ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಮೊದಲ ಭಾರತೀಯ: ವಿಶ್ವ ಚೆಸ್​ನಲ್ಲಿ ಆರ್​.ಪ್ರಜ್ಞಾನಂದ ನೂತನ ದಾಖಲೆ; ಇತಿಹಾಸ ಬರೆದ ಚೆಸ್​ ಚಾಂಪಿಯನ್​! R Praggnanandhaa

ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಆರ್. ಪ್ರಜ್ಞಾನಂದ
ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಆರ್. ಪ್ರಜ್ಞಾನಂದ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಚೆಸ್​​ನಲ್ಲಿ ಆರ್. ಪ್ರಜ್ಞಾನಂದ ನೂತನ ದಾಖಲೆ
  • ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ
  • 6 ಅಂಕಗಳ ಹಿನ್ನಡೆ; ನಂತರ ರೋಚಕ ಕಂಬ್ಯಾಕ್!
  • ವಿಶ್ವ ಚೆಸ್‌ನಲ್ಲಿ ಭಾರತ ಹೊಸ ಮೈಲಿಗಲ್ಲು
ನವದೆಹಲಿ: ಸೇಂಟ್ ಲೂಯಿಸ್‌ನಲ್ಲಿ ನಡೆದ ಗ್ರ್ಯಾಂಡ್ ಚೆಸ್ ಟೂರ್ (GCT) ಫೈನಲ್ಸ್‌ನಲ್ಲಿ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ವಿಜಯ ದಾಖಲಿಸುವ ಮೂಲಕ ಚೆಸ್ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಇನ್ನೊಮ್ಮೆ ಹಾರಿಸಿದ್ದಾರೆ. 
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಅಮೆರಿಕದ ಪ್ರಬಲ ಆಟಗಾರ ಫ್ಯಾಬಿಯಾನೊ ಕರುವಾನಾ (Fabiano Caruana) ವಿರುದ್ಧ ರೋಚಕ ಜಯ ಸಾಧಿಸಿದ ಪ್ರಜ್ಞಾನಂದ, ಈ ಟೂರ್ನಮೆಂಟ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. 

ಈ ಐತಿಹಾಸಿಕ ವಿಜಯದೊಂದಿಗೆ ಅವರು ತಮ್ಮ ಚೊಚ್ಚಲ ಜಿಒಟಿ ಪ್ರಶಸ್ತಿಯ ಜತೆಗೆ ಸುಮಾರು 2 ಕೋಟಿ ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.  

6 ಅಂಕಗಳ ಹಿನ್ನಡೆ; ನಂತರ ರೋಚಕ ಕಂಬ್ಯಾಕ್! 

ಫೈನಲ್ ಪಂದ್ಯದ ಆರಂಭದಲ್ಲಿ ಪ್ರಜ್ಞಾನಂದಗೆ ತೀವ್ರ ಆಘಾತ ಎದುರಾಗಿತ್ತು. ಕ್ಲಾಸಿಕಲ್ ವಿಭಾಗದಲ್ಲಿ ಅಮೋಘ ಆಟವಾಡಿದ ಕರುವಾನಾ 6-0 ಅಂತರದ ಭರ್ಜರಿ ಮುನ್ನಡೆ ಸಾಧಿಸಿದ್ದರು. ಇದರಿಂದಾಗಿ ಅಂತಿಮ ದಿನದ ಪ್ರವೇಶದ ವೇಳೆ ಪ್ರಜ್ಞಾನಂದ   ಗಣನೀಯ ಹಿನ್ನಡೆಯಲ್ಲಿದ್ದರು. ಆದರೆ, ದೃತಿಗೆಡದೆ, ಆಕ್ರಮಣಕಾರಿ ಆಟದ ಮೂಲಕ ಪ್ರಗ್ನಾನಂದ ಪಂದ್ಯದ ಚಿತ್ರಣವನ್ನೇ ಬದಲಾಯಿಸಿಬಿಟ್ಟರು. 

ರ್‍ಯಾಪಿಡ್‌ ವಿಭಾಗದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದ ಪ್ರಜ್ಞಾನಂದ, ಕೇವಲ ಕೆಲವೇ ಗಂಟೆಗಳಲ್ಲಿ ಕರುವಾನಾ ಅವರ ಮುನ್ನಡೆಯನ್ನು ಕರಗಿಸಿ ಸಮಬಲ ಸಾಧಿಸಿದರು.  

ಬ್ಲಿಟ್ಜ್ ಕಾಳಗದಲ್ಲಿಯೂ ವಿಜಯ!


ರಾಪಿಡ್ ವಿಭಾಗದ ಬಳಿಕ ಆರಂಭವಾದ ಬ್ಲಿಟ್ಜ್ ಸುತ್ತಿನಲ್ಲಿಯೂ ಪ್ರಗ್ನಾನಂದ ತಮ್ಮ ಹತೋಟಿಯನ್ನು ಕಾಯ್ದುಕೊಂಡರು. ಒಂದು ಹಂತದಲ್ಲಿ ಸಮಯದ ಒತ್ತಡದಿಂದಾಗಿ ಪ್ರಜ್ಞಾನಂದ ಸಣ್ಣ ತಪ್ಪೆಸಗಿದರೂ, ಕರುವಾನಾ ಅದರ ಲಾಭ ಪಡೆಯುವಲ್ಲಿ ವಿಫಲರಾದರು. ಅಂತಿಮವಾಗಿ ಇಬ್ಬರು ಆಟಗಾರರು ಬ್ಲಿಟ್ಜ್ ಗೇಮ್‌ಗಳನ್ನು ಸಮಬಲದಲ್ಲಿ ಮುಗಿಸಿದರೂ, ಒಟ್ಟಾರೆ 15-13 ಅಂತರದ ಗೆಲುವು ಪ್ರಜ್ಞಾನಂದ ಅವರ ಚಾಂಪಿಯನ್ ಕಿರೀಟವನ್ನು ಖಚಿತಪಡಿಸಿತು. 

ವಿಶ್ವ ಚೆಸ್‌ನಲ್ಲಿ ಭಾರತ ಹೊಸ ಮೈಲಿಗಲ್ಲು  

ವಿಶ್ವದ ಅತ್ಯಂತ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್‌ನಲ್ಲಿ ಭಾರತೀಯರೊಬ್ಬರು ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಿರುವುದು ಇದೇ ಮೊದಲು. ವಿಶ್ವ ಚಾಂಪಿಯನ್‌ಷಿಪ್ ಬಿಟ್ಟರೆ ಅಷ್ಟೇ ಮಹತ್ವಪೂರ್ಣವೆಂದು ಪರಿಗಣಿಸಲ್ಪಡುವ ಈ ವೇದಿಕೆಯಲ್ಲಿ ಪ್ರಜ್ಞಾನಂದ ಮೆರೆದಿರುವ ಸಾಹಸ, ದೇಶದ ಕ್ರೀಡಾ ಇತಿಹಾಸದಲ್ಲಿ ಸುವರ್ಣಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆಯಾಗಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net