ಫುಡ್ ಡೆಲಿವರಿ ರಂಗಕ್ಕೆ ಫ್ಲಿಪ್‌ಕಾರ್ಟ್ ಬಿಗ್ ಎಂಟ್ರಿ: ಜೊಮಾಟೊ, ಸ್ವಿಗ್ಗಿಗೆ ಶುರುವಾಯ್ತು ತೀವ್ರ ಪೈಪೋಟಿ! Flipkart Food Delivery
Flipkart Food Delivery ಸಾಂದರ್ಭಿಕ ಚಿತ್ರ
Published on:
Copied
Follow Us
Flipkart Food Delivery: ಆನ್‌ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದಿರುವ ಫ್ಲಿಪ್‌ಕಾರ್ಟ್ (Flipkart), ಇದೀಗ ಭಾರತದ ಫುಡ್ ಡೆಲಿವರಿ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ. ಶೀಘ್ರದಲ್ಲೇ ಈ ನೂತನ ಸೇವೆಯನ್ನು ಆರಂಭಿಸಲಿದ್ದು, ಈಗಾಗಲೇ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೊಮಾಟೊ ಹಾಗೂ ಸ್ವಿಗ್ಗಿ ಸಂಸ್ಥೆಗಳಿಗೆ ನೇರ ಸ್ಪರ್ಧೆ ನೀಡಲು ವಾಲ್‌ಮಾರ್ಟ್ ಒಡೆತನದ ಈ ಸಂಸ್ಥೆ ಮುಂದಾಗಿದೆ.
ಹಂತ ಹಂತವಾಗಿ ಸೇವೆ ವಿಸ್ತರಣೆ
ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ನೀಡಿರುವ ಮಾಹಿತಿ ಪ್ರಕಾರ, ಮುಂಬರುವ ಕೆಲವು ವಾರಗಳಲ್ಲಿ ಫುಡ್ ಡೆಲಿವರಿ ಸೇವೆ ಅಧಿಕೃತವಾಗಿ ಚಾಲನೆಗೆ ಬರಲಿದೆ. ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ಕೆಲವು ಗ್ರಾಹಕರಿಗೆ ಅಥವಾ ನಿರ್ದಿಷ್ಟ ನಗರದಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ.
ಆದಾಗ್ಯೂ, ಗ್ರಾಹಕರ ಪ್ರತಿಕ್ರಿಯೆ ಮತ್ತು ಅನುಭವಗಳನ್ನು ಆಧರಿಸಿ ಸೇವೆಯನ್ನು ಸುಧಾರಿಸಿದ ನಂತರವೇ ದೇಶಾದ್ಯಂತ ವಿಸ್ತರಿಸಲು ಯೋಜನೆ ಮಾಡಲಾಗಿದೆ. ಕಂಪನಿಯು ತನ್ನ ಕ್ವಿಕ್ ಕಾಮರ್ಸ್ ಸೇವೆಯಾದ ಫ್ಲಿಪ್‌ಕಾರ್ಟ್ ಮಿನಿಟ್ಸ್ ಆರಂಭಿಸಿದ ಮಾದರಿಯಲ್ಲೇ ಇದನ್ನು ಮುಂದುವರೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಪ್ರತ್ಯೇಕ ಆಪ್ ಹಾಗೂ ಓಎನ್‌ಡಿಸಿ ನೆರವು
ಆದಾಗ್ಯೂ, ಗ್ರಾಹಕರು ಈ ಫುಡ್ ಡೆಲಿವರಿ ಸೇವೆಯನ್ನು ಪ್ರತ್ಯೇಕವಾದ ಹೊಸ ಆಪ್ ಮೂಲಕ ಹಾಗೂ ಹಾಲಿ ಇರುವ ಫ್ಲಿಪ್‌ಕಾರ್ಟ್ ಮೂಲ ಆಪ್ ಮೂಲಕವೂ ಬಳಸಬಹುದಾಗಿದೆ. ಕೇಂದ್ರ ಸರ್ಕಾರದ ‘ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್’ ನೆಟ್‌ವರ್ಕ್‌ನೊಂದಿಗೆ ಒಗ್ಗೂಡಿ ಈ ಸೇವೆಯನ್ನು ಒದಗಿಸಲು ಫ್ಲಿಪ್‌ಕಾರ್ಟ್ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಗ್ರಾಹಕರಿಗೆ ಹೆಚ್ಚಿನ ಆಯ್ಕೆ
ಮಾರುಕಟ್ಟೆಯಲ್ಲಿ ಕೇವಲ ದರ ಸಮರ ನಡೆಸುವುದು ಕಂಪನಿಯ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿರುವ ಕೃಷ್ಣಮೂರ್ತಿ, ಉತ್ತಮ ಗುಣಮಟ್ಟ, ಹೆಚ್ಚು ಹೋಟೆಲ್‌ಗಳ ಆಯ್ಕೆ, ವೇಗದ ಡೆಲಿವರಿ ಹಾಗೂ ನಂಬಿಕಸ್ಥ ಸೇವೆಯನ್ನು ಒದಗಿಸುವುದರ ಮೇಲೆ ನಾವು ಗಮನಹರಿಸಲಿದ್ದೇವೆ ಎಂದಿದ್ದಾರೆ.
ಭಾರತದ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಸದ್ಯ ಜೊಮಾಟೊ ಮತ್ತು ಸ್ವಿಗ್ಗಿ ದೊಡ್ಡ ಮಟ್ಟದ ಪಾಲನ್ನು ಹೊಂದಿವೆ. ಈಗ ಫ್ಲಿಪ್‌ಕಾರ್ಟ್ ತನ್ನ ವಿಶಾಲವಾದ ಗ್ರಾಹಕರ ಜಾಲ ಮತ್ತು ಬಲವಾದ ಲಾಜಿಸ್ಟಿಕ್ಸ್ ವ್ಯವಸ್ಥೆಯೊಂದಿಗೆ ಈ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಮಾರುಕಟ್ಟೆಯಲ್ಲಿ ತೀವ್ರ ಕುತೂಹಲ ಮೂಡಿಸಿದೆ (ಏಜೆನ್ಸೀಸ್).