_1780423769366.webp?w=480&auto=format%2Ccompress&fit=max)
_1780423769366.webp?w=480&auto=format%2Ccompress&fit=max)
ದ್ವಿತೀಯ ಮಹಾಯುದ್ಧದಲ್ಲಿ ಗೆದ್ದರೂ ಸೋತಷ್ಟು ನಿತ್ರಾಣವಾಗಿಹೋಗಿದ್ದ ಬ್ರಿಟನ್ 2 ಶತಮಾನಗಳಿಂದ ಇದ್ದ ತನ್ನ ಜಾಗತಿಕ ದೊಡ್ಡಣ್ಣನ ಸ್ಥಾನವನ್ನು ಅಮೆರಿಕಕ್ಕೆ ಬಿಟ್ಟುಕೊಟ್ಟಿತು. ಹೀಗೆ ಹೊಸ ಸೂಪರ್ ಪವರ್ ಆದ ಅಮೆರಿಕಾ ಎದುರಾಳಿ ಸೋವಿಯೆತ್ ಯೂನಿಯನ್ಅನ್ನು ಶಕ್ತಿಹೀನಗೊಳಿಸಲು ಜಗತ್ತಿನೆಲ್ಲೆಡೆ ತಂತ್ರಗಳನ್ನು ಹೂಡತೊಡಗಿತ್ತು. ಏಷ್ಯಾದಲ್ಲಿ ತನ್ನ ತಂತ್ರಕ್ಕೆ ಸಹಯೋಗಿಯಾಗಿ ಭಾರತ ಜತೆಗೂಡಬೇಕೆಂದು ಅಧ್ಯಕ್ಷ ಹ್ಯಾರಿ ಟ್ರೂಮನ್ ವೀಳ್ಯ ಹಿಡಿದು ಬಂದಾಗ ಪ್ರಧಾನಿ ನೆಹರೂ ತಿರಸ್ಕರಿಸಿದರು. ವಿಧಿಯಿಲ್ಲದೇ ಟ್ರೂಮನ್ ಪಾಕಿಸ್ತಾನದತ್ತ ತಿರುಗಿದರು. ಆ ಹೊಸ ದೇಶ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಂಡಿತು. ಆಗಿನ ಪಶ್ಚಿಮ ಪಾಕಿಸ್ತಾನದಲ್ಲಿ ನೆಲೆಗಳನ್ನು ನಿರ್ವಿುಸಿಕೊಂಡು ಸೋವಿಯೆತ್ ಮೇಲೆ ಅಮೆರಿಕ ಕಣ್ಣಿಡಲು ಆರಂಭಿಸಿತು. ಹಾಗೆಯೇ ಅಂದಿನ ಪೂರ್ವ ಪಾಕಿಸ್ತಾನದ ನೆಲೆಗಳ ಮೂಲಕ ಚೀನಾದ ಮೇಲೆ ನಿಗಾ ಇಟ್ಟಿತು. ಇತ್ತ ನೆಹರೂ ಅಮೆರಿಕವನ್ನು ಬೈಯುತ್ತ ಸೋವಿಯೆತ್ ಜತೆ ಸ್ನೇಹ ಬೆಳೆಸಲು ಹೋದರು, ಹಿಂದಿ ಚೀನಿ ಭಾಯಿ ಭಾಯಿ ಎನ್ನುತ್ತಾ ಹೋದರು.
ಇಷ್ಟಾಗಿಯೂ ಅಮೆರಿಕದ ಸರ್ಕಾರಗಳು ಭಾರತವನ್ನು ಮರೆಯದೇ ಮುಂದೊಂದು ದಿನ ಅವಕಾಶ ಸಿಗಬಹುದೆಂದು ಕಾಯುತ್ತಿದ್ದವು. ಆ ಕಾಯುವಿಕೆ ವ್ಯರ್ಥವಾಗಲಿಲ್ಲ. 1962ರ ಯುದ್ಧದಲ್ಲಿ ಚೀನಿ ಭಾಯಿಯಿಂದ ಬಡಿಸಿಕೊಂಡ ನೆಹರೂಗೆ ಅಂತಾರಾಷ್ಟ್ರೀಯ ರಾಜಕಾರಣದ ಮೊದಲ ಪಾಠ ದಕ್ಕಿತು. ನೆಚ್ಚಿಕೊಂಡಿದ್ದ ಸೋವಿಯೆತ್ ಆಗ ಚೀನಾದ ಪರ ನಿಂತಾಗ; ಅಲಿಪ್ತ ಸ್ನೇಹಿತರಾದ ಈಜಿಪ್ಟ್, ಯುಗೋಸ್ಲಾವಿಯಾ, ಇಂಡೋನೇಷ್ಯಾ ಮುಂತಾದ ದೇಶಗಳು ಅಲಿಪ್ತವಾಗುಳಿದು ನೆಹರೂರನ್ನು ದಿಕ್ಕೆಡಿಸಿದಾಗ ಭಾರತದ ನೆರವಿಗೆ ಬಂದದ್ದು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್.
