್ಧ ಅಲಿಘಡದ ಪೊಲೀಸ್ ಠಾಣೆಯಲ್ಲಿ ಕರ್ಣಿ ಸೇನೆ ದೂರು ದಾಖಲಿಸಿದೆ.
ಸೋಮವಾರ ಅಲಿಘಡದ ಸಾಸ್ನಿ ಗೇಟ್ ಪೊಲೀಸ್ ಠಾಣೆಗೆ ತೆರಳಿದ ಕರ್ಣಿ ಸೇನೆಯ ಕಾರ್ಯಕರ್ತರು, ರಿಂಕು ಸಿಂಗ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ವಿವಾದಕ್ಕೆ ಕಾರಣವೇನು?

ಇತ್ತೀಚೆಗೆ ರಿಂಕು ಸಿಂಗ್ ಅವರ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವೊಂದು ಹಂಚಿಕೆಯಾಗಿತ್ತು. ಇದರಲ್ಲಿ ಹಿಂದೂ ದೇವರುಗಳನ್ನು ಆಧುನಿಕ ಅವತಾರದಲ್ಲಿ ಚಿತ್ರಿಸಲಾಗಿತ್ತು.

ವಿಡಿಯೋದಲ್ಲಿ ಏನಿದೆ..?

ವಿಡಿಯೋದಲ್ಲಿ ಶಿವ, ವಿಷ್ಣು ಮತ್ತು ಗಣೇಶ ಸೇರಿದಂತೆ ವಿವಿಧ ದೇವರುಗಳು ಕಪ್ಪು ಕನ್ನಡಕ ಧರಿಸಿ ಐಷಾರಾಮಿ ಕಾರಿನಲ್ಲಿ ಕುಳಿತಿರುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೆ, ಹನುಮಂತನು ಅದೇ ಕಾರನ್ನು ಚಾಲನೆ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಅಲ್ಲದೆ, ವಿಡಿಯೋಗೆ ಇಂಗ್ಲಿಷ್ ಪಾಪ್ ಸಂಗೀತವನ್ನು ಬಳಸಲಾಗಿದ್ದು, ಇದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಕರ್ಣಿ ಸೇನೆಯ ಆಕ್ರೋಶ

ಕರ್ಣಿ ಸೇನೆಯ ಜಿಲ್ಲಾಧ್ಯಕ್ಷ ಸುಮಿತ್ ತೋಮರ್ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ದೇವರನ್ನು ಇಂತಹ ಮೋಜಿನ ಮತ್ತು ಪಾಶ್ಚಿಮಾತ್ಯ ಶೈಲಿಯಲ್ಲಿ ಚಿತ್ರಿಸುವುದು ಅಪರಾಧ ಎಂದು ಕಿಡಿಕಾರಿದ್ದಾರೆ.
ನಮ್ಮ ಆರಾಧ್ಯ ದೈವಗಳನ್ನು ಕಾರಿನಲ್ಲಿ ಕನ್ನಡಕ ಧರಿಸಿ ಕುಳಿತಿರುವಂತೆ ತೋರಿಸುವುದು ದೇವರಿಗೆ ಮಾಡಿದ ಅಪಚಾರವಾಗಿದೆ. ಅಲ್ಲದೆ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಿಂಕು ಸಿಂಗ್ ಇಂತಹ ಬೇಜವಾಬ್ದಾರಿ ಪೋಸ್ಟ್ ಮಾಡಬಾರದಿತ್ತು. ಇದು ಸನಾತನ ಧರ್ಮದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಕರ್ಣಿ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ತನಿಖೆ ಆರಂಭಿಸಿದ ಪೊಲೀಸರು

ದೂರು ಸ್ವೀಕರಿಸಿರುವ ಸಾಸ್ನಿ ಗೇಟ್ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ನಮಗೆ ದೂರು ಬಂದಿರುವುದು ನಿಜ. ವಿಡಿಯೋದ ಸತ್ಯಾಸತ್ಯತೆ ಮತ್ತು ಅದು ರಿಂಕು ಸಿಂಗ್ ಅವರ ಅಧಿಕೃತ ಖಾತೆಯಿಂದಲೇ ಪೋಸ್ಟ್ ಆಗಿದೆಯೇ ಅಥವಾ ಅವರ ಸೋಶಿಯಲ್ ಮೀಡಿಯಾ ತಂಡದಿಂದ ತಪ್ಪಾಗಿದೆಯೇ ಎಂಬ ಬಗ್ಗೆ ತಾಂತ್ರಿಕ ತಂಡದ ನೆರವು ಪಡೆದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಭಿಮಾನಿಗಳ ರಕ್ಷಣೆ

ಒಂದು ಕಡೆ ವಿರೋಧ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಅಭಿಮಾನಿಗಳು ರಿಂಕು ಪರ ನಿಂತಿದ್ದಾರೆ. ರಿಂಕು ಸಿಂಗ್ ದೈವಭಕ್ತರಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ದೇವರ ಮೇಲಿನ ಪ್ರೀತಿಯನ್ನು ತೋರಿಸಲು ಈ ವಿಡಿಯೋ ಬಳಸಿದ್ದಾರೆ. ಅದರಲ್ಲಿ ಯಾವುದೇ ಕೆಟ್ಟ ಉದ್ದೇಶವಿಲ್ಲ ಎಂದು ಬೆಂಬಲಿಗರು ವಾದಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ತರಬೇತಿ ಶಿಬಿರದಲ್ಲಿರುವ ರಿಂಕು ಸಿಂಗ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net