ವ್ಯವಸ್ಥೆಯ ಲೋಪಗಳ ವಿರುದ್ಧ ಜೆನ್​ಝಿ ಸಂಘರ್ಷ

ಎಐ ಚಿತ್ರ
ಎಐ ಚಿತ್ರ
Published on

ನವದೆಹಲಿ: ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪ್ರಶ್ನಿಸುವಲ್ಲಿ ಮತ್ತು ಬದಲಾವಣೆಗಾಗಿ ಧ್ವನಿ ಎತ್ತುವಲ್ಲಿ ಜೆನ್ ಝಿ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಸಿಬಿಎಸ್​ಇ ಸೇರಿದಂತೆ ಹಲವು ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳ ವೈಫಲ್ಯಗಳನ್ನು ಜಗತ್ತಿನೆದುರು ತೆರೆದಿಡುವಲ್ಲಿ ಈ ಪೀಳಿಗೆಯ ಕೊಡುಗೆ ಗಮನಾರ್ಹವಾಗಿದೆ. ಹಳೆಯ ಪೀಳಿಗೆಗಳು ಪ್ರತಿಭಟನೆಗೆ ರಸ್ತೆಗಿಳಿಯ ಬೇಕಾಗಿದ್ದರೆ ಅಥವಾ ಮಾಧ್ಯಮಗಳ ಗಮನ ಸೆಳೆಯಲು ಕಾಯಬೇಕಾಗಿದ್ದರೆ, ಜೆನ್ ಝಿ ಪೀಳಿಗೆಗೆ ತಂತ್ರಜ್ಞಾನವೇ ಜನ್ಮಸಿದ್ಧ ಹಕ್ಕು! ಪರೀಕ್ಷಾ ಪದ್ಧತಿಯಲ್ಲಿನ ಲೋಪಗಳು, ಪ್ರಶ್ನೆಪತ್ರಿಕೆ ಸೋರಿಕೆ, ಕಠಿಣ ಮೌಲ್ಯಮಾಪನ ಅಥವಾ ವಿವಾದಾತ್ಮಕ ಪ್ರಶ್ನೆಗಳು ಬಂದಾಗ ಈ ಪೀಳಿಗೆಯು ಹ್ಯಾಶ್​ಟ್ಯಾಗ್​ಗಳನ್ನು ಬಳಸಿ ಕ್ಷಣಾರ್ಧದಲ್ಲಿ ದೇಶದ ಗಮನ ಸೆಳೆಯುತ್ತದೆ. ಇದು ಬದಲಾವಣೆಗೂ ನಾಂದಿಯಾಗುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.

ಇಂದಿನ ಜೆನ್ ಝಿ ಪೀಳಿಗೆಗೆ ತಂತ್ರಜ್ಞಾನ ಎನ್ನುವುದು ಕೇವಲ ಮನರಂಜನೆಯ ಸಾಧನವಾಗಿ ಉಳಿದಿಲ್ಲ. ಅದೊಂದು ಸಾಮಾಜಿಕ ಬದಲಾವಣೆಯ ಅಸ್ತ್ರ. ಹಳೆಯ ಪೀಳಿಗೆಗಳು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ರಸ್ತೆಗಿಳಿಯಬೇಕಿತ್ತು, ಪೋಸ್ಟರ್​ಗಳನ್ನು ಹಿಡಿಯಬೇಕಿತ್ತು. ಆದರೆ ಜೆನ್ ಝಿ ಪೀಳಿಗೆಗೆ ಡಿಜಿಟಲ್ ಜಗತ್ತೇ ಹೋರಾಟದ ಕಣ. ಜೆನ್ ಝಿ ಪೀಳಿಗೆಗೆ ಸ್ಮಾರ್ಟ್​ಫೋನ್ ಮತ್ತು ಇಂಟರ್ನೆಟ್ ಕೇವಲ ಸೌಲಭ್ಯಗಳಲ್ಲ, ಅವು ಅವರ ಧ್ವನಿಯನ್ನು ವರ್ಧಿಸುವ ಮೈಕ್ರೋಫೋನ್​ಗಳು. ಅವರು ವ್ಯವಸ್ಥೆಯನ್ನು ಕೇವಲ ನಿಂದಿಸುವುದಿಲ್ಲ, ಬದಲಿಗೆ ತಂತ್ರಜ್ಞಾನದ ಮೂಲಕ ಆ ವ್ಯವಸ್ಥೆಯನ್ನು ನಡೆಸುವವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡುತ್ತಾರೆ. ಹ್ಯಾಶ್​ಟ್ಯಾಗ್​ಗಳ ಮೂಲಕ ಆರಂಭವಾಗುವ ಇವರ ಡಿಜಿಟಲ್ ಹೋರಾಟಗಳು ಇಂದು ನ್ಯಾಯಾಲಯದ ತೀರ್ಪಗಳನ್ನು ಮತ್ತು ಸರ್ಕಾರದ ನೀತಿಗಳನ್ನು ಬದಲಾಯಿಸುವ ಮಟ್ಟಿಗೆ ಶಕ್ತಿಶಾಲಿಯಾಗಿ ಬೆಳೆದು ನಿಂತಿವೆ.

