ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಜ್ವಾಲೆ: ಭಾರತದಿಂದ 'ಹೈ ಅಲರ್ಟ್' ಘೋಷಣೆ! | MEA India

MEA India
MEA India
Published on
ನವದೆಹಲಿ: ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ಆರಂಭವಾಗಿರುವ ಭೀಕರ ಸಂಘರ್ಷ ಈಗ ಜಾಗತಿಕ ಮಟ್ಟದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಈ ಕುರಿತು ಇಂದು (ಮಾರ್ಚ್ 03) ತುರ್ತು ಹೇಳಿಕೆ ಬಿಡುಗಡೆ ಮಾಡಿರುವ ಭಾರತ ಸರ್ಕಾರದ ವಿದೇಶಾಂಗ ಇಲಾಖೆ ವಕ್ತಾರರು(MEA India), ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರಕ್ಕೆ ಈಗಿರುವ ಅತಿ ದೊಡ್ಡ ತಲೆನೋವು ಎಂದರೆ ಗಲ್ಫ್ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು ಒಂದು ಕೋಟಿ (1 Crore) ಭಾರತೀಯ ನಾಗರಿಕರ ಸುರಕ್ಷತೆ. "ಅಲ್ಲಿನ ಪ್ರತಿಯೊಬ್ಬ ಭಾರತೀಯನ ಯೋಗಕ್ಷೇಮ ನಮಗೆ ಮೊದಲ ಆದ್ಯತೆ. ಯುದ್ಧದಿಂದ ಅವರ ಮೇಲೆ ಬೀರುವ ಯಾವುದೇ ನಕಾರಾತ್ಮಕ ಪರಿಣಾಮವನ್ನು ನಾವು ಸಹಿಸುವುದಿಲ್ಲ" ಎಂದು ಭಾರತ ಸರ್ಕಾರ ಖಡಕ್ ಆಗಿ ಹೇಳಿದೆ.
ಭಾರತದ ಬಹುತೇಕ ಇಂಧನ ಪೂರೈಕೆ ಮತ್ತು ವಾಣಿಜ್ಯ ವ್ಯಾಪಾರವು ಇದೇ ಮಾರ್ಗದ ಮೂಲಕ ಸಾಗುತ್ತದೆ. ಹಡಗುಗಳ ಮೇಲಿನ ದಾಳಿ ಮತ್ತು ಯುದ್ಧದ ವಿಸ್ತರಣೆಯಿಂದಾಗಿ ಭಾರತದ ಇಂಧನ ಸರಪಳಿ (Energy Supply Chain) ಕಡಿದುಹೋಗುವ ಭೀತಿ ಎದುರಾಗಿದೆ. ಇದು ಭಾರತದ ಆರ್ಥಿಕತೆಯ ಮೇಲೆ ನೇರ ಪ್ರಭಾವ ಬೀರಲಿದ್ದು, ಸರಕು ಸಾಗಣೆ ನೌಕೆಗಳ ಮೇಲಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ರಾಯಭಾರ ಕಚೇರಿಗಳಿಂದ ಹೈ ಅಲರ್ಟ್..!

ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರಿಗೆ ನೆರವಾಗಲು ಪೀಡಿತ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳು 24/7 ಸಕ್ರಿಯವಾಗಿವೆ. ಸ್ಥಳೀಯ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆಗಿಂದಾಗ್ಗೆ ಮಾರ್ಗಸೂಚಿಗಳನ್ನು (Advisories) ಬಿಡುಗಡೆ ಮಾಡುತ್ತಿವೆ. ಸಂಘರ್ಷದ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು MEA ಹೇಳಿದೆ.
ಡಿಪ್ಲೊಮಸಿ ಹಾದಿಯಲ್ಲಿ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವರು ಈಗಾಗಲೇ ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. "ಯುದ್ಧ ಯಾವುದಕ್ಕೂ ಪರಿಹಾರವಲ್ಲ, ತಕ್ಷಣವೇ ಶಸ್ತ್ರತ್ಯಾಗ ಮಾಡಿ ರಾಜತಾಂತ್ರಿಕ ಮಾತುಕತೆ ಆರಂಭಿಸಿ" ಎಂದು ಭಾರತ ಜಾಗತಿಕ ವೇದಿಕೆಯಲ್ಲಿ ಆಗ್ರಹಿಸಿದೆ. ಭಾರತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶ ರವಾನಿಸಿದೆ ಎಂದು MEA ತಿಳಿಸಿದೆ(ಎಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net