ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಕಂಡು ಕಾರು ನಿಲ್ಲಿಸಿದ ಮಾಜಿ ಸಿಎಂ: ಶಿವರಾಜ್ ಸಿಂಗ್ ಚೌಹಾಣ್ ಮಾಡಿದ ಕೆಲಸಕ್ಕೆ ಫಿದಾ ಆದ ನೆಟ್ಟಿಗರು | Shivraj Singh Chouhan

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಅಫಘಾತಕ್ಕೆ ತುತ್ತಾದ ವ್ಯಕ್ತಿಯನ್ನು ರಕ್ಷಿಸಿದ ಮಾಜಿ ಸಿಎಂ
  • ತನ್ನ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದ ಶಿವರಾಜ್​ ಸಿಂಗ್​ ಚೌಹಾಣ್
  • ಮಾಜಿ ಸಿಎಂ ಕೆಲಸವನ್ನು ಕಂಡು ಹಲವರಿಂದ ಮೆಚ್ಚುಗೆ, ಕೆಲಚರಿಂದ ವ್ಯಂಗ್ಯ
ಭೋಪಾಲ್: ರಾಜಕಾರಣಿಗಳು ಅಂದಮೇಲೆ ಅವರ ಸುತ್ತ ಸದಾ ನೂರಾರು ಜನರ ದಂಡು, ಭದ್ರತಾ ಸಿಬ್ಬಂದಿಯ ಹಾರಾಟ-ಹೋರಾಟ ಇರುವುದು ಸಾಮಾನ್ಯ. ಇನ್ನು ಅವರ ಕಾರುಗಳ ಸಾಲು ರಸ್ತೆಯಲ್ಲಿ ಹೋಗುತ್ತಿದೆ ಎಂದರೆ ಟ್ರಾಫಿಕ್ ಜಾಮ್ ಆಗುವುದೇ ಹೆಚ್ಚು. ಆದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಬೆಂಗಾವಲು ಪಡೆ ಮಾಡಿದ ಕೆಲಸ ಈಗ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಕೆಲಸದ ನಿಮಿತ್ತ ತಮ್ಮ ಕಚೇರಿಗೆ ಹೋಗುತ್ತಿದ್ದರು. ಆಗ ಅವರು ರಸ್ತೆಯೊಂದರಲ್ಲಿ ಅಪಘಾತ ನಡೆದಿರುವುದನ್ನು ನೋಡಿದ್ದಾರೆ. ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದನ್ನು ಗಮನಿಸಿದ ತಕ್ಷಣ ಚೌಹಾಣ್ ತಮ್ಮ ವಾಹನಗಳನ್ನು ನಿಲ್ಲಿಸಲು ಸೂಚಿಸಿ, ಸ್ವತಃ ಕಾರಿನಿಂದ ಕೆಳಗಿಳಿದು ಸಂತ್ರಸ್ತನ ಬಳಿ ಓಡಿ ಹೋಗಿದ್ದಾರೆ.

ಬಿದ್ದಿರುವ ವ್ಯಕ್ತಿಯ ಪ್ರಾಣ ಉಳಿಸಿದ ಮಾಮಾಜಿ!

ವೈರಲ್ ಆಗಿರುವ ವಿಡಿಯೋದಲ್ಲಿ ಶಿವರಾಜ್ ಸಿಂಗ್ ಅವರು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಶೀಲಿಸುವುದು ಕಾಣಿಸುತ್ತದೆ. ತಡ ಮಾಡದೆ ತಮ್ಮ ಭದ್ರತಾ ಸಿಬ್ಬಂದಿಗೆ ಆ ವ್ಯಕ್ತಿಯನ್ನು ಎಚ್ಚರಿಕೆಯಿಂದ ಎತ್ತಲು ಸೂಚಿಸುತ್ತಾರೆ. ಅಷ್ಟೇ ಅಲ್ಲ, ಗಾಯಾಳುವನ್ನು ತಮ್ಮದೇ ಬೆಂಗಾವಲು ಪಡೆಯ ವಾಹನದಲ್ಲಿ ಮಲಗಿಸಿ, ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವಂತೆ ಚಾಲಕನಿಗೆ ಆದೇಶಿಸುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಮಹಿಳೆಯೊಬ್ಬರು, ಮಾಮಾಜಿ ಅವರು ಈ ಪೀಳಿಗೆಗೆ ಪ್ರಾಣ ಉಳಿಸುವುದು ಎಲ್ಲಕ್ಕಿಂತ ದೊಡ್ಡ ಕೆಲಸ ಎಂದು ನೆನಪಿಸುತ್ತಿದ್ದಾರೆ. ಅಫಘಾತವಾದಾಗ ರಸ್ತೆಯಲ್ಲಿ ಜಗಳವಾಡುವುದಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಬೇಕೆಂದು ಅವರು ಬರೆದುಕೊಂಡಿದ್ದಾರೆ.

