ವಿಜಯ್ ಪಾಲಿಗೆ ಒಲಿಯುತ್ತಾ ರಾಜಯೋಗ..? ಸಿನಿಮಾ ತಾರೆಯರ ಚೊಚ್ಚಲ ಚುನಾವಣಾ ಫಲಿತಾಂಶದ ಹಳೇ ಅಂಕಿ-ಅಂಶಗಳು ಇಲ್ಲಿವೆ ನೋಡಿ! | Tamil Nadu Election

Tamil Nadu Election | ಸಿನಿಮಾ ತಾರೆಯರ ಚೊಚ್ಚಲ ಚುನಾವಣಾ ಫಲಿತಾಂಶದ ಹಳೇ ಅಂಕಿ-ಅಂಶಗಳು ಇಲ್ಲಿವೆ ನೋಡಿ!
Tamil Nadu Election | ಸಿನಿಮಾ ತಾರೆಯರ ಚೊಚ್ಚಲ ಚುನಾವಣಾ ಫಲಿತಾಂಶದ ಹಳೇ ಅಂಕಿ-ಅಂಶಗಳು ಇಲ್ಲಿವೆ ನೋಡಿ!
Published on
Tamil Nadu Election: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಅಧಿಕಾರದ ಗದ್ದುಗೆ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಈಗ ನಟ ವಿಜಯ್ ರಾಜಕೀಯ ಪ್ರವೇಶವು ಅಂತಹದ್ದೇ ಒಂದು ಕುತೂಹಲಕ್ಕೆ ನಾಂದಿ ಹಾಡಿದ್ದು, ಮೇ 4 ರಂದು ಹೊರಬೀಳಲಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ದಳಪತಿ ರಾಜಕೀಯ ಭವಿಷ್ಯ ನಿರ್ಧಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದಿನ ಸಿನಿಮಾ ಐಕಾನ್‌ಗಳ ರಾಜಕೀಯ ಪಯಣದ ಒಂದು ಸಮಗ್ರ ವರದಿ ಇಲ್ಲಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಸಿನಿಮಾ ರಂಗದ ಪ್ರಭಾವ ಅಚ್ಚಳಿಯದಂತೆ ಉಳಿದಿದೆ. ಎಂ.ಜಿ. ರಾಮಚಂದ್ರನ್ (MGR) ಅವರು 1977 ರಲ್ಲಿ ಎಐಎಡಿಎಂಕೆ ಪಕ್ಷದ ಮೂಲಕ ಮೊದಲ ಚುನಾವಣೆಯಲ್ಲೇ ಶೇ. 30.4 ರಷ್ಟು ಮತಗಳನ್ನು ಗಳಿಸಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಅಪ್ರತಿಮ ಯಶಸ್ಸು ಕಂಡರು. ಅದೇ ಮಾದರಿಯ ಭರ್ಜರಿ ಎಂಟ್ರಿ ನೀಡಿದ್ದು ಆಂಧ್ರಪ್ರದೇಶದ ಎನ್.ಟಿ. ರಾಮರಾವ್, ತೆಲುಗು ದೇಶಂ ಪಕ್ಷದ ಮೂಲಕ ಚೊಚ್ಚಲ ಚುನಾವಣೆಯಲ್ಲೇ ಶೇ. 46.2 ರಷ್ಟು ಮತಗಳೊಂದಿಗೆ 202 ಸ್ಥಾನಗಳನ್ನು ಗೆದ್ದು ನೇರವಾಗಿ ಅಧಿಕಾರಕ್ಕೇರಿದರು. ಈ ಇಬ್ಬರು ನಟರು ರಾಜಕೀಯ ಪ್ರವೇಶಿಸಿದ ಮೊದಲ ಯತ್ನದಲ್ಲೇ ವಿಜಯಮಾಲೆ ಧರಿಸಿದ ಅಪರೂಪದ ನಾಯಕರು.
ಆದರೆ, ಎಲ್ಲಾ ತಾರೆಯರಿಗೂ ಇಂತಹ ಅದೃಷ್ಟ ಒಲಿಯಲಿಲ್ಲ. ಮೆಗಾಸ್ಟಾರ್ ಚಿರಂಜೀವಿ 2009 ರಲ್ಲಿ ಪ್ರಜಾ ರಾಜ್ಯಂ ಪಕ್ಷದ ಮೂಲಕ ಶೇ. 16.3 ರಷ್ಟು ಮತಗಳನ್ನು ಪಡೆದು 18 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರಾದರೂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು. ತಮಿಳುನಾಡಿನಲ್ಲಿ ವಿಜಯಕಾಂತ್ ಡಿಎಂಡಿಕೆ ಪಕ್ಷದ ಮೂಲಕ 2006 ರಲ್ಲಿ ಶೇ. 8.5 ರಷ್ಟು ಮತಗಳನ್ನು ಪಡೆದು ರಾಜ್ಯ ರಾಜಕೀಯದಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದರು.
ಇನ್ನು ಇತ್ತೀಚಿನ ವರ್ಷಗಳಲ್ಲಿ ಪವನ್ ಕಲ್ಯಾಣ್ ಜನ ಸೇನಾ ಪಕ್ಷ 2019 ರಲ್ಲಿ ಕೇವಲ ಶೇ. 5.53 ರಷ್ಟು ಮತ ಗಳಿಸಿ ಒಂದು ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕಮಲ್ ಹಾಸನ್​ರ ಮಕ್ಕಳ್ ನೀಧಿ ಮೈಯಂ ಪಕ್ಷವು 2021 ರಲ್ಲಿ ಕೇವಲ ಶೇ. 2.6 ರಷ್ಟು ಮತಗಳನ್ನು ಪಡೆದು ಸಿನಿಮಾ ತಾರೆಯರಿಗೆ ರಾಜಕೀಯ ಅಷ್ಟು ಸುಲಭವಲ್ಲ ಎಂಬುದನ್ನು ಸಾಬೀತುಪಡಿಸಿತ್ತು. ಈಗ ವಿಜಯ್ ಅವರ ಸರದಿ. ನಿರ್ಗಮನ ಸಮೀಕ್ಷೆಗಳು ವಿಜಯ್​ರ ಪರವಾಗಿ ಧನಾತ್ಮಕವಾಗಿಯೇ ತೋರಿಸುತ್ತಿದ್ದು, ಅವರು ಎಂಜಿಆರ್ ಅಥವಾ ಎನ್‌ಟಿಆರ್ ಅವರಂತೆ ಇತಿಹಾಸ ನಿರ್ಮಿಸುತ್ತಾರಾ ಎಂಬುದು ಮೇ 4 ರಂದು ಸ್ಪಷ್ಟವಾಗಲಿದೆ. ಸಿನಿಮಾ ಮತ್ತು ರಾಜಕೀಯದ ಈ ಜುಗಲ್‌ಬಂದಿ ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಬರೆಯುವುದೇ ಎಂದು ಇಡೀ ದೇಶ ಕಾಯುತ್ತಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net