ಮಂಜು ಆವರಿಸಿದೆ, ನಿಧಾನವಾಗಿ ಚಲಿಸಿ; ಈ ವರ್ಷ ದೇಶಾದ್ಯಂತ ಚಳಿಯ ಆರ್ಭಟ ಜೋರು

ಚಳಿಗಾಲದಲ್ಲಿ ಅಪಘಾತ ಹೆಚ್ಚು
ಚಳಿಗಾಲದಲ್ಲಿ ಅಪಘಾತ ಹೆಚ್ಚು
Published on

ಪ್ರಮುಖ ಮುಖ್ಯಾಂಶಗಳು

  • ಈ ವರ್ಷ ದೇಶಾದ್ಯಂತ ಚಳಿಯ ಆರ್ಭಟ ಜೋರಾಗಿದೆ
  • ಚಳಿ ಮತ್ತು ದಟ್ಟ ಮಂಜು ಹೊಂದಿದ ವಾತಾವರಣ ಕನಿಷ್ಠ ಇನ್ನೂ ಒಂದು ತಿಂಗಳವರೆಗೆ
  • ಪಘಾತ ತಗ್ಗಿಸಲು ಏನು ಮಾಡಬಹುದು, ಸುರಕ್ಷಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಉತ್ತರ, ದಕ್ಷಿಣ ರಾಜ್ಯಗಳು ಎಂಬ ಭೇದವಿಲ್ಲದೆ ಈ ವರ್ಷ ದೇಶಾದ್ಯಂತ ಚಳಿಯ ಆರ್ಭಟ ಜೋರಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕನಿಷ್ಠ ಉಷ್ಣಾಂಶ 5 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದ್ದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ 8 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಚಳಿ ಮತ್ತು ದಟ್ಟ ಮಂಜು ಹೊಂದಿದ ವಾತಾವರಣ ಕನಿಷ್ಠ ಇನ್ನೂ ಒಂದು ತಿಂಗಳವರೆಗೆ (ಜನವರಿ 14ರ ಮಕರ ಸಂಕ್ರಾಂತಿಯವರೆಗೆ) ಇರಲಿದೆ. ಡಿಸೆಂಬರ್ ತಿಂಗಳು ವರ್ಷಾಂತ್ಯವಾಗಿರುವುದರಿಂದ ಚಳಿಗಾಲದ ರಜೆಯಲ್ಲಿ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಕೂಡ ಹೆಚ್ಚಿದೆ. ಆದರೆ, ದಟ್ಟ ಮಂಜಿನ ಕಾರಣ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ. ಈ ಸಂದರ್ಭದಲ್ಲಿ ಅಪಘಾತ ತಗ್ಗಿಸಲು ಏನು ಮಾಡಬಹುದು, ಸುರಕ್ಷಾ ಕ್ರಮಗಳೇನು? ಈ ಕುರಿತಾದ ಮಾಹಿತಿ ಇಲ್ಲಿದೆ.

ಉತ್ತರಪ್ರದೇಶದ ಮಥುರಾ ಬಳಿ ಯಮುನಾ ಎಕ್ಸ್​ಪ್ರೆಸ್ ವೇನಲ್ಲಿ ಡಿ. 16ರಂದು ನಸುಕಿನ ಜಾವ 3.30 ಗಂಟೆಯ ಸುಮಾರಿಗೆ ತೀವ್ರ ಮಂಜಿನ ವಾತಾವರಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಎಂಟು ಬಸ್​ಗಳು ಮತ್ತು ಮೂರು ಕಾರುಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಹಲವು ಬಸ್​ಗಳು ಹೊತ್ತಿ ಉರಿದವು. ಪರಿಣಾಮ, 13 ಪ್ರವಾಸಿಗರು ಸಜೀವ ದಹನವಾದರು. 70 ಜನರು ತೀವ್ರವಾದ ಗಾಯಗಳನ್ನು ಅನುಭವಿಸಿದರು. ಈ ಅಪಘಾತದ ಎರಡು ದಿನ ಮುಂಚೆಯಷ್ಟೇ ಅಂದರೆ ಡಿಸೆಂಬರ್ 14ರಂದು ಗೋಚರತೆ ಇಲ್ಲದರಿಂದ ಮತ್ತು ದಟ್ಟ ಮಂಜಿನ ಪರಿಣಾಮ ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ 20 ಕಡೆ ರಸ್ತೆ ಅಪಘಾತಗಳು ಸಂಭವಿಸಿದವು. ಈ ಘಟನೆಯಲ್ಲಿ 80 ವಾಹನಗಳು ಪರಸ್ಪರ ಡಿಕ್ಕಿ ಹೊಡೆದವು ಮತ್ತು 12 ಜನರು ಪ್ರಾಣ ಕಳೆದುಕೊಂಡರು.

