'ಮಗ ರಾಜಕೀಯಕ್ಕೆ ಬರೋದೆ ಬೇಡ, ಅವನನ್ನು ಬಂಧಿಸಿ ಬಿಡ್ತಾರೆ'; Cockroach Janta Party ಸಂಸ್ಥಾಪಕನ ಪೋಷಕರು ಹೇಳಿದ್ದು ಹೀಗೆ!

Abhijeet Dipke Parents
Abhijeet Dipke Parents
Published on

ಪ್ರಮುಖ ಮುಖ್ಯಾಂಶಗಳು

  • ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪೋಷಕರಲ್ಲಿ ಹೆಚ್ಚಿದ ಆತಂಕ
  • ನನ್ನ ಮಗ ರಾಜಕೀಯದಲ್ಲಿ ಇಷ್ಟವಿಲ್ಲ, ಅವನನ್ನು ಪೊಲೀಸರು ಬಂಧಿಸಬಹುದು ಎಂದ ಪೋಷಕರು
  • ಮಗನ ಪಾಪ್ಯುಲಾರಿಟಿ ಕಂಡು ಭಯವಾಗ್ತಿದೆ ಎಂದ ಪೋಷಕರು
Abhijeet Dipke Parents: 'ನನ್ನ ಮಗನ ಜನಪ್ರಿಯತೆ ನೋಡ್ತಿದ್ರೆ ಅವನ ಭವಿಷ್ಯ ಏನಾಗುತ್ತೋ ಎನ್ನುವ ಭಯ ಕಾಡ್ತಿದೆ. ಎರಡು ದಿನ ನಿದ್ದೆ ಬಂದಿಲ್ಲ. ಅವನಿಗೆ ರಾಜಕೀಯಕ್ಕೆ ಹೋಗಬೇಡ ಎಂದು ತಡೆಯೋದು ಅಸಾಧ್ಯ. ಆದರೆ, ನಾವಂತು ಬೆಂಬಲಿಸೋದಿಲ್ಲ. ನಮಗೆ ಅವನ ಸುರಕ್ಷತೆ ಮುಖ್ಯ. ಸರ್ಕಾರದ ನಡವಳಿಕೆ, ಈಗಿನ ವಿದ್ಯಮಾನ ಕಂಡರೆ ಆತಂಕವಾಗ್ತಿದೆ. ಅವನನ್ನು  ಬಂಧಿಸಿಬಿಡುತ್ತಾರೇನೋ' ಹೀಗೆಂದು ಮರಾಠಿ ಮಾಧ್ಯಮವೊಂದರ ಜೊತೆಗೆ ಆತಂಕವನ್ನು ಬಿಚ್ಚಿಟ್ಟಿದ್ದು ಬೇರಾರು ಅಲ್ಲ. ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಕಾಕ್ರೋಚ್​ ಜನತಾ ಪಕ್ಷ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಪೋಷಕರು. 
ಕಳೆದ ಐದು ದಿನಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಕಾಕ್ರೋಚ್​ ಜನತಾ ಪಾರ್ಟಿ(Cockroach Janta Party) ತನ್ನದೇ ಆದ ಟ್ರೆಂಡ್​ ಅನ್ನು ಸೃಷ್ಟಿ ಮಾಡುತ್ತಿದೆ. ಹೌದು ನಾವು ಸೋಂಬೇರಿಗಳು, ನಿರುದ್ಯೋಗಿಗಳು, ನಿರಂತರ ಆನ್​ಲೈನ್​ನಲ್ಲೇ ಇರುತ್ತೇವೆ ಎಂದು ವೆಬ್​ಸೈಟ್, ಎಕ್ಸ್​, ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆಯಲಾಗಿತ್ತು. ಟ್ರೆಂಡ್​ ಸೃಷ್ಟಿಯಾಗುತ್ತಲೇ ಎಕ್ಸ್​ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ರಾಜಕೀಯ ನಾಯಕರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 

ಅಭಿಜಿತ್ ದೀಪ್ಕೆ ತಂದೆ-ತಾಯಿ ಹೇಳಿದ್ದೇನು?

