ಐಸಿಯುನಲ್ಲಿ ವಿದೇಶಗಳ ಆರೋಗ್ಯ ವ್ಯವಸ್ಥೆ; ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಗಮನ ಸೆಳೆಯುತ್ತಿದೆ ಭಾರತ

 ಭಾರತ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಮಹತ್ವದ ಸ್ಥಾನ ಗಳಿಸಿದೆ
ಭಾರತ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಮಹತ್ವದ ಸ್ಥಾನ ಗಳಿಸಿದೆ
Published on

ನವದೆಹಲಿ: ಕೆನಡಾದಲ್ಲಿ ಭಾರತೀಯ ಮೂಲದ ಪ್ರಶಾಂತ್ ಶ್ರೀಕುಮಾರ್ ಎಂಬ 44 ವರ್ಷದ ವ್ಯಕ್ತಿ ಡಿ. 22ರಂದು ಎಡ್​ವುಂಟನ್​ನ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 8 ಗಂಟೆಗಳಿಗೂ ಹೆಚ್ಚು ಕಾಲ ಕಾದರೂ, ಚಿಕಿತ್ಸೆ ಸಿಗದೆ ಹೃದಯಾಘಾತದಿಂದ ಮರಣ ಹೊಂದಿದರು. ಈ ಘಟನೆ ಕೆನಡಾ ಆರೋಗ್ಯ ವ್ಯವಸ್ಥೆಯ ಗಂಭೀರ ಸಮಸ್ಯೆಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದ್ದು, ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಮತ್ತೊಂದೆಡೆ, ಚಿಕಿತ್ಸೆಗಾಗಿ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದು, ಈ ಮೂಲಕ ಭಾರತ ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿದೆ.

ಕಾಯಿಲೆಗಳ ಹೆಚ್ಚಳ, ದಿಢೀರ್ ಅನಾರೋಗ್ಯದಂಥ ಸ್ಥಿತಿಯಲ್ಲಿ ಆಗುತ್ತಿರುವ ಚಿಕಿತ್ಸೆ ವಿಳಂಬ ಜಾಗತಿಕವಾಗಿ ಜನರ ಗಂಭೀರ ಚಿಂತೆ ಮತ್ತು ಆತಂಕಕ್ಕೆ ಕಾರಣವಾಗಿದೆ. ಕಾಯುವಿಕೆ ಅವಧಿಯನ್ನು ತಗ್ಗಿಸಲು ಹಲವು ರಾಷ್ಟ್ರಗಳು ಪ್ರಯತ್ನ ಪಡುತ್ತಿವೆಯಾದರೂ, ಪೂರ್ಣಪ್ರಮಾಣದ ಯಶಸ್ಸು ದೊರಕಿಲ್ಲ. ಆದರೆ, ಸಮಾಧಾನದ ಸಂಗತಿ ಎಂದರೆ ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ, ಭಾರತ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ಕಾಳಜಿ ನಿಟ್ಟಿನಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಭಾರತದಲ್ಲಿ ಸಕಾಲಿಕವಾಗಿ ಚಿಕಿತ್ಸೆ ಸಿಗುತ್ತಿರುವುದರ ಬಗ್ಗೆ ವೈದ್ಯಕೀಯ ರಂಗದ ತಜ್ಞರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಚಿಕಿತ್ಸೆಗಾಗಿ ಅನ್ಯ ದೇಶಗಳಿಂದ ಭಾರತಕ್ಕೆ ಆಗಮಿಸುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು, ಭಾರತೀಯ ವೈದ್ಯಕೀಯ ರಂಗದ ದಕ್ಷತೆ ಹಾಗೂ ಗುಣಮಟ್ಟದ ಚಿಕಿತ್ಸೆಗೆ ಸಾಕ್ಷಿಯಾಗಿದೆ. ಮುಂಬರುವ ಐದು ವರ್ಷಗಳಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಬರುವ ವಿದೇಶಿ ರೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದಿವೆ ಸಮೀಕ್ಷಾ ವರದಿಗಳು. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ 32 ಸದಸ್ಯ ರಾಷ್ಟ್ರಗಳು 2030ರ ಹೊತ್ತಿಗೆ 4 ಲಕ್ಷ ವೈದ್ಯರ ಕೊರತೆಯನ್ನು ಅನುಭವಿಸಲಿವೆ. ಮಾತ್ರವಲ್ಲ 25 ಲಕ್ಷ ನರ್ಸ್​ಗಳ ಕೊರತೆ ಕಾಡಲಿದೆ. ಭಾರತದಲ್ಲಿ ಶಸ್ತ್ರಚಿಕಿತ್ಸೆಗೆ ಕಾಯುವಿಕೆ ಅವಧಿ ಬರೀ 12 ದಿನಗಳಾಗಿದ್ದು, ಇದನ್ನು ಇನ್ನಷ್ಟು ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಭಾರತದ ಆರೋಗ್ಯ ವ್ಯವಸ್ಥೆ

