ಮತ್ತೆ ಇಂಧನ ಬೆಲೆ ಏರಿಕೆ ಶಾಕ್; 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್​ ದರ ಹೆಚ್ಚಳ | Fuel price hike

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೇಶಾದ್ಯಂತ ಮತ್ತೆ ಇಂಧನ ಬೆಲೆ(Fuel price hike) ಏರಿಕೆಯಾಗಿದ್ದು, ಶನಿವಾರ(ಮೇ 23) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 91 ಪೈಸೆಯವರೆಗೆ ಹೆಚ್ಚಿಸಲಾಗಿದ್ದು, 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿಗೆ ಬೆಲೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಏರಿಕೆಯಾಗಿ 98.64 ರೂ.ನಿಂದ 99.51 ರೂ.ಗೆ ತಲುಪಿದೆ. ಡೀಸೆಲ್ ಬೆಲೆ 91 ಪೈಸೆ ಏರಿಕೆಯಾಗಿ 91.58 ರೂ.ನಿಂದ 92.49 ರೂ.ಗೆ ತಲುಪಿದೆ. ಮೇ 15ರಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಗಿತ್ತು , ನಂತರ ಮೇ 19 ರಂದು 90 ಪೈಸೆ ಹೆಚ್ಚಿಸಲಾಗಿತ್ತು.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಇಂಧನ ಅಭಾವದ ಬಿಕ್ಕಟ್ಟು ಮತ್ತು ಕಚ್ಚಾತೈಲ ಬ್ಯಾರಲ್​ ಬೆಲೆಗಳ ಏರಿಕೆಯಿಂದಾದ ನಷ್ಟವನ್ನು ತುಂಬಿಕೊಳ್ಳಲು ತೈಲ ಕಂಪನಿಗಳು ಇಂಧನ ಬೆಲೆ ಹೆಚ್ಚಿಸಿವೆ. ಮೇ 15ರಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.  ಗೋಧಿ ಕೊಯ್ಲು ಮತ್ತು ಭತ್ತ ಬಿತ್ತನೆ ಋತುಗಳಿಗೆ ಮುಂಚಿತವಾಗಿ ಹಲವಾರು ರಾಜ್ಯಗಳಲ್ಲಿ ಇಂಧನ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಬೆಲೆ ಪರಿಷ್ಕರಣೆ ಮಾಡಲಾಗಿದೆ . 
ಭಾರತದ ತೈಲ ಆಮದು ಕಡಿಮೆ ಮಾಡಲು ಮತ್ತು ವಿದೇಶಿ ವಿನಿಮಯ ನಿಕ್ಷೇಪಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುವ ಮೂಲಕ ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಇಂಧನ ಬಳಕೆಯನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಒತ್ತಾಯಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net