ಮರಾಠಿ ಸುದ್ದಿವಾಹಿನಿ ಜೊತೆಗೆ ಮಾತನಾಡಿದ ಭಗವಾನ್​ ದೀಪ್ಕೆ ಮತ್ತು ತಾಯಿ ಅನಿತ ದೀಪ್ಕೆ,  'ನಮಗೆ ಕಾಕ್ರೋಚ್​ ಜನತಾ ಪಾರ್ಟಿ ಸೃಷ್ಟಿಯಾಗಿದ್ದೇ ತಿಳಿದಿರಲಿಲ್ಲ. ನಮ್ಮ ನೆರೆಹೊರೆಯವರು ನಮ್ಮ ಬಳಿಗೆ ಬಂದು ನಿಮ್ಮ ಮಗ ಹೀಗೆ ಪಾರ್ಟಿಯನ್ನು ತೆರೆದಿದ್ದಾರಂತೆ ಎಂದು ಮಾಹಿತಿ ನೀಡಿದರು. ಆಗಲೇ ನಮಗೆ ಈ ವಿಚಾರ ಗೊತ್ತಾಗಿದ್ದು. ಮಗನಿಗೆ ಸಿಗುತ್ತಿರುವ ಪಾಪ್ಯುಲಾರಿಟಿ ನೋಡಿದ್ರೆ ಭಯವಾಗುತ್ತಿದೆ. ಎರಡು ದಿನ ರಾತ್ರಿ ನಿದ್ದೆ ಬಂದಿಲ್ಲ. ರಾಜಕೀಯವಾಗಿ ಪ್ರಸಿದ್ಧರಾದವರನ್ನು ಬಂಧಿಸಲಾಗುತ್ತದೆ. ನನ್ನ ಮಗನ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು. 
'ಅವನು ರಾಜಕೀಯದ ಈ ಚಕ್ರವ್ಯೂಹದಲ್ಲಿ ಸಿಲುಕುವುದು ನಮಗೆ ಇಷ್ಟವಿಲ್ಲ. ನಾವು ರಾಜಕೀಯಕ್ಕೆ ಹೋಗಬೇಡ ಎಂದು ತಡೆಯೋಕೆ ಸಾಧ್ಯನೂ ಇಲ್ಲ. ಕಾಡ್ತಿರೋದು ಭಯವಷ್ಟೇ. ಜೊತೆಗೆ ಆತ ಲಕ್ಷಾಂತರ ಯುವಜನರ ಪರವಾಗಿ ಧ್ವನಿ ಎತ್ತುತ್ತಿರುವ ಬಗ್ಗೆ ಹೆಮ್ಮೆ ಇದೆ. ಅವನು ಮಾಡುತ್ತಿರುವ ಕೆಲಸ ದೇಶದ ಯುವ ಸಮುದಾಯಕ್ಕೆ ಬೇಕಾದುದಾಗಿದೆ. ಇಂದಿನ ಯುವಕರು ಎದುರಿಸುತ್ತಿರುವ ನಿರುದ್ಯೋಗ ಮತ್ತು ಅಸಹಾಯಕತೆಯನ್ನು ಅವನು ಜಗತ್ತಿನ ಮುಂದೆ ಇಡುತ್ತಿದ್ದಾನೆ. ಒಬ್ಬ ತಂದೆಯಾಗಿ ನನಗೆ ಹೆಮ್ಮೆಯ ಜೊತೆಗೆ ಅವನ ಭವಿಷ್ಯದ ಬಗ್ಗೆ ಅಷ್ಟೇ ಆತಂಕವೂ ಕಾಡುತ್ತಿದೆ' ಎಂದು ಅಭಿಜಿತ್​ ತಂದೆ ಹೇಳಿದರು. 

'ರಾಜಕೀಯಕ್ಕೆ ಎಂಟ್ರಿಯಾಗೋದು ಬೇಡ'

'ಅಭಿಜಿತ್​ ಉನ್ನತ ಶಿಕ್ಷಣಕ್ಕಾಗಿ ಪುಣೆಗೆ ತೆರಳುವ ಮುನ್ನ ಛತ್ರಪತಿ ಸಂಭಾಜಿ ನಗರದಲ್ಲಿ ಅಧ್ಯಯನ ಮಾಡಿದ್ದರು. ಎಂಜಿನಿಯರ್ ಓದಲಾಗಲಿಲ್ಲ ಎಂದು ಜರ್ನಲಿಸಂನತ್ತ ಹೊರಳಿಕೊಂಡ. ಮತ್ತಷ್ಟು ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದ. ಅವನು ಈಗ ರಾಜಕೀಯಕ್ಕೆ ಬರೋದು ಬೇಡ. ಪುಣೆ ಅಥವಾ ದೆಹಲಿಯಲ್ಲಿ ಕೆಲಸ ಮಾಡ್ಕೊಳ್ಳಿ ಸಾಕು' ಎಂದಿದ್ದಾರೆ.
ಕಾಕ್ರೋಚ್​ ಜನತಾ ಪಾರ್ಟಿ ಭಾರತದಲ್ಲಿ ಒಂದು ಟ್ರೆಂಡ್ ಸೃಷ್ಟಿಯಾಗಿ, ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಲೇ ಎಕ್ಸ್ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಈ ಘಟನೆಯ ನಂತರ ಅವರ ಭಯ ಮತ್ತಷ್ಟು ಇಮ್ಮಡಿಯಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net