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ, ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ಈ ಪ್ರಮಾಣ ಮತ್ತಷ್ಟು ಏರುಮುಖವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ, ದಟ್ಟ ಮಂಜಿನಿಂದ ರಸ್ತೆ ಮತ್ತು ರಸ್ತೆ ಮೇಲಿರುವ ವಾಹನಗಳು ಸ್ಪಷ್ಟವಾಗಿ ಕಾಣದಿರುವುದು. ವಾಹನಗಳು ನಿಯಂತ್ರಣ ಕಳೆದುಕೊಂಡು ಪಲ್ಟಿ ಆಗುವುದು. ಶೀತಗಾಳಿಯ ಆರ್ಭಟ ಬೇರೆ. ಮಂಜು ದಟ್ಟ ಹೊಗೆಯಂತೆ ಆವರಿಸುವುದರಿಂದ ಮುಂದೆ ಯಾವ ವಾಹನ ಬರುತ್ತಿದೆ, ಯಾವ ವೇಗದಲ್ಲಿ ಚಲಿಸಬೇಕು ಎಂಬುದು ಸುಲಭಕ್ಕೆ ಆಂದಾಜಾಗುವುದಿಲ್ಲ. ಅಲ್ಲದೆ, ಶೀತಗಾಳಿಯ ಪರಿಣಾಮ ರಸ್ತೆಯ ಸ್ಥಿತಿಯೂ ಮಾರ್ಪಟ್ಟಿರುತ್ತದೆ. 

ಇದರಿಂದ ವಾಹನಗಳು ಬೇಗ ಸ್ಕಿಡ್ ಆಗುತ್ತವೆ ಅಥವಾ ಇದ್ದಕ್ಕಿದ್ದಂತೆ ಬ್ರೇಕ್ ಅದುಮುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಪಲ್ಟಿ ಆಗುತ್ತವೆ. ಕೆಲವೊಮ್ಮೆ, ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯೂ ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಶೀತದ ಆರ್ಭಟದಲ್ಲಿ, ಮಂಜಿನ ವಾತಾವರಣದಲ್ಲಿ ವಾಹನ ಚಲಾಯಿಸುವವರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಮುನ್ನೆಚ್ಚರಿಕಾ ಕ್ರಮ ಮತ್ತು ಜಾಗ್ರತೆ ವಹಿಸಿಯೇ ಪ್ರಯಾಣ ಆರಂಭಿಸುವುದು ಒಳಿತು.

ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ತೀವ್ರ ಮಂಜಿನ ಕಾರಣ 2022ರಲ್ಲಿ ದೇಶದಲ್ಲಿ 34,262 ರಸ್ತೆ ಅಪಘಾತಗಳು ಸಂಭವಿಸಿವೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರಿ ಏರಿಕೆಯನ್ನು ತೋರಿಸುತ್ತದೆ. 2012ರಲ್ಲಿ ಇದೇ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆ 28,934. 2024ರ ಅಂಕಿಅಂಶವನ್ನು ಕೇಂದ್ರ ಸರ್ಕಾರ ಇನ್ನು ಬಿಡುಗಡೆಗೊಳಿಸಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಮುಂದಿನ ಒಂದು ತಿಂಗಳು ಇದೇ ರೀತಿಯ ಹವಾಮಾನ ಇರುವುದರಿಂದ ವಾಹನ ಚಾಲನೆಯ ವೇಳೆ ಸಾಕಷ್ಟು ಜಾಗ್ರತೆ ವಹಿಸುವುದು ಅತ್ಯಗತ್ಯ.

