ಅಂಬಾಲಾದಲ್ಲಿ 200 ಅಡಿ ಆಳದ ತೆರೆದ ಬೋರ್​​ವೆಲ್​ಗೆ ಬಿದ್ದ ನಾಲ್ಕು ವರ್ಷದ ಬಾಲಕ; ರಕ್ಷಣಾ ಕಾರ್ಯಾಚರಣೆ | Ambala

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಫರಿದಾಬಾದ್: ಹರಿಯಾಣದ ಅಂಬಾಲಾ(Ambala) ಜಿಲ್ಲೆಯ ಧನೌರಾ ಗ್ರಾಮದಲ್ಲಿ ಮಂಗಳವಾರ(ಜೂ. 30) ಬೆಳಿಗ್ಗೆ ನಾಲ್ಕು ವರ್ಷದ ಬಾಲಕನೊಬ್ಬ 220 ಅಡಿ ಆಳದ ತೆರೆದ ಕೊಳವೆಬಾವಿಗೆ ಬಿದ್ದಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ನಾಲ್ಕು ವರ್ಷದ ನಿರ್ಭಯ್ ಸಿಂಗ್ ಎಂಬ ಮಗು ಬೆಳಿಗ್ಗೆ 6.30 ರ ಸುಮಾರಿಗೆ ಹೊಲದಲ್ಲಿ ಆಟವಾಡುತ್ತಿದ್ದಾಗ ಒಂಬತ್ತು ಇಂಚು ಅಗಲದ ಕೊಳವೆಬಾವಿಗೆ ಬಿದ್ದಿದೆ ಎನ್ನಲಾಗಿದೆ. ತನ್ನ ತಂದೆ ಮಂಜಿತ್ ಸಿಂಗ್ ಅವರೊಂದಿಗೆ ಹೊಲಕ್ಕೆ ಹೋಗಿತ್ತು. ಈ ವೇಳೆ ನಿರ್ಭಯ್ ತೆರೆದಿರುವ ಕೊಳವೆಬಾವಿಯನ್ನು ಗಮನಿಸಿ ಅದರೊಳಗೆ ಒಂದು ಹಿಡಿ ಮಣ್ಣನ್ನು ಹಾಕಿದ್ದಾನೆ. ಬಳಿಕ ಅದನ್ನು ನೋಡಲು ಇಣುಕಿದಾಗ ಆಯತಪ್ಪಿ ಬೋರ್​ವೆಲ್​ಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಮಗುವಿನ ಕಿರುಚಾಟ ಕೇಳಿ ತಂದೆ ಮತ್ತು ಅಜ್ಜ ಸ್ಥಳಕ್ಕೆ ಧಾವಿಸಿ ಅವನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಆದರೆ ಅವರಿಂದ ಸಾಧ್ಯವಾಗಿಲ್ಲ. ಬಳಿಕ ಕುಟುಂಬವು ಬೆಳಿಗ್ಗೆ 7.30ರ ಸುಮಾರಿಗೆ 112 ಸಹಾಯವಾಣಿಯ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಪೊಲೀಸರು ಅಗ್ನಿಶಾಮಕದಳ ಮತ್ತು NDRF, SDRF ತಂಡದೊಂದಿಗೆ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಮಗುವಿನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕೊಳವೆ ಬಾವಿಯೊಳಗೆ ಕ್ಯಾಮೆರಾವನ್ನು ಇಳಿಸಲಾಗಿದೆ. ಅಂಬಾಲ ಉಪ ಆಯುಕ್ತ ಅಜಯ್ ಸಿಂಗ್ ತೋಮರ್ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net