ತಲೆಮಾರುಗಳ ಸಾಧನೆ: ಕರ್ನಾಟಕದ ಸಾಧಕ ಕುಟುಂಬಗಳ ಯಶೋಪಥ

Generations of Achievement
Generations of Achievement
Published on
ಕುಟುಂಬ ಎಂದರೆ ಅದು ಕೇವಲ ಸದಸ್ಯರ ಸಮೂಹವಲ್ಲ. ಸಂಸ್ಕಾರ, ಮೌಲ್ಯಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗಿ ಸಂಸ್ಕೃತಿಯ ಪ್ರವಾಹವನ್ನು ಅವಿಚ್ಛಿನವಾಗಿ ಕಾಪಿಡುವ ಮಹೋನ್ನತ ಪರಂಪರೆಯನ್ನು ಕುಟುಂಬಗಳು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿವೆ. ಇಂದು ವಿಶ್ವ ಕುಟುಂಬ ದಿನದ ನಿಮಿತ್ತ ಕೌಟುಂಬಿಕ ಮೌಲ್ಯಗಳು, ಸಾಮರಸ್ಯ, ಸದ್ಭಾವದ ಬಗೆಗಿನ ಚಿಂತನೆಗಳ ಮೇಲೆ ಹೊಸ ಬೆಳಕು ಬೀರಲಾಗುತ್ತಿದೆ. ಈ ಸಾಲಿನಲ್ಲಿ ಕರ್ನಾಟಕದ ಸಾಧಕ ಕುಟುಂಬಗಳ ಯಶಸ್ಸು ಮತ್ತು ಕೊಡುಗೆ ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ. ಕೌಟುಂಬಿಕ ಮೌಲ್ಯಗಳ ಶಕ್ತಿಯನ್ನು ಮನದಟ್ಟು ಮಾಡಿಸುತ್ತದೆ. ಹಲವು ತಲೆಮಾರುಗಳು ಒಂದೇ ಕ್ಷೇತ್ರದಲ್ಲಿ ಅಪ್ರತಿಮ ಛಾಪು ಮೂಡಿಸಿರುವ ನಿದರ್ಶನಗಳಿಗೆ ಕೊರತೆ ಇಲ್ಲ. ಅಂಥ ಕೆಲ ಸಾಧಕ ಕುಟುಂಬಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಒಂದು ಸಾಧನೆ ಸಮಾಜದಲ್ಲಿ ಪ್ರೇರಣೆ ತುಂಬಿ, ಅದಕ್ಕೆ ಕಾರಣವಾದ ವ್ಯಕ್ತಿಯನ್ನು ಗುರುತಿಸುವಂತೆ ಮಾಡಿದರೆ, ಆ ಸಾಧನೆಯನ್ನು ತಲೆಮಾರುಗಳವರೆಗೆ ದೀಪದಂತೆ ಬೆಳಗಿಸಿಕೊಂಡು ಹೋಗುವುದು ಒಂದು ಕುಟುಂಬದ ಸಂಸ್ಕಾರ ಮತ್ತು ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕುಟುಂಬದ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತ, ಅದನ್ನು ಹೊಸ ತಲೆಮಾರಿನ ಅಗತ್ಯಕ್ಕೆ ತಕ್ಕಂತೆ ರೂಪಿಸುವುದು ಸುಲಭದ ಮಾತಲ್ಲ. ಆದರೆ, ಕರ್ನಾಟಕದ ಮಣ್ಣಿನಲ್ಲಿ ಇಂತಹ ಹಲವು ಕುಟುಂಬಗಳು ಜ್ಞಾನ, ಕಲೆ ಮತ್ತು ವಿಜ್ಞಾನದ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿವೆ.