ತಜ್ಞರು ಏನಂತಾರೆ?

ದಟ್ಟವಾದ ಮಂಜು ಮತ್ತು ಶೀತಗಾಳಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ದೂರಪ್ರಯಾಣ ಕೈಗೊಳ್ಳಬೇಕಿದ್ದಲ್ಲಿ, ಮೊದಲೇ ತಾವು ಹೊರಡುವ ಸ್ಥಳ ಮತ್ತು ತಲುಪಬೇಕಾದ ಗಮ್ಯ ಸ್ಥಳದ ವಾತಾವರಣವನ್ನು ಪರಾಮಶಿಸಿಕೊಳ್ಳುವುದು ಅಗತ್ಯ. ಹವಾಮಾನ ಹೇಗಿರಲಿದೆ ಎಂಬ ಅಂದಾಜಿಲ್ಲದೆಯೇ ಪ್ರಯಾಣ ಆರಂಭಿಸಬೇಡಿ. ಗೋಚರತೆ ಯಾವ ಪ್ರಮಾಣದಲ್ಲಿದೆ, ಕನಿಷ್ಠ ಉಷ್ಣಾಂಶ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಂಡು, ಆ ಸಂದರ್ಭಕ್ಕೆ ಪ್ರಯಾಣ ಸೂಕ್ತವೇ ಅಥವಾ ಮುಂದೂಡಬಹುದೆ ಎಂಬುದನ್ನು ನಿರ್ಧರಿಸಿಕೊಳ್ಳಿ. 

ವಾಹನದ ಸ್ಥಿತಿಯನ್ನು ಸಮಗ್ರವಾಗಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬಾರದು. ವಾಹನದಲ್ಲಿ ಏನಾದರೂ ಕೊರತೆಗಳಿದ್ದರೆ ನಿರ್ಲಕ್ಷ್ಯ ಮಾಡದೆ ಶೀಘ್ರ ಸರಿಪಡಿಸಿಕೊಳ್ಳಿ. ಅನುಭವಿ ಚಾಲಕರೇ ಇರಲಿ. ತುರ್ತು ಪರಿಸ್ಥಿತಿಗೆ ನೆರವಾಗುವಂಥ ಸಾಧನಗಳು ಜತೆಯಲ್ಲಿ ಇರಲಿ. ಇನ್ನು, ನಗರದೊಳಗೇ ಕಚೇರಿಗೆ ಅಥವಾ ಇನ್ನಿತರ ಕಾರಣಕ್ಕೆ ವಾಹನ ಚಲಾಯಿಸಬೇಕಾದರೆ ಸಾವಧಾನದಿಂದ ಹಾಗೂ ಕಡಿಮೆ ವೇಗದಲ್ಲಿ ಚಲಾಯಿಸುವುದು ಅಗತ್ಯ.

