ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ಬಂಪರ್ ಗಿಫ್ಟ್: ಮೂರು ಮೃಗಾಲಯಗಳಿಗೆ ಫ್ರೀ ಎಂಟ್ರಿ; ಆದ್ರೆ ಹೊಸ ರೂಲ್ಸ್ ಏನು ಗೊತ್ತಾ? CM Vijay Birthday

CM Vijay Birthday (ಚಿತ್ರ X)
CM Vijay Birthday (ಚಿತ್ರ X)
Published on
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ 52ನೇ ಹುಟ್ಟು ಹಬ್ಬದ ಅಂಗವಾಗಿ (CM Vijay Birthday) ತಮಿಳುನಾಡು ಅರಣ್ಯ ಇಲಾಖೆ ಜೂನ್ 21 ಮತ್ತು 22 ರಂದು ರಾಜ್ಯದ ಮೂರು ಪ್ರಮುಖ ಪ್ರಾಣಿಶಾಸ್ತ್ರೀಯ ಉದ್ಯಾನವನಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಘೋಷಣೆಯು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಮೃಗಾಲಯಗಳಿಗೆ ಭೇಟಿ ನೀಡಲು ಉತ್ತಮ ಅವಕಾಶ ದೊರಕಿದಂತಾಗಿದೆ. 
ಈ ಕುರಿತು ಮಾತನಾಡಿದ ಅರಣ್ಯ ಸಚಿವ ಆರ್​. ವಿ ರಂಜಿತ್​ಕುಮಾರ್​ ಅವರು ವಂಡಲೂರಿನ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯ, ವೆಲ್ಲೂರ್​ನ ಅಮೃತಿ ಪ್ರಾಣಿ ಸಂಗ್ರಹಾಲಯ ಮತ್ತು ಸೇಲಂನ ಕುರುಂಬಪಟ್ಟಿ ಪ್ರಾಣಿ ಸಂಗ್ರಹಾಲಯಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. 