ಡಿಜಿಟಲ್ ಕ್ರಾಂತಿ

ಸಿಬಿಎಸ್​ಇ, ಎನ್​ಟಿಎ ಸೇರಿ ಭಾರತದ ಪ್ರಮುಖ ಶೈಕ್ಷಣಿಕ ಮಂಡಳಿಗಳು ಮತ್ತು ಪರೀಕ್ಷಾ ಸಂಸ್ಥೆಗಳ ಲೋಪದೋಷಗಳನ್ನು ಜಗತ್ತಿನೆದುರು ತರಲು ಯುವ ಪೀಳಿಗೆ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿದೆ. ಸಿಬಿಎಸ್​ಇ ಪರೀಕ್ಷೆಗಳಲ್ಲಿ ಹಲವು ಬಾರಿ ಲಿಂಗ ತಾರತಮ್ಯವನ್ನು ಉತ್ತೇಜಿಸುವ ಅಥವಾ ಗೊಂದಲಮಯವಾದ ಪ್ರಶ್ನೆಗಳು ಬಂದಾಗ, ಜೆನ್ ಝಿ ವಿದ್ಯಾರ್ಥಿಗಳು ಆ ಪ್ರಶ್ನೆಪತ್ರಿಕೆಯ ಸ್ಕ್ರೀನ್​ಶಾಟ್​ಗಳನ್ನು ಎಕ್ಸ್, ಇನ್​ಸ್ಟಾಗ್ರಾಮ್ಳಲ್ಲಿ ವೈರಲ್ ಮಾಡಿದರು. ಇಆಖಉ ಹ್ಯಾಶ್​ಟ್ಯಾಗ್​ಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿ, ಮಂಡಳಿಯು ತನ್ನ ತಪ್ಪನ್ನು ಒಪ್ಪಿಕೊಂಡು ಆ ಪ್ರಶ್ನೆಗಳಿಗೆ ಕೃಪಾಂಕ ನೀಡುವಂತೆ ಅಥವಾ ಪ್ರಶ್ನೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್​ನಲ್ಲಿ ಇತ್ತೀಚೆಗೆ ನಡೆದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಮೊದಲು ಮುನ್ನೆಲೆಗೆ ತಂದಿದ್ದೇ ಈ ಯುವಕರು. ಯೂಟ್ಯೂಬ್ ವಿಡಿಯೋಗಳು, ಎಕ್ಸ್ ಟ್ರೆಂಡ್​ಗಳು ಮತ್ತು ಟೆಲಿಗ್ರಾಂ ಗ್ರೂಪ್​ಗಳ ಮೂಲಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿ, ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನು ಸೃಷ್ಟಿಸಿದರು. ಇದು ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಗಮನ ಸೆಳೆಯಲು ಪ್ರಮುಖ ಕಾರಣವಾಯಿತು. ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಅಥವಾ ಫಲಿತಾಂಶ ವಿಳಂಬವಾದಾಗ, ಇಂದಿನ ಯುವಕರು ಸುಮ್ಮನೆ ಕೂರದೆ ಹ್ಯಾಶ್​ಟ್ಯಾಗ್​ಗಳನ್ನು ಬಳಸಿ ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್ ಮಾಡುತ್ತಾರೆ.