ನಿರ್ಲಕ್ಷ್ಯ ಬೇಡ

  • ಮಂಜಿನ ಆವರಣದಲ್ಲಿ ಗೋಚರತೆ ಪ್ರಮಾಣ ತೀವ್ರವಾಗಿ ಕ್ಷೀಣಿಸುತ್ತದೆ ಮತ್ತು ವಾಹನವು ಬೇಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಹಾಗಾಗಿ, ಸಾಮಾನ್ಯ ಸಂದರ್ಭಗಳಂತೆಯೇ ಚಾಲನೆ ಈ ಹೊತ್ತಲ್ಲಿ ಬೇಡ.
  • ಚಳಿಯ ತೀವ್ರತೆಗೆ ಕಣ್ಣುಗಳು ಬೇಗ ದಣಿಯುವುದರಿಂದ ಚಾಲಕರಿಗೆ ನಿದ್ದೆ ಎಳೆಯುತ್ತದೆ. ಇಂಥ ಸಂದರ್ಭದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆದುಕೊಂಡು ಪಯಣ ಮುಂದುವರಿಸುವುದು ಕ್ಷೇಮಕರ.
  •  ಹೈಬೀಮ್ ತಪ್ಪು ಬಳಕೆ ಅನಾಹುತ ಸೃಷ್ಟಿಸಬಲ್ಲದು. ಮುಖ್ಯವಾಗಿ, ವಾಹನ ಚಾಲನೆಯ ವೇಗವನ್ನು ಆಗಾಗ ತಗ್ಗಿಸಿಕೊಳ್ಳುವುದು ಒಳ್ಳೆಯದು.
  • ಮಂಜಿನಲ್ಲಿ ವಾಹನ ಚಲಾಯಿಸುವಾಗ ಈ ಅಂಶಗಳನ್ನು ಮರೆಯದಿರಿ
  • ವಾಹನವನ್ನು ಕಡಿಮೆ ವೇಗದಲ್ಲಿ ಚಲಾಯಿಸಿ. ವೇಗದ ಮೇಲೆ ನಿಯಂತ್ರಣ ಇರಲಿ.
  • ಪೂರ್ತಿ ಗಮನ ರಸ್ತೆಯ ಮೇಲಿರಲಿ. ಒಂದು ಕ್ಷಣ ಗಮನ ಅತ್ತಿತ್ತ ಹೋದರೂ, ನಿಯಂತ್ರಣ ತಪ್ಪಬಹುದು.
  • ಫಾಗ್ ಲೈಟ್​ನ್ನು ಕಡ್ಡಾಯವಾಗಿ ಬಳಸಿ. ಇದರಿಂದ ರಸ್ತೆ ಗೋಚರತೆಯ ಸ್ಪಷ್ಟತೆ ಹೆಚ್ಚುತ್ತದೆ.
  • ಡಿಫಾಗರ್ ಅಥವಾ ವೈಪರ್​ನಿಂದ ಎದುರುಗಡೆಯ ವಿಂಡೋ ಸ್ಪಷ್ಟವಾಗಿ ಇರಿಸಿಕೊಳ್ಳಿ.
  • ದಿಢೀರ್ ಆಗಿ ಬ್ರೇಕ್ ಹಾಕಬೇಡಿ.
  • ಅಪಾಯಕಾರಿ ಓವರ್​ಟೇಕ್​ಗೆ ಪ್ರಯತ್ನಿಸಬೇಡಿ. ಓವರ್​ಟೇಕ್ ಮಾಡುವುದನ್ನು ತಪ್ಪಿಸಿ.
  • ಮುಂದಿರುವ ವಾಹನದಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ.
  • ವಾಹನ ಚಾಲನೆ ಮಾಡುತ್ತಿರುವಾಗ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಬಳಸಬೇಡಿ. ಮೊಬೈಲ್ ಫೋನ್ ಬಳಸುವ ಅನಿವಾರ್ಯತೆ ಇದ್ದಲ್ಲಿ ಚಹಾ/ಕಾಫಿಯ ವಿರಾಮದ ಸಮಯದಲ್ಲಿ ಬಳಸಿ.
  • ಅಗತ್ಯ ಸಂದರ್ಭದಲ್ಲಿ ಇಂಡಿಕೇಟರ್ ಬಳಸುವುದನ್ನು ಮರೆಯಬೇಡಿ.
  • ಅನವಶ್ಯಕವಾಗಿ ಹಾರ್ನ್ ಬಳಸಬೇಡಿ. ಅಗತ್ಯವಿದ್ದಾಗ ಮಾತ್ರ ಹಾರ್ನ್ ಅದುಮಿ. ಕೆಲವೊಮ್ಮೆ ಗೊಂದಲದಲ್ಲಿ ತೆಗೆದುಕೊಳ್ಳುವ ಟರ್ನ್​ಗಳು ಅಪಘಾತಕ್ಕೆ ಕಾರಣವಾಗುತ್ತವೆ.

ಪ್ರತಿಕೂಲ ಹವಾಮಾನವಿದ್ದರೆ, ಮುಂದೆ ಸಾಗಲು ಬೆಳಕಿನ ತೀವ್ರ ಕೊರತೆ ಇದ್ದರೆ ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ, ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ಇಂಥ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನ ಲೆಕ್ಕಿಸದೆ ವಾಹನ ಚಲಾಯಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ.