ಯೋಗ ಪಥದ ಸಾರಥಿಗಳು

ಬಿ.ಕೆ.ಎಸ್.ಅಯ್ಯಂಗಾರ್ ಕುಟುಂಬ: ಆಧುನಿಕ ಯೋಗವನ್ನು ವಿಶ್ವವ್ಯಾಪಿಗೊಳಿಸಿದ ಕೀರ್ತಿ ಅಯ್ಯಂಗಾರ್ ಕುಟುಂಬಕ್ಕೆ ಸಲ್ಲುತ್ತದೆ. ಈ ಕುಟುಂಬದ ಸಾಧನೆಯು ‘ಯೋಗ’ವನ್ನು ಕೇವಲ ಕಸರತ್ತನ್ನಾಗಿ ನೋಡದೆ, ಒಂದು ವಿಜ್ಞಾನವಾಗಿ ತಲೆಮಾರುಗಳಿಗೆ ದಾಟಿಸಿದೆ.
ಬಿ.ಕೆ.ಎಸ್.ಅಯ್ಯಂಗಾರ್ (1918- 2014) ಅವರ ಯೋಗ ಸಾಧನೆಗೆ ಅಡಿಪಾಯ ಹಾಕಿದ್ದು ಅವರ ಭಾವ ಹಾಗೂ ಮೈಸೂರು ಅರಮನೆಯ ಯೋಗಶಾಲೆಯ ಗುರುಗಳಾದ ಟಿ. ಕೃಷ್ಣಮಾಚಾರ್ಯರು. ಇವರನ್ನು ‘ಆಧುನಿಕ ಯೋಗದ ಪಿತಾಮಹ’ ಎಂದು ಕರೆಯಲಾಗುತ್ತದೆ. ಬಿ.ಕೆ.ಎಸ್.ಅಯ್ಯಂಗಾರ್ ಅವರಿಗೆ 15ನೇ ವಯಸ್ಸಿನಲ್ಲಿ ಕೃಷ್ಣಮಾಚಾರ್ಯರು ಪರಿಣಾಮಕಾರಿ ತರಬೇತಿ ನೀಡಿದರು. ಅದುವೇ ಇಂದಿನ ‘ಅಯ್ಯಂಗಾರ್ ಯೋಗ’ ಶೈಲಿಗೆ ಭದ್ರ ಬುನಾದಿ. ಪ್ರಾಪ್ಸ್ (ಬೆಲ್ಟ್, ಬ್ಲಾಕ್, ಹಗ್ಗ) ಬಳಕೆಯ ಮೂಲಕ ಯೋಗವನ್ನು ಸಾಮಾನ್ಯ ಜನರಿಗೆ, ವಿಶೇಷವಾಗಿ ಶಾರೀರಿಕ ಮಿತಿ ಇರುವವರಿಗೆ ತಲುಪಿಸಿದವರು ಬಿ.ಕೆ.ಎಸ್. ಅಯ್ಯಂಗಾರ್. ಇವರ ‘ಲೈಟ್ ಆನ್ ಯೋಗ’ ಪುಸ್ತಕವು ಭಾರಿ ಜನಮನ್ನಣೆ ಪಡೆದಿದೆ. ಇವರ ಸೇವೆಗೆ ಭಾರತ ಸರ್ಕಾರ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.
ಪರಂಪರೆಯ ಮುಂದುವರಿಕೆ: ಬಿ.ಕೆ.ಎಸ್.ಅಯ್ಯಂಗಾರ್ ಅವರ ಮಕ್ಕಳಾದ ಗೀತಾ ಎಸ್. ಅಯ್ಯಂಗಾರ್ (1944-2018) ಮತ್ತು ಪ್ರಶಾಂತ್ ಎಸ್. ಅಯ್ಯಂಗಾರ್ (1949) ಈ ಪದ್ಧತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಗೀತಾ ಅಯ್ಯಂಗಾರ್ ಮಹಿಳೆಯರಿಗಾಗಿ ಯೋಗದ ವಿಶಿಷ್ಟ ಆಯಾಮಗಳನ್ನು ಪರಿಚಯಿಸಿದರು. ಗರ್ಭಾವಸ್ಥೆ ಮತ್ತು ಸ್ತ್ರೀ ಆರೋಗ್ಯಕ್ಕೆ ಯೋಗದ ಕೊಡುಗೆಯ ಬಗ್ಗೆ ಇವರ ಸಂಶೋಧನೆ ಅಪಾರ. ಪ್ರಶಾಂತ್, ಪ್ರಸ್ತುತ ಪುಣೆಯ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಯೋಗದ ತತ್ವಶಾಸ್ತ್ರ ಮತ್ತು ಪ್ರಾಣಾಯಾಮದ ಆಳವಾದ ಅಧ್ಯಯನದಲ್ಲಿ ತೊಡಗಿದ್ದಾರೆ.
ಅಂತಾರಾಷ್ಟ್ರೀಯ ಪ್ರಸಾರ: ಅಯ್ಯಂಗಾರ್ ಮೊಮ್ಮಗಳು ಅಭಿಜಾತ ಶ್ರೀಧರ್ ಅಯ್ಯಂಗಾರ್ ಪ್ರಸ್ತುತ ಈ ಪರಂಪರೆಯ ಜ್ಯೋತಿಯನ್ನು ಹೊತ್ತಿದ್ದಾರೆ. ಇವರು ಜಾಗತಿಕ ಮಟ್ಟದಲ್ಲಿ ತರಗತಿಗಳನ್ನು ನಡೆಸುವ ಮೂಲಕ ಯುವ ಪೀಳಿಗೆಗೆ ಯೋಗದ ಮಹತ್ವವನ್ನು ತಿಳಿಸುತ್ತಿದ್ದಾರೆ.

