ಗಿಗ್ ವರ್ಕರ್ಸ್​ ಸಮಸ್ಯೆ; 10 ನಿಮಿಷಗಳ ವಿತರಣೆಯ ಮಾದರಿ ಬಗ್ಗೆ ಕ್ಲ್ಯಾರಿಟಿ ಕೊಟ್ಟ ಜೊಮ್ಯಾಟೋ ಸಿಇಒ | Zomato CEO

ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್
ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್
Published on
ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗೆ ಒತ್ತಾಯಿಸಿ ಇತ್ತೀಚಿಗೆ ಡಿ. 31ರಂದು ಸ್ವಿಗ್ಗಿ, ಜೊಮ್ಯಾಟೋ, ಪ್ಲಿಪ್​ಕಾರ್ಟ್, ಬ್ಲಿಂಕಿಟ್ ಸೇರಿ ಆನ್​ಲೈನ್​ ಆ್ಯಪ್​ಗಳ ಗಿಗ್​ ಕಾರ್ಮಿಕರು ಮುಷ್ಕರ ನಡೆಸಿದ್ದರು. ಮುಷ್ಕರ ಅಷ್ಟೇನೂ ಪ್ರಭಾವ ಬೀರದಿದ್ದರು, ಕೆಲವು ಬದಲಾವಣೆ ಮಾಡಲು ಕಂಪನಿಗಳು ಒಪ್ಪಿಕೊಂಡಿವೆ. ಇನ್ನು ಕಾರ್ಮಿಕರು 10 ನಿಮಿಷಗಳ ವಿತರಣಾ ಆಯ್ಕೆಯನ್ನು ತೆಗೆಯುವಂತೆ ಬೇಡಿಕೆಯನ್ನು ಇಟ್ಟಿದ್ದರು. 
ಹತ್ತು ನಿಮಿಷಗಳ ವಿತರಣಾ ಮಾದರಿಯಿಂದಾಗಿ ಸವಾರರು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅವರ ಸುರಕ್ಷತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾರ್ವಜನಿಕರಿಂದ ಈ ಬಗ್ಗೆ ರ್ಚಚೆ ನಡೆದಿತ್ತು. ಈ ಕುರಿತು ಸ್ವತಃ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಪ್ರತಿಕ್ರಿಯಿಸಿ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ವಿತರಣೆಯ ವೇಗವು ಮೂಲಸೌಕರ್ಯವನ್ನು ಅವಲಂಬಿಸಿರುತ್ತದೆ, ಸವಾರರ ಮೇಲಿನ ಒತ್ತಡದ ಮೇಲೆ ಅಲ್ಲ. ನಿಮ್ಮ ಮನೆಯ ಸುತ್ತಲೂ ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ 10 ನಿಮಿಷಗಳ ವಿತರಣಾ ಸೇವೆಯನ್ನು ನೀಡಬಹುದು. ಡೆಲಿವರಿ ಬಾಯ್ಸ್​ ವೇಗವಾಗಿ ವಾಹನ ಚಲಾಯಿಸಲು ಅಲ್ಲ. ನಿಜವಾದ ವಿತರಣೆಗಾಗಿ ನಾವು ಗ್ರಾಹಕರಿಗೆ ನೀಡಿದ ಟೈಮರ್ ಭರವಸೆಯು ಅಪ್ಲಿಕೇಶನ್‌ನಲ್ಲಿ ಸವಾರರಿಗೆ ಗೋಚರಿಸುವುದಿಲ್ಲ ಎಂದು ಹೇಳಿದ್ದಾರೆ.
ಬ್ಲಿಂಕಿಟ್‌ನಲ್ಲಿ ಸ್ವೀಕರಿಸಿದ ಆರ್ಡರ್ ಅನ್ನು ಪ್ಯಾಕ್ ಮಾಡಲು 2.5 ನಿಮಿಷಗಳು ಬೇಕಾಗುತ್ತದೆ. ಅಲ್ಲಿಂದ ವಿತರಣೆಯ ಅಂತರ 2 ಕಿ.ಮೀ  ಇದೆ. ನೀವು ಗಂಟೆಗೆ 15 ಕಿ.ಮೀ ವೇಗದಲ್ಲಿ ಪ್ರಯಾಣಿಸಿದರೂ, ನೀವು 8 ನಿಮಿಷಗಳಲ್ಲಿ ಸ್ಥಳವನ್ನು ತಲುಪಬಹುದು. ಇದಲ್ಲದೆ, ತಡವಾಗಿ ವಿತರಣೆ ಮಾಡಿದರೆ ತಮ್ಮ ಏಜೆಂಟರಿಗೆ ದಂಡ ವಿಧಿಸಲಾಗುವುದಿಲ್ಲ. ಮತ್ತು ಸಮಯಕ್ಕೆ ಸರಿಯಾಗಿ ವಿತರಣೆ ಮಾಡಿದರೆ ಯಾವುದೇ ವಿಶೇಷ ಪ್ರೋತ್ಸಾಹ ನೀಡಲಾಗುವುದಿಲ್ಲ ಎಂದು ಸ್ಪಷ್ಟಡಿಸಿದ್ದಾರೆ. 
ಹೊಸ ವರ್ಷದ ದಿನದಂದು ಗಿಗ್ ಕಾರ್ಮಿಕರ ಮುಷ್ಕರದ ನಡುವೆಯೂ ಜೊಮಾಟೊ ಮತ್ತು ಬ್ಲಿಂಕಿಟ್ ಒಟ್ಟಾಗಿ ದಾಖಲೆಯ 75 ಲಕ್ಷ ಆರ್ಡರ್‌ಗಳನ್ನು ಗ್ರಾಹಕರಿಗೆ ತಲುಪಿಸಿವೆ ಎನ್ನಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net