ಸಂಸತ್ತಿನ ಎರಡೂ ಮನೆಯಲ್ಲಿ ಜಿ ರಾಮ್​ ಜಿ ಮಸೂದೆ ಪಾಸ್​..ವಿಪಕ್ಷ ಸದಸ್ಯರಿಂದ ಸಭಾತ್ಯಾಗ | G RAM G Bill

G RAM G Bill | ಕೇಂದ್ರ ಸರ್ಕಾರದ ನೂತನ ಜಿ ರಾಮ್​ ಜಿ ಮಸೂದೆ ಅಂಗೀಕಾರ
G RAM G Bill | ಕೇಂದ್ರ ಸರ್ಕಾರದ ನೂತನ ಜಿ ರಾಮ್​ ಜಿ ಮಸೂದೆ ಅಂಗೀಕಾರ
Published on
G RAM G Bill: ಗುರುವಾರ ಮಧ್ಯಾಹ್ನ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಕೇಂದ್ರ ಸರ್ಕಾರದ ನೂತನ ಜಿ ರಾಮ್​ ಜಿ ಮಸೂದೆಯನ್ನು, ಅದೇ ದಿನ ಮಧ್ಯರಾತ್ರಿ ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಈ ಹೊಸ ಕಾನೂನು ಯುಪಿಎ ಸರ್ಕಾರದ ಪ್ರಮುಖ MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾಯ್ದೆ) ವನ್ನು ಬದಲಾಯಿಸುತ್ತದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮೇಲ್ಮನೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು ಮತ್ತು ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ವಿಪಕ್ಷಗಳ ಸದಸ್ಯರು ರಾಜ್ಯಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಳಿಕ ಸಭಾತ್ಯಾಗ ಮಾಡಿದರು.
ಮೊದಲು ಮಸೂದೆಯನ್ನು ಸ್ಥಾಯಿ ಸಮಿತಿಗೆ ವರ್ಗಾಯಿಸುವಂತೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು, ಆದರೆ ಬಳಿಕ ಸಂಪೂರ್ಣವಾಗಿ ಖಾಯ್ದೆಯನ್ನೇ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಮಸೂದೆಯ ಕುರಿತು ಮಾತನಾಡಿದ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಬಡ ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು. ಬಡವರನ್ನು ಇನ್ನಷ್ಟು ದುರ್ಬಲಗೊಳಿಸಲು ಸರ್ಕಾರ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಳ್ಳುತ್ತಿದೆ, ಇದರಿಂದಾಗಿ ಅವರು ಗುಲಾಮಗಿರಿಯನ್ನು ಮುಂದುವರಿಸುತ್ತಿದ್ದಾರೆ ಎಂದರು.
ಕೇಂದ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನರೇಗಾ ಯೋಜನೆಯನ್ನು ಪುನಃಸ್ಥಾಪಿಸಲಾಗುವುದು ಎಂದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ, ಪ್ರಸ್ತುತ ಸರ್ಕಾರವು ಮಹಾತ್ಮ ಗಾಂಧಿ ಹೆಸರನ್ನು ಕೊನೆಗೊಳಿಸುವ ಉದ್ದೇಶ ಹೊಂದಿದೆ, ಆದರೆ ಅದು ಎಂದಿಗೂ ಸಾಧ್ಯವಿಲ್ಲ, ನಮ್ಮ ಸರ್ಕಾರ ನಿಮ್ಮ ಗೋಡ್ಸೆ ತರಹದ ಪ್ರವೃತ್ತಿಗಳನ್ನು ಕೊನೆಗೊಳಿಸುತ್ತದೆ ಎಂದು ಹೇಳಿದರು.

