ಆನ್​ಲೈನ್​ ಗೇಮ್​... 9ನೇ ಮಹಡಿಯಿಂದ ಜಿಗಿದು ಮೂವರು ಸಹೋದರಿಯರು ಸಾವು, ಡೆತ್​ನೋಟ್​ನಲ್ಲಿದೆ ನೋವಿನ ನುಡಿ! Ghaziabad Sisters Death Case

ಸಾಂದರ್ಭಿಕ ಚಿತ್ರ ( Ghaziabad Sisters Death Case )
ಸಾಂದರ್ಭಿಕ ಚಿತ್ರ ( Ghaziabad Sisters Death Case )
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದ ಮೂವರು ಸಹೋದರಿಯರ ಸಾವಿನ ಕೇಸ್​
  • ಆನ್​ಲೈನ್​ ಗೇಮ್​ ಗೀಳಿಗೆ ಬಿದ್ದು 9ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ಸಹೋದರಿಯರು
  • ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಇಡೀ ದೇಶವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆ
ಲಖನೌ : ಮೂವರು ಸಹೋದರಿಯರು ಕಟ್ಟಡದಿಂದ ಜಿಗಿದು ಸಾವಿಗೆ ( Ghaziabad Sisters Death Case ) ಶರಣಾದ ಸುದ್ದಿ ಇದೀಗ ದೇಶದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದೆ. ಸಾವಿಗೂ ಮುನ್ನ ಕ್ಷಮಿಸಿ ಅಪ್ಪ ಎಂದು ಡೆತ್​​ನೋಟ್​ ಬರೆದಿಟ್ಟು, ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾಕಷ್ಟು ಕಷ್ಟಪಟ್ಟು, ಮಕ್ಕಳನ್ನು ಬೆಳೆಸಿದ ತಂದೆ-ತಾಯಿಗೆ ಇದೀಗ ತನ್ನ ಮೂವರು ಮಕ್ಕಳು ಇಲ್ಲ ಅಂದರೆ ಹೇಗಾಗಬೇಡ ನೀವೇ ಹೇಳಿ. ಯಾವುದೂ ಆನ್​ಲೈನ್​ ಗೀಳಿಗೆ ಪ್ರಾಣ ಕಳೆದುಕೊಳ್ಳುವುದೆಂದರೆ, ಇದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಎಲ್ಲ ಪಾಲಕರನ್ನು ಈ ಒಂದು ಘಟನೆ ಚಿಂತೆಗೆ ದೂಡಿದೆ. ಅಷ್ಟಕ್ಕೂ ಏನಿದು ಪ್ರಕರಣ? ಡೆತ್​ನೋಟ್​ನಲ್ಲಿ ಇನ್ನೇನಿದೆ? ಮೂವರು ಸಹೋದರಿಯರು ಕಟ್ಟಡದಿಂದ ಒಟ್ಟಿಗೆ ಜಿಗಿದಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಆಘಾತಕಾರಿ ಉತ್ತರ ಇಲ್ಲಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆ ಇಂದು (ಫೆ.04) ನಡೆದಿದೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೂವರು ಸಹೋದರಿಯರು ತಮ್ಮ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಮೃತರು 12, 14 ಮತ್ತು 16 ವರ್ಷ ವಯಸ್ಸಿನವರು.
ಸಹೋದರಿಯರು ಕಟ್ಟಡದಿಂದ ಹಾರಿ ಕೆಳಗೆ ಬಿದ್ದಾಗ ಉಂಟಾದ ಜೋರಾದ ಶಬ್ದವನ್ನು ಕೇಳಿ, ಕೂಡಲೇ ಎಚ್ಚರಗೊಂಡ ಸ್ಥಳೀಯರು ಸ್ಥಳಕ್ಕೆ ಬಂದಾಗ, ಆ ಭೀಕರ ದೃಶ್ಯವನ್ನು ಕಂಡು ಒಂದು ಕ್ಷಣ ದಿಗ್ಭ್ರಮೆಗೊಂಡರು. ಕೂಡಲೇ ಆ ಶಾಕ್​ನಿಂದ ಹೊರಬಂದ ಸ್ಥಳೀಯರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರದೇಶವನ್ನು ಸೀಲ್ ಮಾಡಿ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಸಾವಿಗೆ ಕಾರಣ ಏನು?

ಇನ್ನು ಈ ದುರಂತ ಘಟನೆಗೆ ಕೊರಿಯನ್ ಟಾಸ್ಕ್ ಆಧಾರಿತ ಆನ್‌ಲೈನ್ ಗೇಮ್​ ಎಂದು ಶಂಕಿಸಲಾಗಿದೆ. ಮೂವರು ಹುಡುಗಿಯರು ಈ ಆಟಕ್ಕೆ ವ್ಯಸನಿಯಾಗಿದ್ದರು ಎಂದು ಪೊಲೀಸರು ಅನುಮಾನಿಸಿದ್ದಾರೆ. ಹುಡುಗಿಯರ ತಂದೆ ಚೇತನ್ ಕುಮಾರ್ ನೀಡಿದ ವಿವರಗಳ ಪ್ರಕಾರ, ಆನ್​ಲೈನ್​ ಗೇಮ್​ ಒಟ್ಟು 50 ಟಾಸ್ಕ್‌ಗಳನ್ನು ಹೊಂದಿತ್ತು ಮತ್ತು ಕೊನೆಯ ಟಾಸ್ಕ್ ಸೋಮವಾರ ಪೂರ್ಣಗೊಂಡಿತು. ಈ ಟಾಸ್ಕ್ ಪೂರ್ಣಗೊಳಿಸಿದ ನಂತರ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಮಗೆ ಗೊತ್ತಿರಲಿಲ್ಲ

