ಎಐ ಎಂಬುದು ಈಗ ಯಂತ್ರಗಳನ್ನಷ್ಟೇ ಅಲ್ಲ, ಜೈವಿಕ ತಂತ್ರಜ್ಞಾನವನ್ನೂ ಬದಲಾಯಿಸುತ್ತಿದೆ. ಎಐ ಚಾಲಿತ ಟ್ರಾಮಾ ಚಿಕಿತ್ಸೆ, ಸಂಶ್ಲೇಷಿತ ರಕ್ತ (ಸಿಂಥೆಟಿಕ್ ಬ್ಲಡ್) ಮತ್ತು ಪುನರುತ್ಪಾದಕ ಔಷಧವನ್ನು (ರೀಜನರೇಟಿವ್ ಮೆಡಿಸಿನ್) ಅಮೆರಿಕದ ಮಿಲಿಟರಿ ಆವಿಷ್ಕರಿಸುತ್ತಿದೆ. ಯುದ್ಧಭೂಮಿಯಲ್ಲಿ ಜೀವಗಳನ್ನು ಉಳಿಸಲು ಈ ತಂತ್ರಜ್ಞಾನಗಳು ಸಹಾಯ ಮಾಡಲಿವೆ. ಆದರೆ, ಚೀನಾ ಈ ವಿಷಯದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ ಎಂಬ ಆತಂಕಕಾರಿ ವರದಿಗಳಿವೆ. ಚೀನಾ ತನ್ನ ಮಿಲಿಟರಿಯಲ್ಲಿ ಜೈವಿಕ ತಂತ್ರಜ್ಞಾನವನ್ನು ಬಳಸುವುದರಲ್ಲಿ ಬಹಳ ಮುಂದಿದೆ. ಅಲ್ಲಿನ ಮಿಲಿಟರಿ ಆಸ್ಪತ್ರೆಗಳಲ್ಲಿ ತಳಿ ಸಂಪಾದನೆಯ (ಜೀನ್ ಎಡಿಟಿಂಗ್) ಮೇಲೆ ಮಹತ್ವದ ಸಂಶೋಧನೆ ನಡೆಯುತ್ತಿದೆ. ಜೀನ್ ಎಡಿಟೆಡ್ ಸೈನಿಕರ ವಿಷಯದಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ. ಎಐ ಮತ್ತು ಜೈವಿಕ ತಂತ್ರಜ್ಞಾನದ ಸಂಯೋಜನೆಯಿಂದ ಉಂಟಾಗುವ ಗಂಭೀರ ನೈತಿಕ ಅಪಾಯಗಳೂ ಇದರಲ್ಲಿವೆ. ಮನುಷ್ಯರ ಸಾಮರ್ಥ್ಯಗಳನ್ನು ಹೆಚ್ಚಿಸಲು ಜೈವಿಕ ವಿಜ್ಞಾನವನ್ನು ಬಳಸುವುದರಿಂದ, ಭವಿಷ್ಯದಲ್ಲಿ ಸೈನಿಕರಿಗೆ ಸುಧಾರಿತ ಶಕ್ತಿ, ವೇಗ, ಅಥವಾ ಚೇತರಿಕೆಯ ಸಾಮರ್ಥ್ಯ ಬರುತ್ತದೆ. ಇದರಿಂದ ಸಾಂಪ್ರದಾಯಿಕ ಯುದ್ಧ ನಿಯಮಗಳೆಲ್ಲವೂ ತಿರುವುಮುರುವಾಗುತ್ತವೆ.