ಚುನಾವಣೆಗಾಗಿ ಗಾಂಧಿಜಿ ಹೆಸರು ಬಳಕೆ: ಶಿವರಾಜ್ ಸಿಂಗ್ ಚೌಹಾಣ್

ಮಸೂದೆಯ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, MGNREGA ಮತ್ತು ಅದರ ರಾಜಕೀಯ ಪರಂಪರೆಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಪ್ರಸ್ತಾವಿತ ಮಸೂದೆಯನ್ನು ಸಮರ್ಥಿಸಿಕೊಂಡರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಜಾರಿಗೆ ಬರುವ ಮೊದಲೇ ಹಿಂದಿನ ಸರ್ಕಾರಗಳು ಉದ್ಯೋಗ ಖಾತರಿ ಯೋಜನೆಗಳನ್ನು ಪರಿಚಯಿಸಿದ್ದವು, 2009 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾ ಯೋಜನೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಸಚಿವರ ಮಾತಿನ ಮಧ್ಯೆ ವಿಪಕ್ಷಗಳ ಸದಸ್ಯರು ನಮಗೆ MGNREGA ಬೇಕು ಎಂದು ಘೋಷಣೆ ಕೂಗುತ್ತಾ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಿದರು. ಕೆಲವು ಸದಸ್ಯರು ಸದನದ ಬಾವಿಗಿಳಿದು, ಕಾಗದಪತ್ರಗಳನ್ನು ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದಾಗ ಪ್ರತಿಭಟನೆ ವಿಕೋಪಕ್ಕೆ ಹೋಯಿತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯೋಜನೆಗಳ ಹೆಸರನ್ನು ತಮ್ಮ ಇಚ್ಛೆಯಂತೆ ಬದಲಾಯಿಸುತ್ತಿದೆ ಎಂಬ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಗಳನ್ನು ತಿರಸ್ಕರಿಸಿದ ಚೌಹಾಣ್, ಈ ಆರೋಪಕ್ಕೆ ಪ್ರತಿಯಾಗಿ, ನೆಹರು-ಗಾಂಧಿ ಕುಟುಂಬದ ಸದಸ್ಯರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದರು, ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹೆಸರುಗಳನ್ನು ಜೋಡಿಸುವ ಸುದೀರ್ಘ ಇತಿಹಾಸ ಹೊಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರ ಆದರ್ಶಗಳಿಗೆ ದ್ರೋಹ ಬಗೆದಿದೆ, ಭಾರತದ ವಿಭಜನೆಯನ್ನು ಒಪ್ಪಿಕೊಂಡಿದೆ, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸುವಂತೆ ಹೇಳಿದ್ದ ಗಾಂಧಿ ಮಾತನ್ನು ನಿರ್ಲಕ್ಷಿಸಿದೆ, ಕಾಂಗ್ರೆಸ್ ಸ್ವತಃ ಗಾಂಧಿ ತತ್ವಗಳನ್ನು ಕೊಂದಿತು ಎಂದು ಹೇಳಿದರು. ಎಂಜಿಎನ್‌ಆರ್‌ಇಜಿಎ ಅನುಷ್ಠಾನದಲ್ಲಿನ ನ್ಯೂನತೆಗಳನ್ನು ಉಲ್ಲೇಖಿಸಿದ ಚೌಹಾಣ್, ಹಲವಾರು ರಾಜ್ಯಗಳು ಕಾರ್ಮಿಕರ ಮೇಲೆ ಅಸಮಾನವಾಗಿ ಹೆಚ್ಚು ಖರ್ಚು ಮಾಡಿ, ಸಾಮಗ್ರಿಗಳ ಸಂಗ್ರಹಣೆಯನ್ನು ನಿರ್ಲಕ್ಷಿಸಿವೆ, ಇದು ಯೋಜನೆಯಡಿಯಲ್ಲಿ ರಚಿಸಲಾದ ಸ್ವತ್ತುಗಳ ಗುಣಮಟ್ಟ ಮತ್ತು ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಏನಿದು ಹೊಸ ಬಿಲ್​..?

ಈ ಮಸೂದೆಯು ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದ್ದು, ಅಲ್ಲಿ ವಯಸ್ಕ ಸದಸ್ಯರು ಕೌಶಲ್ಯರಹಿತ ದೈಹಿಕ ಕೆಲಸವನ್ನು ಕೈಗೊಳ್ಳಲು ಸ್ವಯಂಸೇವಕರಾಗುತ್ತಾರೆ. ಕಾಯ್ದೆ ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳೊಳಗೆ, ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಒಂದು ಯೋಜನೆಯನ್ನು ರೂಪಿಸಬೇಕಾಗುತ್ತದೆ. ಇದರ ಹಣಕಾಸಿನ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲಾಗುವುದು. ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಇದು 90:10 ರಷ್ಟಿದ್ದರೆ, ಇತರ ಎಲ್ಲಾ ರಾಜ್ಯಗಳು ಮತ್ತು ಶಾಸಕಾಂಗ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ರಷ್ಟಿರುತ್ತದೆ. ಶಾಸಕಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net