ನಿನ್ನೆ ಬಿಜೆಡಿಗೆ ರಾಜೀನಾಮೆ; ಇಂದು ಬಿಜೆಪಿ ಸೇರ್ಪಡೆಯಾದ ಮಾಜಿ ರಾಜ್ಯಸಭಾ ಸಂಸದ ದೇಬಾಶಿಶ್ ಸಮಂತರಾಯ್ | Debashish Samanta Roy

ದೇಬಾಶಿಶ್ ಸಮಂತರಾಯ್ ಬಿಜೆಪಿ ಸೇರ್ಪಡೆ
ದೇಬಾಶಿಶ್ ಸಮಂತರಾಯ್ ಬಿಜೆಪಿ ಸೇರ್ಪಡೆ
Published on
ಭುವನೇಶ್ವರ: ಪಕ್ಷದಲ್ಲಿ ತಮಗೆ ಸಾಕಷ್ಟು ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ ಪಕ್ಷಕ್ಕೆ ನಿನ್ನೆ ರಾಜೀನಾಮೆ ನೀಡಿದ್ದ ಮಾಜಿ ರಾಜ್ಯಸಭಾ ಸಂಸದ ದೇಬಾಶಿಶ್ ಸಮಂತರಾಯ್(Debashish Samanta Roy), ಇಂದು(ಮೇ 26) ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿರುವ ಅವರು, ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಕಾರ್ಯಕ್ರಮಗಳು ಮತ್ತು ವ್ಯಕ್ತಿತ್ವದಿಂದ ಪ್ರೇರಿತನಾಗಿ ಇಂದು ಬಿಜೆಪಿಗೆ ಸೇರುತ್ತಿದ್ದೇನೆ. ಒಡಿಶಾದಲ್ಲಿ ಬಿಜೆಪಿಗಾಗಿ ನನಗೆ ಬಹಳಷ್ಟು ಕೆಲಸಗಳಿವೆ. ಅದನ್ನು ಬಲಪಡಿಸಲು ನಾನು ಕೆಲಸ ಮಾಡ್ತೇನೆ. ಜನರ ಹಿತಕ್ಕಾಗಿ ಈ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
ಹಲವು ವರ್ಷಗಳ ಕಾಲ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಸಮಂತ್ ರಾಯ್, ಬಿಜೆಡಿ ತೊರೆದ ಮೂರನೇ ರಾಜ್ಯಸಭಾ ಸಂಸದರಾಗಿದ್ದಾರೆ. ಇತ್ತೀಚೆಗೆ, ಮಮತಾ ಮೊಹಂತ ಮತ್ತು ಸುಜಿತ್ ಕುಮಾರ್ ಕೂಡ ಬಿಜೆಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ದೇಬಾಶಿಶ್ ಅವರ ಅವಧಿ ಏಪ್ರಿಲ್ 2030ರಲ್ಲಿ ಕೊನೆಗೊಳ್ಳುತ್ತದೆ. ರಾಜ್ಯಸಭೆಗೆ ಸೇರುವ ಮೊದಲು ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಮಂತಾ ಅವರ ರಾಜೀನಾಮೆಯೊಂದಿಗೆ, ರಾಜ್ಯಸಭೆಯಲ್ಲಿ ಬಿಜೆಡಿಯ ಬಲ ಕೇವಲ ಐದನ್ನು ತಲುಪಿದೆ.
ನಿನ್ನೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ್ದ ಸಮಂತ್ ರಾಯ್, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿದ್ದೇನೆ. ಮತ್ತು ರಾಜ್ಯಸಭೆಯ ಉಪಾಧ್ಯಕ್ಷರನ್ನು ಭೇಟಿಯಾಗಿ ರಾಜ್ಯಸಭಾ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ಅವಿಭಜಿತ ಕಟಕ್ ಜಿಲ್ಲೆ ಮತ್ತು ಒಡಿಶಾಗೆ ರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸಲು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ನವೀನ್ ಪಟ್ನಾಯಕ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net