ಆಗ ದೆಹಲಿಯಲ್ಲಿ ತನ್ನ ಬಗ್ಗೆ ಮೂಡಿದ ಸದಭಿಪ್ರಾಯವನ್ನು ಉಪಯೋಗಿಸಿಕೊಂಡು ಅಮೆರಿಕ ನಮ್ಮ ಒಡಿಶಾದ ಕರಾವಳಿಯಲ್ಲಿ ತಾತ್ಕಾಲಿಕ ನೌಕಾಸೇನಾ ನೆಲೆ ಕಟ್ಟಿಕೊಳ್ಳುವ ಪರವಾನಗಿ ಪಡೆದುಕೊಂಡಿತು. ಹಿಮಾಲಯದಲ್ಲಿ ಅಣುಶಕ್ತಿಚಾಲಿತ ಬೇಹುಗಾರಿಕಾ ಉಪಕರಣವೊಂದನ್ನು ರಹಸ್ಯವಾಗಿ ಸ್ಥಾಪಿಸಿ ಟಿಬೆಟ್ನಲ್ಲಿ ಚೀನಿ ಚಟುವಟಿಕೆಗಳ ಮೇಲೆ ಕಣ್ಣಿಡಲು ಪ್ರಾರಂಭಿಸಿತು. (ಆ ಉಪಕರಣ ಆಮೇಲೆ ಹಿಮದಲ್ಲಿ ಉರುಳಿ ಎತ್ತಲೋ ಮಾಯವಾಗಿಹೋಯಿತು. ಅದು ಬೇರೆ ಕಥೆ). ಆಗ ಅಮೆರಿಕ ತನ್ನನ್ನು ಬಿಟ್ಟು ಭಾರತವನ್ನು ಅಪ್ಪಿಕೊಳ್ಳುತ್ತದೆಂದು ಪಾಕಿಸ್ತಾನ ಹೆದರಿದಾಗ, ಭಾರತದೊಂದಿಗಿನ ಸ್ನೇಹಕ್ಕಾಗಿ ಪಾಕಿಸ್ತಾನಿ ಸ್ನೇಹವನ್ನು ಬಲಿಗೊಡುವುದಿಲ್ಲವೆಂದು ಪಾಕಿಸ್ತಾನಕ್ಕೆ ಅಮೆರಿಕ ಆಶ್ವಾಸನೆ ನೀಡಿತು. ಹಾಗೆಯೇ ನಡೆದುಕೊಂಡಿತು. ಯಾಕೆಂದರೆ ಅಮೆರಿಕಾಗೆ ತನ್ನ ಹಿತಾಸಕ್ತಿಗಳಿಗಾಗಿ ಆಗ ಪಾಕಿಸ್ತಾನ, ಭಾರತಗಳೆರಡೂ ಅಗತ್ಯವಾಗಿದ್ದವು.