ಜ್ಯೋತಿಷ್ಯ ಲೋಕದ ಧ್ರುವತಾರೆಗಳು

ಬಿ.ವಿ.ರಾಮನ್ ಕುಟುಂಬ: ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ಜಾಗತಿಕ ಮನ್ನಣೆ ಮತ್ತು ವೈಜ್ಞಾನಿಕ ದೃಷ್ಟಿಕೋನ ನೀಡಿದ ಶ್ರೇಯಸ್ಸು ಬೆಂಗಳೂರು ವೆಂಕಟ ರಾಮನ್ (ಬಿ.ವಿ.ರಾಮನ್) (1912-1998)
ಅವರ ಕುಟುಂಬಕ್ಕೆ ಸಲ್ಲುತ್ತದೆ. ಬಿ.ವಿ.ರಾಮನ್ ಅವರಿಗೆ ಈ ದಿವ್ಯಜ್ಞಾನದ ದೀಕ್ಷೆ ದೊರೆತದ್ದು ಅವರ ತಾತನವರಾದ ಬಿ. ವೆಂಕಟರಮಣಪ್ಪ ಅವರಿಂದ. ಅವರು ಹೆಸರಾಂತ ವಿದ್ವಾಂಸರಾಗಿದ್ದು, ಮೊಮ್ಮಗನಿಗೆ ಶಾಸ್ತ್ರದ ಮೂಲತತ್ವಗಳನ್ನು ಧಾರೆ ಎರೆದಿದ್ದರು. ಜ್ಯೋತಿಷ್ಯವನ್ನು ಮೂಢನಂಬಿಕೆಯ ಚೌಕಟ್ಟಿನಿಂದ ಹೊರತಂದು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಬಿ.ವಿ.ರಾಮನ್, 1936ರಲ್ಲಿ ‘ದಿ ಅಸ್ಟ್ರಾಲಜಿಕಲ್ ಮ್ಯಾಗಜೀನ್’ ಆರಂಭಿಸಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಗಳಿಸಿದರು. ಭಾರತದ ವಿಭಜನೆ, ಎರಡನೇ ಮಹಾಯುದ್ಧದಂತಹ ಪ್ರಮುಖ ವಿದ್ಯಮಾನಗಳನ್ನು ಇವರು ನಿಖರವಾಗಿ ಊಹಿಸಿದ್ದರು. ಇವರ ಪತ್ನಿ ರಾಜೇಶ್ವರಿ ರಾಮನ್ ಮಹಿಳಾ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಬಿ.ವಿ.ರಾಮನ್ ಪುತ್ರಿ ಗಾಯತ್ರಿ ದೇವಿ ವಾಸುದೇವ್ (1949) ‘ಮಾಡರ್ನ್ ಅಸ್ಟ್ರಾಲಜಿ’ ಪತ್ರಿಕೆಯ ಮೂಲಕ ಶಾಸ್ತ್ರದ ಸಂಶೋಧನಾತ್ಮಕ ಆಯಾಮಗಳನ್ನು ಪಸರಿಸುತ್ತಿದ್ದಾರೆ. ಬಿ.ವಿ.ರಾಮನ್ ಪುತ್ರ ನಿರಂಜನ್ ಬಾಬು ಜ್ಯೋತಿಷ್ಯದ ಜೊತೆಗೆ ವಾಸ್ತುಶಾಸ್ತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ. ವಾಸ್ತು ಅಕಾಡೆಮಿಯ ಮೂಲಕ ಪ್ರಾಚೀನ ವಾಸ್ತುಶಿಲ್ಪದ ಜ್ಞಾನವನ್ನು ಇಂದಿನ ಕಾಲಕ್ಕೆ ಅನ್ವಯಿಸುವ ಕಾರ್ಯ ಮಾಡುತ್ತಿದ್ದಾರೆ.

