ಕೇರಳದ ಯುವಕನ ಪ್ರಾಮಾಣಿಕತೆಗೆ ವಿದೇಶಿ ಮಹಿಳೆ ಫಿದಾ! 14 ಗಂಟೆ ಪ್ರಯಾಣ ಮಾಡಿ ಡೆಬಿಟ್ ಕಾರ್ಡ್ ಹಿಂತಿರುಗಿಸಿದ DHL ಉದ್ಯೋಗಿ

DHL
DHL
Published on
ತಿರುವನಂತಪುರಂ: ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬರು ಕೇರಳದ ಯುವಕನ(DHL) ಪ್ರಾಮಾಣಿಕತೆ ಮತ್ತು ಮಾನವೀಯತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಘಟನೆ ಈಗ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದುಹೋದ ಡೆಬಿಟ್ ಕಾರ್ಡ್ ಅನ್ನು ಹಿಂದಿರುಗಿಸಲು ಒಬ್ಬ ಯುವಕ ಬರೋಬ್ಬರಿ 14 ಗಂಟೆಗಳ ಪ್ರಯಾಣ ಮಾಡಿದ ಕಥೆ ನೆಟ್ಟಿಗರ ಮನಗೆದ್ದಿದೆ.
ವಿದೇಶಿ ಪ್ರವಾಸಿಗೆಯಾಗಿರುವ ಇಂಡಿಯಾ ವಿಟ್ಕಿನ್ (India Witkin) ಅವರು ಕೇರಳ ಪ್ರವಾಸದಲ್ಲಿದ್ದ ವೇಳೆ ಎಟಿಎಂನಲ್ಲಿ ಹಣ ತೆಗೆಯುವಾಗ ತಮ್ಮ ಡೆಬಿಟ್ ಕಾರ್ಡ್ ಅನ್ನು ಅಲ್ಲೇ ಮರೆತುಬಿಟ್ಟಿದ್ದರು. ಆದರೆ ಈ ವಿಷಯ ಅವರಿಗೆ ಹಲವು ಗಂಟೆಗಳ ಬಳಿಕ ಗೊತ್ತಾಯಿತು.
ಆ ವೇಳೆಗೆ ಅವರು ಎಟಿಎಂ ಇದ್ದ ಸ್ಥಳದಿಂದ ಸುಮಾರು 5 ಗಂಟೆಗಳ ದೂರ ಪ್ರಯಾಣಿಸಿದ್ದರು. ಕೆಲವೇ ಗಂಟೆಗಳಲ್ಲಿ ವಿದೇಶಕ್ಕೆ ಮರಳುವ ವಿಮಾನವಿದ್ದ ಕಾರಣ ಅವರು ಆತಂಕಕ್ಕೆ ಒಳಗಾದರು. ಡೆಬಿಟ್ ಕಾರ್ಡ್ ಇಲ್ಲದೆ ಪ್ರಯಾಣ ಮುಂದುವರಿಸುವುದು ಕಷ್ಟವಾಗಿತ್ತು.ಈ ವೇಳೆ ಅವರಿಗೆ ಅದೇ ದಿನ ಪರಿಚಯವಾಗಿದ್ದ DHL ಸಂಸ್ಥೆಯ ಉದ್ಯೋಗಿ ಕೃಷ್ಣ ನೆನಪಾದರು. ತಕ್ಷಣ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ವಿವರಿಸಿದರು. ವಿಷಯ ತಿಳಿದ ಕೃಷ್ಣ ತಕ್ಷಣ ಎಟಿಎಂಗೆ ತೆರಳಿ ಪರಿಶೀಲನೆ ನಡೆಸಿದರು.
ಅಚ್ಚರಿಯ ಸಂಗತಿ ಏನೆಂದರೆ, ಹಲವು ಗಂಟೆಗಳಾದರೂ ಡೆಬಿಟ್ ಕಾರ್ಡ್ ಇನ್ನೂ ಎಟಿಎಂನಲ್ಲೇ ಸುರಕ್ಷಿತವಾಗಿ ಇತ್ತು. ಆದರೆ ಕಾರ್ಡ್ ಪತ್ತೆಯಾದರೂ ಮತ್ತೊಂದು ದೊಡ್ಡ ಸಮಸ್ಯೆ ಎದುರಾಯಿತು. ಅದು ಭಾನುವಾರವಾಗಿದ್ದರಿಂದ ಯಾವುದೇ ಕೊರಿಯರ್ ಸೇವೆಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಮಹಿಳೆಯ ವಿಮಾನಕ್ಕೆ ಕೇವಲ 36 ಗಂಟೆಗಳಷ್ಟೇ ಬಾಕಿ ಇತ್ತು.ಇಂತಹ ಪರಿಸ್ಥಿತಿಯಲ್ಲಿ ಕೃಷ್ಣ ವಿಭಿನ್ನ ನಿರ್ಧಾರ ಕೈಗೊಂಡರು. ತಮ್ಮ ಸ್ನೇಹಿತರ ಸಹಾಯದೊಂದಿಗೆ ಆಟೋ ರಿಕ್ಷಾ ಮತ್ತು ಸಾರ್ವಜನಿಕ ಸಾರಿಗೆ ಬಳಸಿಕೊಂಡು ಕಾರ್ಡ್ ಅನ್ನು ಸ್ವತಃ ತಲುಪಿಸಲು ಮುಂದಾದರು. ಈ ಕಾರ್ಯಕ್ಕಾಗಿ ಅವರು ಒಟ್ಟು ಸುಮಾರು 14 ಗಂಟೆಗಳ ಕಾಲ ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊನೆಗೆ ಇಂಡಿಯಾ ವಿಟ್ಕಿನ್ ಅವರಿಗೆ ಡೆಬಿಟ್ ಕಾರ್ಡ್ ಸುರಕ್ಷಿತವಾಗಿ ತಲುಪಿತು. ಇದರಿಂದ ಸಂತೋಷಗೊಂಡ ಅವರು ಕೃಷ್ಣ ಅವರಿಗೆ ಹಣ ನೀಡಲು ಮುಂದಾದರು. ಆದರೆ ಕೃಷ್ಣ ಅದನ್ನು ವಿನಯದಿಂದ ನಿರಾಕರಿಸಿದರು. ಅವರ ಉತ್ತರ ಇನ್ನಷ್ಟು ಜನರ ಮನಗೆದ್ದಿದೆ. "ನೀವು ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುತ್ತಿದ್ದೀರಿ. ಆ ಹಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ" ಎಂದು ಕೃಷ್ಣ ಹೇಳಿದ್ದಾರೆ.
ℹ️

ಈ ಘಟನೆಯ ಬಗ್ಗೆ ಇಂಡಿಯಾ ವಿಟ್ಕಿನ್ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಕೇರಳದ ಜನರ ಆತಿಥ್ಯ, ಪ್ರಾಮಾಣಿಕತೆ ಮತ್ತು ಸಹಾಯ ಮಾಡುವ ಮನೋಭಾವವನ್ನು ಅವರು ಕೊಂಡಾಡಿದ್ದಾರೆ.ಸದ್ಯ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೃಷ್ಣ ಅವರ ಮಾನವೀಯತೆ ಮತ್ತು ನಿಸ್ವಾರ್ಥ ಸಹಾಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. "ಇಂತಹ ಜನರೇ ಭಾರತದ ನಿಜವಾದ ಮುಖ" ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net