ಮೆಚ್ಚುಗೆಯ ನಡುವೆ ಕೇಳಿಬಂತು ಪಿಆರ್ ಅನುಮಾನ

ಯಾವುದೇ ವಿಡಿಯೋ ವೈರಲ್ ಆದರೂ ಅದಕ್ಕೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬರುತ್ತವೆ. ಅದೇ ಸನ್ನಿವೇಶ ಇಲ್ಲಿ ಸಹ ನಡೆದಿದ್ದು ಕೆಲವರು ಚೌಹಾಣ್ ಅವರ ಮಾನವೀಯ ಗುಣವನ್ನು ಕೊಂಡಾಡುತ್ತಿದ್ದರೆ, ಮತ್ತೊಂದು ಕಡೆ ಟೀಕೆಗಳ ಸುರಿಮಳೆಯೇ ಆಗುತ್ತಿದೆ.
ಮಾಮಾಜಿ ಯಾವಾಗಲೂ ಜನರ ಹಿತಕ್ಕಾಗಿ ಬದುಕಿದ ಮನುಷ್ಯ. ಅವರು ಪ್ರಧಾನಿ ಹುದ್ದೆಗೂ ಅರ್ಹರಾಗಿದ್ದು, ಇಂದು ಇವರು ಬಿಜೆಪಿ ಸಂಸ್ಕೃತಿ ಏನೆಂದು ತೋರಿಸಿದ್ದಾರೆ ಎಂದು ಕೆಲವರು ಕೊಂಡಾದಿದ್ದಾರೆ. ಇನ್ನೂ ಕೆಲವರು, ಇವೆಲ್ಲಾ ಕೇವಲ ಪಬ್ಲಿಸಿಟಿ ಸ್ಟಂಟ್​ ಅಷ್ಟೇ, ಪ್ರಧಾನಿ ಮೋದಿಗೆ ಟಕ್ಕರ್​ ಕೊಡಲು ಚೌಹಾಣ್ ಈ ರೀತಿ ಶೋ ಮಾಡುತ್ತಿದ್ದಾರೆ ಎಂದು ವ್ಯಂಗ್ಯಮಾಡಿದ್ದಾರೆ.

ಪೊಲೀಸ್ ವ್ಯವಸ್ಥೆಯ ಮೇಲಿ ಸಾರ್ವಜನಿಕರ ಕಿಡಿ

ಮಾಜಿ ಸಿಎಂ ನಡುರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಯಾವುದೇ ಪೊಲೀಸರು ಲಂಚ ಕೇಳಲಿಲ್ಲ. ಅದೇ ಸಾಮಾನ್ಯ ಜನ ಹೀಗೆ ಮಾಡಿದ್ದರೆ ಸುಮ್ಮನೆ ಇರುತ್ತಿದ್ದರಾ?.ಇನ್ನೂ ಸಾರ್ವಜನಿಕರೇನಾದರೂ ಅಫಘಾತಗೊಂಡ ವ್ಯಕ್ತಿಯನ್ನು ಮುಟ್ಟಿದ್ದೇ ಹೌದಾದರೆ, ಅವನ ಜೀವನ ಪರ್ಯಂತ ಪೊಲೀಸ್​ ಠಾಣೆಯಲ್ಲೇ ಕಳೆಯುವಂತೆ ಮಾಡುತ್ತಿದ್ದರು. ಮೊದಲು ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಬರುವಂತೆ ಮಾಡಿ ಎನ್ನುವುದು ಕಮೆಂಟ್​ ಬಾಕ್ಸ್​ನಲ್ಲಿ ಕೇಳಿಬಂದ ಕೂಗಾಗಿದೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಕೆಲಸವನ್ನು ಪ್ರಚಾರಕ್ಕಾಗಿ ಮಾಡಿದರೋ, ಇಲ್ಲವೋ ಗೊತ್ತಿಲ್ಲ. ಆದರೆ ರಸ್ತೆಯ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಜೀವವೊಂದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವಂತೆ ಮಾಡಿದ್ದು ಮಾತ್ರ ಶ್ಲಾಘನೀಯ. ದೊಡ್ಡ ಹುದ್ದೆಯಲ್ಲಿರುವವರು ಇಂತಹ ಸಣ್ಣ ಮಾನವೀಯ ಕೆಲಸಗಳನ್ನು ಮಾಡಿದಾಗ ಅದು ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡುತ್ತದೆ ಎನ್ನುವುದು ಮಾತ್ರ ಸತ್ಯ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net