ಯಕ್ಷಗಾನ ವೈಭವ

ಯಕ್ಷಗಾನದ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಮನೆ ಕುಟುಂಬ ಮಹತ್ವದ ಸ್ಥಾನವನ್ನು ಹೊಂದಿದೆ. ಎಂಟು ದಶಕಗಳಿಂದ ಹಲವು ತಲೆಮಾರುಗಳವರೆಗೆ ಯಕ್ಷಗಾನದ ಬಡಗುತಿಟ್ಟು ಶೈಲಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಈ ಕುಟುಂಬಕ್ಕೆ ಸಲ್ಲುತ್ತದೆ. ವೇಷಭೂಷಣ, ಮಾತುಗಾರಿಕೆ ಮತ್ತು ನೃತ್ಯದಲ್ಲಿ ಪರಂಪರಾಗತ ಶಿಸ್ತನ್ನು ಕಾಪಾಡಿಕೊಂಡು ಬಂದಿರುವುದು ಕೆರೆಮನೆ ಕುಟುಂಬದ ವೈಶಿಷ್ಟ್ಯ.
ಕೆರೆಮನೆ: ಶಿವರಾಮ ಹೆಗಡೆ ಈ ಮನೆತನದ ಸಾಂಸ್ಕೃತಿಕ ಬೇರು. 1934ರಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿ, ಯಕ್ಷಗಾನವನ್ನು ವೃತ್ತಿಪರವಾಗಿಯೂ ಮತ್ತು ಶಿಸ್ತುಬದ್ಧವಾಗಿಯೂ ಬೆಳೆಸಿದರು. ಇವರು ಸ್ತ್ರೀ ಪಾತ್ರ ಮತ್ತು ಪುರುಷ ಪಾತ್ರಗಳೆರಡರಲ್ಲೂ ಮಿಂಚಿದರು. ಅದರಲ್ಲೂ ಇವರ ಭೀಷ್ಮ, ದುರ್ಯೋಧನ ಮತ್ತು ಕಂಸನ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಇಂದಿಗೂ ಅಚ್ಚೊತ್ತಿವೆ. ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಎಂಬ ಹೆಗ್ಗಳಿಕೆ ಇವರದ್ದು.

ಕೆರೆಮನೆ ಶಂಭು ಹೆಗಡೆ

ಶಿವರಾಮ ಹೆಗಡೆಯವರ ಪುತ್ರರಾದ ಶಂಭು ಹೆಗಡೆ ಯಕ್ಷಗಾನವನ್ನು ಆಧುನಿಕ ಯುಗಕ್ಕೆ ಪರಿಚಯಿಸಿದರು. ಯಕ್ಷಗಾನ ಪ್ರದರ್ಶನಗಳನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಇವರ ಪಾತ್ರ ದೊಡ್ಡದು. ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಡುಗುಂಜಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ನೂರಾರು ಯುವ ಕಲಾವಿದರನ್ನು ಸಿದ್ಧಪಡಿಸಿದರು. ಇವರ ಸೇವೆಗ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೆರೆಮನೆ ಗಜಾನನ ಹೆಗಡೆ