  • ಹೆಡ್​ಲೈಟ್​ನ್ನು ಲೋ ಬೀಮ್ಲ್ಲಿ ಇರಿಸಿ.
  • ಚಳಿಗಾಲದಲ್ಲಿ ಅಪಘಾತಕ್ಕೆ ಕಾರಣಗಳು
  • ವೇಗ ಅಥವಾ ಅತಿವೇಗದಲ್ಲಿ ವಾಹನ ಚಲಾಯಿಸುವುದು.
  • ಹೆಡ್​ಲೈಟ್​ನ್ನು ಹೈ ಬೀಮ್ಲ್ಲಿ ಇರಿಸುವುದು.
  • ಫಾಗ್ ಲೈಟ್ ಬಳಕೆ ಮಾಡದಿರುವುದು.
  • ಇಂಡಿಕೇಟರ್ ಬಳಕೆ ಮಾಡದಿರುವುದು.
  • ಪ್ರವಾಸ ಹೊರಡುವ ಮುನ್ನ ಅಥವಾ ಪ್ರಯಾಣ ಆರಂಭಿಸುವ ಮುನ್ನ ಟೈರ್​ನ ಏರ್ ಪ್ರೆಶರ್ ಪರೀಕ್ಷಿಸದಿರುವುದು.
  • ವಾಹನಗಳ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳದಿರುವುದು.
  • ಹಠಾತ್ತಾಗಿ ಅಥವಾ ದಿಢೀರನೆ ಬ್ರೇಕ್ ಹಾಕುವುದು.
  • ತಪ್ಪು ಕ್ರಮದ ಮೂಲಕ ಮತ್ತೊಂದು ವಾಹನವನ್ನು ಓವರ್​ಟೇಕ್ ಮಾಡುವುದು ಅಥವಾ ಓವರ್​ಟೇಕ್ ಮಾಡಲು ಯತ್ನಿಸುವುದು. 
  • ವಾಹನದ ಲೈಟ್ ಮತ್ತು ಅದರ ಕಾರ್ಯಕ್ಷಮತೆಯನ್ನು ವಾಹನ ಚಾಲನೆಯ ಮುಂಚೆಯೇ ಪರೀಕ್ಷಿಸದಿರುವುದು.

ಪ್ರವಾಸಕ್ಕೆ ಹೊರಡುವವರು...

  • ತೀರಾ ಗೊತ್ತಿಲ್ಲದ ಭೌಗೋಳಿಕ ಪ್ರದೇಶಗಳಿಗೆ ಈ ಹೊತ್ತಲ್ಲಿ ಪ್ರಯಾಣಿಸಬೇಡಿ. ಆಯಾ ಪ್ರದೇಶದ ಹವಾಮಾನ ಮತ್ತು ಅಲ್ಲಿನ ವೈಪರೀತ್ಯದ ಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಇರಲಿ.
  • ಗುಂಪು ಪ್ರವಾಸದ ವೇಳೆ ಅನುಭವಿ ಚಾಲಕರನ್ನು ನೇಮಿಸಿಕೊಳ್ಳಿ. ಯಾವುದೇ ಕಾರಣಕ್ಕೂ ವೇಗದ ಚಾಲನೆ ಮತ್ತು ಓವರ್​ಟೇಕ್ ಮಾಡುವುದು ಬೇಡ ಎಂಬ ಸೂಚನೆ ಪ್ರವಾಸ ಆರಂಭದ ಮುನ್ನವೇ ನೀಡಿ.
  • ಶೈಕ್ಷಣಿಕ ಪ್ರವಾಸವಂತೂ ಈ ಸಂದರ್ಭದಲ್ಲಿ ಕೈಗೊಳ್ಳಬಾರದು.
  • ನಗರದೊಳಗೆ ದೈನಂದಿನ ಪಯಣಕ್ಕೆ ವಾಹನ ಚಲಾಯಿಸುವವರು ಕೂಡ ಸುರಕ್ಷಾ ಕ್ರಮಗಳನ್ನು ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net