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಸರ್ಕಾರಿ, ಖಾಸಗಿ ರಂಗಗಳು ವಿಶೇಷ ಪಾತ್ರ ವಹಿಸಿವೆ. ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಆಯುಷ್ (ಆಯುರ್ವೆದ, ಯುನಾನಿ, ಹೋಮಿಯೋಪಥಿ) ಸೇವೆಗಳು ಸಹ ಸರ್ಕಾರಿ ಧನಸಹಾಯದಡಿ ಲಭ್ಯ. ಖಾಸಗಿ ಆಸ್ಪತ್ರೆಗಳು ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ವಿಶೇಷ ಚಿಕಿತ್ಸೆಗಳನ್ನು (ಉದಾ: ಹೃದ್ರೋಗ, ಕ್ಯಾನ್ಸರ್) ನೀಡುತ್ತವೆ, ಆದರೆ ವೆಚ್ಚ ಹೆಚ್ಚು.

ವೈದ್ಯರ ಲಭ್ಯತೆ: ಭಾರತದಲ್ಲಿ 2025ರ ಏಪ್ರಿಲ್ 1ರವರೆಗೆ 13,86,150 ಅಲೋಪಥಿ ವೈದ್ಯರು ಮತ್ತು 7,51,768 ಆಯುರ್ವೆದ (ಆಯುಷ್) ವೈದ್ಯರಿದ್ದಾರೆ. ಪ್ರಸ್ತುತ 834 ಜನರಿಗೆ ಒಬ್ಬ ವೈದ್ಯ ಲಭ್ಯವಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ತುಂಬ ಇದೆ.

ಇಪ್ಪತ್ಮೂರು ಸಾವಿರ ವೈದ್ಯರ ಕೊರತೆ

ಕೆನಡಾದಲ್ಲಿ ಸುಮಾರು 23 ಸಾವಿರ ಕುಟುಂಬ ವೈದ್ಯರ ಕೊರತೆಯಿದೆ ಎಂದು ಈ ವರ್ಷ ಜನವರಿಯಲ್ಲಿ ಸರ್ಕಾರ ಪ್ರಕಟಿಸಿದ ವರದಿ ಹೇಳಿತ್ತು. ವೈದ್ಯರ ತೀವ್ರ ಅಭಾವದಿಂದಾಗಿ ಜನರು ಅಗತ್ಯ ಪ್ರಾಥಮಿಕ ಹಾಗೂ ವಿಶೇಷ ಚಿಕಿತ್ಸೆಗಳನ್ನು ಪಡೆಯುವುದು ದುಸ್ತರವಾಗಿದೆ. ಕೆನಡಾದ 5.9 ದಶಲಕ್ಷ ವಯಸ್ಕರು, ಅಂದರೆ ಪ್ರತಿ ಐವರಲ್ಲಿ ಒಬ್ಬರು ಕ್ಲಿನಿಕ್, ಕುಟುಂಬ ವೈದ್ಯರು ಮತ್ತು ನರ್ಸ್ ಮುಂತಾದವರ ನಿಯಮಿತ ಸೇವೆಯಿಂದ ವಂಚಿತರಾಗಿದ್ದಾರೆ ಎಂದು ಕೆನಡಾ ವೈದ್ಯಕೀಯ ಸಂಸ್ಥೆ (ಸಿಎಂಎ) ಇತ್ತೀಚೆಗೆ ನಡೆಸಿದ ಅಧ್ಯಯನ ವರದಿ ತಿಳಿಸಿದೆ. 