ಇವರು ಕೂಡ ಶಿವರಾಮ ಹೆಗಡೆಯವರ ಪುತ್ರರು. ತಂದೆ ಮತ್ತು ಅಣ್ಣನಂತೆ ಇವರೂ ಯಕ್ಷಗಾನದ ಸಂಘಟನೆ ಮತ್ತು ಪ್ರದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮಂಡಳಿಯ ಆಡಳಿತ ಮತ್ತು ಯಕ್ಷಗಾನದ ತರಬೇತಿ ಕಾರ್ಯಗಳಲ್ಲಿ ಇವರ ಶ್ರಮ ಗಣನೀಯವಾಗಿದೆ.
ಶಂಭು ಹೆಗಡೆಯವರ ಪುತ್ರರಾದ ಕೆರೆಮನೆ ಶಿವಾನಂದ ಹೆಗಡೆ ಇಡಗುಂಜಿ ಮೇಳದ ಸಂಚಾಲಕ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನದ ಆಂಗಿಕ ಚಲನೆಗಳಿಗೆ ಹೊಸ ಆಯಾಮ ನೀಡಿದ್ದಾರೆ. ಇವರು ಜಗತ್ತಿನಾದ್ಯಂತ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತ, ಕಾರ್ಯಾಗಾರಗಳ ಮೂಲಕ ಈ ಕಲೆಯನ್ನು ಪಸರಿಸುತ್ತಿದ್ದಾರೆ. ಕೆರೆಮನೆ ಶಿವಾನಂದ ಹೆಗಡೆ ಪುತ್ರ ಕೆರೆಮನೆ ಶ್ರೀಧರ ಹೆಗಡೆ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ನಾದದ ನದಿ