ಮುಂದಿನ ಕೆಲವು ವರ್ಷಗಳಲ್ಲಿ ಪೂರ್ವ ಪಾಕಿಸ್ತಾನ ಸ್ವಾತಂತ್ರ್ಯಹೋರಾಟ ಆರಂಭಿಸಿದಾಗ ಅದನ್ನು ಹತ್ತಿಕ್ಕಲು ಪಾಕಿಸ್ತಾನಕ್ಕೆ ಅಮೆರಿಕ ಸಹಾಯಕವಾಗಿ ನಿಂತಿತು. ಅಮೆರಿಕ ನೀಡಿದ ಶಸ್ತ್ರಾಸ್ತ್ರಗಳನ್ನೇ ಬಳಸಿ ಪಾಕಿಸ್ತಾನಿ ಸೇನೆ ಪೂರ್ವ ಪಾಕಿಸ್ತಾನಿ ಬಂಗಾಳಿಗಳನ್ನು ಲಕ್ಷಗಟ್ಟಲೆಯಲ್ಲಿ ಕೊಲ್ಲುತ್ತಿದೆ, ಇದು ಅಕ್ಷಮ್ಯ ಎಂದು ಢಾಕಾದಲ್ಲಿದ್ದ ಅಮೆರಿಕದ ಉಪರಾಯಭಾರಿ ಆರ್ಥರ್ ಬ್ಲಡ್ ದೀರ್ಘ ಟೆಲಿಗ್ರಾಂ ಕಳುಹಿಸಿದರೂ ನಿಕ್ಸನ್ ಆಡಳಿತ ಅದಕ್ಕೆ ಗಮನ ಕೊಡಲಿಲ್ಲ. ಯಾಕೆಂದರೆ ಚೀನಾ ಮೇಲೆ ಬೇಹುಗಾರಿಕೆ ಮುಂದುವರೆಸಲು ಪೂರ್ವ ಪಾಕಿಸ್ತಾನ ಇಸ್ಲಾಮಾಬಾದ್ನ ನಿಯಂತ್ರಣದಲ್ಲೇ ಇರಬೇಕಾದುದು ಅಗತ್ಯ ಎನ್ನುವುದು ಅಮೆರಿಕದ ಹಿತಾಸಕ್ತಿಯಾಗಿತ್ತು. ತನ್ನ ಹಿತಾಸಕ್ತಿಗಾಗಿ 57 ಯುದ್ಧನೌಕೆಗಳ ಸೆವೆಂತ್ ಫ್ಲೀಟ್ಅನ್ನು ಬಂಗಾಳ ಕೊಲ್ಲಿಗೆ ಕಳುಹಿಸಿ ಭಾರತಕ್ಕೆ ಧಮಕಿ ಹಾಕುವುದಕ್ಕೂ ಅಮೆರಿಕ ಹಿಂಜರಿಯಲಿಲ್ಲ. ಆ ದಿನಗಳಲ್ಲಿ ಪಾಕ್ ಸೇನಾ ಸರ್ವಾಧಿಕಾರಿ ಯಾಹ್ಯಾ ಖಾನ್ ಮೂಲಕ ಚೀನಾ ಜತೆ ಸಂಬಂಧ ಕುದುರಿಸಿಕೊಳ್ಳಲು ನಿಕ್ಸನ್, ಕಿಸಿಂಜರ್ ಪ್ರಯತ್ನಿಸುತ್ತಿದ್ದರೂ ಅದೇ ಚೀನಾ ವಿರುದ್ಧ ಬೇಹುಗಾರಿಕೆ ಮುಂದುವರೆಸಲು ಅವರಿಗೆ ಪೂರ್ವ ಪಾಕಿಸ್ತಾನಿ ನೆಲದ ಅವಶ್ಯಕತೆ ಇತ್ತು.
ಅಂತಿಮವಾಗಿ ಭಾರತದ ಸಹಾಯದಿಂದ ಪೂರ್ವ ಪಾಕಿಸ್ತಾನ ಸ್ವತಂತ್ರಗೊಂಡು ಬಾಂಗ್ಲಾದೇಶವಾದಾಗ ಆ ದೇಶವನ್ನೇ ಬುಟ್ಟಿಗೆ ಹಾಕಿಕೊಳ್ಳಲು ಅಮೆರಿಕ ಪ್ರಯತ್ನ ಆರಂಭಿಸಿತು. ಎಷ್ಟರ ಮಟ್ಟಿಗೆಂದರೆ ಬಾಂಗ್ಲಾದೇಶದ ಕಮ್ಯೂನಿಸ್ಟ್ ಪಕ್ಷಕ್ಕೂ ಹಣದ ಆಮಿಷವೊಡ್ಡಿ ತನ್ನ ಪರ ವಕಾಲತ್ತು ವಹಿಸುವಂತೆ ಮಾಡಿತು! ಎರಡೇ ವರ್ಷಗಳ ಹಿಂದೆ ತಾನೇ ವಿರೋಧಿಸಿದ್ದ ಸ್ವತಂತ್ರ ಬಾಂಗ್ಲಾದೇಶವನ್ನು ಈಗ ಒಳಹಾಕಿಕೊಳ್ಳಲು ಅಮೆರಿಕಾಗೆ ಇನ್ನೂ ಒಂದು ಕಾರಣ ಇತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಬೆಂಬಲವಾಗಿ ನಿಂತ ಸೋವಿಯೆತ್ ತೆಕ್ಕೆಗೆ ಆ ಆಯಕಟ್ಟಿನ ದೇಶ ಬಿದ್ದುಬಿಟ್ಟರೇನು ಗತಿ ಎನ್ನುವುದು ಅಮೆರಿಕಾದ ಚಿಂತೆ.