ನಮ್ಮ ಮಕ್ಕಳು ಇಂತಹ ಟಾಸ್ಕ್ ಗೇಮ್ ಆಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. ಲುಡೋದಂತಹ ಸಾಮಾನ್ಯ ಗೇಮ್​ ಆಡುತ್ತಿದ್ದಾರೆಂದು ನಾನು ಭಾವಿಸಿದೆ. ಅವರನ್ನು ಸಾಯುವಂತೆ ಹೇಳುವ ಒಂದು ಆಟ ಇರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಸದ್ಯ ಪೊಲೀಸರು ನಮ್ಮ ಮಕ್ಕಳು ಬಳಸುತ್ತಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹುಡುಗಿಯರ ತಂದೆ ಚೇತನ್ ಕುಮಾರ್ ಕಣ್ಣೀರು ಹಾಕುತ್ತಾ ನೋವಿನ ಮಾತುಗಳನ್ನು ಆಡಿದರು.

ಡೆತ್​ನೋಟ್​ ಪತ್ತೆ

ಮೂವರು ಹುಡುಗಿಯರಲ್ಲಿ ಓರ್ವ ಹುಡುಗಿಯ ಕೋಣೆಯಲ್ಲಿ ಒಂದು ಪುಟದ ಡೆತ್​ನೋಟ್​ ಪತ್ತೆಯಾಗಿದೆ. ಅದರಲ್ಲಿ, "ಇದು ನಿಜ ಜೀವನದ ಕಥೆ. ಈ ಡೈರಿಯಲ್ಲಿರುವ ಎಲ್ಲವನ್ನೂ ಓದಿ. ಏಕೆಂದರೆ, ಇದೆಲ್ಲವೂ ನಿಜ. ಈಗಲೇ ಓದಿ... ನಿಜವಾಗಿಯೂ ಕ್ಷಮಿಸಿ.. ಕ್ಷಮಿಸಿ ಅಪ್ಪಾ ಎಂದು ಬರೆಲಾಗಿದೆ. ಆ ಡೆತ್​ನೋಟ್​ನಲ್ಲಿ ಕಣ್ಣೀರಿನ ಎಮೋಜಿಯನ್ನು ಸಹ ಬರೆಯಲಾಗಿದೆ. ಸದ್ಯ ಪೊಲೀಸರು ಡೆತ್​ನೋಟ್​ ಅನ್ನು ವಶಪಡಿಸಿಕೊಂಡಿದ್ದಾರೆ. ರೂಮಿನಲ್ಲಿ ನೆಲದ ಮೇಲೆ ಹರಡಿದ್ದ ಕುಟುಂಬ ಸದಸ್ಯರ ಫೋಟೋಗಳು ಸಹ ಕಂಡುಬಂದಿವೆ.
ಇನ್ನು ಈ ಘಟನೆಗೆ ಆನ್‌ಲೈನ್ ಗೇಮಿಂಗ್ ಕಾರಣವೇ ಎಂಬುದನ್ನು ಪೊಲೀಸರು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಮೂವರು ಹುಡುಗಿಯರು ಹಾರಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ನಾವು ತಕ್ಷಣ ಅಲ್ಲಿಗೆ ತಲುಪಿ ಶವಗಳನ್ನು ಹೊರತೆಗೆದಿದ್ದೇವೆ. ನಿಜವಾದ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಗಾಜಿಯಾಬಾದ್​ ಎಸ್ಪಿ ಅತುಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮೂವರು ಹುಡುಗಿಯರು ಕೊರಿಯನ್ ಆನ್​​ಲೈನ್​ ಗೇಮ್​ನಿಂದ ಪ್ರಭಾವಿತರಾಗಿದ್ದರು ಎಂದು ಡಿಸಿಪಿ ನಿಮಿಷ್ ಪಾಟೀಲ್ ಹೇಳಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, 14 ವರ್ಷದ ಬಾಲಕಿ ಆ ಆಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು ಮತ್ತು ಆಕೆಯೇ ಆದೇಶಗಳನ್ನು ನೀಡಿದ್ದಾಳೆ ಎಂದು ಶಂಕಿಸಲಾಗಿದೆ. ಆಟದ ಭಾಗವಾಗಿ ಬಾಲ್ಕನಿಯಿಂದ ಜಿಗಿಯಲು ಎರಡು ಹಂತದ ಸಣ್ಣ ಏಣಿಯನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ.
ಈ ಆಟವನ್ನು ಯಾರು ಪರಿಚಯಿಸಿದರು? ಅದು ಹೇಗೆ ಪ್ರಾರಂಭವಾಯಿತು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯು ಆನ್‌ಲೈನ್ ಗೇಮಿಂಗ್, ಮಕ್ಕಳ ಮಾನಸಿಕ ಆರೋಗ್ಯ ಮತ್ತು ಪಾಲಕರ ಜಾಗರೂಕತೆಯ ಕುರಿತು ಬಿಸಿ ಚರ್ಚೆಗೆ ಕಾರಣವಾಗಿದೆ. ಮಕ್ಕಳ ಡಿಜಿಟಲ್ ಜಗತ್ತನ್ನು ನಿರ್ಲಕ್ಷಿಸಬಾರದು ಮತ್ತು ಅವರ ನಡವಳಿಕೆಯಲ್ಲಿನ ಸಣ್ಣ ಬದಲಾವಣೆಗಳನ್ನೂ ಗಮನ ಹರಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net