ಸಹೋದ್ಯೋಗಿಗೆ ಕಿರುಕುಳ ಆರೋಪ; ಸಿನಿಮಾ ನಿರ್ದೇಶಕ & ಮಾಜಿ ಶಾಸಕ ಪಿ ಟಿ ಕುಂಜು ಮುಹಮ್ಮದ್ ವಿರುದ್ಧ ಎಫ್​ಐಆರ್ | P T Kunju Muhammad

ಮಾಜಿ ಶಾಸಕ ಪಿಟಿ ಕುಂಜು ಮುಹಮ್ಮದ್
ಮಾಜಿ ಶಾಸಕ ಪಿಟಿ ಕುಂಜು ಮುಹಮ್ಮದ್
Published on
ಕೊಚ್ಚಿ: ಕಳೆದ ತಿಂಗಳು ನಡೆದ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2025 (IFFK) ಪ್ರದರ್ಶನದ ಸಂದರ್ಭದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ಮತ್ತು ಮಾಜಿ ಶಾಸಕ ಪಿಟಿ ಕುಂಜು ಮುಹಮ್ಮದ್(P T Kunju Muhammad) ತಮಗೆ ಕಿರುಕುಳ ನೀಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ ಎಂದು ಮಂಗಳವಾರ(ಡಿ. 09) ವರದಿಯಾಗಿದೆ.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಅಧ್ಯಕ್ಷರಾಗಿದ್ದ ಕುಂಜು ಮುಹಮ್ಮದ್ ತಮ್ಮ ಕೋಣೆಗೆ ನುಗ್ಗಿ ಹಲ್ಲೆ ನಡೆಸಿ, ಹೆಣ್ಣುತನದ ಬಗ್ಗೆ ಅವಮಾನಿಸಿದ್ದಾರೆ. ಮತ್ತು ನನ್ನ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ತೀರ್ಪುಗಾರರ ಸಮಿತಿಯ ಮಹಿಳಾ ಸದಸ್ಯೆಯೊಬ್ಬರು ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ದೂರು ನೀಡಿದ್ದಾರೆ. ಸಿಎಂ ಅದನ್ನು ತನಿಖೆ ನಡೆಸುವಂತೆ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿದ್ದಾರೆ.

ಆರೋಪ ನಿರಾಕರಿಸಿರುವ ಪಿಟಿ ಕುಂಜು ಮುಹಮ್ಮದ್

ತಮ್ಮ ವಿರುದ್ಧ ಸಹ ಸಮಿತಿಯ ಮಹಿಳೆಯೊಬ್ಬರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಮತ್ತು ನಿರ್ದೇಶಕ ಪಿಟಿ ಕುಂಜು ಮುಹಮ್ಮದ್, ನಾನು ಯಾವುದೇ ತಪ್ಪು ಮಾಡಿಲ್ಲ. ಅದು ತಪ್ಪು ಗ್ರಹಿಕೆಯಾಗಿರಬೇಕು. ನಾನು 25 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿದ್ದೇನೆ ಮತ್ತು ಯಾರೊಂದಿಗೂ ಕೆಟ್ಟದಾಗಿ ವರ್ತಿಸಿಲ್ಲ ಎಂದು ಹೇಳಿದ್ದಾರೆ.
1978ರಲ್ಲಿ 'ಅಶ್ವಥಾಮ' ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ ಮುಹಮ್ಮದ್, 'ಉಪ್ಪು' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಬಳಿಕ 'ಪುರುಷಾರ್ಥಂ' ಮತ್ತು 'ಸ್ವರೂಪಂ' ಎಂಬ ಎರಡು ಚಿತ್ರಗಳನ್ನು ನಿರ್ಮಿಸಿದರು, ಇವೆರಡೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆ ಗಳಿಸಿದವು. 'ಮ್ಯಾಗ್ರಿಬ್' ಮತ್ತು 'ಗಾರ್ಶೋಮ್' ನಂತಹ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿವೆ.
ಕುಂಜು ಮುಹಮ್ಮದ್ ಎರಡು ಬಾರಿ ಶಾಸಕರಾಗಿದ್ದು, ಸಿಪಿಐ(ಎಂ) ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಮೊದಲು 1994ರ ಉಪಚುನಾವಣೆಯಲ್ಲಿ ಗುರುವಾಯೂರ್ ಕ್ಷೇತ್ರದಿಂದ ಗೆಲ್ಲುವ ಮೂಲಕ ಶಾಸಕರಾಗಿದ್ದು, ಬಳಿಕ 1996ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಗೆದ್ದು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದರು. ಸದ್ಯ ಅವರು ಮಲಯಾಳಂ ಸುದ್ದಿ ಚಾನಲ್ ಕೈರಾಲಿಯ ಸ್ಥಾಪಕ ನಿರ್ದೇಶಕರಾಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net