ಶಿಂಧೆ ಕಚೇರಿಯಲ್ಲಿ ಪವಾರ್ ಸಭೆ!...ನಮ್ಮ ಸರ್ಕಾರ ಬೀಳಿಸಿದವರ ಜಾಗಕ್ಕೇ ಹೋಗೋದಾ ಎಂದು ರಾವತ್​ ಕಿಡಿ | Sanjay Raut

Sanjay Raut > ನಮ್ಮ ಸರ್ಕಾರ ಬೀಳಿಸಿದವರ ಜಾಗಕ್ಕೇ ಹೋಗೋದಾ ಎಂದು ರಾವತ್​ ಕಿಡಿ
Sanjay Raut > ನಮ್ಮ ಸರ್ಕಾರ ಬೀಳಿಸಿದವರ ಜಾಗಕ್ಕೇ ಹೋಗೋದಾ ಎಂದು ರಾವತ್​ ಕಿಡಿ
Published on
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಚೇರಿಯಲ್ಲಿ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಸಭೆ ನಡೆಸಿರುವುದಕ್ಕೆ ಮಹಾವಿಕಾಸ್ ಅಘಾಡಿ ಒಕ್ಕೂಟದ ಪಾಲುದಾರ ಪಕ್ಷ ಶಿವಸೇನೆ (ಯುಬಿಟಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಂಸದ ಸಂಜಯ್ ರಾವತ್ (Sanjay Raut) ಗುರುವಾರ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ, ಶರದ್ ಪವಾರ್ ಅವರ ಈ ನಡೆ ಶಿವಸೇನೆಗೆ ತೀವ್ರ ನೋವುಂಟು ಮಾಡಿದೆ ಹಾಗೂ ವಿಪಕ್ಷಗಳ ಒಕ್ಕೂಟದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಬೀಳಿಸಿದವರ ಕಚೇರಿಗೇ ತೆರಳಿ ಸಭೆ ನಡೆಸುವುದು ಸರಿಯಲ್ಲ. ಸರ್ಕಾರಕ್ಕೆ ದ್ರೋಹ ಎಸಗಿದವರ ಜಾಗಕ್ಕೆ ಹಿರಿಯ ನಾಯಕರೊಬ್ಬರು ಹೋದಾಗ ಅವರ ಘನತೆ ತಗ್ಗುತ್ತದೆ. ನಾವು ಪಕ್ಷಾಂತರಿಗಳು ಎಂದು ಕರೆಯುವವರಿಗೆ ಈ ರೀತಿ ಗೌರವ ನೀಡುವುದು ಎಷ್ಟು ಸರಿ? ಎಂದು ರಾವತ್ ಪ್ರಶ್ನಿಸಿದ್ದಾರೆ.

ವಿವಾದಕ್ಕೆ ಕಾರಣವೇನು..?

ಬುಧವಾರ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಲು ಶರದ್ ಪವಾರ್ ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಏಕನಾಥ್ ಶಿಂಧೆ ಕಚೇರಿಯಲ್ಲೇ ತಮ್ಮ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದರು. ಸಂಪುಟ ಸಭೆಯಲ್ಲಿದ್ದ ಶಿಂಧೆ ಪವಾರ್ ಅವರನ್ನು ಖುದ್ದಾಗಿ ಭೇಟಿಯಾಗಿ ಸ್ವಾಗತಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿದ ರಾವತ್, ಇಡೀ ವಿಧಾನ ಭವನದಲ್ಲಿ ಜಾಗವೇ ಇರಲಿಲ್ಲವೇ? ಅಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಕಚೇರಿಗಳು ಎದುರಲ್ಲೇ ಇವೆ. ಹೀಗಿದ್ದಾಗ ಶಿಂಧೆ ಕಚೇರಿಯಲ್ಲಿ ಸಭೆ ನಡೆಸಿದ್ದು ಶರದ್ ಪವಾರ್ ಪಕ್ಷದ ವಿಶ್ವಾಸಾರ್ಹತೆಗೇ ಧಕ್ಕೆ ತರುತ್ತದೆ. ಒಂದು ವೇಳೆ ನಾವು ಅಜಿತ್ ಪವಾರ್ ಕಚೇರಿಯಲ್ಲಿ ಸಭೆ ನಡೆಸಿದ್ದರೆ, ಅದನ್ನು ಒಕ್ಕೂಟದ ವಿರುದ್ಧದ ನಡೆ ಎಂದು ವ್ಯಾಖ್ಯಾನಿಸಲಾಗುತ್ತಿರಲಿಲ್ಲವೇ? ಎಂದು ಕಿಡಿಕಾರಿದ್ದಾರೆ.

ಪವಾರ್ ಸಿದ್ಧಾಂತದ ಬಗ್ಗೆ ಅನುಮಾನವಿಲ್ಲ, ಆದರೆ...

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಂತಹ ಪ್ರಮುಖ ವಿಷಯದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗುವುದರಲ್ಲಿ ಯಾವುದೇ ಅಭ್ಯಂತರವಿಲ್ಲ ಎಂದ ರಾವತ್, ಗಡಿ ವಿವಾದವು ಮಹಾರಾಷ್ಟ್ರದ ಭಾವನಾತ್ಮಕ ವಿಷಯವಾಗಿದೆ. ದಶಕಗಳಿಂದ ಶಿವಸೇನೆ ಈ ಹೋರಾಟದ ಭಾಗವಾಗಿದೆ. ಆದರೆ ನಿನ್ನೆ ನಡೆದ ಘಟನೆ ಶಿವಸೇನಾ ಕಾರ್ಯಕರ್ತರಿಗೆ ನೋವುಂಟು ಮಾಡಿದೆ, ಇದನ್ನು ತಡೆಯಬಹುದಿತ್ತು. ಆದಾಗ್ಯೂ ಶರದ್ ಪವಾರ್ ಅವರ ಸಿದ್ಧಾಂತದ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ, ಅವರು ಎಂದಿಗೂ ಎನ್‌ಡಿಎ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷಾಂತರಿಗಳಿಗೆ ಗೌರವ ನೀಡುವುದು ಸರಿಯೇ?

ಏಕನಾಥ್ ಶಿಂಧೆಗೆ ರಾಜಕೀಯ ಸೌಜನ್ಯ ತೋರುವುದು ಮಹಾರಾಷ್ಟ್ರದ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದ ರಾವತ್, ಸರ್ಕಾರಕ್ಕೆ ದ್ರೋಹ ಎಸಗಿದವರನ್ನು ನೀವು ಸನ್ಮಾನಿಸುವುದಾದರೆ, ಅವರ ವಿರುದ್ಧ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತೀರಿ. ಶಿಂಧೆ ಅವರೇನು ಯಶವಂತರಾವ್ ಚವಾಣ್, ಶಂಕರರಾವ್ ಚವಾಣ್, ವಸಂತರಾವ್ ನಾಯಕ್ ಅಥವಾ ವಿಲಾಸ್‌ರಾವ್ ದೇಶ್‌ಮುಖ್ ಅವರಂತಹ ದಿಗ್ಗಜ ನಾಯಕರೇ..? ಎಂದು ರಾವತ್​ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net