ವಿವಾದ ಬೆನ್ನಲ್ಲೇ ಮೊಟ್ಟೆ ಪ್ರಿಯರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ! ದಾಖಲೆ ಮಟ್ಟ ತಲುಪಿದ ಎಗ್​ ದರ | Egg Price

ಮೊಟ್ಟೆ ದರದಲ್ಲಿ ದಿಢೀರ್ ಬದಲಾವಣೆ
ಮೊಟ್ಟೆ ದರದಲ್ಲಿ ದಿಢೀರ್ ಬದಲಾವಣೆ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ಕೋಳಿ ಮೊಟ್ಟೆ ಸೇವನೆ ಬಗ್ಗೆ ವಿವಾದ ಸೃಷ್ಟಿ
  • ಈ ವಿವಾದ ಅಂತ್ಯಕಂಡ ಬೆನ್ನಲ್ಲೇ ಮೊಟ್ಟೆ ದರದಲ್ಲಿ ದಿಢೀರ್ ಏರಿಕೆ
  • ಒಂದು ಮೊಟ್ಟೆಯ ಬೆಲೆ 7.50 ರೂ.ನಿಂದ 8 ರೂ.ಗೆ ಹೆಚ್ಚಳ
ಬೆಂಗಳೂರು: ಇತ್ತೀಚೆಗಷ್ಟೇ ಕೋಳಿ ಮೊಟ್ಟೆಗಳ ಸೇವನೆ ಆರೋಗ್ಯಕ್ಕೆ ಕುತ್ತು ಎಂಬ ಸುದ್ದಿಯೊಂದು ದೇಶದಲ್ಲಿ ಭಾರೀ ಸಂಚಲನ ಹಾಗೂ ಆತಂಕ ಸೃಷ್ಟಿಸಿತು. ಆರೋಗ್ಯದ ಕಣಜ ಎಂದೇ ಕರೆಯಲ್ಪಡುವ ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶವಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಅನೇಕ ಜನರಲ್ಲಿ ಭೀತಿ ಉಂಟುಮಾಡಿತು. ಒಂದಷ್ಟು ಪರೀಕ್ಷೆಗಳ ಬಳಿಕ ಮೊಟ್ಟೆ ತಿನ್ನಲು ಸುರಕ್ಷಿತವಾಗಿದ್ದು, ಯಾವುದೇ ಕ್ಯಾನ್ಸರ್​ಕಾರಕ ಕಂಡುಬಂದಿಲ್ಲ ಎಂದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ಪಷ್ಟಪಡಿಸಿತು. ಇದರ ಬೆನ್ನಲ್ಲೇ ದೇಶದ ಹಲವೆಡೆ ಕೋಳಿ ಮೊಟ್ಟೆಗಳ ದರದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.
ಪ್ರತಿನಿತ್ಯದ ಪ್ರೋಟಿನ್​ಗಾಗಿ ಕೋಳಿ ಮೊಟ್ಟೆಗಳ ಮೇಲೆ ಹೆಚ್ಚು ಅವಲಂಬಿತರಾಗಿರುವ ಅನೇಕರಿಗೆ ಈ ಬೆಲೆ ಏರಿಕೆ ಸದ್ಯ ಆಘಾತ ತಂದೊಡ್ಡಿದೆ. ದಿನದಿಂದ ದಿನಕ್ಕೆ ಬೆಲೆಗಳು ಏರುತ್ತಿರುವುದರಿಂದ, ಕೋಳಿ ಮೊಟ್ಟೆಗಳು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿ ಪರಿಣಮಿಸಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೆಲವು ತಿಂಗಳ ಹಿಂದೆ, ಮುಕ್ತ ಮಾರುಕಟ್ಟೆಯಲ್ಲಿ ಒಂದು ಕೋಳಿ ಮೊಟ್ಟೆಯ ಬೆಲೆ 5 ರೂ. ಇತ್ತು. ಅದಾದ ಬಳಿಕ, 6 ರೂ.ಗೆ ಏರಿತು. ಆದರೀಗ, ಒಂದು ಮೊಟ್ಟೆಯ ಬೆಲೆ 7.50ರಿಂದ 8 ರೂ.ಗೆ ತಲುಪಿದೆ.
ಪ್ರಸ್ತುತ, ಒಂದು ಮೊಟ್ಟೆ 8 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಬಹುತೇಕ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಯ ಬೆಲೆ 7.30 ರೂ.ಗೆ ಏರಿರುವುದು ಗಮನಾರ್ಹ. ಈ ಹಿಂದೆ, ಒಂದು ಟ್ರೇ (30 ಮೊಟ್ಟೆಗಳು) 160 ರೂ.ನಿಂದ 170 ರೂ.ಗೆ ಲಭ್ಯವಿತ್ತು. ಆದರೀಗ, ಅದು 210 ರೂ.ನಿಂದ 210 ರೂ.ಗೆ ತಲುಪಿದೆ.
ಪೌಲ್ಟ್ರಿ ಉದ್ಯಮದ ಇತಿಹಾಸದಲ್ಲಿ ಮೊಟ್ಟೆಯ ಬೆಲೆಗಳು ಈ ಮಟ್ಟಿಗಿನ ಹೆಚ್ಚಳ ಕಂಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಈಗಿರುವ ಪರಿಸ್ಥಿತಿಯಲ್ಲಿ, ಮುಂದಿನ ಕೆಲವು ದಿನಗಳಲ್ಲಿ ಮೊಟ್ಟೆಯ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಪ್ರತಿನಿತ್ಯ ಜಿಮ್​, ವ್ಯಾಯಾಮ ಮಾಡುವ ಜನರು, ಮೊಟ್ಟೆಯನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈ ವರ್ಗದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂಬುದು ಖಚಿತ. ಕ್ರಿಸ್​ಮಸ್​ ಹಾಗೂ ಹೊಸ ವರ್ಷ ಹಿನ್ನೆಲೆ ಕೇಕ್​ಗಳ ಮಾರಾಟ ಅಧಿಕ. ಹೀಗಾಗಿ, ಮೊಟ್ಟೆಗಳಿಗೆ ಬೇಡಿಕೆ ಕೂಡ ಹೆಚ್ಚಿದೆ. ಇದು ಬೆಲೆ ಏರಿಕೆಗೆ ಒಂದು ಬಲವಾದ ಕಾರಣ ಎಂದೇ ಹೇಳಬಹುದು.

ಮೊಟ್ಟೆ ವಿವಾದ ಶುರುವಾಗಿದ್ದು ಹೇಗೆ?

ಅಂದಹಾಗೆ, ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿದೆ ಎಂಬ ಚರ್ಚೆಯು ಇತ್ತೀಚಿನ ಒಂದು ವೈರಲ್ ಲ್ಯಾಬ್ ರಿಪೋರ್ಟ್‌ನಿಂದ ಹುಟ್ಟಿಕೊಂಡಿತು. ಟ್ರಸ್ಟಿಫೈಡ್ ನೆಟ್‌ವರ್ಕ್ ಎಂಬ ಸಂಸ್ಥೆಯು ಎಗ್ಗೋಜ್ ನ್ಯೂಟ್ರಿಷನ್ ಬ್ರ್ಯಾಂಡ್‌ನ ಮೊಟ್ಟೆಗಳನ್ನು ಪರೀಕ್ಷಿಸಿ, ಅದರಲ್ಲಿ ನಿಷೇಧಿತ ಆ್ಯಂಟಿಬಯೋಟಿಕ್‌ಗಳಾದ ನೈಟ್ರೋಫ್ಯೂರಾನ್ ಮತ್ತು ನೈಟ್ರೋಇಮಿಡಾಜೋಲ್ ಅಂಶಗಳು ಕಂಡುಬಂದಿವೆ. ಇವು ಕ್ಯಾನ್ಸರ್​ಕಾರಕಗಳು ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿತು.
ಈ ವಿಡಿಯೋ ವೈರಲ್​ ಆಗಿ, "ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ" ಚರ್ಚೆ ಹುಟ್ಟಿಕೊಂಡಿತು. ಇದು ಕರ್ನಾಟಕದ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು "ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ, ತಿನ್ನಲು ಸುರಕ್ಷಿತ" ಎಂದು ಸ್ಪಷ್ಟಪಡಿಸಿದರು. ಇದರ ನಡುವೆ ಎಗ್ಗೋಜ್ ಕಂಪನಿಯು ತಮ್ಮ ಮೊಟ್ಟೆಗಳು ಆ್ಯಂಟಿಬಯೋಟಿಕ್-ಮುಕ್ತ ಎಂದು ಹೇಳಿ, ಹೊಸ ಪರೀಕ್ಷೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net