ಇದು ಸರ್ಕಾರದ ಮೇಲೆ ತಕ್ಷಣದ ಒತ್ತಡ ಹೇರುತ್ತದೆ. ಶಿಕ್ಷಣ ಮಾತ್ರವಲ್ಲದೆ, ಕಚೇರಿಗಳಲ್ಲಿನ ಶೋಷಣೆ, ಲಿಂಗ ತಾರತಮ್ಯ ಮತ್ತು ಪರಿಸರ ಮಾಲಿನ್ಯದಂತಹ ವಿಷಯಗಳಲ್ಲೂ ಜೆನ್ ಝಿ ಧ್ವನಿ ಎತ್ತುತ್ತಿದೆ. ಉದಾಹರಣೆಗೆ, ಕಾರ್ಪೆರೇಟ್ ಸಂಸ್ಥೆಗಳಲ್ಲಿ ಯುವ ಉದ್ಯೋಗಿ ಗಳಿಗೆ ಅತಿಯಾದ ಕೆಲಸದ ಒತ್ತಡ ನೀಡಿದಾಗ, ಅವರು ಅದನ್ನು ಲಿಂಕ್ಡ್ ಇನ್ ಅಥವಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಆ ಸಂಸ್ಥೆಗಳ ನೈಜ ಮುಖವನ್ನು ಬಯಲಿಗೆಳೆಯುತ್ತಾರೆ. ಇದರಿಂದಾಗಿ ಹಲವು ದೊಡ್ಡ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸಿ ಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಸಾರ್ಥಕ ಪ್ರಯತ್ನ

ಸಿಬಿಎಸ್​ಇ ವ್ಯವಸ್ಥೆಯಲ್ಲಿದ್ದ ಗಂಭೀರ ಲೋಪದೋಷಗಳನ್ನು ಕೇವಲ 17-18 ವರ್ಷದ ಮೂವರು ಯುವಕರು ಇಂಟರ್ನೆಟ್, ಬ್ಲಾಗ್ ಮತ್ತು ತಾಂತ್ರಿಕ ಜ್ಞಾನದ ಮೂಲಕ ಇಡೀ ಜಗತ್ತಿನೆದುರು ಬಯಲಿಗೆಳೆದರು. ಇವರು ಯಾವುದೇ ದೊಡ್ಡ ತನಿಖಾ ಸಂಸ್ಥೆಯ ಅಧಿಕಾರಿಗಳಲ್ಲ ಅಥವಾ ವೃತ್ತಿಪರ ಪತ್ರಕರ್ತರಲ್ಲ. ಇವರು ಇತ್ತೀಚೆಗಷ್ಟೇ 12ನೇ ತರಗತಿ ಮುಗಿಸಿದ ಸಾಮಾನ್ಯ ವಿದ್ಯಾರ್ಥಿಗಳು.

ಹೋರಾಟದ ಹಂತಗಳು

ಸಿಬಿಎಸ್​ಇ ಈ ಬಾರಿ ಪರಿಚಯಿಸಿದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿದ್ದ ದೋಷಗಳನ್ನು ಸಾರ್ಥಕ್ ಮತ್ತು ತಂಡ ಬಯಲಿಗೆಳೆಯಿತು.

ದೋಷಗಳ ಪತ್ತೆ: ಮೊದಲು ವೇದಾಂತ್ ಶ್ರೀವಾಸ್ತವ ಎಂಬ ವಿದ್ಯಾರ್ಥಿ ತನಗೆ ಸಿಬಿಎಸ್​ಇ ವೆಬ್​ಸೈಟ್​ನಿಂದ ಸಿಕ್ಕ ಭೌತಶಾಸ್ತ್ರದ ಉತ್ತರ ಪತ್ರಿಕೆಯ ಕೈಬರಹ ತನ್ನದಲ್ಲ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದನು. ಇದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿತು. ಇದನ್ನು ನೋಡಿದ ಸಾರ್ಥಕ್ ಸಿದ್ಧಾಂತ್ ಪ್ರಕರಣದ ಆಳಕ್ಕೆ ಇಳಿಯಲು ನಿರ್ಧರಿಸಿದನು.

