ಸಾಧನೆಗಳು: ನಾಲ್ವಡಿಯವರ 38 ವರ್ಷಗಳ (1902ರಿಂದ 1940) ಆಳ್ವಿಕೆಯ ಸಾಧನೆಗಳು ಬಹಳಷ್ಟಿವೆ. ಅವುಗಳಲ್ಲಿ ಪ್ರಮುಖವಾದ ಸಾಧನೆಗಳು ಇಂತಿವೆ. ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾನೆಯ ಕೇಂದ್ರ ಸ್ಥಾಪನೆ, ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ಸ್ಥಾಪನೆ, ಹೆರಾಲ್ಡ್ ಡುಗ್ಲಸ್ ರೈಸ್ (ಬಿ.ಎಲ್. ರೈಸ್ ಅವರ ಮಗ ಮತ್ತು ಮಾರಿಕಣಿವೆ ಅಣಿಕಟ್ಟೆ ಕಟ್ಟಿದ ಇಂಜಿನಿಯರ್) ಅವರ ಮೂಲಕ, ಪ್ರಥಮ ಬಾರಿಗೆ ಮೈಸೂರಿಗೆ ಜರ್ಮನಿಯಿಂದ ಕಾಂಕ್ರೀಟ್ ಕಂಬಗಳನ್ನು ತರಿಸಿ ಅರಣ್ಯದ ಮೂಲಕ ಕೆಜಿಎಫ್ಗೆ ವಿದ್ಯುತ್ ಸರಬರಾಜು ಮಾಡಿಸಿದ್ದು ಅದರಲ್ಲಿ ಪ್ರಮುಖವಾದವು. ಅದಲ್ಲದೆ, ಅರಣ್ಯದಲ್ಲಿ ಬೇಟೆಯಾಡುವುದನ್ನು 1905ರಲ್ಲಿ ನಿಷೇಧಿಸಿದ್ದು, ಮೈಸೂರಿಗೆ 1906ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, 1909ರಲ್ಲಿ ದೇವದಾಸಿ ಪದ್ಧತಿ ನಿಷೇಧಿಸಿದ್ದು, 1911ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರ ಧೂಮಪಾನ ನಿಷೇಧಿಸಿದ್ದು, 1908ರಿಂದ 1931ರವರೆಗೆ ಕನ್ನಂಬಾಡಿ ಕಟ್ಟೆ ನಿರ್ಮಾಣ ಮಾಡಿಸಿದ್ದು, 1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು, 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದು, 1916ರಲ್ಲಿ ಗಂಧದೆಣ್ಣೆ ಕಾರ್ಖಾನೆ ಸ್ಥಾಪಿಸಿದ್ದು, 1918ರಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಹಿಂದುಳಿದವರ ಆಯೋಗ ರಚಿಸಿ ಲೆಸ್ಲಿ ಮಿಲ್ಲರ್ರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು, 1918ರಲ್ಲಿ ರೇಷ್ಮೆ ಕಾರ್ಖಾನೆ ಸ್ಥಾಪಿಸಿದ್ದು, 1921ರಲ್ಲಿ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಆರಂಭಿಸಿದ್ದು, 1926ರಲ್ಲಿ ಅಗ್ರಿಕಲ್ಚರಲಿಸ್ಟ್ ರಿಲೀಫ್ ಆಕ್ಟ್ ಜಾರಿಗೆ ತಂದಿದ್ದು, 1936ರಲ್ಲಿ ವೇಶ್ಯಾವೃತ್ತಿ ನಿಷೇಧ ಕಾನೂನು ಜಾರಿ ಮಾಡಿದ್ದು, 1937ರಲ್ಲಿ ಅರಗು ಮತ್ತು ಬಣ್ಣದ ಕಾರ್ಖಾನೆ ಸ್ಥಾಪಿಸಿದ್ದು ಅವರ ಇನ್ನು ಹಲವು ಪ್ರಮುಖ ಸಾಧನೆಗಳು.