ಪಾಕಿಸ್ತಾನ ಉಪಪ್ರಧಾನಿ ಸಂಬಂಧಿ ಸೇರಿ ನಾಲ್ವರ ಬಂಧನ; ವಿದೇಶಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ!

Pakistan
Pakistan
Published on
ನವದೆಹಲಿ: ಪಾಕಿಸ್ತಾನದ(Pakistan) ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಆಪ್ತ ಸಂಬಂಧಿಯೂ ಸೇರಿದಂತೆ ನಾಲ್ವರನ್ನು ಇಬ್ಬರು ವಿದೇಶಿ ಮಹಿಳೆಯರ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಲಾಹೋರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಲಾಹೋರ್ ನ್ಯಾಯಾಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ರಝಾ ದಾರ್, ಹಸನ್ ರಝಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ರಝಾ ದಾರ್ ಅವರು ಇಶಾಕ್ ದಾರ್ ಅವರ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸೂಕ್ಷ್ಮ ಸ್ವರೂಪದ್ದಾಗಿರುವುದರಿಂದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ವಿದೇಶಿ ಮಹಿಳೆಯರ ಮೇಲೆ ದೌರ್ಜನ್ಯ ಆರೋಪ

ಪೊಲೀಸರ ಪ್ರಕಾರ, ನೆದರ್ಲೆಂಡ್ಸ್ ಹಾಗೂ ವೆನೆಜುವೆಲಾದ ಇಬ್ಬರು ಮಹಿಳೆಯರು ಜೂನ್ 29ರಂದು ಲಾಹೋರ್‌ಗೆ ಆಗಮಿಸಿದ್ದರು. ಅವರಲ್ಲಿ ಒಬ್ಬರ ತಂದೆ ಸ್ಪೇನ್‌ನಿಂದ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಪೊಲೀಸರು ಮಹಿಳೆಯರನ್ನು ರಕ್ಷಿಸಿದ್ದಾರೆ. ಮಹಿಳೆಯರ ದೂರಿನ ಆಧಾರದ ಮೇಲೆ ಐವರು ಆರೋಪಿಗಳ ವಿರುದ್ಧ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಸಿಂಗಾಪುರದಲ್ಲಿ ಪರಿಚಯ

ಮಹಿಳೆಯರು ನೀಡಿರುವ ಹೇಳಿಕೆ ಪ್ರಕಾರ, 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ರಝಾ ದಾರ್ ಅವರ ಪರಿಚಯವಾಗಿತ್ತು. ಬಳಿಕ ಅವರು ಪಾಕಿಸ್ತಾನಕ್ಕೆ ಬರಲು ಆಹ್ವಾನಿಸಿದ್ದು, ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ಪಾಲುದಾರರಾಗಿದ್ದ ಕಾರಣ ವ್ಯಾಪಾರ ವೀಸಾ ವ್ಯವಸ್ಥೆಯನ್ನೂ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಕರೆದೊಯ್ದು ಅತ್ಯಾಚಾರ ಆರೋಪ

ಲಾಹೋರ್‌ಗೆ ಬಂದ ಕೂಡಲೇ ಆರೋಪಿಗಳು ತಮ್ಮನ್ನು ಅಪಹರಿಸಿ ಮನೆವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಿಡುಗಡೆ ಮಾಡಲು ಹಣಕ್ಕೂ ಬೇಡಿಕೆ ಇಟ್ಟಿದ್ದರು ಎಂದು ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ ಮಹಿಳೆಯರು ರಝಾ ದಾರ್ ಅವರನ್ನು ಪ್ರಮುಖ ಆರೋಪಿಯಾಗಿ ಗುರುತಿಸಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ತನಿಖೆ ಮುಂದುವರಿಕೆ

ಪ್ರಕರಣದ ಐದನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ವಿವಿಧೆಡೆ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net