ತುರ್ತು ಪ್ರಕರಣಗಳಲ್ಲಿ ‘ಗೋಲ್ಡನ್ ಅವರ್’ ತುಂಬ ಮಹತ್ವದ್ದು. ಗಂಭೀರ ಕಾಯಿಲೆ, ಹೃದಯಾಘಾತ ಅಥವಾ ಅಪಘಾತಗಳ ಸಂದರ್ಭದಲ್ಲಿ ರೋಗಿ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯ ಒಳಗೆ ಸಕಾಲಿಕ ಚಿಕಿತ್ಸೆ ದೊರೆತರೆ ರೋಗಿಯ ಪ್ರಾಣ ಉಳಿಸಬಹುದು. ಆದರೆ, ಕೆನಡಾದಲ್ಲಿ ಎಂಥದ್ದೇ ತುರ್ತು ಸ್ಥಿತಿ ಇದ್ದರೂ ಚಿಕಿತ್ಸೆಗಾಗಿ 8ರಿಂದ 16 ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ಇದೆ. ಇದೇ ರೀತಿ ಪ್ರಶಾಂತ್ 8 ಗಂಟೆ ಕಾದರೂ ಚಿಕಿತ್ಸೆ ದೊರೆಯದೆ ಪ್ರಾಣಬಿಟ್ಟರು. ಮುಂಬರುವ ವರ್ಷಗಳಲ್ಲಿ ಕೆನಡಾ, ವೈದ್ಯರು ಮತ್ತು ನರ್ಸ್​ಗಳ ಇನ್ನಷ್ಟು ಕೊರತೆಯನ್ನು ಅನುಭವಿಸಲಿದೆ. ಈಗಾಗಲೇ ಅಲ್ಲಿನ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳು 200% ದಟ್ಟಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಬಂದ ರೋಗಿ ಚಿಕಿತ್ಸೆಗಾಗಿ ದೀರ್ಘಕಾಲ ಕಾಯುವಂತಾಗಿದೆ.

ಚಿಕಿತ್ಸೆಯಲ್ಲಿ ತಂತ್ರಜ್ಞಾನ

ಕೃತಕ ಬುದ್ಧಿಮತ್ತೆ: ಚಿಕಿತ್ಸಾ ವಿಧಾನಗಳಲ್ಲಿ ಮತ್ತು ಶಸ್ತ್ರಚಿಕಿತ್ಸೆಯ ಶೆಡ್ಯೂಲಿಂಗ್ ನಿಗದಿಗಾಗಿ ಕೃತಕ ಬುದ್ಧಿಮತ್ತೆ (ಎಐ) ನೆರವು ಪಡೆಯಲಾಗುತ್ತಿದೆ.

ಆರೋಗ್ಯದ ಡಿಜಿಟಲ್ ವೇದಿಕೆಗಳು: ಡಿಜಿಟಲ್ ವೇದಿಕೆಗಳು ಸಂವಹನವನ್ನು ಸುಲಭಗೊಳಿಸಿವೆ. ಚಿಕಿತ್ಸೆಗೆ ತೆರಳಬೇಕಾದ ದಿನಾಂಕ, ಸಮಯ, ವೈದ್ಯರ ಲಭ್ಯತೆ, ಚಿಕಿತ್ಸೆಗಾಗಿ ಫಾಲೋಅಪ್, ತೆಗೆದುಕೊಳ್ಳಬೇಕಾದ ಔಷಧಗಳು ಹೀಗೆ ಎಲ್ಲ ಮಾಹಿತಿಗಳು ಆಪ್ ಅಥವಾ ವೆಬ್ ಪೋರ್ಟಲ್ ಮೂಲಕ ರೋಗಿಗಳಿಗೆ ಲಭ್ಯ.

ರೋಬೋಟಿಕ್ಸ್ ಮತ್ತು ಅಟೋಮೇಶನ್: ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ರೋಗಿಯ ಆರೈಕೆಗೆ ಸಂಬಂಧಿಸಿ ರೋಬೋಟಿಕ್ಸ್ ಮತ್ತು ಆಟೋಮೇಶನ್ ಬಳಸಲಾಗುತ್ತಿದೆ.

