ಜೆನ್​ಝಿ ನಮ್ಮ ಮಕ್ಕಳು, ಅವರಿಗಿಂತ ನನಗೆ ಯಾವುದೇ ಹುದ್ದೆ ಮುಖ್ಯವಾಗಿರಲಿಲ್ಲ; ಧರ್ಮೇಂದ್ರ ಪ್ರಧಾನ್ | Dharmendra Pradhan

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
Published on
ಭುವನೇಶ್ವರ: ನೀಟ್ ಪತ್ರಿಕೆ ಸೋರಿಕೆ ವಿಷಯದ ಕುರಿತಾದ ಪ್ರತಿಭಟನೆಯ ಸಂದರ್ಭದಲ್ಲಿ ಜೆನ್​ ಝಿ ಅನ್ನು ಕೆಲವರು ತಪ್ಪು ದಾರಿಗೆಳೆಯಲು ಪ್ರಯತ್ನಿಸಿದ್ದರು, ಅವರು ನಮ್ಮ ಮಕ್ಕಳು, ಅವರಿಗಿಂತ ನನಗೆ ಯಾವುದೇ ಹುದ್ದೆ ಮುಖ್ಯವಾಗಿರಲಿಲ್ಲ. ಹಾಗಾಗಿ ರಾಜೀನಾಮೆ ನೀಡಬೇಕಾಯಿತು ಎಂದು ಶನಿವಾರ(ಆ. 08) ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಹೇಳಿದ್ದಾರೆ.
ಕಳೆದ ಜು. 25ರಂದು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರಡು ವಾರದ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಭುವನೇಶ್ವರದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಧರ್ಮೇಂದ್ರ ಪ್ರಧಾನ್ ಈ ಹೇಳಿಕೆ ನೀಡಿದ್ದಾರೆ.
ಜನರಲ್ ಝೆಡ್ ನಮ್ಮ ಮಕ್ಕಳು. ಕೆಲವರು ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಆಗ ನನಗೆ ಯಾವುದೇ ವೈಯಕ್ತಿಕ ಸಮಸ್ಯೆಗಳಿರಲಿಲ್ಲ. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ ಎರಡು ಕೋಟಿ ಮಕ್ಕಳು ಜನಿಸುತ್ತಾರೆ. ಕಳೆದ 10 ವರ್ಷಗಳಲ್ಲಿ, 20 ಕೋಟಿ ಮಕ್ಕಳು ಜನಿಸಿದ್ದಾರೆ. ಅವರಿಗೆ ಆಕಾಂಕ್ಷೆಗಳಿವೆ, ಮತ್ತು ಅವರು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುತ್ತಾರೆ . ಆ ಹುದ್ದೆ ನನಗೆ ಮುಖ್ಯವಾಗಿರಲಿಲ್ಲ. ನಾನೇ ಪ್ರಧಾನಿಯವರನ್ನು ಭೇಟಿ ಮಾಡಿ ರಾಜೀನಾಮೆಗೆ ನಿರ್ಧರಿಸಿದೆ ಎಂದಿದ್ದಾರೆ.
ರೈರಾಖೋಲ್‌ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಪ್ರಧಾನ್ ಅವರು, ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರನ್ನು ಟೀಕಿಸಿದ್ದು, ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ಧರ್ಮೇಂದ್ರ ಪ್ರಧಾನ್ ಗೋ ಬ್ಯಾಕ್ ಎಂಬ ಬಿಜೆಡಿ ಕಾರ್ಯಕರ್ತರ ಪ್ರತಿಭಟನೆ ಮತ್ತು ಘೋಷಣೆಗಳಿಂದ ನಾನು ತೊಂದರೆಗೊಳಗಾಲಿಲ್ಲ ಎಂದು ಕಿಡಿಕಾರಿದ್ದಾರೆ.

ನಾನು ರೈತನ ಮಗ. ನೀವು ನನ್ನನ್ನು ವಾಪಸ್ ಹೋಗಲು ಹೇಳಿದರೂ ನಾನು ವಾಪಸ್ ಬರುತ್ತೇನೆ. ನವೀನ್ ಬಾಬು ನನ್ನನ್ನು ಒಡಿಶಾದ ಜನರಿಗೆ ಅವಮಾನ ಮತ್ತು ಕೆಟ್ಟ ವ್ಯಕ್ತಿ ಎಂದು ಕರೆಯುತ್ತಾರೆ. ನಾನು ಒಡಿಶಾದ ಜನರನ್ನು ನಾಚಿಕೆಪಡಿಸುವ ಏನಾದರೂ ಮಾಡಿದ್ದೇನೆಯೇ?, ನಾನು ರಾಜ್ಯಕ್ಕೆ ಕೀರ್ತಿ ತರುತ್ತಿಲ್ಲದಿರಬಹುದು, ಆದರೆ ನನ್ನ ಕೆಲಸದಿಂದ ನಾನು ಎಂದಿಗೂ ಜನರನ್ನು ಅವಮಾನಿಸಿಲ್ಲ. ರಾಜ್ಯದ ಖ್ಯಾತಿಗೆ ಕಳಂಕ ತರುವ ಯಾವುದೇ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net