ನೇಪಾಳದಲ್ಲಿ ಪ್ರವಾಹ; ದುರಂತದಲ್ಲಿ ಸಿಲುಕಿದ ಈಶಾ ಫೌಂಡೇಶನ್​​ನ 77 ಯಾತ್ರಿಕರು: ಸದ್ಗುರು ಮಾಹಿತಿ | sadhguru

ಸದ್ಗುರು
ಸದ್ಗುರು
Published on
ನವದೆಹಲಿ: ನೇಪಾಳದ ಟಿಬೆಟ್‌ನ ಗಡಿಯಲ್ಲಿರುವ ರಸುವಾ ಜಿಲ್ಲೆಯಲ್ಲಿ ಬುಧವಾರ(ಆ. 26) ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕೈಲಾಶ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಈಶಾ ಫೌಂಡೇಶನ್​ನ 77 ಯಾತ್ರಿಕರು ಸಿಲುಕಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಆಧ್ಯಾತ್ಮಿಕ ಗುರು ಸದ್ಗುರು(sadhguru) ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಚೀನಾದ ಟಿಬೆಟ್‌ನಲ್ಲಿರುವ ಗ್ಯಿರೊಂಗ್‌ನಲ್ಲಿ ಭೀಕರ ಹಾಗೂ ದುರಂತಮಯವಾದ ಹಠಾತ್ ಪ್ರವಾಹ ಸಂಭವಿಸಿದೆ. ಮತ್ತು ನಮ್ಮ ಕೈಲಾಸ ಯಾತ್ರಾ ತಂಡಗಳಲ್ಲಿ ಒಂದು ಇದರಲ್ಲಿ ಸಿಲುಕಿಕೊಂಡಿದೆ. ವಾಪಸಾಗುವಾಗ ಅವರು ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಉಂಟಾಗಿದೆ. ಆ ಕಟ್ಟಡ ಹಾಗೂ ಪಟ್ಟಣದ ಬಹುಭಾಗ ಜಲಾವೃತಗೊಂಡಿದೆ ಎಂದು ಹೇಳಿದ್ದಾರೆ.

ವಲಸೆ ಕಚೇರಿಯಲ್ಲಿದ್ದವರ ಸ್ಥಿತಿಗತಿ ಅಥವಾ ಇರುವಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ ಎಂದಿರುವ ಅವರು, ತಮ್ಮ ಸ್ವಯಂಸೇವಕರು ಮತ್ತು ಸಹಾಯಕ ತಂಡಗಳು ತೀವ್ರ ಆತಂಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆ ಸ್ಥಳವನ್ನು ತಲುಪಲು ಸಾಧ್ಯವೇ ಎಂದು ನಮ್ಮ ತಂಡ ಪರಿಶೀಲಿಸುತ್ತಿದೆ. ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರವಾಹದಿಂದ 95ಕ್ಕೂ ಹೆಚ್ಚು ಜನ ಸಾವು 

ಇನ್ನೂ ರಸುವಾ ಜಿಲ್ಲೆಯಲ್ಲಿ ಬುಧವಾರ(ಆ. 26) ಸಂಭವಿಸಿದ ಹಠಾತ್ ಪ್ರವಾಹದಿಂದ ಭಾರಿ ಪ್ರಮಾಣದ ಮೂಲಭೂತಸೌಕರ್ಯಗಳು ಹಾನಿಯಾಗಿದ್ದು, 95ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮತ್ತು 105 ಭಾರತೀಯರು ಸೇರಿ 400ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 
ಭೋಟೆ ಕೋಶಿ ನದಿಯೂ ಹಠಾತ್ ಉಕ್ಕಿ ಹರಿದು ಬೆಳಿಗ್ಗೆ 9 ಗಂಟೆ ಸುಮಾರಿಗೆ ರಸುವಾಗಧಿ-ತಿಮುರೆ ಪ್ರದೇಶವನ್ನು ಅಪ್ಪಳಿಸಿದೆ. ರಸುವಾ ಜೊತೆಗೆ ನೆರೆಯ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳ ಕೆಲವು ಭಾಗಗಳ ಮೇಲೆ ಪರಿಣಾಮ ಬೀರಿದೆ. ನೀರಿನ ರಭಸಕ್ಕೆ  ವಾಹನಗಳು, ಸರಕುಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಕೊಚ್ಚಿ ಹೋಗಿವೆ. 
ನೇಪಾಳ ಪ್ರವಾಸೋದ್ಯಮ ಮಂಡಳಿ ಸಂಗ್ರಹಿಸಿದ ಪ್ರಾಥಮಿಕ ಪಟ್ಟಿಯ ಪ್ರಕಾರ, 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿದಂತೆ 384 ಪ್ರಯಾಣಿಕರು ಹಠಾತ್ ಪ್ರವಾಹದ ನಂತರ ಕಾಣೆಯಾಗಿದ್ದಾರೆ. ವಿದೇಶಿ ಪ್ರಜೆಗಳಲ್ಲಿ 105 ಭಾರತೀಯ ಪ್ರವಾಸಿಗರು ಮತ್ತು 37 ಅನಿವಾಸಿ ಭಾರತೀಯರು ಸೇರಿದ್ದಾರೆ. 
ಪ್ರವಾಸೋದ್ಯಮ ಮಂಡಳಿಯು ಈ ಪಟ್ಟಿಯು ಪ್ರಾಥಮಿಕವಾಗಿದ್ದು, ಪ್ರಯಾಣ ಸಂಸ್ಥೆಗಳು, ಮಾರ್ಗದರ್ಶಿಗಳು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳ ಸಮನ್ವಯದೊಂದಿಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net