1. ಸಾರ್ಥಕ್ ಸಿದ್ಧಾಂತ್

ರಾಂಚಿ ಮೂಲದ 18 ವರ್ಷದ ಯುವಕ. ವ್ಯವಸ್ಥೆಯ ತಪ್ಪುಗಳನ್ನು ದಾಖಲೆ ಸಮೇತ ಹುಡುಕುವ ಅದ್ಭುತ ವಿಶ್ಲೇಷಣಾ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿ.

2. ವೇದಾಂತ್ ಶ್ರೀವಾಸ್ತವ

ಸಿಬಿಎಸ್​ಇ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ. ಫಲಿತಾಂಶದ ನಂತರ ತನಗೆ ಸಿಕ್ಕ ಸ್ಕ್ಯಾನ್​ ಮಾಡಿದ ಉತ್ತರ ಪತ್ರಿಕೆ ತನ್ನದೇ ಅಲ್ಲ (ಕೈಬರಹ ಬೇರೆಯದಾಗಿತ್ತು) ಎಂದು ಮೊದಲು ಧ್ವನಿ ಎತ್ತಿದವನು.

3. ನಿಸರ್ಗ ಅಧಿಕಾರಿ

ಬೆಂಗಳೂರು ಮೂಲದ ತಾಂತ್ರಿಕ ಜ್ಞಾನವಿರುವ ಯುವಕ. ಸಿಬಿಎಸ್​ಇ ಸಾಫ್ಟ್​ವೇರ್​ನ ಭದ್ರತಾ ಲೋಪಗಳನ್ನು ಪತ್ತೆಹಚ್ಚಿದ ಸೈಬರ್ ಸೂಕ್ಷ್ಯ ಮತಿ.

ಟೆಂಡರ್ ಅಕ್ರಮ ಬಯಲು

ಸಾರ್ಥಕ್ ಸಿದ್ಧಾಂತ್ ಸಿಬಿಎಸ್​ಇ ಅಧಿಕೃತವಾಗಿ ಹೊರಡಿಸಿದ್ದ ಹಳೆಯ ಮತ್ತು ಹೊಸ ಟೆಂಡರ್ ದಾಖಲೆಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಬ್ಲಾಗ್ ಒಂದನ್ನು ಬರೆದನು. ಅದರಲ್ಲಿ ಅವನು ಸಾಬೀತುಪಡಿಸಿದ ಪ್ರಮುಖ ಅಂಶಗಳು- ಸಿಬಿಎಸ್​ಇ ನಿಯಮಗಳನ್ನು ತನಗೆ ಬೇಕಾದಂತೆ ಬದಲಾಯಿಸಿ, ಹೈದರಾಬಾದ್ ಮೂಲದ ಕೋಯಿಂಪ್ಟ್ ಎಂಬ ವಿವಾದಾತ್ಮಕ ಹಿನ್ನೆಲೆಯುಳ್ಳ ಕಂಪನಿಗೆ ಡಿಜಿಟಲ್ ಮೌಲ್ಯಮಾಪನದ ಟೆಂಡರ್ ನೀಡಿತ್ತು. 

ದೇಶದಲ್ಲಿ ಅತಿ ದೊಡ್ಡ ಐಟಿ ಕಂಪನಿಗಳಿದ್ದರೂ ಅವುಗಳನ್ನು ಕಡೆಗಣಿಸಿ, ಈ ಸಣ್ಣ ಸಂಸ್ಥೆಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ನೀಡಲಾಗಿತ್ತು. ಟೆಂಡರ್ ನಿಯಮಗಳಲ್ಲಿದ್ದ ‘ಕಳಪೆ ಸಾಧನೆ ತೋರಿದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂಬ ಕಠಿಣ ನಿಯಮಗಳನ್ನೇ ಸಿಬಿಎಸ್​ಇ ಹೊಸ ಟೆಂಡರ್​ನಲ್ಲಿ ತೆಗೆದುಹಾಕಿತ್ತು!

