ಬಿಎಸ್ಪಿಗೆ ಆಕಾಶ್ ಆನಂದ್ ವಾಪಸ್ ಆಗಬೇಕಾದ್ರೆ ಮಾವ ರಾಜಕೀಯ ಬಿಡಬೇಕಂತೆ!...ಅಳಿಯನಿಗೆ ಮಾಯಾವತಿ ವಿಚಿತ್ರ ಕಂಡಿಷನ್! | Mayawati

 Mayawati | ಅಳಿಯನಿಗೆ ಮಾಯಾವತಿ ವಿಚಿತ್ರ ಕಂಡಿಷನ್!
Mayawati | ಅಳಿಯನಿಗೆ ಮಾಯಾವತಿ ವಿಚಿತ್ರ ಕಂಡಿಷನ್!
Published on
ಲಖನೌ: ಬಹುಜನ ಸಮಾಜವಾದಿ ಪಾರ್ಟಿಯ (ಬಿಎಸ್ಪಿ) ಅಧಿನಾಯಕಿ ಮಾಯಾವತಿ ತಮ್ಮ ಸೋದರಸಂಬಂಧಿ ಆಕಾಶ್ ಆನಂದ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧರಾಗಿದ್ದು, ಇದು ಅವರ ರಾಜಕೀಯ ಭವಿಷ್ಯದ ಕುರಿತು ಮಾಯಾವತಿ ತೆಗೆದುಕೊಳ್ಳುತ್ತಿರುವ ಮೂರನೇ ನಿರ್ಧಾರವಾಗಿದೆ. ಈ ಬಾರಿ ಮಾಯಾವತಿ (Mayawati) ಒಂದು ಕಠಿಣ ಷರತ್ತನ್ನು ವಿಧಿಸಿದ್ದಾರೆ.
ಆಕಾಶ್ ಆನಂದ್ ಅವರ ಮಾವ, ರಾಜ್ಯಸಭೆಯ ಮಾಜಿ ಸದಸ್ಯರು ಆಗಿರುವ ಅಶೋಕ್ ಸಿದ್ಧಾರ್ಥ್ ಅವರು ರಾಜಕೀಯದಿಂದ ಸಂಪೂರ್ಣ ಸನ್ಯಾಸ ಪಡೆಯಬೇಕು. ಅಂದರೆ ಕೇವಲ ನಿವೃತ್ತಿಯಾಗುವುದಷ್ಟೇ ಅಲ್ಲ, ರಾಜಕೀಯವನ್ನು ಸಂಪೂರ್ಣವಾಗಿ ತೊರೆಯಬೇಕು, ಆಗ ಮಾತ್ರ ಆಕಾಶ್​ರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಮಾಯಾವತಿ ಎಕ್ಸ್ ಪೋಸ್ಟ್​!...

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಯಾವತಿ, ಅಶೋಕ್ ಸಿದ್ಧಾರ್ಥ್ ಈ ಷರತ್ತನ್ನು ಪೂರೈಸಿದ ನಂತರ ಆಕಾಶ್ ಆನಂದ್ ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ಆ ಬಳಿಕ ಅವರಿಂದ ಹಿಂಪಡೆಯಲಾದ ಜವಾಬ್ದಾರಿಗಳನ್ನು ಮರಳಿ ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಬಿಎಸ್ಪಿಯ ಮುಖ್ಯ ರಾಷ್ಟ್ರೀಯ ಸಂಚಾಲಕರಾಗಿದ್ದ ಆಕಾಶ್ ಆನಂದ್ ಇನ್ನೂ ಹೆಚ್ಚು ಪರಿಪಕ್ವತೆಯನ್ನು ಸಾಧಿಸಬೇಕಾಗಿದೆ ಎಂದು ಹೇಳಿ ಮಾಯಾವತಿ ಕಳೆದ ವಾರವಷ್ಟೇ ಅವರ ನಾಯಕತ್ವದ ಜವಾಬ್ದಾರಿಯನ್ನು ಹಿಂಪಡೆದಿದ್ದರು.
ಅಶೋಕ್ ಸಿದ್ಧಾರ್ಥ್ ಅವರು ಪಕ್ಷದ ಗುರಿಗಿಂತ ವೈಯಕ್ತಿಕ ಹಾಗೂ ಕೌಟುಂಬಿಕ ಹಿತಾಸಕ್ತಿ ಮತ್ತು ಮಹತ್ವಾಕಾಂಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ, ಹೀಗಾಗಿ ಆಕಾಶ್ ಆನಂದ್ ಕೂಡ ಅವರೊಂದಿಗೆ ಇದರ ಪರಿಣಾಮವನ್ನು ಎದುರಿಸಬೇಕಾಯಿತು ಎಂದು ಮಾಯಾವತಿ ತಿಳಿಸಿದ್ದಾರೆ.
ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಅವರ ಮಗ ಹಾಗೂ ಒಂದು ಕಾಲದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಲ್ಪಟ್ಟಿದ್ದ ಆಕಾಶ್ ಆನಂದ್​ರಿಗೆ 2024 ರಿಂದ ಅನೇಕ ಬಾರಿ ಪಕ್ಷದ ಜವಾಬ್ದಾರಿಗಳನ್ನು ನೀಡಿ ಮತ್ತೆ ಹಿಂಪಡೆದಿರುವ ಉದಾಹರಣೆಗಳಿವೆ. ಆನಂದ್ ಮಾವ ಅಶೋಕ್ ಸಿದ್ಧಾರ್ಥ್ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದು, ಸಿದ್ಧಾರ್ಥ್ ಅವರನ್ನು 2025 ರಲ್ಲಿ ಬಿಎಸ್ಪಿಯಿಂದ ಉಚ್ಚಾಟಿಸಲಾಗಿತ್ತು ಮತ್ತು ನಂತರ ಅವರು ಮತ್ತೆ ವಾಪಸ್ ಬಂದಿದ್ದರು. ಇತ್ತೀಚೆಗೆ, ಆಕಾಶ್ ಆನಂದ್ ನಾಯಕರಾಗಿ ಅಲ್ಲ, ಕೇವಲ ಪಕ್ಷದ ಕಾರ್ಯಕರ್ತರಾಗಿ ಮುಂದುವರಿಯಬಹುದು ಎಂದು ಮಾಯಾವತಿ ಹೇಳಿದ್ದರು.

