ಸಂಸದ ಗೌರವ್ ಗೊಗೊಯ್ಗೆ 'ಪಾಕ್' ನಂಟು..? ನಾಳೆ ಹೊರಬೀಳಲಿದೆ ಅಸ್ಸಾಂ ಸರ್ಕಾರದ ಸ್ಫೋಟಕ ತನಿಖಾ ವರದಿ | Gaurav Gogoi Pak link
Gaurav Gogoi Pak link | ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Published on:
Copied
Follow Us
ದಿಸ್ಪುರ್: ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪಾಕಿಸ್ತಾನ ಸಂಪರ್ಕದ (Gauravgogoipaklink) ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ರಾಜಕೀಯದ ಮೇಲೆ ಪರಿಣಾಮ ಬೀರುವುದರ ಬಗ್ಗೆ ನಂತರ ಯೋಚಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಶರ್ಮಾ, ಈ ಇಡೀ ವಿಷಯದಲ್ಲಿ ಇಬ್ಬರು ವ್ಯಕ್ತಿಗಳು, ಒಬ್ಬ ಪಾಕಿಸ್ತಾನಿ ಪ್ರಜೆ ಮತ್ತು ಒಬ್ಬ ಬ್ರಿಟಿಷ್ ಪ್ರಜೆ (ಸಂಸದರೊಬ್ಬರ ಪತ್ನಿ) ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿದ್ದು, ಆದರೆ ಈ ವೇಳೆ ಯಾರ ಹೆಸರನ್ನು ಸಹ ಶರ್ಮಾ ಉಲ್ಲೇಖಿಸಲಿಲ್ಲ.
ರಾಜ್ಯ ಸಚಿವ ಸಂಪುಟ ಇಂದು ಎಸ್ಐಟಿ ವರದಿಯನ್ನು ಚರ್ಚಿಸಿ ಮುಂದಿನ ಕ್ರಮವನ್ನು ನಿರ್ಧರಿಸಲಿದೆ, ಪ್ರಸ್ತುತ ನಡೆಯುತ್ತಿರುವ ತನಿಖೆಗೆ ರಾಜಕೀಯ ಬಣ್ಣ ಬಳೆಯುವುದು ಬೇಡ, ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ರಾಜಕೀಯದ ಮೇಲೆ ಇದರ ಪ್ರಭಾವ ಗೌಣ ಎಂದು ಹೇಳಿದರು.
ನಮ್ಮ ತನಿಖೆಯಲ್ಲಿ ಮಿತಿಗಳಿವೆ. ಈ ಮಿತಿಗಳಲ್ಲಿ ನಾವು ಸಂಗ್ರಹಿಸಿರುವ ಮಾಹಿತಿಯು ಬಹಳ ಮುಖ್ಯವಾಗಿದ್ದು, ಅದು ಎನ್ಐಎ, ಐಬಿ ಅಥವಾ ಸಿಬಿಐಗೆ ತಲುಪಿದಾಗ, ಅವರು ಈ ಪ್ರಕರಣವನ್ನು ಮುಂದುವರಿಸುತ್ತಾರೆ ಎಂದು ತಿಳಿಸಿದರು.
ನಾವು ಮಾಡಿರುವುದು ಕೇವಲ 10 ಪ್ರತಿಶತ, ಉಳಿದ 90 ಪ್ರತಿಶತ ಇನ್ನೂ ಪತ್ತೆಯಾಗಿಲ್ಲ, ಪಾಕಿಸ್ತಾನದೊಂದಿಗೆ ಗೊಗೊಯ್ರ ಸಂಪರ್ಕದ ಆರೋಪಗಳು ಮೊದಲು ಕೇಳಿ ಬಂದಾಗ ಸ್ಥಳೀಯ ಟಿವಿ ಚಾನೆಲ್ಗಳ ಮುಂದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಐಎಸ್ಐ ಜೊತೆ ಗೊಗೊಯ್ ಪತ್ನಿಯ ಸಂಪರ್ಕದ ಆರೋಪದ ಮೇಲೆ ಸಂಸದ ಗೊಗೊಯ್ ವಿರುದ್ಧ ತನಿಖೆ ನಡೆಯುತ್ತಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕಾಂಗ್ರೆಸ್ ಸಂಸದರ ಬ್ರಿಟಿಷ್ ಪತ್ನಿ ಎಲಿಜಬೆತ್ ಕೋಲ್ಬರ್ನ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾದ ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಹಸ್ತಕ್ಷೇಪದ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಎಸ್ಐಟಿಯನ್ನು ರಚಿಸಿತ್ತು.
ಸೆಪ್ಟೆಂಬರ್ 10 ರಂದು ಎಸ್ಐಟಿ ತನ್ನ ವರದಿಯನ್ನು ಗೃಹ ಸಚಿವರು ಆಗಿರುವ, ಸಿಎಂ ಶರ್ಮಾ ಅವರಿಗೆ ಸಲ್ಲಿಸಿತು, ಆರಂಭದಲ್ಲಿ ಮುಖ್ಯಮಂತ್ರಿಗಳು ಗೊಗೊಯ್ ವಿರುದ್ಧದ ಆರೋಪಗಳಿಗೆ ಪುರಾವೆಗಳನ್ನು ಒದಗಿಸಲು ದಿನಾಂಕವನ್ನು ನಿಗದಿಪಡಿಸಿದ್ದರು.
ಗೊಗೊಯ್ ತಿರುಗೇಟು..
ಸಿಎಂ ಹಿಮಂತ್ ಬಿಸ್ವಾ ಶರ್ಮಾ ಆರೋಪಗಳಿಗೆ ತಿರುಗೇಟು ನೀಡಿರುವ ಸಂಸದ ಗೊಗೊಯ್, ಅವರ ಹೇಳಿಕೆಗಳು ಹಾಸ್ಯಾಸ್ಪದ, ಆಧಾರರಹಿತ, ಹುಚ್ಚುತನ ಮತ್ತು ಅಸಂಬದ್ಧವಾಗಿವೆ. ಅವರು ಸತ್ಯ ಮಾತನಾಡದೆ ಐಟಿ ಸೆಲ್ ಟ್ರೋಲ್ನಂತೆ ವರ್ತಿಸುತ್ತಿದ್ದಾರೆ ಎಂದು ಗೊಗೊಯ್ ತಿಳಿಸಿದ್ದಾರೆ(ಏಜೆನ್ಸೀಸ್).