ಅಷ್ಟರ ಹೊತ್ತಿಗೆ ಈಶಾನ್ಯ ಭಾರತ ತನ್ನದೇ ಆದ ಸಾಮರಿಕ ಮಹತ್ವ ಪಡೆದುಕೊಂಡಿತ್ತು. ಹಿಂದೆ ಪೂರ್ವ ಪಾಕಿಸ್ತಾನಿ ನೆಲದಿಂದ ಚೀನಾ ಈಶಾನ್ಯ ಭಾರತದ ಭಾರತ-ವಿರೋಧಿ ಬಂಡುಕೋರರಿಗೆ ಹಣ, ಶಸ್ತ್ರಾಸ್ತ್ರ ಪೂರೈಸುತ್ತ ಅವರನ್ನು ತನ್ನ ಹಸ್ತಕರನ್ನಾಗಿ ಬೆಳೆಸಿತ್ತು. ಅದೇ ಸಮಯದಲ್ಲಿ ನೆಹರೂ ನೀತಿಗಳಿಂದ ಈಶಾನ್ಯ ಭಾರತದಲ್ಲಿ ಅಮೆರಿಕಾ-ಪ್ರಾಯೋಜಿತ ಮತಾಂತರವೂ ನಡೆದು ಇಡೀಇಡೀ ಬುಡಕಟ್ಟುಗಳೇ ಕ್ರಿಶ್ಚಿಯನ್ ಆಗಿಬಿಟ್ಟಿದ್ದವು. ಅವೆಷ್ಟು ಚಾಲಾಕಿಗಳಾಗಿದ್ದವೆಂದರೆ ಚೀನಾ, ಅಮೆರಿಕಾಗಳೆರಡಕ್ಕೂ ಏಕಕಾಲದಲ್ಲಿ ಹತ್ತಿರಾಗಿದ್ದುಕೊಂಡರೆ ತಮ್ಮ ಭಾರತ-ವಿರೋಧಿ ಬೇಳೆಯನ್ನು ಬೇಯಿಸಿಕೊಳ್ಳಬಹುದೆಂದು ಅವು ಅರಿತಿದ್ದವು. ಈ ವಲಯದಲ್ಲಿ ತಮಗಿಬ್ಬರಿಗೂ ಸಮಾನ ಶತ್ರುವಾದ ಮಾಸ್ಕೋದ ಕೈಗಳನ್ನು ಕಟ್ಟಿಹಾಕಲು ಸೋವಿಯೆತ್ ಸ್ನೇಹಿತನಾದ ಭಾರತಕ್ಕೆ ಅದರ ಈಶಾನ್ಯ ಭಾಗದಲ್ಲಿ ನಿರಂತರ ಕಿರುಕುಳ ಆಗುತ್ತಲೇ ಇರುವುದು ಅಗತ್ಯವೆಂದು ರ್ತಸಿದ ಬೀಜಿಂಗ್ ಮತ್ತು ವಾಷಿಂಗ್ಟನ್ಗಳು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂಗಳಲ್ಲಿ ಜಂಟಿಯಾಗಿ ಭಾರತ-ವಿರೋಧಿ ಚಟುವಟಿಕೆಗಳನ್ನು ಪೋ›ತ್ಸಾಹಿಸಿದ್ದುಂಟು. ಅವೆರಡರ ದೂರಗಾಮಿ ಹುನ್ನಾರಗಳು ವಿಫಲವಾಗತೊಡಗಿದ್ದು ಭಾರತದ ಸ್ನೇಹಿತೆ ಶೇಖ್ ಹಸೀನಾ 1996-2001ರ ಅವಧಿಯಲ್ಲಿ ಬಾಂಗ್ಲಾದೇಶದ ಪ್ರಧಾನಿಯಾದದ್ದು ಮತ್ತು 2009ರ ನಂತರ ಢಾಕಾದಲ್ಲಿ ಅಧಿಕಾರ ಹಿಡಿದು ಪಟ್ಟಾಗಿ ಕೂತುಬಿಟ್ಟದ್ದು ಹಾಗೂ ಅದೇ ಅವಧಿಯಲ್ಲಿ ಈಶಾನ್ಯ ಭಾರತದ ನಿವಾಸಿಗಳು ಭಾರತ-ವಿರೋಧಿ ಚಟುವಟಿಕೆಗಳನ್ನು ತ್ಯಜಿಸಿ ಬಿಜೆಪಿಗೆ ಬೆಂಬಲ ನೀಡುತ್ತ ಹೋದದ್ದು. ಇನ್ನೂ ಒಂದು ಆಸಕ್ತಿಕರ ಬೆಳವಣಿಗೆಯೆಂದರೆ ಮ್ಯಾನ್ಮಾರ್ ದೇಶದ ಉತ್ತರ ಭಾಗವಿಡೀ ದುರ್ಲಭ ಖನಿಜಗಳ ಆಗರ ಎನ್ನುವುದು ಮೊದಲಿಗೆ ಚೀನಾ, ನಂತರ ಅಮೆರಿಕ ಮತ್ತು ಭಾರತಕ್ಕೂ ತಿಳಿದುಹೋದದ್ದು.
ಇಂದು ಬಹುತೇಕ ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ವಿವಿಧ ದುರ್ಲಭ ಖನಿಜಗಳು ಅತ್ಯಗತ್ಯ. ಅವು ಚೀನಾದಲ್ಲಿ ಹೇರಳವಾಗಿ ಲಭ್ಯವಿರುವುದರಿಂದಾಗಿ ಅವುಗಳ ಮೇಲೆ ದಶಕಗಳಿಂದಲೂ ಚೀನಾದ ಏಕಸ್ವಾಮ್ಯವಿದೆ. ಅವುಗಳಿಗಾಗಿ ಅಮೆರಿಕ ಸಹಾ ಚೀನಾದ ಮೇಲೆ ಅವಲಂಬಿತವಾಗಿದೆ. ಈಗ ಎರಡೂ ದೇಶಗಳ ನಡುವೆ ತೀವ್ರ ಮನಸ್ತಾಪಕ್ಕೆ ಕಾರಣವಾಗಿರುವುದು ಅದೇ.
ಚೀನಾದ ನವವಸಾಹತುಶಾಹಿ ಹುನ್ನಾರಗಳನ್ನು ತಡೆಯಲು ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಚೀನಿ ಸರಕುಗಳ ಮೇಲೆ ಅಧಿಕ ಸುಂಕ ಹೇರಿ ಚೀನಿ ಆದಾಯ ಕುಗ್ಗುವಂತೆ ಮಾಡಲು ಆರಂಭಿಸಿದರು. ಆಗ ಪ್ರತೀಕಾರವಾಗಿ ಅಮೆರಿಕಾಗೆ ಅತ್ಯಗತ್ಯವಾದ ಹಲವು ಸರಕುಗಳ ಪೂರೈಕೆಯನ್ನು ಚೀನಾ ಕಡಿಮೆಗೊಳಿಸಿತು ಅಥವಾ ಅವುಗಳ ರಫ್ತಿನ ಮೇಲೆ ಅಧಿಕ ಸುಂಕ ವಿಧಿಸಿ ಅವು ಅಮೆರಿಕನ್ನರಿಗೆ ದುಬಾರಿಯಾಗುವಂತೆ ಮಾಡಿತು. ಜತೆಗೆ ಉತ್ತರ ಮ್ಯಾನ್ಮಾರ್ನ ದುರ್ಲಭ ಖನಿಜ ಭಂಡಾರವನ್ನೆಲ್ಲ ತಾನೇ ಬಾಚಿಕೊಂಡು ಯಾರಿಗೂ ಅದು ಸಿಗದಂತೆಯೂ ಮಾಡಹೊರಟಿತು. ಈ ಸಮಸ್ಯೆಗೆ ಪರಿಹಾರ ಹುಡುಕಲು ಟ್ರಂಪ್ ಪ್ರಯತ್ನಿಸುತ್ತಿದ್ದಾಗಲೇ ಅವರಿಗೆ ಶ್ವೇತಭವನದಿಂದ ಅನಿರೀಕ್ಷಿತವಾಗಿ ಎತ್ತಂಗಡಿಯಾಗಿ ಅಲ್ಲಿ ಜೋ ಬೈಡನ್ ಬಂದು ಕೂತರು. ಆಗ ಚೀನಿ ಸಮಸ್ಯೆ ಟ್ರಂಪ್ ಹೆಗಲಿನಿಂದ ಹಾರಿ ಬೈಡನ್ ಹೆಗಲಿಗೇರಿತು.