ಹಳೆಯ ಇತಿಹಾಸ ಕೆದಕಿದ ಮಾಯಾವತಿ!...

ಇಂತಹ ಪರಿಸ್ಥಿತಿಯಲ್ಲಿ, ಪಕ್ಷ ಮತ್ತು ಚಳವಳಿಯ ಹಿತಾಸಕ್ತಿ, ಜೊತೆಗೆ ತಮ್ಮ ಸ್ವಂತ ಕುಟುಂಬ ಮತ್ತು ಅಳಿಯ ಆಕಾಶ್ ಆನಂದ್ ಅವರ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಅಶೋಕ್ ಸಿದ್ಧಾರ್ಥ್ ಅವರಿಗೆ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ತೊರೆದು, ವೈಯಕ್ತಿಕ ಹಿತಾಸಕ್ತಿಗಿಂತ ಮಿಗಿಲಾಗಿ ನಿಂತು ರಾಜಕೀಯದಿಂದ ಸಂಪೂರ್ಣವಾಗಿ ನಿವೃತ್ತರಾಗಲು ಇನ್ನೂ ಅವಕಾಶವಿದೆ. ಹೀಗೆ ಮಾಡಿದರೆ ಮಾತ್ರ ಆಕಾಶ್ ಆನಂದ್ ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಮತ್ತು ಅವರು ಪಕ್ಷದಲ್ಲಿ ಸಕ್ರಿಯ ಪಾತ್ರ ವಹಿಸಲು ಅನುಕೂಲವಾಗುವಂತೆ ಅವರ ಜವಾಬ್ದಾರಿಗಳನ್ನು ಮರಳಿ ನೀಡುವ ಬಗ್ಗೆ ಪಕ್ಷವು ಸಹಾನುಭೂತಿಯಿಂದ ಪರಿಗಣಿಸುತ್ತದೆ. ಇದು ಪಕ್ಷದ ಸರ್ವಾನುಮತದ ನಿರ್ಧಾರವಾಗಿದೆ ಎಂದು ಮಾಯಾವತಿ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.
ಸಿದ್ಧಾರ್ಥ್ ಅವರಿಗೆ ತಮ್ಮ ನಡವಳಿಕೆಯನ್ನು ತಿದ್ದುಕೊಳ್ಳಲು ಪಕ್ಷವು ಅನೇಕ ಬಾರಿ ಅವಕಾಶಗಳನ್ನು ನೀಡಿತ್ತು ಎಂದಿರುವ ಮಾಯಾವತಿ, ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಆಕಾಶ್ ಆನಂದ್ ಅಥವಾ ಬಿಎಸ್ಪಿ ಚಳವಳಿಯ ಬಗ್ಗೆ ಯಾವತ್ತೂ ಕೂಡ ಕಾಳಜಿ ವಹಿಸಲಿಲ್ಲ ಎಂದು ಆರೋಪಿಸಿದ್ದಾರೆ. ಈಗ ಅವರು ದೊಡ್ಡ ತ್ಯಾಗ, ನಿಸ್ವಾರ್ಥತೆಗೆ ಮಾದರಿಯಾಗಬಹುದು ಎಂದು ಸಿದ್ಧಾರ್ಥ್ ಅವರಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ಗಳಲ್ಲಿ ಮುಂಬರುವ ಚುನಾವಣೆಗಳನ್ನು ಉಲ್ಲೇಖಿಸಿರು ಬಿಎಸ್​ಪಿ ನಾಯಕಿ, ಈ ರಾಜ್ಯಗಳು ಪಕ್ಷ ಮತ್ತು ಕಾನ್ಶಿರಾಂ ಪ್ರಾರಂಭಿಸಿದ ದಲಿತ-ಬಹುಜನ ಚಳವಳಿಗೆ ಅತ್ಯಂತ ಮುಖ್ಯ ಮಾತ್ರವಲ್ಲದೆ ಅತ್ಯಂತ ವಿಶೇಷವಾಗಿವೆ ಎಂದು ಅವರು ಬಣ್ಣಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ, ಬಹುಜನ ಚಳವಳಿಯು ಪ್ರಸ್ತುತ ವಿಶೇಷವಾಗಿ ಮೀಸಲಾತಿ ಮುಂತಾದ ವಿಷಯಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ, ದಲಿತ ಸಮುದಾಯದ ಜನರು ವೈಯಕ್ತಿಕ ಅಥವಾ ಕೌಟುಂಬಿಕ ಹಿತಾಸಕ್ತಿಗಾಗಿ ಯಾವುದೇ ಅಡೆತಡೆಗಳನ್ನು ಸೃಷ್ಟಿಸುವಂತೆ ನಡೆದುಕೊಳ್ಳಬಾರದು, ಹಾಗೆ ಮಾಡಿದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ ಎಂದು ಮಾಯಾವತಿ ಎಚ್ಚರಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net