ಜೆನ್​ಜಿ ಮಕ್ಕಳು ವೈಭವ್​ ಸೂರ್ಯವಂಶಿಯನ್ನು ನೋಡಿ ಕಲಿಯಬೇಕು: ವಂಡರ್​ ಕಿಡ್​ ಹೊಗಳಿಗೆ ಪ್ರಧಾನಿ ಮೋದಿ! Vaibhav Sooryavanshi

ಜೆನ್​ಜಿ ಮಕ್ಕಳು ವೈಭವ್​ ಸೂರ್ಯವಂಶಿಯನ್ನು ನೋಡಿ ಕಲಿಯಬೇಕು: ವಂಡರ್​ ಕಿಡ್​ ಹೊಗಳಿಗೆ ಪ್ರಧಾನಿ ಮೋದಿ! Vaibhav Sooryavanshi
ಜೆನ್​ಜಿ ಮಕ್ಕಳು ವೈಭವ್​ ಸೂರ್ಯವಂಶಿಯನ್ನು ನೋಡಿ ಕಲಿಯಬೇಕು: ವಂಡರ್​ ಕಿಡ್​ ಹೊಗಳಿಗೆ ಪ್ರಧಾನಿ ಮೋದಿ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ
  • ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾದ 15 ವರ್ಷದ ಬಿಹಾರದ ಬಾಲಕ
  • ವೈಭವ್ ಸೂರ್ಯವಂಶಿ ಅವರ ಆಟದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ ಮೋದಿ
  • ವೈಭವ್​ ಉದಾಹರಣೆ ಕೊಟ್ಟು ಜೆನ್​ಜಿ ಮಕ್ಕಳಿಗೆ ಮಹತ್ವದ ಸಲಹೆ ನೀಡಿದ ನಮೋ
ನವದೆಹಲಿ: ಕ್ರಿಕೆಟ್​ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಬಿಹಾರ ಮೂಲದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Sooryavanshi ) ಇದೀಗ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಜೂನ್ 26 ರಿಂದ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ಸಜ್ಜಾಗಿರುವ ಈ ಯುವ ಪ್ರತಿಭೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಮಹತ್ವದ ಕಾಮೆಂಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇಡೀ ದೇಶದ ಗಮನ ಸೆಳೆಯುತ್ತಿವೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 'ರಿಪಬ್ಲಿಕ್ ಸಮ್ಮಿಟ್ 2026'ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಆಟದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶೀಘ್ರ ಮತ್ತು ಆಕ್ರಮಣಕಾರಿ ನಿರ್ಧಾರಗಳಿಗೆ ಹೆಸರಾಗಿರುವ ಮೋದಿ ಸರ್ಕಾರವು, ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರನ ವೇಗದ ಬ್ಯಾಟಿಂಗ್ ಶೈಲಿ ಹಾಗೂ ತಮ್ಮ ಸರ್ಕಾರದ ಕಾರ್ಯವೈಖರಿ ನಡುವಿನ ಸಾಮ್ಯತೆಯನ್ನು ಗುರುತಿಸಿದ್ದು, ದೇಶದ ಆರ್ಥಿಕ ರೂಪಾಂತರ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ವೈಭವ್ ಅವರ ಉದಾಹರಣೆಯನ್ನು ನೀಡಿದ್ದಾರೆ.
ಸಮ್ಮೇಳನದಲ್ಲಿ ಮಾತನಾಡಿದ ನರೇಂದ್ರ ಮೋದಿ, ನನ್ನ ದೇಶದ ಯುವಕರು ಅವರು ನಿಜವಾಗಿ ಯಾರೆಂಬುದನ್ನು ಗುರುತಿಸಬೇಕಿದೆ. ನಮ್ಮ 'ಜೆನ್ ಜಿ' (Gen Z) ಪೀಳಿಗೆಯೂ ಇದನ್ನು ಬೇಗನೆ ಗ್ರಹಿಸಬೇಕಾಗಿದೆ, ಒಂದು ವೇಳೆ ಅವರು ಶೀಘ್ರವಾಗಿ ಅರ್ಥಮಾಡಿಕೊಳ್ಳದಿದ್ದರೆ, ಸೂರ್ಯವಂಶಿ ಈಗಾಗಲೇ ನಿಮ್ಮ ಎದುರಿಗಿದ್ದಾರೆ ಮತ್ತು ಅವರು ವಿಷಯಗಳನ್ನು ಅತ್ಯಂತ ವೇಗವಾಗಿ ಮನವರಿಕೆ ಮಾಡಿಕೊಡುತ್ತಾರೆ ಎಂದು ಪ್ರಧಾನಿ ಮೋದಿ ಅವರು ವೈಭವ್​ ಹೆಸರನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಮತ್ತೊಂದೆಡೆ, ಐರ್ಲೆಂಡ್ ವಿರುದ್ಧದ ಸರಣಿಗಾಗಿ ಭಾರತ ತಂಡವು ಈಗಾಗಲೇ ಐರ್ಲೆಂಡ್‌ ತಲುಪಿದ್ದು, ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಅವರು ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ (RR) ಪರ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಕೇವಲ ಎರಡು ವರ್ಷಗಳ ಹಿಂದೆ ದೇಶಿ ಕ್ರಿಕೆಟ್‌ನಲ್ಲಿ ಅಷ್ಟಾಗಿ ಪರಿಚಿತರಿಲ್ಲದ ಈ 15 ವರ್ಷದ ಯುವ ಆಟಗಾರ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದು ಅತ್ಯಂತ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಇಂಡಿಯಾ-ಎ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭರ್ಜರಿ ಇನ್ನಿಂಗ್ಸ್ ಆಡಿ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಇವರ ಸಾಧನೆಗೆ ಮತ್ತೊಂದು ಗರಿಯಾಗಿದೆ.
ಐರ್ಲೆಂಡ್ ವಿರುದ್ಧ ಮುಂಬರಲಿರುವ ಟಿ20 ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದು, ಈ ಸರಣಿಯಲ್ಲಿ ಅವರು ಮತ್ತೊಬ್ಬ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಜೂನ್ 26 ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಭಾರತದ ಪರ ಕಣಕ್ಕಿಳಿಯಲಿರುವ ವೈಭವ್, ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಇಡೀ ದೇಶದ ಗಮನ ಸೆಳೆದಿದ್ದು, ಅವರ ಮುಂದಿನ ಪ್ರದರ್ಶನದ ಮೇಲೆ ಭಾರಿ ನಿರೀಕ್ಷೆಗಳಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net