ಆನ್‌ಲೈನ್ ನೋಂದಣಿ ಕಡ್ಡಾಯ

ಉಚಿತ ಪ್ರವೇಶ ಪಡೆಯಲು ಬಯಸುವ ಸಾರ್ವಜನಿಕರು ಮತ್ತು ವನ್ಯಜೀವಿ ಪ್ರೇಮಿಗಳು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಾಣಿ ಸಂಗ್ರಹಾಲಯಗಳಲ್ಲಿ ವಿಪರೀತ ಜನಸಂದಣಿಯನ್ನು ನಿಯಂತ್ರಿಸುವ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಎರಡು ದಿನಗಳ ಸಂಪೂರ್ಣ ಟಿಕೆಟ್ ವೆಚ್ಚವನ್ನು ನನ್ನ ವೈಯಕ್ತಿಕ ಕುಟುಂಬ ಟ್ರಸ್ಟ್ ಭರಿಸಲಿದೆ. ಇದರಿಂದಾಗಿ ವಂಡಲೂರು ಮೃಗಾಲಯಕ್ಕೆ ಯಾವುದೇ ರೀತಿಯ ಆರ್ಥಿಕ ನಷ್ಟವಾಗುವುದಿಲ್ಲ. ಇದರ ಅಂದಾಜು ವೆಚ್ಚ ಸುಮಾರು 1 ಕೋಟಿ ರೂಪಾಯಿಗಳಾಗಲಿದ್ದು, ಅದನ್ನು ನಾವೇ ಸಂಪೂರ್ಣವಾಗಿ ಜವಾಬ್ದಾರಿ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಉಚಿತ ಪ್ರವೇಶದ ಈ ಮಹತ್ವದ ಘೋಷಣೆಯು ವನ್ಯಜೀವಿ ಉತ್ಸಾಹಿಗಳು ಮತ್ತು ಮೃಗಾಲಯ ಅಧಿಕಾರಿಗಳಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಆದಾಗ್ಯೂ, ಬೇಸಿಗೆಯ ಪರಿಸ್ಥಿತಿಯ ಮಧ್ಯೆ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದ್ದು, ಪ್ರಾಣಿಗಳಿಗೆ ತೊಂದರೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ, ಪೊಂಗಲ್ ರಜಾದಿನಗಳಲ್ಲಿ ಮೃಗಾಲಯವು ಸುಮಾರು 60,000 ಸಂದರ್ಶಕರ ಗರಿಷ್ಠ ಭೇಟಿಯನ್ನು ನಿರ್ವಹಿಸಿತ್ತು. ಇನ್ನಿತರ ದಿನಗಳಲ್ಲಿ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 15,000 ಎಂದು ಅಂದಾಜಿಸಲಾಗಿದೆ.
ಮೃಗಾಲಯದಲ್ಲಿ ಜನದಟ್ಟಣೆ ಹೆಚ್ಚಾಗುವ ಮತ್ತು ಪ್ರಾಣಿಗಳಿಗೆ ತೊಂದರೆಯಾಗುವ ಕಳವಳಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ರಂಜಿತ್‌ಕುಮಾರ್ ಅವರು, ಈಗಾಗಲೇ ಎಲ್ಲಾ ಮುನ್ನೆಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.
ನನಗೆ ಸಾರ್ವಜನಿಕರ ಮತ್ತು ಅಧಿಕಾರಿಗಳ ಕಳವಳಗಳು ಸಂಪೂರ್ಣವಾಗಿ ಅರ್ಥವಾಗಿವೆ. ಹಾಗಾಗಿ ಜನಸಂದಣಿಯನ್ನು ತಡೆಯುವ ನಿಟ್ಟಿನಲ್ಲಿ ಆನ್‌ಲೈನ್ ಟಿಕೆಟ್ ವಿತರಣೆಯನ್ನು ದಿನಕ್ಕೆ 50,000 ಕ್ಕೆ ಮಿತಿಗೊಳಿಸಲು ನಾನು ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ. ಕೌಂಟರ್​ಗಳಲ್ಲಿ ಟಿಕೆಟ್​ ಪಡೆಯಲು ಬಯಸುವವರಿಗೆ ತಕ್ಷಣವೇ ಪ್ರವೇಶ ಸಿಗುವುದಿಲ್ಲ. ಬದಲಿಗೆ ಈಗಾಗಲೇ ಮೃಗಾಲಯದೊಳಗೆ ಇರುವ ಜನರ ಸಂಖ್ಯೆಯನ್ನು ಅವಲಂಬಿಸಿ ಮಾತ್ರ ಅನುಮತಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ವಂಡಲೂರು ಮೃಗಾಲಯದಲ್ಲಿ ಗುರುವಾರ ಸಭೆ ನಡೆಯಲಿದ್ದು, ಮುಖ್ಯ ವನ್ಯಜೀವಿ ವಾರ್ಡನ್ ರಾಕೇಶ್ ಕುಮಾರ್ ಡೋಗ್ರಾ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ವಿಶೇಷವಾಗಿ ಭಾನುವಾರದಂದು ಹೆಚ್ಚಿನ ಜನಸಂದಣಿ ಆಗದಂತೆ ತಡೆಯಲಾಗುವುದು ಎಂದಿದ್ದಾರೆ.
ವಿಜಯ್​ ಅವರ ಹುಟ್ಟುಹಬ್ಬದ ಆಚರಣೆಯ ಭಾಗವಾಗಿ, ಅರಣ್ಯ ಇಲಾಖೆಯು ಮರ ನೆಡುವ ಕಾರ್ಯಕ್ರಮವನ್ನು ಕೈಗೊಳ್ಳಲಿದ್ದು, ಜೂನ್​ 22 ರಂದು ಕಾಂಚೀಪುರಂ ಜಿಲ್ಲಯಲ್ಲಿ 52,000 ಸಸಿಗಳನ್ನು ನೆಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net