ಸಾರಂಗಿ ಪರಂಪರೆಯ ಎಂಟು ತಲೆಮಾರುಗಳ ಯಾನ: ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಾರಂಗಿ ವಾದ್ಯ ಸುನಾದವನ್ನು ಎಂಟು ತಲೆಮಾರುಗಳಿಂದ ಒಂದು ತಪಸ್ಸಿನಂತೆ ಆರಾಧಿಸಿಕೊಂಡು ಬಂದಿರುವ ಕೀರ್ತಿ ಕಿರಾಣಾ ಘರಾನಾದ ವಿದ್ವಾಂಸರಿಗೆ ಸಲ್ಲುತ್ತದೆ. ಈ ಪರಂಪರೆಯು ಎಂಟು ತಲೆಮಾರುಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು, ಪ್ರತಿಯೊಂದು ಪೀಳಿಗೆಯೂ ಸಾರಂಗಿ ವಾದನಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಎಂಟು ತಲೆಮಾರುಗಳ ಈ ಸಾರಂಗಿ ಯಾನವು ಕೇವಲ ಒಂದು ಕುಟುಂಬದ ಕಥೆಯಲ್ಲ, ಅದು ಭಾರತೀಯ ಶಾಸ್ತ್ರೀಯ ಸಂಗೀತದ ನಿರಂತರತೆಯ ಸಂಕೇತ.
ಆಸ್ಥಾನ ವಿದ್ವಾಂಸರು (1ರಿಂದ 4ನೇ ಪೀಳಿಗೆ): ಈ ಪರಂಪರೆಯ ಮೂಲ ಪುರುಷರಾದ ಉಸ್ತಾದ್ ಅರ್ಬಾಜ್ ಖಾನ್ ಸಾಹೇಬ್ ಅವರಿಂದ ಆರಂಭವಾಗಿ, ಉಸ್ತಾದ್ ಜಮಾತ್ ಅಲಿ ಖಾನ್, ಉಸ್ತಾದ್ ಬಹಾದ್ದೂರ್ ಖಾನ್ ಮತ್ತು ಉಸ್ತಾದ್ ಇಮಾಮ್ ಬಕ್ಷ್ ಖಾನ್​ವರೆಗೆ ಸಾರಂಗಿಯು ರಾಜಸ್ಥಾನದ ಸಿಕರ್ ಸಂಸ್ಥಾನದ ಆಸ್ಥಾನದಲ್ಲಿ ರಾರಾಜಿಸಿತು. ಸಾರಂಗಿಯನ್ನು ಕೇವಲ ಗಾಯನಕ್ಕೆ ಸಾಥಿ ನೀಡುವ ವಾದ್ಯವೆಂಬ ಮಿತಿಯಿಂದ ಹೊರತಂದು, ಅದಕ್ಕೊಂದು ಸ್ವತಂತ್ರ ಶಾಸ್ತ್ರೀಯ ಘನತೆಯನ್ನು ತಂದುಕೊಟ್ಟರು. ಗಾಯನ ಶೈಲಿಯನ್ನು ವಾದ್ಯದಲ್ಲಿ ಅಳವಡಿಸುವ ‘ಗಾಯಕಿ’ ಶೈಲಿಗೆ ಇವರು ಬುನಾದಿ ಹಾಕಿದರು.
ತಾಂತ್ರಿಕ ನೈಪುಣ್ಯ (5ಮತ್ತು 6ನೇ ಪೀಳಿಗೆ): ಐದನೇ ಪೀಳಿಗೆಯ ಉಸ್ತಾದ್ ಮೆಹಬೂಬ್ ಖಾನ್ ಮತ್ತು ಆರನೇ ಪೀಳಿಗೆಯ ಉಸ್ತಾದ್ ಅಜೀಮ್ ಖಾನ್ ಅವರ ಕಾಲದಲ್ಲಿ ಸಾರಂಗಿ ವಾದನವು ಭೌಗೋಳಿಕ ಗಡಿಗಳನ್ನು ಮೀರಿ ಬೆಳೆಯಿತು. ಇವರು ಸಾರಂಗಿ ವಾದ್ಯದ ತಾಂತ್ರಿಕ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದರು.
ಜಾಗತಿಕ ಮನ್ನಣೆ (7ನೇ ಪೀಳಿಗೆ): ಈ ಪರಂಪರೆಯ ಏಳನೇ ಪೀಳಿಗೆಯ ಕೊಂಡಿ ಉಸ್ತಾದ್ ಅಬ್ದುಲ್ ಲತೀಫ್ ಖಾನ್. ಇವರು ಭಾರತದ ಶ್ರೇಷ್ಠ ಸಾರಂಗಿ ವಿದ್ವಾಂಸರಲ್ಲಿ ಒಬ್ಬರು. ಪಂಡಿತ್ ಫಯಾಜ್ ಖಾನ್ ಅವರ ತಂದೆ ಮತ್ತು ಗುರುಗಳೂ ಆಗಿದ್ದ ಇವರು ಸಾರಂಗಿಯನ್ನು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ದರು. ಉಸ್ತಾದ್ ಅಬ್ದುಲ್ ಲತೀಫ್ ಖಾನ್ ಇವರ ಅಪ್ರತಿಮ ಸೇವೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪಂಡಿತ್ ಫಯಾಜ್ ಖಾನ್ (8ನೇ ಪೀಳಿಗೆ)

ಕಿರಾಣಾ ಘರಾನಾದ ಸಾರಂಗಿಯ ಎಂಟನೇ ಪೀಳಿಗೆಯ ಪ್ರಬಲ ಧ್ವನಿ ಉಸ್ತಾದ್ ಫಯಾಜ್ ಖಾನ್ (1968). ರಾಜಸ್ಥಾನದ ಈ ಶ್ರೀಮಂತ ಪರಂಪರೆಯನ್ನು ಕರ್ನಾಟಕದ ಮಣ್ಣಿನಲ್ಲಿ ಬೇರೂರುವಂತೆ ಮಾಡಿದ ಶ್ರೇಯಸ್ಸು ಇವರದ್ದು. ಇವರು ಸಾರಂಗಿ ವಾದಕರಷ್ಟೇ ಅಲ್ಲದೆ, ಉತ್ತಮ ಗಾಯಕರು ಮತ್ತು ತಬಲಾ ವಾದಕರೂ ಆಗಿದ್ದಾರೆ. ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತ, ನಾಟಕ ಮತ್ತು ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ಬೆಂಗಳೂರಿನಲ್ಲಿ ಸಾರಂಗಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿ, ಅಳಿವಿನ ಅಂಚಿನಲ್ಲಿರುವ ಸಾರಂಗಿ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net