ಬೈಡನ್ ಆಡಳಿತದ ಮಹಾಮಹಾ ಬುದ್ಧಿವಂತರು ತಮ್ಮೆಲ್ಲ ತಲೆ ಖರ್ಚುಮಾಡಿ ಚೀನಾದ ದುರ್ಲಭ ಖನಿಜ ಕೈಗಳನ್ನು ತಿರುಚಲು ಯೋಜನೆ ರೂಪಿಸಿದರು. ಮೊದಲಿಗೆ ಅಫ್ಘಾನಿಸ್ತಾನದಲ್ಲಿ ಚೀನಿ ಲೆಕ್ಕಾಚಾರಗಳಿಗೆ ಕಲ್ಲುಹಾಕಲಾಯಿತು, ಪಾಕಿಸ್ತಾನದಲ್ಲಿ ಸರ್ಕಾರವನ್ನೇ ಬದಲಿಸಿ, ತಮ್ಮ ಹಿಂಬಾಲಕರನ್ನು ಅಲ್ಲಿ ಕೂರಿಸಿ ಆ ದೇಶದಲ್ಲಿ ಚೀನಾ ಆರಂಭಿಸಿದ್ದ ಎಲ್ಲವೂ ನಿಲುಗಡೆಗೆ ಬಂದು ಬಿಲಿಯನ್ಗಟ್ಟಲೆ ಚೀನಿ ಬಂಡವಾಳ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದುಹೋಗುವಂತೆ ಮಾಡಿದರು, ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪವನ್ನು ಪಡೆದು ಅಲ್ಲಿಂದ ಗೊಂದಲಗ್ರಸ್ತ ಮ್ಯಾನ್ಮಾರ್ನ ಅರಕಾನ್ಗೆ ದಾರಿ ಮಾಡಿಕೊಂಡು, ಉತ್ತರಕ್ಕೆ ಸಾಗಿ ದುರ್ಲಭ ಖನಿಜಗಳ ಭಂಡಾರ ಕಾಚಿನ್ ರಾಜ್ಯವನ್ನು ಚೀನಿ ಹಿಡಿತದಿಂದ ಬಿಡಿಸಿ ತಮ್ಮ ಹತೋಟಿಗೆ ತೆಗೆದುಕೊಳ್ಳಲು ಯೋಜನೆ ರೂಪಿಸಿದರು. ಅದಾಗದಾಗ ಶೇಖ್ ಹಸೀನಾರನ್ನೇ ಕಿತ್ತೊಗೆದು ಕೈಗೊಂಬೆಯೊಂದನ್ನು ಕೂರಿಸುವ ಹುನ್ನಾರ ಹಾಕಿದರು. ಆದರೆ ಆ ಕೈಗೊಂಬೆ ತನ್ನ ಸೂತ್ರ ಹಿಡಿದವರಾರು, ತಾನೇನು ಮಾಡಬೇಕು ಮಾಡಬಾರದು ಎಂದೇ ತಿಳಿಯದ ನೊಬೆಲ್ ಪುರಸ್ಕೃತ ಅವಿವೇಕಿ.