ಹೀಗಿದೆ ಕೆನಡಾದ ಸ್ಥಿತಿ

ಕೆನಡಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ವ್ಯವಸ್ಥೆ ಹಳಿ ತಪ್ಪಿದೆ. ಆದರೆ, ಸಕಾಲಕ್ಕೆ ಇದನ್ನು ಸರಿಯಾಗಿಸುವ ಪ್ರಯತ್ನ ಮಾಡದಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ವೈದ್ಯರ ಕೊರತೆಯಿಂದಾಗಿ ರೋಗಿಗಳು ಚಿಕಿತ್ಸೆಗಾಗಿ ದೀರ್ಘಕಾಲ ಕಾಯುವಂತಾಗುತ್ತಿದೆ ಉದಾಹರಣೆಗೆ, ತುರ್ತು ಚಿಕಿತ್ಸೆಗೂ 8 ಗಂಟೆಗಳ ಕಾಲ ಕಾಯಬೇಕಾದ ದುಸ್ಥಿತಿ ಇದೆ. 2023ರಲ್ಲಿ ಕೆನಡಾದ ಆರೋಗ್ಯ ವ್ಯವಸ್ಥೆಯು ಡಾಕ್ಟರ್​ಗಳ ಲಭ್ಯತೆಯಲ್ಲಿ 30 ದೇಶಗಳಲ್ಲಿ 27ನೇ ಸ್ಥಾನ ಮತ್ತು ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯಲ್ಲಿ 25ನೇ ಸ್ಥಾನದಲ್ಲಿದೆ. 

ಕೆನಡಾದ ಆರೋಗ್ಯ ವ್ಯವಸ್ಥೆ 1984ರ ಕೆನಡಾ ಹೆಲ್ತ್ ಆಕ್ಟ್ ಪ್ರಕಾರ ನಿರ್ವಹಿಸಲ್ಪಡುತ್ತದೆ. ಪ್ರಾಂತ್ಯಗಳು ಮತ್ತು ಸ್ಥಳೀಯ ಆಡಳಿತಗಳು ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಆದರೆ, ವಾಸ್ತವವೆಂದರೆ ದೇಶದ ಬಹುಪಾಲು ಜನರಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಕೂಡ ಲಭ್ಯ ಇಲ್ಲ.

ಭಾರತ ಏಕೆ ಬೆಸ್ಟ್?

ವೈದ್ಯಕೀಯ ಸೇವೆಗಳ ಜಾಲ ವಿಸ್ತಾರಗೊಂಡಿದೆ. ಮಹಾ ನಗರಗಳಿಂದ ಹಿಡಿದು ಹೋಬಳಿ ಮಟ್ಟದವರೆಗೆ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮಾತ್ರವಲ್ಲ, ಮಲ್ಪಿ ಸ್ಪೆಶಾಲಿಟಿ ಆಸ್ಪತ್ರೆಗಳ ಜಾಲವೂ ಬೆಳೆದಿದೆ.

2. ಪಾಶ್ಚಾತ್ಯ ಮತ್ತು ಅಭಿವೃದ್ಧಿ ಹೊಂದಿದ ದೇಶಗಳನ್ನು ಹೋಲಿಸಿದರೆ ಭಾರತದಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ ಮತ್ತು ಗುಣಮಟ್ಟದ ಚಿಕಿತ್ಸೆ ಲಭ್ಯ.

3. ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ಲಭ್ಯತೆ, 24/7 ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಲಭ್ಯತೆ.

4. ಖಾಸಗಿ ಹಾಗೂ ಸಾರ್ವಜನಿಕ ಸಹ ಭಾಗಿತ್ವದಲ್ಲಿ (ಪಿಪಿಪಿ) ಕೂಡ ಆರೋಗ್ಯ ಸೌಕರ್ಯಗಳು ಲಭ್ಯವಾಗುತ್ತಿವೆ.

5. ಭಾರತದಲ್ಲಿ ಹಲವು ಸಂಘ ಸಂಸ್ಥೆಗಳು, ಧಾರ್ವಿುಕ ಸಂಸ್ಥಾನಗಳು ಆಸ್ಪತ್ರೆಗಳನ್ನು ಪರಿಣಾಮಕಾರಿಯಾಗಿ ಮತ್ತು ಕಾಳಜಿಯಿಂದ ನಿರ್ವಹಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net