ಹ್ಯಾಕ್ ಮಾಡಿ ತೋರಿಸಿದ ನಿಸರ್ಗ: ಬೆಂಗಳೂರಿನ ನಿಸರ್ಗ ಅಧಿಕಾರಿ ಎಂಬ ಯುವಕ ಸಿಬಿಎಸ್​ಇ ಬಳಸುತ್ತಿದ್ದ ಒಎಸ್​ಎಮ್ ಪೋರ್ಟಲ್​ನಲ್ಲಿ ಗಂಭೀರ ಭದ್ರತಾ ಲೋಪಗಳಿರುವುದನ್ನು ಪತ್ತೆಹಚ್ಚಿದನು. ಅವನು ಕೇವಲ ಒಬ್ಬ ವಿದ್ಯಾರ್ಥಿಯಾಗಿ ಲಾಗಿನ್ ಆಗಿ, ಮೌಲ್ಯಮಾಪಕನ ಪೊ›ಫೈಲ್ ಒಳಗೆ ನುಗ್ಗಿ ಅಂಕಗಳನ್ನು ಎಡಿಟ್ ಮಾಡುವ ಹಂತದವರೆಗಿನ ಸೈಬರ್ ದೋಷಗಳನ್ನು ಸಾಕ್ಷ್ಯ ಸಮೇತ ತೋರಿಸಿಕೊಟ್ಟನು.

ಪರಿಣಾಮ ಏನು?

ಜೆನ್ ಝಿ ಪೀಳಿಗೆಯ ಈ ಡಿಜಿಟಲ್ ತನಿಖೆ ಸೋಷಿಯಲ್ ಮೀಡಿಯಾ ಪೋಸ್ಟ್​ಗಳಿಗೆ ಸೀಮಿತವಾಗಲಿಲ್ಲ. ಇದು ದೇಶದ ಅತ್ಯುನ್ನತ ವ್ಯವಸ್ಥೆಯನ್ನೇ ನಡುಗಿಸಿತು.

ಸಂಸದೀಯ ಸಮಿತಿ ಮುಂದೆ ಸಾರ್ಥಕ್: ಈ 18 ವರ್ಷದ ಯುವಕನ ತನಿಖೆಯನ್ನು ಕಂಡು ಬೆರಗಾದ ಭಾರತದ ಸಂಸದೀಯ ಸ್ಥಾಯಿ ಸಮಿತಿ ಸಾರ್ಥಕ್ ಸಿದ್ಧಾಂತ್​ನನ್ನು ಆಹ್ವಾನಿಸಿತು. ಸಾರ್ಥಕ್ ಸಂಸದರ ಮುಂದೆ ಸಿಬಿಎಸ್​ಇ ಮಾಡಿದ್ದ ಅಕ್ರಮಗಳ ಪ್ರೆಸೆಂಟೇಶನ್ ನೀಡಿದನು. ಆ ವೇಳೆ ಅಲ್ಲಿದ್ದ ಸಿಬಿಎಸ್​ಇ ಅಧಿಕಾರಿಗಳು ಉತ್ತರಿಸಲಾಗದೆ ತಡಬಡಾಯಿಸಿದರು. ಆ ಬಳಿಕ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ಸಾರ್ಥಕ್ ಜತೆ ಮಾತುಕತೆ ನಡೆಸಿ, ಅದರ ವಿವರಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡರು.

ತನಿಖೆಗೆ ಆದೇಶ: ವಿವಾದ ತಾರಕಕ್ಕೇರುತ್ತಿದ್ದಂತೆ ಸರ್ಕಾರ ಸಿಬಿಎಸ್ಇಯ ಇಬ್ಬರು ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿತು. ಕ್ಯಾಬಿನೆಟ್ ಸೆಕ್ರೆಟರಿಯೇಟ್ ಈ ಟೆಂಡರ್ ಪ್ರಕ್ರಿಯೆಯ ತನಿಖೆಗೆ ಏಕಸದಸ್ಯ ಸಮಿತಿಯನ್ನು ರಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net