ಬೈಡನ್ ಸೋತು ಟ್ರಂಪ್ ಗದ್ದಿಗೆಗೇರಿದ್ದನ್ನು ತನ್ನ ಡೆಮೋಕ್ರಾಟಿಕ್ ಮಾಸ್ಟರ್ಗಳ ಸೋಲು, ಇನ್ನು ರಿಪಬ್ಲಿಕನ್ ಟ್ರಂಪ್ ತನಗೇನು ಮಾಡುತ್ತಾರೋ, ತಾನಿನ್ನು ಹೊಸ ಆಶ್ರಯವನ್ನು ಹುಡುಕಬೇಕು ಎಂದು ಚಿಂತಿಸಿ ಚೀನಿ ಮಡಿಲಿಗೆ ಹೋಗಿ ಕೂತ. ಅಮೆರಿಕದಲ್ಲಿ ಅಧ್ಯಕ್ಷರು ಬಂದು ಹೋಗುತ್ತಾರೆ, ನೀತಿಗಳಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಅವರು ತಂದರೂ ದೊಡ್ಡಣ್ಣನ ದೂರಗಾಮಿ ಯೋಜನೆಗಳಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ, ಯಾಕೆಂದರೆ ಅವುಗಳನ್ನು ರೂಪಿಸುವವರು ಹಾಗೂ ನಿಭಾಯಿಸುವವರು ಅನುಭವಿ ಆಡಳಿತಶಾಹಿಗಳು ಎಂಬ ವಾಸ್ತವವನ್ನು ಆ ನೊಬೆಲ್ ಮೂರ್ಖ ತಿಳಿದಿರಲೇ ಇಲ್ಲ. ಅಂತಹವರಿಗೆ ಆಗುವುದೇ ಆಯಿತು, ಯೂನುಸ್ ಚುನಾವಣೆ ನಡೆಸಲೇಬೇಕಾಯಿತು, ತಾವು ಮೂಲೆಗುಂಪಾಗುವುದನ್ನು ನೋಡುತ್ತ ಕೂತುಕೊಳ್ಳುವಂತೆಯೂ ಆಯಿತು. ಈಗ ತಾರಿಖ್ ರೆಹಮಾನ್ ಸರ್ಕಾರಕ್ಕೆ ಹಗ್ಗದ ಮೇಲಿನ ನಡಿಗೆ. ಯಾಕೆಂದರೆ ಮ್ಯಾನ್ಮಾರ್ನ ದುರ್ಲಭ ಖನಿಜ ಭಂಡಾರಕ್ಕೆ ದಾರಿ ಬಾಂಗ್ಲಾದೇಶದ ಚಿತ್ತಗಾಂಗ್ ಎನ್ನುವುದನ್ನು ಅಮೆರಿಕ ಇನ್ನೂ ಮರೆತಿಲ್ಲ, ಚಿತ್ತಗಾಂಗ್ನಿಂದ ಕಾಚಿನ್ಗೆ ದಾರಿ ತನ್ನ ಮಣಿಪುರದಿಂದ ಸಾಗುವುದಿಲ್ಲ ಎಂದು ಭಾರತ ಸಂಕೇತಗಳ ಮೂಲಕವೇ ಹೇಳಿ ಕೃತಘ್ನ ಬಾಂಗ್ಲಾದೇಶವನ್ನು ಅಮೆರಿಕನ್ ಮೊಸಳೆಯ ಬಾಯಿಯತ್ತ ನೂಕಿದೆ. ಜತೆಗೆ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎನ್ನುವಂತೆ ಕಾಚಿನ್ ರಾಜ್ಯದ ದುರ್ಲಭ ಖನಿಜ ಭಂಡಾರವನ್ನು ಚೀನಾದಿಂದ ಕೀಳಲು, ಅದು ಅಮೆರಿಕದ ಕೈಗೆ ಬೀಳದಂತೆಯೂ ಮಾಡಲು, ತಾನೇ ಅದರ ಮಾಲೀಕನಾಗಲು ದೆಹಲಿ ಜಾಣ-ಧೈರ್ಯಶಾಲಿ ಯೋಜನೆ ರೂಪಿಸಿ ಜಾರಿಗೊಳಿಸಿಬಿಟ್ಟಿದೆ.
ಮೂರು ವಿಭಿನ್ನ ಹಿತಾಸಕ್ತಿಗಳ ನಡುವಿನ ಈ ತ್ರಿಕೋನ ಸ್ಪರ್ಧೆ ಸಾಗುವುದೆತ್ತ? ಇದರಲ್ಲಿ ಯಾರಿಗೆ ಯಾರು ಶತ್ರು, ಮಿತ್ರ? ಅದನ್ನು ಮುಂದಿನವಾರ ಸರಣಿಯ ಅಂತಿಮ ಭಾಗದಲ್ಲಿ ನೋಡೋಣ.
-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)